
- 18 ಸಾವಿರ ಪೌರ ಕಾರ್ಮಿಕರಲ್ಲಿ ಜೇಷ್ಠತೆ ಆಧಾರದಲ್ಲಿ 3,673 ಜನರಿಗೆ ಮಾತ್ರ ನೇಮಕಾತಿ ಭಾಗ್ಯ!
- ನಿವೃತ್ತ ಪೌರ ಕಾರ್ಮಿಕರ ಬದುಕಿಗೆ ಆಧಾರವಿಲ್ಲ, ಸ್ವಚ್ಛ ಭಾರತದ ಹೆಸರಲ್ಲಿ ಭಿಕ್ಷುಕರಾಗಿದ್ದೇವೆʼ
ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ (ಬಿಬಿಎಂಪಿ) ಕೆಲಸ ಮಾಡುತ್ತಿರುವ 3,673 ಪೌರ ಕಾರ್ಮಿಕರನ್ನು ಕಾಯಂಗೊಳಿಸಲು ರಾಜ್ಯ ಸರ್ಕಾರ ಬುಧವಾರ ಅಧಿಸೂಚನೆ ಹೊರಡಿಸಿದೆ.
ಬಿಬಿಎಂಪಿಯಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದು, ಜೇಷ್ಠತಾ ಪಟ್ಟಿಯಲ್ಲಿ ಆಯ್ಕೆಯಾಗಿರುವ 3,673 ಮಂದಿ ಪೌರ ಕಾರ್ಮಿಕರನ್ನು ನೇಮಕಾತಿ ಪ್ರಕ್ರಿಯೆ ಹುದ್ದೆ ಕಾಯಂಗೊಳಿಸಲು ಸರ್ಕಾರ ಹಸಿರು ನಿಶಾನೆ ತೋರಿದೆ. ಈ ಮೂಲಕ ಹುದ್ದೆ ಕಾಯಂ ಆದ ಕಾರ್ಮಿಕರು ತಿಂಗಳಿಗೆ ವೇತನ ಶ್ರೇಣಿಯನುಸಾರ ₹17,000– ₹28,950 ಸಂಬಳದ ವ್ಯಾಪ್ತಿಗೆ ಬರುತ್ತಾರೆ.
ಪೌರ ಕಾರ್ಮಿಕರ ಹುದ್ದೆಗೆ ಸಾಮಾನ್ಯ ವರ್ಗ ಅಥವಾ ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಲ್ಲದಿದ್ದರೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳನ್ನು ಪರಿಗಣಿಸಲು ಸರ್ಕಾರ ಅವಕಾಶ ನೀಡಿ ಸಂಬಂಧಿತ ಕೆಲ ಷರತ್ತುಗಳನ್ನು ಸಡಿಲಿಕೆ ಮಾಡಲಾಗಿದ್ದು, ಈ ಬಗ್ಗೆ ಅಧಿಸೂಚನೆಯಲ್ಲಿ ನಿರ್ದೇಶನ ನೀಡಲಾಗಿದೆ.
ಬಿಬಿಎಂಪಿ ಆಯುಕ್ತರ ನೇತೃತ್ವದಲ್ಲಿ ಜೇಷ್ಠತಾ ಪಟ್ಟಿ ಆಯ್ಕೆ
18 ಸಾವಿರ ಪೌರ ಕಾರ್ಮಿಕರಲ್ಲಿ ಅನುಭವ ಆಧರಿಸಿ ಜೇಷ್ಠತಾ ಪಟ್ಟಿ ಸಿದ್ಧಪಡಿಸಲು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿತ್ತು. ಸಮಿತಿಯು ಗರಿಷ್ಠ ವಯೋಮಿತಿಯನ್ನು 55 ವರ್ಷಗಳಿಗೆ ಮಿತಿಗೊಳಿಸಿದೆ. ಕಾರ್ಮಿಕರು ಕನಿಷ್ಠ ಎರಡು ವರ್ಷ ಕೆಲಸ ಮಾಡಿದ್ದಕ್ಕೆ ಮತ್ತು ಸಂಬಳ ಪಡೆದಿರುವುದಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸಬೇಕು ಎಂದು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.
ಕೆಲವರಿಗೆ ಸಿಹಿ, ಹಲವರಿಗೆ ಕಹಿ!
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಟ್ಟು 18,000 ಪೌರ ಕಾರ್ಮಿಕರಿದ್ದು, ಆ ಪೈಕಿ 3673 ಮಂದಿಯನ್ನು ಮಾತ್ರ ಜೇಷ್ಠತೆಯ ಆಧಾರದಲ್ಲಿ ನೇಮಕಾತಿ ಮಾಡಿಕೊಳ್ಳಲು ಮುಂದಾಗಿರುವುದು ಪಟ್ಟಿಯಲ್ಲಿರುವ ಕೆಲವರಿಗೆ ಸಿಹಿ ನೀಡಿದರೆ, ಪಟ್ಟಿಯಿಂದ ಹೊರಗುಳಿದ ಸುಮಾರು 14000ಕ್ಕೂ ಹೆಚ್ಚಿನ ಕಾರ್ಮಿಕರಿಗೆ ಸರ್ಕಾರ ಕಹಿ ನೀಡಿದಂತಾಗಿದೆ.
ಈ ಕುರಿತು ಬಿಬಿಎಂಪಿ ನ್ಯೂ. ತಿಪ್ಪಸಂದ್ರ 58ನೇ ವಾರ್ಡ್ನ ಪೌರ ಕಾರ್ಮಿಕ ಮಹಿಳೆ ಮೀನಾ, ಈ ದಿನ.ಕಾಮ್ಗೆ ಪ್ರತಿಕ್ರಿಯೆ ನೀಡಿದ್ದು, "ಕಳೆದ ಮೂರು ತಲೆಮಾರಿನಿಂದ ನಮ್ಮ ಕುಟುಂಬ ಗುತ್ತಿಗೆ ಪೌರ ಕಾರ್ಮಿಕರಾಗಿ ಕೆಲಸ ಮಾಡುತ್ತ ಬಂದಿದೆ. ನೆನ್ನೆ ಮೊನ್ನೆ ಬಂದವರು ಕಾಯಂ ಹುದ್ದೆ ಪಡೆದರೆ ಹೇಗೆ? 55 ವರ್ಷ ವಯೋಮಿತಿ ಮಾಡಿದರೆ ಕಳೆದ 35-40 ವರ್ಷಗಳಿಂದ ಗುತ್ತಿಗೆ ಆಧಾರದಲ್ಲೇ ದುಡಿದವರು ಎಲ್ಲಿ ಹೋಗಬೇಕು? ಹಾಗಾಗಿ ನಿವೃತ್ತಿಯಾಗಿರುವ, ಇದುವರೆಗೂ ಕಾಯಂ ಆಗದ 55 ವರ್ಷ ದಾಟಿದ ಪೌರ ಕಾರ್ಮಿಕರಿಗೆ ಸೂಕ್ತ ಪರಿಹಾರ ಕೊಡಿ, ಇಲ್ಲವೆ ಅವರ ಕುಟುಂಬದ ವ್ಯಕ್ತಿಗೆ ಕೆಲಸ ಕೊಟ್ಟು ಅವರ ಜೀವನ ಮಟ್ಟ ಸುಧಾರಿಸುವಂತೆ ಮಾಡಲಿ. ಇಲ್ಲವಾದಲ್ಲಿ ಈ ತಾರತಮ್ಯದ ನೇಮಕಾತಿ ಆದೇಶದ ವಿರುದ್ಧ ಮತ್ತೆ ಹೋರಾಟ ಆರಂಭಿಸುತ್ತೇವೆ" ಎಂದು ಎಚ್ಚರಿಕೆ ನೀಡಿದರು.
"ತಾಯಮ್ಮ ಎಂಬ ಪೌರ ಕಾರ್ಮಿಕ ಮಹಿಳೆ ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡಿ ನನ್ನ ತಂದೆಯೊಂದಿಗೆ ನಿವೃತ್ತಿಯಾಗಿದ್ದಾರೆ. ಈಗ ಪ್ರತಿನಿತ್ಯ ಮುಂಜಾನೆ 3 ಗಂಟೆಗೆ ಕೆಜಿಎಫ್ನಿಂದ ಬಂದು ನ್ಯೂ ತಿಪ್ಪಸಂದ್ರದ 59ನೇ ವಾರ್ಡ್ನಲ್ಲಿ ನಾಲ್ಕೈದು ಮನೆ ಬಾಗಿಲು ಗುಡಿಸಿ, ರಂಗೋಲಿ ಹಾಕುವುದಕ್ಕೆ ಮತ್ತು ಮನೆ ಕೆಲಸಕ್ಕೆ ಬರುತ್ತಿದ್ದು, ಸಿಗುವ ₹50 ಹಣ ಬಸ್ ಟಿಕೆಟ್ಗೆ ಖರ್ಚಾದರೆ ಬೆಳಿಗ್ಗೆ-ಮಧ್ಯಾಹ್ನ ಎರಡು ಹೊತ್ತು ಕೊಡುವ ಊಟವಷ್ಟೆ ಆಕೆಗೆ ಜೀವನಾಧಾರ. ಸರ್ಕಾರ ನಿವೃತ್ತ ಪೌರ ಕಾರ್ಮಿಕರ ಬದುಕಿಗೆ ಯಾವುದೇ ದಾರಿ ಮಾಡದೆ, ಸ್ವಚ್ಛ ಭಾರತ ಹೆಸರಲ್ಲಿ ನಮ್ಮನ್ನು ತಿನ್ನುವ ಅನ್ನಕ್ಕೆ ಭಿಕ್ಷುಕರನ್ನಾಗಿಸಲಾಗಿದೆ. ಅವರೆಲ್ಲರ ಶಾಪ ತಟ್ಟದಿರುತ್ತದೆಯೇ?" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
ಈ ಸುದ್ದಿ ಓದಿದ್ದೀರಾ? ದೆಹಲಿ ರೈತ ಹೋರಾಟ | ಎರಡನೇ ವರ್ಷದ ನೆನಪಿನಲ್ಲಿ ರೈತ ಚಳವಳಿಯಿಂದ ಕಲಿಯಬೇಕಾದ ಪಾಠಗಳು
ಕಾರ್ಮಿಕರನ್ನು ವಂಚಿಸಲೆಂದೇ ಈ ನೇಮಕಾತಿ ಆದೇಶ ಬಂದಿದೆ
"ರಾಜ್ಯ ಸರ್ಕಾರ ಕಳೆದ ಮೂರು ವರ್ಷಗಳ ಹಿಂದೆ 5500 ಪೌರ ಕಾರ್ಮಿಕರನ್ನು ನೇಮಕಾತಿ ಮಾಡಿಕೊಳ್ಳುವುದಾಗಿ ಅಧಿಸೂಚನೆ ಹೊರಡಿಸಿತ್ತು, ನಂತರ ಅದು 4500 ಜನರ ನೇಮಕಾತಿಗೆ ಇಳಿಯಿತು. ಈಗ ಕಾರ್ಮಿಕರು ಪ್ರತಿಭಟನೆ ಮಾಡಿದ್ದಕ್ಕೆ 3500 ಪೌರ ಕಾರ್ಮಿಕರನ್ನು ನೇಮಕಾತಿ ಮಾಡುವುದಾಗಿ ಅಧಿಸೂಚನೆ ಕೊಟ್ಟಿದೆ. ಇದು ಕಾರ್ಮಿಕರನ್ನು ವಂಚಿಸುವ ಸಲುವಾಗಿಯೇ ತಂದಿರುವ ನೇಮಕಾತಿಯಾಗಿದೆ. ಇದುವರೆಗೂ ನಿವೃತ್ತಿಯಾದವರಿಗೆ ಗ್ರಾಚ್ಯುಟಿ ಕೊಟ್ಟಿಲ್ಲ. ಇನ್ನು 55 ವರ್ಷ ವಯೋಮಿತಿ ನಿಯಮ ಮಾಡಿದರೆ 55 ದಾಟಿದವರ ಗತಿಯೇನು? ಸರ್ಕಾರದ ಈ ನೇಮಕಾತಿ ಆದೇಶದಲ್ಲಿ ನ್ಯಾಯ ಇದೆಯಾ" ಎಂದು ಗುತ್ತಿಗೆ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ್ಯ ಎಸ್ ಬಾಲನ್ ಈ ದಿನ.ಕಾಮ್ಗೆ ಪ್ರತಿಕ್ರಿಯೆ ನೀಡಿದ್ದಾರೆ.
"ಕಾಯಂ ಹಾಗೂ ಗುತ್ತಿಗೆ ಆಧಾರದ ಪೌರ ಕಾರ್ಮಿಕರು ಎತ್ತುವುದು ಒಂದೇ ಗಲೀಜು, ಹಿಡಿಯುವುದು ಒಂದೇ ಪೊರಕೆ. ಹಾಗಾಗಿ ಸಮಾನ ಕೆಲಸಕ್ಕೆ ಸಮಾನ ವೇತನ ಆಧಾರದಲ್ಲಿ 18 ಸಾವಿರ ಪೌರ ಕಾರ್ಮಿಕರಿಗೂ ಒಂದೇ ಸಂಬಳ ನೀಡಬೇಕು. ಎಲ್ಲ ಪೌರ ಕಾರ್ಮಿಕರಿಗೂ ಹಬ್ಬಗಳ ರಜೆ, ವೈದ್ಯಕೀಯ ರಜೆ, ಗ್ರಾಚ್ಯುಟಿ ಕೊಡಬೇಕು. ಮಹಿಳಾ ಪೌರ ಕಾರ್ಮಿಕರಿಗೆ ಹೆರಿಗೆ ರಜೆ ಮತ್ತು ಭತ್ಯೆ ಕಡ್ಡಾಯ ಮಾಡಲಿ" ಎಂದು ಅವರು ಆಗ್ರಹಿಸಿದರು.
ಡಿ.3ರಿಂದ ಪೌರ ಕಾರ್ಮಿಕರ ಮುಷ್ಕರ
ರಾಜ್ಯದ ಎಲ್ಲ ಪೌರ ಕಾರ್ಮಿಕರ ಸೇವೆಯನ್ನು ಕಾಯಂ ಮಾಡದಿದ್ದರೆ ಡಿಸೆಂಬರ್ 3 ರಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭಿಸಲಾಗುವುದು ಎಂದು ಪೌರ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷ ಕೆ ಪ್ರಭಾಕರ್ ಎಚ್ಚರಿಕೆ ನೀಡಿದರು.
ನ.12ರಂದು ಹಾಸನ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ರಾಜ್ಯದಾದ್ಯಂತ ಇರುವ ನಗರಸಭೆ, ಪುರಸಭೆ ಮೊದಲಾದ ಸ್ಥಳೀಯ ಸಂಸ್ಥೆಯಲ್ಲಿ ದಿನಗೂಲಿ ಮತ್ತು ಹೊರಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿರುವ ಎಲ್ಲ ಪೌರ ಕಾರ್ಮಿಕರನ್ನು ಕಾಯಂ ಮಾಡಬೇಕು. ಇಲ್ಲದಿದ್ದರೆ ಕರ್ತವ್ಯ ಸ್ಥಗಿತಗೊಳಿಸಿ ಮುಷ್ಕರ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದರು.