ಬೆಂಗಳೂರು | ಐತಿಹಾಸಿಕ ಬಸವನಗುಡಿ ಕಡಲೆಕಾಯಿ ಪರಿಷೆ: 'ಬಡವರ ಬಾದಾಮಿ'ಗಾಗಿ ಮುಗಿಬಿದ್ದ ಜನತೆ

  • ಒಂದು ಸೇರು ಕಡಲೆಕಾಯಿಗೆ ₹50
  • ಭಾನುವಾರ ಸಂಜೆ ಪರಿಷೆ ಆರಂಭ

ಬೆಂಗಳೂರಿನ ಬಸವನಗುಡಿಯ ದೊಡ್ಡಗಣಪತಿ ದೇವಸ್ಥಾನದಲ್ಲಿ ಐತಿಹಾಸಿಕ ಕಡಲೆಕಾಯಿ ಪರಿಷೆ ಭಾನುವಾರ ಆರಂಭವಾಗಿದ್ದು, ಮೂರು ದಿನಗಳ ಕಾಲ ಜಾತ್ರೆ ನಡೆಯಲಿದೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತುಲಾಭಾರ ನಡೆಸುವ ಮೂಲಕ ಕಡಲೆಕಾಯಿ ಪರಿಷೆಗೆ ಭಾನುವಾರ ಸಂಜೆ 6 ಗಂಟೆಗೆ ಚಾಲನೆ ನೀಡಿದ್ದರು.

Eedina App

ನಗರದ ಬಸವನಗುಡಿಯಲ್ಲಿ ಹಲವು ವರ್ಷಗಳಿಂದ ಈ ಕಡಲೆಕಾಯಿ ಪರಿಷೆ ನಡೆಯುತ್ತಿದ್ದು, ಕಳೆದ ಎರಡು ವರ್ಷ ಕೋವಿಡ್ ಸಾಂಕ್ರಾಮಿಕದಿಂದ ಪರಿಷೆ ನಡೆದಿರಲಿಲ್ಲ. ಆದರೆ, ಈ ವರ್ಷ ಉದ್ಘಾಟನೆಗೂ ಮುನ್ನವೇ ನೂರಾರು ಜನರು ತಮ್ಮ ಕುಟುಂಬ ಸದಸ್ಯರೊಂದಿಗೆ ಪರಿಷೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದರು.

ಕೋಲಾರ, ಚಿಕ್ಕಬಳ್ಳಾಪುರ, ದೊಡ್ಡಬಳ್ಳಾಪುರ, ಚಿಂತಾಮಣಿ, ತುಮಕೂರು, ಮಧುಗಿರಿ, ಪಾವಗಡ, ಮುಳುಬಾಗಿಲು, ಆಂಧ್ರಪ್ರದೇಶ, ತಮಿಳುನಾಡಿನ ಧರ್ಮಪುರಿ ಸೇರಿದಂತೆ ನಾನಾ ಭಾಗಗಳಿಂದ ನೂರಾರು ರೈತರು ವಿವಿಧ ತಳಿಯ ಕಡಲೆಕಾಯಿ ಮಾರಾಟ ಮಾಡಲು ಮಳಿಗೆ ಹಾಕಿದ್ದಾರೆ. ಈ ಬಾರಿ 3 ಸಾವಿರಕ್ಕೂ ಹೆಚ್ಚು ವ್ಯಾಪರಸ್ಥರು ಪರಿಷೆಗೆ ಬಂದಿದ್ದು, 500 ರೈತರ ಅಂಗಡಿಗಳಿವೆ.

AV Eye Hospital ad

ಯಾವ ಯಾವ ತಳಿಯ ಕಡಲೆಕಾಯಿಗಳಿವೆ?

ನಾಟಿ, ಮರಲು, ಬೆಳ್ಳಿಕಾಯಿ, ಗಡಂಗ್, ಕೆಂಪುಗಡಲೆ, ಕಪ್ಪುಕಡಲೆ, ದೊಡ್ಡ ಗಾತ್ರದ ಬೋಂಡಾ ಕಡಲೆಕಾಯಿ ರಾಶಿಗಳು ದೊಡ್ಡ ಗಣಪತಿ ದೇವಸ್ಥಾನದ ಎರಡು ರಸ್ತೆಯ ಬದಿಯಲ್ಲಿ ಇವೆ.

ಒಂದು ಸೇರು ಕಡಲೆಕಾಯಿಗೆ ₹50

ಸಾಮಾನ್ಯವಾಗಿ ಪರಿಷೆಯಲ್ಲಿ ಕಡಲೆಕಾಯಿ ಬೆಲೆ ಜಾಸ್ತಿ ಇದ್ದು, ಈ ಬಾರಿ ಮಳೆಯ ಕಾರಣದಿಂದ ಬೆಲೆ ಏರಿಕೆಯಾಗಿದೆ. ಒಂದು ಸೇರು ಹಸಿ ಕಡಲೆಕಾಯಿ ₹50 ಇದ್ದರೆ ಹುರಿದ ಕಡಲೆಕಾಯಿ ಸೇರಿಗೆ ₹80 ಮಾರಾಟವಾಗುತ್ತಿದೆ. 2 ಸಾವಿರ ವ್ಯಾಪಾರಿಗಳು ಪರಿಷೆಯಲ್ಲಿದ್ದಾರೆ. ಪರಿಷೆ ಮುಗಿಯುವವರೆಗೂ ಬುಲ್ ಟೆಂಪಲ್ ದೇಗುಲದ ಮುಂಭಾಗ ವಾಹನ ಓಡಾಟ ನಿಷೇಧಿಸಲಾಗಿದೆ.

ಸೋಮವಾರ ನಂದಿ ತೆಪ್ಪೋತ್ಸವ

ಕಾರ್ತಿಕ ಸೋಮವಾರದಂದು ದೇವಸ್ಥಾನದಲ್ಲಿ ಕಡಲೆಕಾಯಿ ಪರಿಷೆಯ ಪ್ರಮುಖ ಧಾರ್ಮಿಕ ವಿಧಿಗಳು ಜರುಗಲಿವೆ. ಮುಖ್ಯವಾಗಿ ದಶಕದ ಬಳಿಕ ಕೆಂಪಾಂಬುಧಿ ಕೆರೆಯಲ್ಲಿ ತೆಪ್ಪೋತ್ಸವ ನಡೆಯಲಿದೆ. ಕೋವಿಡ್ ನಿರ್ಬಂಧವಿಲ್ಲದ ಕಾರಣ ಎರಡು ವರ್ಷದ ಬಳಿಕ ಪರಿಷೆ ಹಿಂದಿನ ವೈಭವಕ್ಕೆ ಮರಳಿದೆ.

ಪರಿಷೆಯಲ್ಲಿ ಏನೇನಿದೆ?

ಬುಲ್‌ ಟೆಂಪಲ್ ರಸ್ತೆಗಳಲ್ಲಿ ಬಗೆ ಬಗೆಯ ಮಾರಾಟ ಮಳಿಗೆಗಳು, ಜಗಮಗಿಸುವ ಬಣ್ಣ ಬಣ್ಣದ ವಿದ್ಯುತ್ ಅಲಂಕಾರ, ಬಿಸಿಬಿಸಿ ಕಡಲೆಕಾಯಿ, ತರಹೇವಾರಿ ಪರಿಕರಗಳ ಖರೀದಿ, ದೊಡ್ಡಗಣಪತಿ, ಬಸವಣ್ಣನ ದರ್ಶನಕ್ಕೆ ಉದ್ದನೆ ಸರದಿ ಸಾಲು. ಕಹಳೆ ಬಂಡೆ ರಸ್ತೆ, ಪಶ್ಚಿಮ ಆಂಜನೇಯ ಗುಡಿ ರಸ್ತೆ, ಮೌಂಟ್ ರಾಯ್ ರಸ್ತೆಗಳಲ್ಲೂ ಪರಿಷೆ ಕಳೆಗಟ್ಟಿತ್ತು. ಸರಿಸುಮಾರು 2 ಕಿಮೀವರೆಗೂ ಮರ, ಕಟ್ಟಡಗಳಿಗೆ ವಿದ್ಯುತ್ ಅಲಂಕಾರ ಮಾಡಲಾಗಿದೆ. ಇದು ಅಪ್ಪಟ ದೇಶಿ ಸಂಸ್ಕೃತಿಯ ಪರಿಷೆ.

ಕಡಲೆಕಾಯಿ ಜಾತ್ರೆ

ಕಡಲೆಕಾಯಿ ಪರಿಷೆಯಲ್ಲಿ ಹತ್ತಾರು ಬಗೆಯ ಮಳಿಗೆಗಳು ಇದ್ದು, ಹಳ್ಳಿಯ ಸೊಗಡನ್ನು ಬೀರುತ್ತಿದೆ. ಹಳ್ಳಿಯ ಜಾತ್ರೆಯಂತೆ ಪಾರಂಪರಿಕತೆ ಮೆರೆಯುತ್ತಿರುವ ಈ ಕಡಲೆಕಾಯಿ ಪರಿಷೆಯಲ್ಲಿ ಬೇಯಿಸಿದ ಜೋಳ, ಮಸಾಲಾ ಪಾಪಡ್, ಕಡ್ಲೆಪುರಿ, ಟ್ವಿಸ್ಟೆಡ್ ಪೊಟಾಟೋ, ಹಣ್ಣಿನ ಅಂಗಡಿಗಳಿಗೆ ಜನ ಮುಗಿಬಿದ್ದಿದ್ದರು.

ಮಕ್ಕಳ ಆಟಿಕೆ ವಸ್ತುಗಳು, ಮಹಿಳೆಯರ ನೆಚ್ಚಿನ ಬಳೆ, ಕಿವಿಯೋಲೆ, ಸರ, ಬಟ್ಟೆಬರೆ, ಗೃಹೋಪಯೋಗಿ ಪರಿಕರ, ಅಲಂಕಾರಿಕ ಸಾಮಗ್ರಿ ಸೇರಿದಂತೆ ಹಲವು ಸಾಮಗ್ರಿಗಳು ಜನರನ್ನು ಸೇಳೆಯುತ್ತಿವೆ.

ಪ್ಲಾಸ್ಟಿಕ್ ಜಾಗೃತಿ

ಪರಿಷೆಯಲ್ಲಿ ಪ್ಲಾಸ್ಟಿಕ್ ವಿರುದ್ಧ ಜನಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದ್ದು, ‘ಪರಿಷೆಗೆ ಬನ್ನಿ ಕೈ ಚೀಲ ತನ್ನಿ’, ‘ಕೇಳಿ ಪ್ಲಾಸ್ಟಿಕ್ ಜಾತಕ, ಇದು ಪರಿಸರಕ್ಕೆ ಮಾರಕ’ ಎಂಬ ಇತ್ಯಾದಿ ಘೋಷಣೆಗಳನ್ನು ಮಳಿಗೆಯ ಮುಂದೆ ವ್ಯಾಪಾರಸ್ಥರು ಬರೆದಿದ್ದಾರೆ. ಬಿಬಿಎಂಪಿ ಪ್ಲಾಸ್ಟಿಕ್ ಬಳಕೆ ನಿರ್ಬಂಧಿಸಿದ ಹಿನ್ನೆಲೆಯಲ್ಲಿ ಬಟ್ಟೆ ಹಾಗೂ ಪೇಪರ್ ಬಳಕೆ ಹೆಚ್ಚಾಗಿತ್ತು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು| ವಾಯುಭಾರ ಕುಸಿತ: ನ.22ರಿಂದ ಮತ್ತೆ ಮಳೆಯ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ದೊಡ್ಡ ಗಣೇಶನಿಗೆ 508 ಕೆಜಿ ಕಡಲೆ

ಪರಿಷೆಯ ಹಿನ್ನೆಲೆಯಲ್ಲಿ, ದೊಡ್ಡ ಗಣೇಶ ಬಸವಣ್ಣಗೆ 508 ಕೆಜಿ ಕಡಲೆಕಾಯಿ ಅಭಿಷೇಕ ಮಾಡಲಾಗಿದೆ. ದೇಗುಲಕ್ಕೆ ವಿಶೇಷ ಪೂಜೆ ನಡೆಯಿತು. ಗಣೇಶ ಹಾಗೂ ಬಸವಣ್ಣ ದೇವರಿಗೆ ಕಡಲೆಕಾಯಿ ಹಾರವನ್ನು ಅರ್ಪಿಸಲಾಯಿತು.

ಪರಿಷೆಯ ಹಿನ್ನೆಲೆ

ಬಡವರ ಬಾದಾಮಿ ಎಂದು ಕರೆಯುವ ಈ ಕಡಲೆಕಾಯಿಯನ್ನು ಟೈಂ ಪಾಸ್ ಕಡಲೆಕಾಯಿ ಎಂದು ಸಹ ಕರೆಯುತ್ತಾರೆ. ಕಡಲೆಕಾಯಿ ಪರಿಷೆಯನ್ನು ಪ್ರತಿ ವರ್ಷ ಕಾರ್ತೀಕ ಮಾಸದ ಕೊನೆಯಲ್ಲಿ ಮಾಡಲಾಗುತ್ತದೆ.

ಬಸವನಗುಡಿಯ ಸುತ್ತಮುತ್ತಲಿನ ಹಳ್ಳಿಗಳಲ್ಲಿ ರೈತರು ಕಡಲೆಕಾಯಿ ಬೆಳೆಯುತ್ತಿದ್ದರು. ಪ್ರತಿ ಪೂರ್ಣಿಮೆಯ ದಿನದಂದು ಬಸವ ಬಂದು ಕಡಲೆಕಾಯಿಯನ್ನು ತಿಂದು ಹೋಗುತ್ತಿತ್ತು. ಇದರಿಂದ ಬೇಸತ್ತ ರೈತರು ತಾವೇ ಆಹಾರ ನೀಡುವುದಾಗಿ ಮಾತು ನೀಡುತ್ತಾರಂತೆ. ನಂತರ ಆ ಬಸವ ಇಲ್ಲೇ ನೆಲೆ ನಿಂತಿತು 

ಹಾಗಾಗಿ ಬಸವನಿಗೆ ಪ್ರಿಯವಾದ ಕಡಲೆಕಾಯಿಯನ್ನು ಬಸವಣ್ಣನಿಗೆ ಅರ್ಪಿಸುತ್ತಾರೆ. ಈ ಕಾರಣಕ್ಕೆ ಪ್ರತಿವರ್ಷ ಕಡಲೆಕಾಯಿ ಪರಿಷೆ ನಡೆಸಲಾಗುತ್ತದೆ. ಕಡಲೆಕಾಯಿ ಜಾತ್ರೆಗೆ 500 ವರ್ಷಗಳ ಇತಿಹಾಸವಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app