ಬೆಂಗಳೂರು | ಕರ್ನಾಟಕ ಕಂದಾಯ ಇಲಾಖೆಯ ಸ್ವಾಧೀನಕ್ಕೆ ಈದ್ಗಾ ಮೈದಾನ

  • ಸಿಕ್ಕ ಕಾಲಾವಕಾಶದಲ್ಲಿ ಸೂಕ್ತ ದಾಖಲೆ ಸಲ್ಲಿಸದ ವಕ್ಫ್ ಮಂಡಳಿ
  • ಆಸ್ತಿಯ ಹಕ್ಕು ಸ್ಥಾಪಿಸಲು ಕಂದಾಯ ಇಲಾಖೆಯೊಂದಿಗೆ ವ್ಯವಹರಿಸಲು ಸೂಚನೆ

ಚಾಮರಾಜಪೇಟೆಯ ಈದ್ಗಾ ಮೈದಾನ ಮಾಲೀಕತ್ವ ವಿವಾದಕ್ಕೆ ಭಾರಿ ತಿರುವು ದೊರೆತಿದ್ದು, ಮೈದಾನ ತಮ್ಮ ಆಸ್ತಿ ಎಂದು ಖಾತೆ ಮಾಡಲು ರಾಜ್ಯ ವಕ್ಫ್‌ ಮಂಡಳಿ ಸಲ್ಲಿಸಿದ್ದ ಅರ್ಜಿಯನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪಶ್ಚಿಮ ವಲಯದ ಜಂಟಿ ಆಯುಕ್ತರು ವಜಾಗೊಳಿಸಿದ್ದಾರೆ.

ನಗರದ ಚಾಮರಾಜಪೇಟೆಯ ಸರ್ವೇ ನಂಬರ್ 40ರಲ್ಲಿ 2 ಎಕರೆ 5 ಗುಂಟೆ ವಿಸ್ತೀರ್ಣದ ಈದ್ಗಾ ಮೈದಾನವು ‘ಕರ್ನಾಟಕ ಸರ್ಕಾರದ ಕಂದಾಯ ಇಲಾಖೆ'ಗೆ ಸೇರಿದೆ ಎಂದು ಬಿಬಿಎಂಪಿಯ ಪಶ್ಚಿಮ ವಿಭಾಗದ ಜಂಟಿ ಆಯುಕ್ತ ಶ್ರೀನಿವಾಸ್ ಆಗಸ್ಟ್ 6 ರಂದು ಆದೇಶ ಹೊರಡಿಸಿದ್ದಾರೆ.

Image

ಈದ್ಗಾ ಮೈದಾನವು ಈಗ ಕರ್ನಾಟಕ ಸರ್ಕಾರದ ಕಂದಾಯ ಇಲಾಖೆಗೆ ಸೇರಿದ ಆಸ್ತಿ ಎಂದು ಪರಿಗಣಿಸಿರುವ ಕಾರಣ ಅರ್ಜಿದಾರರು ಈ ಆಸ್ತಿಯ ಬಗ್ಗೆ ಹಕ್ಕು ಸ್ಥಾಪಿಸಲು ಕಂದಾಯ ಇಲಾಖೆಯೊಂದಿಗೆ ವ್ಯವಹರಿಸಲು ಸೂಚಿಸಿದ್ದಾರೆ. ಅಲ್ಲದೆ, ಬಿಬಿಎಂಪಿ ದಾಖಲೆಗಳಲ್ಲಿ ಆಸ್ತಿಯನ್ನು ‘ಕರ್ನಾಟಕ ರಾಜ್ಯ ಸರ್ಕಾರದ ಕಂದಾಯ ಇಲಾಖೆ’ಎಂದು ನಮೂದಿಸುವಂತೆ ಅರೆನ್ಯಾಯಿಕ ಪ್ರಾಧಿಕಾರದ ಪೀಠಾಸೀನ ಅಧಿಕಾರಿ ಎಸ್.ಎಂ. ಶ್ರೀನಿವಾಸ ಸೂಚಿಸಿದ್ದಾರೆ.

ಹಲವು ದಿನಗಳಿಂದ ವಿವಾದಕ್ಕೆ ಈಡಾಗಿದ್ದ ಚಾಮರಾಜಪೇಟೆ ಈದ್ಗಾ ಮೈದಾನ ಮಾಲೀಕತ್ವ ವಿವಾದ ಈ ಮೂಲಕ ಅಧಿಕೃತವಾಗಿ ಅಂತ್ಯ ಕಂಡಿದೆ. ಈ ಹಿಂದೆ ವಕ್ಫ್‌ ಮಂಡಳಿಯು ಈದ್ಗಾ ಮೈದಾನವನ್ನು ತಮ್ಮದಾಗಿಸಿಕೊಳ್ಳಲು ಅರ್ಜಿ ಸಲ್ಲಿಸಿತ್ತು.

ವಕ್ಫ್ ಮಂಡಳಿ ಅರ್ಜಿ ಸಲ್ಲಿಸಿದ ನಂತರ ಜೂನ್ 29ರಂದು ಸುಪ್ರೀಂ ಕೋರ್ಟ್‌ನ ಹಿಂದಿನ ಆದೇಶದ ಪ್ರತಿ, ಸಿವಿಲ್ ನ್ಯಾಯಾಲಯದ ಆರ್.ಎ ಪ್ರತಿ, ಸ್ವತ್ತಿನ ಮೂಲ ಪತ್ರ ಅಥವಾ ಕ್ರಯಪತ್ರ, 1968ರಿಂದ ಈವರೆಗೆ ತಹಶೀಲ್ದಾರರಿಂದ ದೃಢೀಕೃತವಾದ ಪಹಣಿ, ಬೆಂಗಳೂರು ಡೆವಲಪ್‌ಮೆಂಟ್ ಬೋರ್ಡ್ ಲೇಔಟ್ ನಕ್ಷೆ, ತಹಶೀಲ್ದಾರ್ ದೃಢೀಕರಿಸಿದ ಖೇತವಾರು ಪತ್ರಿಕೆ, ಸರ್ಕಾರದಿಂದ ಬಂದಿರುವ ಆಸ್ತಿ ಪ್ರಕರಣ ಪತ್ರ, ಈವರೆಗಿನ ಇ.ಸಿ. ನಮೂನೆ.. ಇಂತಹ ಪೂರಕ ದಾಖಲೆಗಳನ್ನು ಸಲ್ಲಿಸುವಂತೆ ಸೂಚಿಸಲಾಗಿತ್ತು.  

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಮೆಟ್ರೊ ಪ್ರಯಾಣಿಕರಿಗೆ ಸಿಹಿ ಸುದ್ದಿ; 20ರ ಬದಲು 15 ನಿಮಿಷಕ್ಕೊಂದು ರೈಲು

ದಾಖಲೆ ಸಲ್ಲಿಸದ ಕಾರಣ ಜುಲೈ 7ರಂದು 2ನೇ ಹಿಂಬರಹ ನೀಡಿ ಮತ್ತೆ 5 ದಿನಗಳ ಕಾಲ ಅವಕಾಶ ನೀಡಲಾಯಿತು. ದಾಖಲೆಯನ್ನು ನೀಡದ ಕಾರಣ ಜುಲೈ 21ರಂದು ನೋಟಿಸ್ ನೀಡಿ ಜುಲೈ 27ರಂದು ದಾಖಲೆಗಳೊಂದಿಗೆ ಹಾಜರಾಗಿ, ಖಾತಾ ಇಂಡೀಕರಣಕ್ಕೆ ಹಕ್ಕು ಮಂಡಿಸಲು ಪಶ್ಚಿಮ ವಲಯದ ಜಂಟಿ ಆಯುಕ್ತರು ಸೂಚಿಸಿದರು. ವಕೀಲರೊಂದಿಗೆ ಹಾಜರಾದ ವಕ್ಫ್ ಮಂಡಳಿಯವರು ಕಾಲಾವಕಾಶ ಕೇಳಿದ್ದರು.

ಹೀಗಾಗಿ ಪಾಲಿಕೆಯು ಆಗಸ್ಟ್ 3ಕ್ಕೆ ದಾಖಲೆಗಳನ್ನು ಸಲ್ಲಿಸಲು ಸೂಚನೆ ನೀಡಿತ್ತು. ಆಗಸ್ಟ್‌ 3 ರಂದು ಹಾಜರಾದ ವಕ್ಫ್ ಮಂಡಳಿಯು ಸೂಕ್ತ ದಾಖಲೆ ನೀಡದೆ, ಈವರೆಗೆ ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪಿನ ಪ್ರತಿ ಹಾಗೂ ಹಲವು ವರ್ಷಗಳ ಹಿಂದಿನ ತೆರಿಗೆ ಕಟ್ಟಿರುವ ಬಿಲ್ ಮಾತ್ರ ಹಾಜರುಪಡಿಸಿದೆ.‌ ಇದರ ಹೊರತಾಗಿ ಬೇರೆ ಯಾವುದೇ ದಾಖಲೆ ನೀಡಿಲ್ಲ ಎನ್ನಲಾಗುತ್ತಿದೆ.  

ಈಗಾಗಲೇ ಮಂಡಳಿಗೆ ಸಾಕಷ್ಟು ಕಾಲಾವಕಾಶ ನೀಡಿದರೂ ಪೂರಕ ದಾಖಲೆ ಸಲ್ಲಿಸದಿರುವ ಕಾರಣ, ಇನ್ನಷ್ಟು ಕಾಲಾವಕಾಶ ನೀಡುವಂತೆ ವಕ್ಫ್ ಮಂಡಳಿ ಮಾಡಿದ ಮನವಿಯನ್ನು ಬಿಬಿಎಂಪಿ ತಿರಸ್ಕರಿಸಿದೆ ಎನ್ನಲಾಗುತ್ತಿದೆ. 

ನಿಮಗೆ ಏನು ಅನ್ನಿಸ್ತು?
9 ವೋಟ್