ಬೆಂಗಳೂರು| ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು: ಸಚಿವ ಆರ್ ಅಶೋಕ

Minister R Ashok
  • ಮೈದಾನದಲ್ಲಿ ಕಾರ್ಯಕ್ರಮ ನಡೆಸಲು ಇಲಾಖೆ ಅನುಮತಿ ಪಡೆಯಬೇಕು
  • ಇಲ್ಲಿಯವರೆಗೂ ಹಬ್ಬಗಳ ಆಚರಣೆಗೆ ಯಾರೂ ಮನವಿ ಸಲ್ಲಿಸಿಲ್ಲ

ಬೆಂಗಳೂರಿನ ಚಾಮರಾಜಪೇಟೆ ಈದ್ಗಾ ಮೈದಾನ ಕಂದಾಯ ಇಲಾಖೆಗೆ ಸೇರಿದ್ದು, ಮೈದಾನದಲ್ಲಿ ಯಾವುದೇ ಕಾರ್ಯಕ್ರಮ ನಡೆಯಬೇಕಿದ್ದರೂ ಕಂದಾಯ ಇಲಾಖೆಯ ಅನುಮತಿ ಪಡೆಯಬೇಕು ಎಂದು ಕಂದಾಯ ಸಚಿವ ಆರ್ ಅಶೋಕ ಹೇಳಿದರು.

ಬೆಂಗಳೂರಿನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ”ಪ್ರಸ್ತುತ ಈದ್ಗಾ ಮೈದಾನದ ವಿಚಾರವಾಗಿ ವಿವಾದವಿರುವುದರಿಂದ ಆ ಪ್ರದೇಶದಲ್ಲಿ ಧ್ವಜಾರೋಹಣ, ಗಣೇಶೋತ್ಸವ, ನಮಾಝ್, ಪ್ರಾರ್ಥನೆ ಏನೇ ಮಾಡಬೇಕಿದ್ದರೂ ಕಂದಾಯ ಇಲಾಖೆಯ ಅನುಮತಿ ತೆಗೆದುಕೊಳ್ಳಬೇಕು” ಎಂದರು.

"ಮೊದಲು ಬಿಬಿಎಂಪಿಯಿಂದ ಅನುಮತಿ ತೆಗೆದುಕೊಳ್ಳುತ್ತಿದ್ದರು. ಆದರೆ, ಈಗ ಕಂದಾಯ ಇಲಾಖೆಗೆ ಮನವಿ ಸಲ್ಲಿಸಬೇಕು. ಇಲಾಖೆ ಈ ಬಗ್ಗೆ ತೀರ್ಮಾನ ತೆಗೆದುಕೊಳ್ಳಲಿದೆ. ಇಲ್ಲಿಯವರೆಗೂ ಹಬ್ಬಗಳ ಆಚರಣೆಗೆ ಯಾರೂ ಮನವಿ ಸಲ್ಲಿಸಿಲ್ಲ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಒಂದು ನಿಮಿಷದ ಓದು| ಗಣೇಶೋತ್ಸವ ಆಚರಣೆಗೆ ಯಾವುದೇ ನಿರ್ಬಂಧವಿಲ್ಲ: ಆರ್ ಅಶೋಕ

"ಚಾಮರಾಜಪೇಟೆ ಮೈದಾನ ನಮ್ಮದೇ, ಎಂದು ಯಾರು ಹೇಳಿಕೊಳ್ಳಲು ಸಾಧ್ಯವಿಲ್ಲ. ಈ ಮೈದಾನ ಸರ್ಕಾರಕ್ಕೆ ಸೇರಿದ್ದು, ಯಾವುದೇ ಮನವಿ ಬಂದರೂ ಕಾನೂನಿನ ಪ್ರಕಾರ ಪರಿಶೀಲನೆ ನಡೆಸಲಾಗುತ್ತದೆ. ಈ ಕುರಿತಂತೆ ಯಾರು ಯಾವುದೇ ಗೊಂದಲ ಸೃಷ್ಟಿಸುವುದು ಬೇಡ. ಸಬ್‌ ಕಾ ಸಾಥ್‌, ಸಬ್‌ ಕಾ ವಿಕಾಸ್ ಸರ್ಕಾರ ಎಲ್ಲರ ಸರ್ಕಾರ” ಎಂದು ಹೇಳಿದರು.

"ಮೈದಾನ ನಮ್ಮದೇ ಎಂದು ಹೇಳುವವರು ಅಧಿಕೃತ ದಾಖಲೆಗಳನ್ನು ನೀಡಬೇಕು ಎಂದು ಬಿಬಿಎಂಪಿ ಹೇಳಿ ಕೆಲವು ದಿನಗಳ ಗಡುವು ನೀಡಿತ್ತು. ಆದರೆ, ಮೈದಾನದ ಕುರಿತಂತೆ ಯಾರೂ ಸೂಕ್ತ ದಾಖಲೆಗಳನ್ನು ನೀಡಲಿಲ್ಲ. ಈ ಜಾಗ ಕಂದಾಯ ಇಲಾಖೆಗೆ ಸೇರಿದ್ದು, ಎನ್ನುವುದಕ್ಕೆ ಸರ್ಕಾರದ ಬಳಿ ದಾಖಲೆಗಳಿವೆ. ಈವರೆಗೂ ಈ ಜಾಗ ಬಿಬಿಎಂಪಿಗೆ ಸೇರಿದ್ದು ಎನ್ನಲಾಗಿತ್ತು. ನ್ಯಾಯಾಲಯದ ಸೂಚನೆಯಂತೆ ದಾಖಲೆಗಳ ಪರಿಶೀಲನೆ ನಡೆಸಿದ ನಂತರ ಕಂದಾಯ ಇಲಾಖೆಗೆ ಸೇರಿದ್ದು ಎಂಬುದು ಖಚಿತವಾಗಿದೆ’ ಎಂದು ಅವರು ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್