- ಗ್ರಾಹಕರಿಗೆ ತಿಳಿಸದೆ ಕ್ಯಾರಿ ಬ್ಯಾಗ್ಗೆ ದರ ವಿಧಿಸಿದ್ದಕ್ಕೆ ದಂಡ
- ಕ್ಯಾರಿ ಬ್ಯಾಗ್ಗೆ ₹ 24.90 ದರ ವಿಧಿಸಿದ್ದ ರಿಲಯನ್ಸ್ ರೀಟೇಲ್ ಲಿಮಿಟೆಡ್
ಗ್ರಾಹಕರ ಅನುಮತಿ ಪಡೆಯದೇ ಕ್ಯಾರಿ ಬ್ಯಾಗ್ಗೆ ದರ ವಿಧಿಸಿದ್ದ ಕಾರಣಕ್ಕೆ ರಿಲಯನ್ಸ್ ರೀಟೇಲ್ ಲಿಮಿಟೆಡ್ಗೆ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗವು ದಂಡ ವಿಧಿಸಿದ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ
'ರಿಲಯನ್ಸ್ ರೀಟೇಲ್ ಲಿಮಿಟೆಡ್ ಬಿಲ್ಲಿಂಗ್ಗೆ ಮುನ್ನ ಉಚಿತ 'ಕ್ಯಾರಿ ಬ್ಯಾಗ್' ನೀಡಲಾಗುವುದಿಲ್ಲ, ಜೊತೆಗೆ ಕ್ಯಾರಿ ಬ್ಯಾಗ್ಗೆ ದರ ವಿಧಿಸಲಾಗುತ್ತದೆ ಎನ್ನುವ ಅಂಶವನ್ನು ಗ್ರಾಹಕರಿಗೆ ಹೇಳಿ, ಅವರ ಅನುಮತಿ ಪಡೆದಿಲ್ಲ. ಹಾಗೆಯೇ ಗ್ರಾಹಕರಿಂದ ಹಣ ಪಡೆದಿದೆ' ಎಂದು ಬೆಂಗಳೂರು ನಗರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗ ಅಭಿಪ್ರಾಯ ಪಟ್ಟಿದೆ.
ಘಟನೆಯ ಹಿನ್ನಲೆ
ನಂದಿನಿ ಲೇಔಟ್ ನಿವಾಸಿಗಳಾದ ವಕೀಲ ರವಿಕಿರಣ್ ಮತ್ತು ಅವರ ಪತ್ನಿ ಜುಲೈ 2022ರಲ್ಲಿ ರಿಲಯನ್ಸ್ ಸ್ಮಾರ್ಟ್ ಪಾಯಿಂಟ್ನಲ್ಲಿ ಕೆಲವು ದಿನಸಿ ಮತ್ತು ಇತರ ಗೃಹೋಪಯೋಗಿ ವಸ್ತುಗಳನ್ನು ಖರೀದಿಸಿದ್ದರು. ಅವರು ಮೊತ್ತವನ್ನು ಕ್ರೆಡಿಟ್ ಕಾರ್ಡ್ ಮೂಲಕ ಪಾವತಿಸಿದ್ದರು. ದಿನಸಿ ಸಾಮಗ್ರಿಗಳು ಹೆಚ್ಚಿದ್ದ ಕಾರಣ ಬ್ಯಾಗ್ ಕೇಳಿದ್ದಾರೆ ಈ ವೇಳೆ ಬ್ಯಾಗ್ಗೆ ಹಣ ನಿಗದಿ ಪಡಿಸಲಾಗುತ್ತದೆ ಎಂದು ಮಾಹಿತಿ ನೀಡದೆ, ಅದಕ್ಕೂ ₹24.90 ದರ ವಿಧಿಸಿದ್ದರು ಎಂದು ವಕೀಲ ರವಿಕಿರಣ್ ದೂರಿದ್ದರು. ಈ ಕುರಿತು ರಿಲಯನ್ಸ್ ಸ್ಮಾರ್ಟ್ ಪಾಯಿಂಟ್ ಅವರನ್ನು ವಿಚಾರಿಸಿದರೆ ಯಾವುದೇ ಪ್ರತಿಕ್ರಿಯೆ ನೀಡದೆ ಇದ್ದ ಕಾರಣ ಬೇಸರಗೊಂಡ ವಕೀಲರು ಬೆಂಗಳೂರು ನಗರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗಕ್ಕೆ ದೂರು ನೀಡಿದ್ದರು.
ಈ ಕುರಿತು ಅವರು ದೂರು ನೀಡಿದ ನಂತರ ವಿಚಾರಣೆ ನಡೆಸಿದ ಆಯೋಗವು ರಿಲಯನ್ಸ್ ರೀಟೇಲ್ ಲಿಮಿಟೆಡ್ಗೆ ಬ್ಯಾಗ್ಗಾಗಿ ಪಡೆದ ₹ 24.90 ಹಣಕ್ಕೆ ದಂಡ ಸೇರಿಸಿ ಒಟ್ಟು ₹7024.90 ಪಾವತಿಸುವಂತೆ ಆದೇಶಿಸಿತು.
ಈ ಸುದ್ದಿ ಓದಿದ್ದೀರಾ?: ನಮ್ಮ ಮೆಟ್ರೋ | ವಾಟ್ಸ್ಆ್ಯಪ್ ಕ್ಯೂಆರ್ ಕೋಡ್ ಆಧಾರಿತ ಟಿಕೆಟ್ ಬಳಕೆ; ಉತ್ತಮ ಸ್ಪಂದನೆ
ಚಿಲ್ಲರೆ ಅಂಗಡಿಯಿಂದ ಸರಕುಗಳನ್ನು ಖರೀದಿಸುವ ಮೊದಲು ಕ್ಯಾರಿ ಬ್ಯಾಗ್ಗಳಿಗೆ ಹೆಚ್ಚುವರಿ ವೆಚ್ಚವಾಗಲಿದೆ ಎಂದು ತಿಳಿಯುವ ಹಕ್ಕು ಗ್ರಾಹಕನಿಗೆ ಇದೆ. ಗ್ರಾಹಕರಿಗೆ ತಿಳಿಸದೆ ಕ್ಯಾರಿ ಬ್ಯಾಗ್ಗಳಿಗೆ ವೆಚ್ಚ ವಿಧಿಸುವುದು ಸರಿಯಲ್ಲ ಎಂದು ಗ್ರಾಹಕ ಆಯೋಗ ಹೇಳಿದೆ.
ಬೆಂಗಳೂರು ನಗರ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಎಂ.ಶೋಭಾ ಮತ್ತು ಸದಸ್ಯರಾದ ರೇಣುಕಾದೇವಿ ದೇಶಪಾಂಡೆ ಮತ್ತು ಎಚ್.ಜನಾರ್ದನ್ ಅವರನ್ನು ಒಳಗೊಂಡ ಆಯೋಗವು, ದೂರುದಾರರು ವಕೀಲರಾಗಿದ್ದು, ಸ್ವತಃ ದೂರು ಸಲ್ಲಿಸಿರುವುದರಿಂದ ಅವರಿಗೆ ₹2,000 ವ್ಯಾಜ್ಯ ವೆಚ್ಚ ವಿಧಿಸಿದ್ದಾರೆ.