
- ರಸ್ತೆ ಪಕ್ಕದಲ್ಲಿರುವ ವಿದ್ಯುತ್ ಕಂಬ ಮತ್ತು ಮರ ತೆರವುಗೊಳಿಸಿಲ್ಲ
- ನಿಧಾನಗತಿಯಲ್ಲಿ ನಡೆಯುತ್ತಿರುವ ಬೇಗೂರು ರಸ್ತೆ ಕಾಮಗಾರಿ
ಬೆಂಗಳೂರಿನ ನೆಲಮಂಗಲ ತಾಲೂಕಿನ ಕಲ್ಗಟ್ಟ ಗ್ರಾಮದ ಬಳಿ ಬೈಕ್ ಸವಾರನನ್ನು ಅಪಘಾತದಿಂದ ತಪ್ಪಿಸಲು ಹೋಗಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್ಆರ್ಟಿಸಿ)ದ ಬಸ್ ಮರಕ್ಕೆ ಡಿಕ್ಕಿ ಹೊಡೆದಿದೆ.
ತೋಟದಿಂದ ಮೇವು ತೆಗೆದುಕೊಂಡು ಬರುತ್ತಿದ್ದ ಬೈಕ್ ಸವಾರ ರಸ್ತೆಗೆ ಅಡ್ಡವಾಗಿ ಬಂದ ಕಾರಣ ಬಸ್ ಚಾಲಕ ಬೈಕ್ ಸವಾರನ ಪ್ರಾಣ ಉಳಿಸಲು ಯತ್ನಿಸಿದಾಗ ಬಸ್ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿರುವ ಮರಕ್ಕೆ ಡಿಕ್ಕಿ ಹೊಡೆದಿದೆ. ಇದರಿಂದ ಕೆಲವು ಪ್ರಯಾಣಿಕರಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಯಾವುದೇ ಪ್ರಾಣಾಪಾಯ ಆಗಿಲ್ಲ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಗುಂಡಿ ಬೀಳದಂಥ ಹೊಸ ತಂತ್ರಜ್ಞಾನ; ದೇಶದಲ್ಲಿಯೇ ಮೊದಲ ಬಾರಿಗೆ 'ರ್ಯಾಪಿಡ್ ರಸ್ತೆ' ನಿರ್ಮಾಣ
ಬೇಗೂರು-ನಿಡವಂದ ರಸ್ತೆ ಕಾಮಗಾರಿ ನಿಧಾನಗತಿಯಲ್ಲಿ ನಡೆಯುತ್ತಿದೆ. ಹಾಗಾಗಿ, ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿವೆ. ಅವೈಜ್ಞಾನಿಕ ರಸ್ತೆ ಕಾಮಗಾರಿಯೂ ಕೂಡಾ ಅಪಘಾತಗಳಿಗೆ ಕಾರಣವಾಗಿದೆ. ಇಲ್ಲಿ ರಸ್ತೆ ಅಗಲೀಕರಣ ಮಾಡಲಾಗುತ್ತಿದೆ. ಆದರೆ, ರಸ್ತೆ ಪಕ್ಕದಲ್ಲಿರುವ ವಿದ್ಯುತ್ ಕಂಬ ಮತ್ತು ಮರಗಳನ್ನು ತೆರವುಗೊಳಿಸಿಲ್ಲ. ರಸ್ತೆಯ ಪಕ್ಕದಲ್ಲಿ ಹಳ್ಳ ಗುಂಡಿಗಳು ತುಂಬಿವೆ. ಈ ರಸ್ತೆಯಲ್ಲಿ 12ಕ್ಕೂ ಹೆಚ್ಚು ಜನರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.