
- ಗೋಪಾಲಪುರ ಪೊಲೀಸ್ ಚೌಕಿ ಬಳಿಯ ಎಫ್-29 ಫೀಡರ್ ದುರಸ್ತಿ ವೇಳೆ ಅವಘಡ
- ಲೈನ್ಮ್ಯಾನ್ಗಳು ಕಾರ್ಯ ನಿರ್ವಹಿಸುವಾಗ ಸ್ಥಳದಲ್ಲಿರಬೇಕಾದ ಜೆಇ ಯಾಕೆ ಅಲ್ಲಿರಲಿಲ್ಲ?
ರಾಜಧಾನಿ ಬೆಂಗಳೂರಿನಲ್ಲಿ ವಿದ್ಯುತ್ ಮಾರ್ಗ ದುರಸ್ತಿಯ ವೇಳೆ ದಿಢೀರನೇ ವಿದ್ಯುತ್ ಹರಿದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ(ಬೆಸ್ಕಾಂ) ಸಿಬ್ಬಂದಿ ಸಾವನ್ನಪ್ಪುವ ದುರಂತಗಳು ಮತ್ತೆಮತ್ತೆ ಮರುಕಳಿಸುತ್ತಲೇ ಇವೆ.
ಸೋಮವಾರ ಕೂಡ ದುರಸ್ತಿ ವೇಳೆ ವಿದ್ಯುತ್ ಸ್ಪರ್ಶದಿಂದ ಲೈನ್ಮನ್ ಗೌತಮ್ ಎಂಬುವವರು ಮೃತಪಟ್ಟಿದ್ದಾರೆ.
ಅವರ ಸಾವಿಗೆ ಬೆಸ್ಕಾಂ ಸಹಾಯಕ ಎಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ಕಿರಿಯ ಎಂಜಿನಿಯರ್ ಅವರೇ ನೇರ ಹೊಣೆ ಎಂದು ಮೃತರ ತಂದೆ ಆರೋಪಿಸಿದ್ದಾರೆ. ಈ ಅಧಿಕಾರಿಗಳ ವಿರುದ್ಧ ಮಾಗಡಿ ರಸ್ತೆ ಪೋಲಿಸ್ ಠಾಣೆಯಲ್ಲಿ ಅವರು ದೂರು ದಾಖಲಿದ್ದಾರೆ.
ದುರ್ಘಟನೆಗೆ ದುರಸ್ತಿ ವೇಳೆ ಜೆಇ ಸ್ಥಳದಲ್ಲಿ ಇರದ್ದಿದ್ದೇ ಕಾರಣ?
ವಿದ್ಯುತ್ ಪರಿವರ್ತಕ ರಿಪೇರಿ ಹಾಗೂ ಇನ್ನಿತರೆ ವಿದ್ಯುತ್ ದುರಸ್ತಿ ಕಾರ್ಯದ ವೇಳೆ, ಲೈನ್ಮ್ಯಾನ್ ಜೊತೆ ಆಯಾ ವೃತ್ತದ ಸಹಾಯಕ ಎಂಜಿನಿಯರ್(ಜೆಇ) ಸ್ಥಳದಲ್ಲಿ ಖುದ್ದು ಹಾಜರಿರಬೇಕು. ಅಲ್ಲದೆ, ಕೆಲಸ ಆರಂಭಿಸುವ ಮುನ್ನ ಮಾರ್ಗದ ವಿದ್ಯುತ್ ಕಡಿತ ಮತ್ತು ಅರ್ಥಿಂಗ್ ಮಾಡುವುದನ್ನು ಸ್ವತಃ ಅವರೇ ಖಚಿತಪಡಿಸಿಕೊಳ್ಳಬೇಕು. ಹೀಗೆ ಲೈನ್ ಕ್ಲಿಯರಿಂಗ್ ಪಡೆದುಕೊಂಡ ಬಳಿಕವೇ ಕಂಬ ಹತ್ತಲು ಅವಕಾಶ ನೀಡುವುದು ಕಡ್ಡಾಯ.
ಆದರೆ, ಸೋಮವಾರ ಮಾಗಡಿ ರಸ್ತೆ ಗೋವಿಂದಪುರ ವ್ಯಾಪ್ತಿಯಲ್ಲಿ ದುರಸ್ತಿ ಕಾರ್ಯ ನಡೆಯುವ ಸಂದರ್ಭದಲ್ಲಿ ಆ ವೃತ್ತದ ಜೆಇ ಸ್ಥಳದಲ್ಲಿ ಇರಲೇ ಇಲ್ಲ ಎಂದು ಬೆಸ್ಕಾಂ ಅಧಿಕಾರಿಗಳೇ ಈ ದಿನ.ಕಾಮ್ಗೆ ಖಚಿತಪಡಿಸಿದ್ದಾರೆ.
ದುರ್ಘಟನೆ ಕುರಿತು ಈ ದಿನ.ಕಾಮ್ ಜತೆ ಮಾತನಾಡಿದ ಬೆಸ್ಕಾಂ ನೌಕರರ ಸಂಘದ ಉಪಾಧ್ಯಕ್ಷ ಶಿವರಾಮ್, “ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದ್ದೇವೆ. ಇಂತಹ ಘಟನೆಗಳು ಮತ್ತೆ ಮರುಕಳಿಸಬಾರದು. ಲೈನ್ಮ್ಯಾನ್ಗಳು ಕಾರ್ಯ ನಿರ್ವಹಿಸುವಾಗ ಮುಂಜಾಗೃತಾ ಕ್ರಮಗಳನ್ನು ಅನುಸರಿಸಬೇಕು. ಜೀವ ರಕ್ಷಣೆಗೆ ಹೆಚ್ಚು ಆದ್ಯತೆ ನೀಡಬೇಕು” ಎಂದು ಹೇಳಿದರು.
ಗೌತಮ್ ಸ್ನೇಹಿತ ಸಂತೋಷ್ (ಹೆಸರು ಬದಲಾಯಿಸಲಾಗಿದೆ) ಈ ದಿನ.ಕಾಮ್ ಜತೆ ಮಾತನಾಡಿ, “ನಾವಿಬ್ಬರು ಒಂದೇ ಅವಧಿಯಲ್ಲಿ ಬೆಸ್ಕಾಂ ಕಂಪನಿಗೆ ಕೆಲಸಕ್ಕೆ ಸೇರಿದ್ದೆವು. ಗೌತಮ್ಗೆ ಕಳೆದ ಹದಿನೈದು ದಿನಗಳ ಹಿಂದೆಯಷ್ಟೇ ನಿಶ್ಚಿತಾರ್ಥವಾಗಿತ್ತು. ಫೆಬ್ರುವರಿಯಲ್ಲಿ ಮದುವೆ ಗೊತ್ತಾಗಿತ್ತು. ಅವರ ಕುಟುಂಬಕ್ಕೆ ಅವನೊಬ್ಬನೇ ಆಸರೆ. ತುಂಬಾ ನೋವಾಗುತ್ತಿದೆ. ಲೈನ್ಮ್ಯಾನ್ ಆಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ನಾವು ಹೆಚ್ಚು ಜಾಗೃತವಾಗಿರಬೇಕು,.. ಇನ್ನೇನು ಹೇಳಲಿ” ಎಂದರು.
“ದುರಸ್ತಿ ಕೆಲಸದ ಸಂದರ್ಭದಲ್ಲಿ ಮೇಲಾಧಿಕಾರಿಗಳು ಸಮಯ ನೀಡದೆ, ತುರ್ತಾಗಿ ಕಾರ್ಯ ಮುಗಿಸಿ ಎಂದು ಒತ್ತಡ ಹಾಕುತ್ತಾರೆ. ಇದರಿಂದ ಕೆಲಸದ ಸಮಯದಲ್ಲಿ ನಮಗೆ ಗಡಿಬಿಡಿ ಆಗುತ್ತದೆ. ಇಂತಹ ಸಂದರ್ಭದಲ್ಲಿ ಅವಘಡಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ” ಎಂದು ಅವರು ಹೇಳಿದರು.
“ಲೈನ್ಮ್ಯಾನ್ಗಳು ವಿದ್ಯುತ್ ಪರಿವರ್ತಕ ಅಥವಾ ಯಾವುದೇ ವಿದ್ಯುತ್ ದುರಸ್ತಿ ಕಾರ್ಯಕ್ಕೆ ತೆರಳುವಾಗ ಜೆಇ ಕೂಡ ನಮ್ಮೊಂದಿಗೆ ಬರಬೇಕು ಹಾಗೂ ಅವರೇ ಲೈನ್ ಕ್ಲಿಯರ್ ಮಾಡಬೇಕು. ಅವರ ಸೂಚನೆ ಇಲ್ಲದೆ ನಾವು ಕಂಬ ಹತ್ತುವಂತೆಯೇ ಇಲ್ಲ” ಎಂದು ತಿಳಿಸಿದರು.
“ಲೈನ್ಮ್ಯಾನ್ ಆಗಿ ಕಾರ್ಯ ನಿರ್ವಹಿಸುವ ಸಂದರ್ಭದಲ್ಲಿ ನಾವು ಹೆಚ್ಚಾಗಿ ಜಾಗೃತವಾಗಿರಬೇಕು. ಕಡ್ಡಾಯವಾಗಿ ಲೈನ್ ಕ್ಲೀಯರ್ ಆಗಿದೆಯೇ ಎಂಬ ಬಗ್ಗೆ ಪರೀಕ್ಷಿಸಿಕೊಳ್ಳಬೇಕು. ಅರ್ಥಿಂಗ್ ಮಾಡಿರಬೇಕು. ಈ ಕೆಲಸಗಳು ಆಗಿರದಿದ್ದರೆ, ಯಾವುದೇ ಕಾರಣಕ್ಕೂ ದುರಸ್ತಿ ಕೆಲಸಕ್ಕೆ ಕೈ ಹಾಕಬಾರದು. ನಮ್ಮ ಜೀವ ನಾವು ರಕ್ಷಿಸಿಕೊಳ್ಳಬೇಕು” ಎಂದು ಬೆಸ್ಕಾಂ ಸಿಬ್ಬಂದಿ ಉಮಾಶಂಕರ ಈ ದಿನ.ಕಾಮ್ಗೆ ಹೇಳಿದರು.
ಬೆಸ್ಕಾಂನ ಸಾರ್ವಜನಿಕ ಸಂಪರ್ಕಾಧಿಕಾರಿ ಅರವಿಂದ್ ಶೆಟ್ಟಿ ಈ ದಿನ.ಕಾಮ್ ಜತೆಗೆ ಮಾತನಾಡಿ, “ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಕೇವಲ ಒಂದು ಲೈನ್ನ ವಿದ್ಯುತ್ ಸಂಪರ್ಕ ಕಡಿತ ಮಾಡಿದ್ದು, ಇನ್ನೊಂದು ಲೈನ್ ನ ವಿದ್ಯುತ್ ಸಂಪರ್ಕ ಕಡಿತಗೊಳಿಸಿರಲಿಲ್ಲ. ಅರ್ಥಿಂಗ್ ಮಾಡಿಕೊಳ್ಳದೆ ಕಾರ್ಯನಿರ್ವಹಿಸಿದ್ದರಿಂದ ಟ್ರಾನ್ಸ್ ಫಾರ್ಮರ್ ವಿದ್ಯುತ್ ಪ್ರವಹಿಸಿ ಗೌತಮ ಮೃತಪಟ್ಟಿದ್ದಾರೆ. ಅವರು ದುರಸ್ತಿ ಕಾರ್ಯಕ್ಕೆ ತೆರಳುವ ವೇಳೆ ಜೆಇಗೆ ಯಾವುದೇ ಮಾಹಿತಿ ನೀಡಿಲ್ಲ ಎಂದು ತಿಳಿಸಿದ್ದಾರೆ. ಹೆಚ್ಚಿನ ವಿವರ ಪೊಲೀಸ್ ತನಿಖೆ ಬಳಿಕ ಗೊತ್ತಾಗಲಿದೆ” ಎಂದರು.
ಅಂದರೆ; ಈ ದುರಸ್ತಿ ವೇಳೆ ಆ ವೃತ್ತದ ಜೆಇ ಸ್ಥಳದಲ್ಲಿ ಇರಲೇ ಇಲ್ಲ ಎಂಬುದನ್ನು ಪರೋಕ್ಷವಾಗಿ ಬೆಸ್ಕಾಂ ಒಪ್ಪಿಕೊಂಡಿದೆ. ಈಗ ಪ್ರಶ್ನೆ ಇರುವುದು ತಮ್ಮ ವ್ಯಾಪ್ತಿಯಲ್ಲಿ ಟ್ರಾನ್ಸ್ಫಾರ್ಮರ್ ದುರಸ್ತಿ ನಡೆಯುತ್ತಿರುವಾಗ ಅಲ್ಲಿನ ಜೆಇ ಯಾಕೆ ಸ್ಥಳದಲ್ಲಿ ಇರಲಿಲ್ಲ? ಅವರ ಗೈರು ಹಾಜರಿಯಲ್ಲಿ ಕಂಬ ಏರಿ ಟ್ರಾನ್ಸ್ಫಾರ್ಮರ್ ರಿಪೇರಿ ಮಾಡುವಂತೆ ನತದೃಷ್ಟ ಗೌತಮ್ ಗೆ ಒತ್ತಡ ಹಾಕಿದ್ದು ಯಾರು? ಎಂಬುದು. ಇದೇ ಹಿನ್ನೆಲೆಯಲ್ಲಿಯೇ ಗೌತಮ್ ತಂದೆ ಕೂಡ, ತಮ್ಮ ಮಗನ ಸಾವು ಆಕಸ್ಮಿಕವಲ್ಲ; ಅದೊಂದು ಕೊಲೆ ಎಂದಿದ್ದಾರೆ.
ಹಾಗಾದರೆ, ಪೊಲೀಸ್ ತನಿಖೆಯ ವೇಳೆ ಈ ಪ್ರಶ್ನೆಗಳಿಗೆ ಉತ್ತರ ಸಿಗಬಹುದೆ? ಎಂಬುದನ್ನು ಕಾದುನೋಡಬೇಕಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು| ವಿದ್ಯುತ್ ದುರಸ್ತಿ ವೇಳೆ ನೌಕರ ಸಾವು; ಎಂಜಿನಿಯರ್ಗಳ ವಿರುದ್ಧ ಎಫ್ಐಆರ್ ದಾಖಲು
ಏನಿದು ಘಟನೆ?
ಬೆಂಗಳೂರಿನ ಸುಂಕದಕಟ್ಟೆಯ ನಿವಾಸಿ ಗೌತಮ್, ಹಲವು ವರ್ಷಗಳಿಂದ ಬೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಪಾಳಿಯಲ್ಲಿ ಕೆಲಸದಲ್ಲಿದ್ದ ಅವರು ಸೋಮವಾರ ಬೆಳಿಗ್ಗೆ 9 ಗಂಟೆಗೆ ಗೋಪಾಲಪುರ ಪೊಲೀಸ್ ಚೌಕಿ ಬಳಿಯ ಎಫ್-29 ಫೀಡರ್ ದುರಸ್ತಿ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ, ಮಾರ್ಗದಲ್ಲಿ ದಿಢೀರನೆ ವಿದ್ಯುತ್ ಹರಿದಿತ್ತು. ಇದರಿಂದ ವಿದ್ಯುತ್ ಆಘಾತಕ್ಕೆ ಒಳಗಾಗಿದ್ದ ಅವರು ತೀವ್ರ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದರು.