
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ನರಭಕ್ಷಕ ರಸ್ತೆ ಗುಂಡಿಗಳು ಜನರ ಜೀವ ಬಲಿ ತೆಗೆದುಕೊಳ್ಳಲು ಕಾದು ಕುಳಿತಿವೆ. ಕಳೆದ ಆರು ತಿಂಗಳಿನಲ್ಲಿ ಏಳು ಮಂದಿ ರಸ್ತೆಗುಂಡಿಗೆ ಬಲಿಯಾಗಿದ್ದಾರೆ. ಇನ್ನು ಹಲವರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಸಚಿವ ಅಶ್ವತ್ಥನಾರಾಯಣ ಅವರ ಕ್ಷೇತ್ರ ಮಲ್ಲೇಶ್ವರಂನಲ್ಲೂ ರಸ್ತೆಗುಂಡಿಗಳ ಹಾವಳಿ ಕಡಿಮೆಯಾಗಿಲ್ಲ. ಇಲ್ಲಿನ ನಿವಾಸಿಗಳಿಗೆ ರಸ್ತೆಗುಂಡಿಯಿಂದ ಮುಕ್ತಿ ಸಿಕ್ಕಿಲ್ಲ. ನವೆಂಬರ್ 10ರೊಳಗೆ ಬೆಂಗಳೂರಿನಾದ್ಯಂತ ಎಲ್ಲ ರಸ್ತೆಗುಂಡಿಗಳನ್ನು ಮುಚ್ಚುವುದಾಗಿ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಹೇಳಿಕೆ ನೀಡಿದ್ದರು. ಅವರ ಗಡುವು ಮುಗಿದು ನಾಲ್ಕು ದಿನಗಳಾಗಿವೆ. ಆದರೆ, ಸ್ವತಃ ಸಚಿವರ ಕ್ಷೇತ್ರದಲ್ಲೇ ಇನ್ನೂ ರಸ್ತೆಗುಂಡಿಗಳು ಬಾಯಿ ತೆರೆದುಕೊಂಡಿದ್ದು, ಬಲಿಗಾಗಿ ಕಾಯುತ್ತಿವೆ.
ಬೆಂಗಳೂರಿನಲ್ಲಿ 32,011 ರಸ್ತೆ ಗುಂಡಿಗಳನ್ನು ಬಿಬಿಎಂಪಿ ಪತ್ತೆ ಮಾಡಿತ್ತು. ಇದರಲ್ಲಿ 29,517 ಗುಂಡಿಗಳನ್ನು ಮುಚ್ಚಲಾಗಿದೆ. ಇನ್ನು 2,494 ರಸ್ತೆ ಗುಂಡಿ ಮುಚ್ಚುವುದು ಬಾಕಿ ಉಳಿದಿವೆ ಎಂದಿದ್ದ ಬಿಬಿಎಂಪಿ, ಶೇ.92ರಷ್ಟು ಗುಂಡಿಗಳು ಮುಚ್ಚಿವೆಯೆಂದು ತನಗೆ ತಾನೇ ಸರ್ಟಿಫೀಕೇಟ್ ತೆಗೆದುಕೊಂಡಿತ್ತು. ಈ ವಿಚಾರವಾಗಿ ಟ್ವಿಟರ್ನಲ್ಲಿಯೂ ವ್ಯಾಪಕ ಟೀಕೆಗಳು ವ್ಯಕ್ತವಾಗಿದ್ದವು.
ಬೆಂಗಳೂರಿನ ದಾಸರಹಳ್ಳಿ ವಲಯದಲ್ಲಿ 1,045, ಪಶ್ಚಿಮದಲ್ಲಿ 292, ಬೊಮ್ಮನಹಳ್ಳಿ ವಲಯದಲ್ಲಿ 263, ಮುಖ್ಯರಸ್ತೆಗಳಲ್ಲಿ 367 ಹಾಗೂ ಆರ್.ಆರ್ ನಗರದಲ್ಲಿ 203 ಸೇರಿದಂತೆ ಬಿಬಿಎಂಪಿಯ ಎಲ್ಲ ವಲಯಗಳಲ್ಲೂ 2,494 ರಸ್ತೆಗುಂಡಿಗಳು ತುಂಬುವುದು ಬಾಕಿ ಇದೆ ಎಂದು ಬಿಬಿಎಂಪಿ ಹೇಳಿತ್ತು. ಆದರೆ, ಮಲ್ಲೇಶ್ವರಂನ ಪ್ರತಿ ರಸ್ತೆಯಲ್ಲಿಯೂ ಹತ್ತಾರು ರಸ್ತೆಗುಂಡಿಗಳು ಈಗಲೂ ಕಾಣಸಿಗುತ್ತಿವೆ. ಮಲ್ಲೇಶ್ವರಂನಲ್ಲಿ ಎಲ್ಲಿ ಕಣ್ಣು ಹಾಯಿಸಿದರೂ ಕೂಡಾ ದೊಡ್ಡ ದೊಡ್ಡ ರಸ್ತೆಗುಂಡಿಗಳು ಯಮರೂಪಿಯಂತೆ ಜನರ ಬಲಿಗಾಗಿ ಕಾಯುತ್ತಿವೆ.
ಮಲ್ಲೇಶ್ವರಂನಲ್ಲಿರುವ ರಸ್ತೆಗುಂಡಿಗಳ ಸಮಸ್ಯೆಯ ಬಗ್ಗೆ ಈ ದಿನ.ಕಾಮ್ ರಿಯಾಲಿಟಿ ಚೆಕ್ ಮಾಡಿದ್ದು, ಈ ವೇಳೆ ಸ್ಥಳೀಯ ನಿವಾಸಿಗಳು ಬಿಬಿಎಂಪಿ ಮತ್ತು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಮಲ್ಲೇಶ್ವರಂ ನಿವಾಸಿ ಶ್ರೀಧರ ಮಾತನಾಡಿ, “ರಸ್ತೆಗಳೆಲ್ಲ ಗುಂಡಿ ಬಿದ್ದು ಹಾಳಾಗಿವೆ. ಯಾವ ಅಧಿಕಾರಿಗಳೂ ಬಂದು ಈ ಬಗ್ಗೆ ಕೇಳುವುದಿಲ್ಲ. ಬಿಜೆಪಿ ಸರ್ಕಾರವಿದೆ, ಬಿಬಿಎಂಪಿಯೂ ಈಗ ಸರ್ಕಾರದ ಕೈಯಲ್ಲಿದೆ. ಇಲ್ಲಿ ಬಿಜೆಪಿ ಸಚಿವರೇ ಇದ್ದಾರೆ. ಆದರೂ ಯಾವುದೇ ಅಭಿವೃದ್ಧಿ ಕಾರ್ಯ ಮಾಡುತ್ತಿಲ್ಲ. ಕಳೆದ ಎರಡು ಮೂರು ವರ್ಷದಿಂದ ರಸ್ತೆಗಳು, ಫುಟ್ಪಾತ್ಗಳು ಹಾಳಾಗಿವೆ. ವಾಹನ ಸಂಚಾರ ದಟ್ಟಣೆ ಹೆಚ್ಚಾಗಿದೆ. ಅದರೂ, ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದರೆ, ಹಿಂದುತ್ವ ಎನ್ನುತ್ತಾರೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಲ್ಲೇಶ್ವರಂನ ಮತ್ತೊಬ್ಬ ನಿವಾಸಿ ಲಕ್ಷ್ಮೀ ಮಾತನಾಡಿ, ”ದಿನಕ್ಕೆ ಹಲವರು ರಸ್ತೆಗುಂಡಿಯಿಂದ ಬೀಳುತ್ತಿದ್ದಾರೆ. ವಯಸ್ಸಾದವರು, ಮಕ್ಕಳು ಓಡಾಡಲು ಕಷ್ಟವಾಗುತ್ತಿದೆ. ಮಳೆ ಬಂದಾಗ ರಸ್ತೆ ಜಲಾವೃತಗೊಂಡು ಗುಂಡಿಗಳು ಕಾಣುವುದಿಲ್ಲ. ಕಳೆದ ಆರು ತಿಂಗಳಿನಿಂದ ರಸ್ತೆ ರಿಪೇರಿ ಮಾಡುತ್ತಿದ್ದಾರೆ. ಆದರೆ, ಇನ್ನೂ ರಿಪೇರಿ ಕಾರ್ಯ ಮುಗಿದಿಲ್ಲ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
"ರಸ್ತೆ ತುಂಬಾ ಹಾಳಾಗಿದೆ. ಬಿಬಿಎಂಪಿ ಕಂದಾಯ ಕಟ್ಟಿಸಿಕೊಳ್ಳೋದು ಮರೆಯಲ್ಲ. ಕಂದಾಯ ಕಟ್ಟಲಿಲ್ಲ ಅಂದರೆ, ಅಧಿಕಾರಿಗಳನ್ನೇ ಮನೆಗೆ ಕಳುಹಿಸುತ್ತಾರೆ. ಅದೇ ರೀತಿ ಈ ರಸ್ತೆ ಕೆಲಸವನ್ನು ಬೇಗ ಮಾಡಿ ಮುಗಿಸಬೇಕು. ಬಿಬಿಎಂಪಿ ಮೊದಲು ಮಲ್ಲೇಶ್ವರಂ ನಗರದಲ್ಲಿನ ರಸ್ತೆಗುಂಡಿಗಳನ್ನು ಮುಚ್ಚಬೇಕು" ಎಂದು ಮಲ್ಲೇಶ್ವರಂ ನಿವಾಸಿ ರಾಧಾಮಣಿ ಆಗ್ರಹಿಸಿದರು.
ಮಲ್ಲೇಶ್ವರಂ ಇನ್ನೊಬ್ಬ ನಿವಾಸಿ ಶೀಲಾ ರಮೇಶ ಮಾತನಾಡಿ, ”ಮಲ್ಲೇಶ್ವರಂನ ರಸ್ತೆಗಳಲ್ಲಿ ದ್ವಿಚಕ್ರ ವಾಹನದಲ್ಲಿ ಓಡಾಡೋದು ಅಷ್ಟೇ ಅಲ್ಲ, ನಡೆದಾಡೋದು ಕೂಡ ಕಷ್ಟವಾಗಿದೆ. ಅಷ್ಟೊಂದು ಹದಗೆಟ್ಟ ರಸ್ತೆಗಳು ಮಲ್ಲೇಶ್ವರಂನಲ್ಲಿವೆ. ಒಂದು ದಿನ ತೆರಳಿದ ರಸ್ತೆಯಲ್ಲಿ ಮರುದಿನ ಹೋದರೆ, ಆ ರಸ್ತೆ ಅಗೆದು ಹಾಳು ಮಾಡಿರುತ್ತಾರೆ. ಮಳೆಯಿರುವ ಸಂದರ್ಭದಲ್ಲಿ ನಗರದ ರಸ್ತೆಗಳಲ್ಲಿ ಓಡಾಡುವುದೇ ಒಂದು ಸವಾಲಿನ ಕೆಲಸವಾಗಿದೆ. ಆದಷ್ಟು ಬೇಗ ಬಿಬಿಎಂಪಿ ಎಚ್ಚೆತ್ತು ರಸ್ತೆ ದುರಸ್ತಿ ಮಾಡಬೇಕಾಗಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮಲ್ಲೇಶ್ವರಂನ 18ನೇ ಕ್ರಾಸಿನ ಲಕ್ಷ್ಮೀನಾರಾಯಣ ಮಾತನಾಡಿ, ”ಮಲ್ಲೇಶ್ವರಂ ಮಾತ್ರವಲ್ಲದೇ ಇಡೀ ಬೆಂಗಳೂರಿನ ರಸ್ತೆಗಳ ಪರಿಸ್ಥಿತಿ ಹದಗೆಟ್ಟಿದೆ. ಬಿಬಿಎಂಪಿಗೆ ಎಷ್ಟೇ ಹೆಳಿದರೂ ಅಷ್ಟೇ ಎನ್ನುವ ಪರಿಸ್ಥಿತಿ ನಿರ್ಮಾಣವಾಗಿದೆ. ಚುನಾವಣೆ ಸಂದರ್ಭದಲ್ಲಿ ಬರಲಿ ಅವಾಗ ಎಲ್ಲ ರಾಜಕಾರಣಿಗಳಿಗೂ ತಿಳಿಯುತ್ತೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ರಾಜ್ಯದಲ್ಲಿ ಮಕ್ಕಳ ಮರಣ ಪ್ರಮಾಣ ಹೆಚ್ಚಳ; ಕಳೆದ ಆರು ತಿಂಗಳಿನಲ್ಲಿ 5,000 ಮಕ್ಕಳು ಸಾವು
ಸುಂಕದಕಟ್ಟೆ ನಿವಾಸಿ ಆಟೋ ಚಾಲಕ ಉಮಾಶಂಕರ ಮಾತನಾಡಿ, “ಈ ಕಿತ್ತುಹೋಗಿರುವ ರಸ್ತೆಗಳಲ್ಲಿ ಓಡಾಡುವುದು ಕಷ್ಟಕರವಾಗಿದೆ. ಬಿಬಿಎಂಪಿ ಅಧಿಕಾರಿಗಳಿಗೆ ಎಷ್ಟೇ ಹೇಳಿದರೂ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲ. ಇಂತಹ ರಸ್ತೆಗಳಲ್ಲಿ ಗಾಡಿ ಓಡಿಸುವಾಗ ದಿನಾಲೂ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯ ಮಾಡಿಕೊಳ್ಳುವುದನ್ನು ನೋಡುತ್ತಲೇ ಇದ್ದೇವೆ. ಅಧಿಕಾರಿಗಳು, ಶಾಸಕರು ರಸ್ತೆ ದುರಸ್ತಿ ಮಾಡಿಸಬೇಕು, ಇಲ್ಲಾಂದ್ರೆ ಕೆಲಸಕ್ಕೆ ರಾಜಿನಾಮೆ ನೀಡಿ ಮನೆಗೆ ತೆರಳಬೇಕು” ಎಂದು ಆಗ್ರಹಿಸಿದರು.
ಮಲ್ಲೇಶ್ವರಂ ನಿವಾಸಿ ಆರ್ ವಿ ಮಣಿ ಮಾತನಾಡಿ, ”ಸಿಕ್ಕ ಸಿಕ್ಕಲ್ಲಿ ರಸ್ತೆಗಳನ್ನು ಅಗೆದು ಬಿಟ್ಟಿದ್ದಾರೆ. ಚರಂಡಿ ಕಾಮಗಾರಿ ಸಲುವಾಗಿ ಹಲವೆಡೆ ರಸ್ತೆ ಅಗೆದಿದ್ದಾರೆ. ಡಾಂಬರು ಹಾಕುವುದಕ್ಕೂ ಮುನ್ನವೇ ಫುಟ್ಪಾತ್ ಕಾರ್ಯ ಮುಗಿಸಬೇಕು. ಆದರೆ, ಈಗ ಆ ಕೆಲಸದ ಸಲುವಾಗಿ ಮತ್ತೆ ಡಾಂಬರು ಅಗೆಯುತ್ತಿದ್ದಾರೆ. ಆದಷ್ಟು, ಬೇಗ ರಸ್ತೆ ರಿಪೇರಿ ಕಾರ್ಯ ಮಾಡಬೇಕು. ಬಿಜೆಪಿ ಸರ್ಕಾರದಿಂದ ಮೂರು ಸತಿ ಗೆದ್ದರೂ ಕೂಡಾ ಸಚಿವರೇ ಆಗಲಿ ಅಧಿಕಾರಿಗಳೇ ಆಗಲಿ ಯಾರೂ ರಸ್ತೆ ರಿಪೇರಿ ಮಾಡುತ್ತಿಲ್ಲ” ಎಂದು ಹೇಳಿದರು.

ರಸ್ತೆಗುಂಡಿಯಿಂದ ಹೋದ ಜೀವಗಳು
ಬೆಂಗಳೂರಿನಲ್ಲಿ ರಸ್ತೆಗುಂಡಿಗಳ ಕಾರಣದಿಂದ ಈಗಾಗಲೇ ಹಲವು ಜನ ಸಾವು-ನೋವು ಅನುಭವಿಸಿದ್ದಾರೆ. ಅಕ್ಟೋಬರ್ 16ರಂದು ಪೀಣ್ಯ 2ನೇ ಹಂತದ ನಿವಾಸಿ ಎಸ್ ಸುಗುಣ ರಸ್ತೆಗುಂಡಿ ಕಾರಣದಿಂದ ಅಪಘಾತವಾಗಿ 15 ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಬರೋಬ್ಬರಿ ₹7.5 ಲಕ್ಷ ಶುಲ್ಕ ಭರಿಸಲಾಗದೇ ಪರದಾಡಿದ್ದರು.
ಬೆಂಗಳೂರಿನ ಜಾಲಹಳ್ಳಿ ಗಂಗಮ್ಮ ಸರ್ಕಲ್ ಬಳಿ ಸಂದೀಪ್ ಎಂಬುವವರು ರಸ್ತೆ ಗುಂಡಿ ತಪ್ಪಿಸಲು ಹೋಗಿ ಕೆಳಗೆ ಬಿದ್ದು, ತಲೆಗೆ ಗಂಭೀರವಾದ ಗಾಯ ಮಾಡಿಕೊಂಡು, ಕೋಮಾ ಸ್ಥಿತಿಯಲ್ಲಿದ್ದಾರೆ.
ಸೋಮವಾರ (ನ. 4) ರಾಜಾಜಿನಗರದ ರಾಜಕುಮಾರ್ ರಸ್ತೆ ಬಳಿ ಮಧ್ಯಾಹ್ನ ವಾಹನ ಸವಾರರೊಬ್ಬರು ಆಯತಪ್ಪಿ ಬಿದ್ದು, ಟ್ರ್ಯಾಕ್ಟರ್ ಅಡಿಗೆ ಸಿಲುಕಿ ಮೃತಪಟ್ಟಿದ್ದಾರೆ. ರಾಜಾಜಿನಗರದ ಸುಜಾತ ಥಿಯೇಟರ್ ಬಳಿ ದ್ವಿಚಕ್ರ ವಾಹನದಲ್ಲಿ ಹೋಗುತ್ತಿದ್ದ ತಾಯಿ-ಮಗಳು ರಸ್ತೆಗುಂಡಿ ತಪ್ಪಿಸುವಾಗ ಬಿದ್ದು, ಕೆಎಸ್ಆರ್ಟಿಸಿ ಬಸ್ ಕೆಳಗೆ ಸಿಲುಕಿ ಮೃತಪಟ್ಟಿದ್ದಾರೆ.
ಇಷ್ಟೆಲ್ಲ ಸಾವು ನೋವು ಸಂಭವಿಸಿದರೂ ಕೂಡಾ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಎಚ್ಚೆತ್ತುಕೊಂಡಿಲ್ಲ. ಬದಲಿಗೆ, ಬೆಂಗಳೂರಿಗೆ ಪ್ರಧಾನಿ ಅಥವಾ ಯಾರೋ ಗಣ್ಯರು ಬರುತ್ತಾರೆ ಎಂದರೆ, ರಾತ್ರೋ ರಾತ್ರಿ ರಸ್ತೆ ರಿಪೇರಿ ಮಾಡುತ್ತಾರೆ. ಜನಸಾಮಾನ್ಯರ ಜೀವದ ಬಗ್ಗೆ ಬಿಬಿಎಂಪಿ ಮತ್ತು ರಾಜ್ಯ ಸರ್ಕಾರಕ್ಕೆ ಕಾಳಜಿ ಇಲ್ಲವಾ ಎಂದು ನಗರ ನಿವಾಸಿಗಳು ಕಿಡಿಕಾರುತ್ತಿದ್ದಾರೆ.
ರಸ್ತೆಗುಂಡಿ ಮುಚ್ಚಬೇಕಾದ ರೀತಿ
2009ರಲ್ಲಿ ನಿವೃತ್ತ ಮುಖ್ಯ ಇಂಜಿನಿಯರ್ ರೂಪಿಸಿದ್ದ ಮಾರ್ಗಸೂಚಿಗಳ ಪ್ರಕಾರ, ರಸ್ತೆಗುಂಡಿ ಮುಚ್ಚುವ ಸಮಯದಲ್ಲಿ ರಸ್ತೆ ಮೇಲ್ಮೈ ಸಮವಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು. ಮುಚ್ಚಿದ ಗುಂಡಿಗೆ ಹಾಕಲಾದ ಡಾಂಬರು ರಸ್ತೆಗಿಂತ 30 ಮಿ.ಮೀಗಿಂತ ಎತ್ತರ ಅಥವಾ ತಗ್ಗಿನಲ್ಲಿ ಇರಬಾರದು. ರಸ್ತೆಗೆ ಸಮಾನವಾಗಿರಬೇಕು.
ಹೆಚ್ಚು ಆಳವಿಲ್ಲದ ರಸ್ತೆ ಗುಂಡಿಗಳನ್ನು ತುಂಬುವಾಗ ರಸ್ತೆಗುಂಡಿಯ ಸುತ್ತ ಆಯತಾಕಾರದಲ್ಲಿ ಕತ್ತರಿಸಬೇಕು. ನಂತರ, ಗುಂಡಿಯ ಕೆಳಭಾಗದ ಮೇಲ್ಮೈಯಲ್ಲಿ ಬಿಟುಮೆನ್ ಹಾಕಬೇಕು. ಚೆನ್ನಾಗಿ ಹದಗೊಳಿಸಿದ ಪ್ರೀಮಿಕ್ಸ್ ಅನ್ನು ಸುರಿದು ಗುಂಡಿಗಳನ್ನು ಮುಚ್ಚಬೇಕು. ಆಳವಾದ ಗುಂಡಿಗಳನ್ನು ಮುಚ್ಚುವಾಗ ಗುಂಡಿಯನ್ನು ಲಂಬ ರೇಖೆಯಲ್ಲಿ ಕತ್ತರಿಸಬೇಕು. ಬಳಿಕ ಗುಂಡಿಯ ನೆಲವನ್ನು ಹದಗೊಳಿಸಿ, ಗುಂಡಿ ಮುಚ್ಚುವ ಮಿಶ್ರಣವನ್ನು ಹಾಕಬೇಕು ಎಂದು ಮಾರ್ಗಸೂಚಿ ಹೇಳಿದೆ.
ಆದರೆ, ನಗರದ ಹಲವು ಕಡೆ ಈ ಮಾರ್ಗಸುಚಿ ಅನುಸರಿಸದೇ ಬಿಬಿಎಂಪಿ ಬೇಕಾಬಿಟ್ಟಿಯಾಗಿ ರಸ್ತೆ ಮುಚ್ಚಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.