
- ನಮ್ಮ ಮೆಟ್ರೋದಿಂದ ₹1 ಕೋಟಿಗೂ ಅಧಿಕ ದಂಡ ಸಂಗ್ರಹ
- ಮೆಟ್ರೋ ಪ್ರಯಾಣದಲ್ಲಿ ಮಾಸ್ಕ್ ಧರಿಸುವುದು ಕಡ್ಡಾಯ
ಕಳೆದ ಎರಡು ವರ್ಷ ದೇಶವನ್ನು ಕಾಡಿದ್ದ ಕೊರೊನಾ ಸಾಂಕ್ರಾಮಿಕ ರೋಗ ನಿಧಾನಗತಿಯಲ್ಲಿ ಕಡಿಮೆಯಾಗುತ್ತಿದೆ. ಕೋವಿಡ್ ನಿಯಮಗಳೂ ಸಡಿಲಗೊಳ್ಳುತ್ತಿವೆ. ಅಂತೆಯೇ, ದೇಶೀಯ ಮತ್ತು ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಸುವ ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಎಂಬ ನಿಯಮವನ್ನು ಕೈಬಿಡಲಾಗಿದೆ.
ಕೊರೊನಾ ಪ್ರಕರಣಗಳು ಕಡಿಮೆಯಾಗಿದ್ದರೂ ಸಾರ್ವಜನಿಕ, ಜನನಿಬಿಡ ಪ್ರದೇಶಗಳಲ್ಲಿ ಮಾಸ್ಕ್ ಕಡ್ಡಾಯವಾಗಿತ್ತು. ವಿಮಾನ ನಿಲ್ದಾಣ ಹಾಗೂ ಮೆಟ್ರೋ ನಿಲ್ದಾಣಗಳಲ್ಲಿ ಕಡ್ಡಾಯವಾಗಿ ಮಾಸ್ಕ್ ಬಳಸಬೇಕಿತ್ತು. ಇದೀಗ ವಿಮಾನಯಾನದ ವೇಳೆ ಮಾಸ್ಕ್ ಧರಿಸುವುದು ಕಡ್ಡಾಯವಲ್ಲ!
ಆದರೆ, ಆದ್ಯತೆಯಾಗಿ ಪ್ರಯಾಣಿಕರೇ ಮಾಸ್ಕ್ ಬಳಕೆ ಮಾಡಬಹುದು. ಮಾಸ್ಕ್ ಧರಿಸದಿದ್ದಕ್ಕಾಗಿ ಪ್ರಯಾಣಿಕರಿಗೆ ಇನ್ನು ಮುಂದೆ ದಂಡ ವಿಧಿಸುವುದಿಲ್ಲ ಎಂದು ಕೇಂದ್ರ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ.
ಕೊರೊನಾ ಆಕ್ರಮಣ ಹೆಚ್ಚಾಗಿದ್ದ ಸಮಯದಲ್ಲಿ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಸೇರಿದಂತೆ ವಿವಿಧ ಕಟ್ಟುನಿಟ್ಟಿನ ನಿಯಮಗಳನ್ನು ಸರ್ಕಾರ ಜಾರಿಗೊಳಿಸಿತ್ತು. ಕೊರೊನಾ ಆಕ್ರಮಣ ಕಡಿಮೆಯಾದ ಮೇಲೂ ಕೆಲವು ನಿಯಮಗಳನ್ನು ಹಾಗೇ ಮುಂದುವರಿಸಲಾಗಿತ್ತು. ಆದರೆ, ಬೆಂಗಳೂರಿನ ಮೆಟ್ರೋ ಪ್ರಯಾಣದಲ್ಲಿ ಮಾತ್ರ ಮಾಸ್ಕ್ ಧರಿಸಲೇಬೇಕೆಂಬ ನಿಯಮವನ್ನು ಇನ್ನೂ ಮುಂದುವರಿಸಲಾಗಿದೆ. ನಮ್ಮ ಮೆಟ್ರೋದ ಈ ನಿಯಮದ ಬಗ್ಗೆ ಪ್ರಯಾಣಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಈ ದಿನ.ಕಾಮ್ ಜತೆಗೆ ಮಾತನಾಡಿದ ಬಿಎಂಆರ್ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಯಶವಂತ ಚವ್ಹಾಣ್, "ಕೋವಿಡ್ ಸೋಂಕಿನ ಅಬ್ಬರ ಕಡಿಮೆಯಾಗಿದೆ ಎಂಬ ಕಾರಣಕ್ಕೆ ಮಾಸ್ಕ್ ಧರಿಸುವುದನ್ನು ಬಿಡುವುದು ಒಳ್ಳೆಯದಲ್ಲ. ನಮ್ಮ ಮುಂಜಾಗೃತ ಕ್ರಮದಲ್ಲಿ ನಾವು ಇರಬೇಕು. ಹಾಗಾಗಿ, ಮೆಟ್ರೋ ನಿಲ್ದಾಣಗಳಲ್ಲಿ ಮಾಸ್ಕ್ ಕಡ್ಡಾಯವಿದೆ. ಮೆಟ್ರೋ ನಿಲ್ದಾಣಕ್ಕೆ ಪ್ರವೇಶಿಸಬೇಕಾದರೆ, ಮಾಸ್ಕ್ ಧರಿಸಬೇಕು. ಅಗತ್ಯ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳುವುದು ಅವಶ್ಯಕ” ಎಂದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಶುದ್ಧೀಕರಣದ ಹೆಸರಿನಲ್ಲಿ ಕೆರೆಯನ್ನೇ ಬರಿದಾಗಿಸುತ್ತಿದೆ ಪಾಲಿಕೆ; ಸ್ಥಳೀಯರ ವಿರೋಧ
ದಂಡ ಸಂಗ್ರಹ
ಬಿಎಂಆರ್ಸಿಎಲ್ ಇದುವರೆಗೂ ಮಾಸ್ಕ್ ಧರಿಸದ ಪ್ರಯಾಣಿಕರಿಂದ ₹1ಕೋಟಿಗೂ ಅಧಿಕ ಮೊತ್ತದ ದಂಡ ಸಂಗ್ರಹಿಸಿದೆ. ಇದುವರೆಗೂ ಕೊರೊನಾ ಮಾರ್ಗಸೂಚಿ ಉಲ್ಲಂಘನೆಯ 10,113 ಪ್ರಕರಣಗಳನ್ನು ದಾಖಲಿಸಿದೆ.
ರೈಲುಗಳು ಮತ್ತು ನಿಲ್ದಾಣಗಳಲ್ಲಿ ಮಾಸ್ಕ್ ಧರಿಸದೇ ಇರುವ ಪ್ರಯಾಣಿಕರಿಂದ ಬಿಎಂಆರ್ಸಿಎಲ್ ₹250 ದಂಡ ವಿಧಿಸುತ್ತಿತ್ತು. ಮಾರ್ಚ್ 2021ರಿಂದ ದಂಡ ಸಂಗ್ರಹ ಪ್ರಾರಂಭವಾಗಿತ್ತು.