ಬೆಂಗಳೂರು | 'ನಮ್ಮ ಮೆಟ್ರೋ'ದಲ್ಲಿ ಹೊಸ ವ್ಯವಸ್ಥೆ; ಒಂದೇ ಟಿಕೆಟ್‌ ಬಳಸಿ ಗರಿಷ್ಠ ಆರು ಮಂದಿ ಪ್ರಯಾಣಕ್ಕೆ ಅವಕಾಶ

  • ಈ ನೂತನ ವ್ಯವಸ್ಥೆ ಜನವರಿಯಿಂದ ಜಾರಿಗೆ ಬರಲಿದೆ: ಬಿಎಂಆರ್‍‌ಸಿಎಲ್
  • ಇಲ್ಲಿಯವರೆಗೆ ಒಟ್ಟು 1,35,564 ಕ್ಯೂಆರ್ ಟಿಕೆಟ್‌ಗಳನ್ನು ಬಳಸಲಾಗಿದೆ

ರಾಜಧಾನಿ ಬೆಂಗಳೂರಿನ 'ನಮ್ಮ ಮೆಟ್ರೋ'ದಲ್ಲಿ ಇನ್ಮುಂದೆ ಒಂದೇ ಟಿಕೆಟ್‌ನಲ್ಲಿ ಒಬ್ಬರಿಗಿಂತ ಗರಿಷ್ಠ ಆರು ಮಂದಿ ಪ್ರಯಾಣಿಸುವ ಅವಕಾಶವನ್ನು ಕಲ್ಪಿಸಲು ಬೆಂಗಳೂರು ಮೆಟ್ರೋ ರೈಲು ನಿಗಮ (ಬಿಎಂಆರ್‍‌ಸಿಎಲ್) ಮುಂದಾಗಿದೆ.

ಈ ಕುರಿತು ಈ ದಿನ.ಕಾಮ್‌ ಜತೆಗೆ ಮಾತನಾಡಿದ ಬಿಎಂಆರ್‍‌ಸಿಎಲ್ ಸಾರ್ವಜನಿಕ ಸಂಪರ್ಕಾಧಿಕಾರಿ ಬಿ.ಎಲ್ ಯಶವಂತ ಚವ್ಹಾಣ್, ”ಪ್ರಸ್ತುತ ವ್ಯವಸ್ಥೆಯಲ್ಲಿ ಮೆಟ್ರೋ ರೈಲಿನಲ್ಲಿ ಪ್ರಯಾಣಿಸುವವರು ಒಬ್ಬರು ಒಂದು ಟಿಕೆಟ್‌ ಪಡೆದು ಪ್ರಯಾಣಿಸಬೇಕಾಗಿದೆ. ಆದರೆ, ಮುಂಬರುವ ದಿನಗಳಲ್ಲಿ ಬಬ್ಬರಿಗಿಂತ ಹೆಚ್ಚು ಮಂದಿ ಅಂದರೆ, ಗರಿಷ್ಠ ಆರು ಮಂದಿ ಒಂದೇ ಟಿಕೆಟ್ ಬಳಸಿ ಪ್ರಯಾಣಿಸಬಹುದಾಗಿದೆ” ಎಂದರು.

“ಈಗಾಗಲೇ ಜಾರಿಗೆ ಬಂದಿರುವ ವಾಟ್ಸ್‌ಆಪ್ ಕ್ಯೂ ಆರ್‍‌ ಕೋಡ್ ವ್ಯವಸ್ಥೆಯಲ್ಲಿ ಇದು ಇದ್ದು, ಒಂದೇ ಕ್ಯೂಆರ್ ಕೋಡ್‌ ಅನ್ನು ಗರಿಷ್ಠ ಆರು ಮಂದಿ ಬಳಸಬಹುದು. ಒಂದೇ ಬಾರಿ ಆರು ಜನರಿಗೆ ಟಿಕೆಟ್ ಬುಕ್‌ ಮಾಡಬಹುದು" ಎಂದು ವಿವರಿಸಿದರು.

“ಈ ವ್ಯವಸ್ಥೆಯೂ ಜನವರಿಯಲ್ಲಿ ಜಾರಿ ಬರಲಿದ್ದು, ಇದರಿಂದ ಹೆಚ್ಚಿನ ಜನ ಟಿಕೆಟ್‌ ಕೌಂಟರ ಮುಂದೆ ಕ್ಯೂ ನಿಲ್ಲುವುದು ತಪ್ಪಲಿದೆ. ಈ ಕ್ರಮವು ಅನೇಕರ ಸಮಯವನ್ನು ಉಳಿಸಲಿದೆ. ಪ್ರಸ್ತುತ ಇದರ ಪ್ರಾಯೋಗಿಕ ಪರೀಕ್ಷೆ ನಡೆಯುತ್ತಿದೆ. ಈ ಪರೀಕ್ಷೆ ಇನ್ನೂ ಕೆಲವು ವಾರಗಳ ಕಾಲ ಮುಂದುವರಿಯಲಿದೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಕೊರೆಯುವ ಚಳಿ.. ತುಂತುರು ಮಳೆ; ವಿದ್ಯಾರ್ಥಿಗಳು, ವಾಹನ ಸವಾರರ ಪರದಾಟ

“ನವೆಂಬರ್ 1ರಂದು ಪ್ರಾರಂಭಿಸಲಾದ ವಾಟ್ಸ್‌ಆಪ್ ಕ್ಯೂಆರ್ ಟಿಕೆಟ್ ವ್ಯವಸ್ಥೆಗೆ ಉತ್ತಮ ಪ್ರತಿಕ್ರಿಯೆ ದೊರೆಯುತ್ತಿದೆ. ಆರಂಭದ ದಿನ 1,800 ಪ್ರಯಾಣಿಕರು ಕ್ಯೂಆರ್ ಟಿಕೆಟ್ ಬಳಸಿದ್ದು, ನವೆಂಬರ್ 20 ರಂದು 12,787 ಕ್ಯೂಆರ್ ಟಿಕೆಟ್‌ಗಳನ್ನು ಖರೀದಿಸಿದ್ದಾರೆ. ಇಲ್ಲಿಯವರೆಗೆ ಒಟ್ಟು 1,35,564 ಕ್ಯೂಆರ್ ಟಿಕೆಟ್‌ಗಳನ್ನು ಬಳಸಲಾಗಿದೆ" ಎಂದು ಅವರು ಮಾಹಿತಿ ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
Image
av 930X180