ಬೆಂಗಳೂರು| ವಿದ್ಯುತ್ ದುರಸ್ತಿ ವೇಳೆ ನೌಕರ ಸಾವು; ಎಂಜಿನಿಯರ್‍‌ಗಳ ವಿರುದ್ಧ ಎಫ್‌ಐಆರ್ ದಾಖಲು

  • ಬೆಸ್ಕಾಂ ಎಂಜಿನಿಯರ್‍‌ಗಳ ವಿರುದ್ಧ ದೂರು ದಾಖಲಿಸಿದ ಮೃತರ ತಂದೆ
  • ದೂರಿನ ಆಧಾರದ ಮೇಲೆ ಎಂಜಿನಿಯರ್‍‌ಗಳ ವಿರುದ್ಧ ಪ್ರಕರಣ ದಾಖಲು

ಬೆಂಗಳೂರಿನ ಗೋಪಾಲಪುರದಲ್ಲಿ ಎಫ್-29 ಫೀಡರ್ ದುರಸ್ತಿ ವೇಳೆ ವಿದ್ಯುತ್ ತಗುಲಿ ಬೆಸ್ಕಾಂ ಸಿಬ್ಬಂದಿ ಗೌತಮ್ (28) ಎಂಬುವವರು ಭಾನುವಾರ ಮೃತಪಟ್ಟಿದ್ದು, ನಿರ್ಲಕ್ಷ್ಯ ವಹಿಸಿದ್ದ ಆರೋಪದಡಿ ಎಂಜಿನಿಯರ್‍‌ಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ.

ಸುಂಕದಕಟ್ಟೆಯ ನಿವಾಸಿ ಗೌತಮ್, ಹಲವು ವರ್ಷಗಳಿಂದ ಬೆಸ್ಕಾಂನಲ್ಲಿ ಕೆಲಸ ಮಾಡುತ್ತಿದ್ದರು. ಭಾನುವಾರ ರಾತ್ರಿ ಪಾಳಿಯಲ್ಲಿ ಕೆಲಸದಲ್ಲಿದ್ದ ಅವರು ಸೋಮವಾರ ಬೆಳಿಗ್ಗೆ 9 ಗಂಟೆಗೆ ಗೋಪಾಲಪುರ ಪೊಲೀಸ್ ಚೌಕಿ ಬಳಿಯ ಎಫ್-29 ಫೀಡರ್ ದುರಸ್ತಿ ಕೆಲಸದಲ್ಲಿ ನಿರತರಾಗಿದ್ದರು. ಈ ವೇಳೆ, ವಿದ್ಯುತ್ ಪ್ರವಹಿಸಿ ಅಸ್ವಸ್ಥಗೊಂಡಿದ್ದರು. ಕೂಡಲೇ ಅವರನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಗೌತಮ್ ಸಾವಿಗೆ ಇಲಾಖೆಯ ಅಸಿಸ್ಟೆಂಟ್ ಎಂಜಿನಿಯರ್, ಜ್ಯೂನಿಯರ್ ಎಂಜಿನಿಯರ್‌ಗಳೇ ಕಾರಣ ಎಂದು ಗೌತಮ್ ತಂದೆ ರಂಗನಾಥ್ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಫೀಡರ್ ಸೇವೆ ಹಾಳಾದ ಹಿನ್ನಲೆ, ದುರಸ್ತಿ ಕಾರ್ಯಕ್ರಮಕ್ಕೆಂದು ತೆರಳಿದ್ದ ಲೈನ್‌ಮೆನ್ ಗೌತಮ್, ಸಹೋದ್ಯೋಗಿ ಸಿದ್ಧರಾಮ್ ಜೊತೆ ಭಾನುವಾರ ಬೆಳಿಗ್ಗೆ ಸ್ಥಳಕ್ಕೆ ಹೋಗಿ ದುರಸ್ತಿ ಕಾರ್ಯದಲ್ಲಿ ನಿರತರಾಗಿದ್ದರು. ಆದರೆ, ಒಂದು ಮಾರ್ಗ ತಂತಿಯಲ್ಲಿ ವಿದ್ಯುತ್ ಸಂಪರ್ಕ ಮಾತ್ರ ಕಡಿತಗೊಳಿಸಲಾಗಿತ್ತು. ಇನ್ನೊಂದು ಮಾರ್ಗದ ತಂತಿಯಲ್ಲಿ ವಿದ್ಯುತ್ ಹರಿಯುತ್ತಿತ್ತು. ಅದೇ ತಂತಿಯಿಂದ ಗೌತಮ್ ಅವರಿಗೆ ವಿದ್ಯುತ್ ತಗುಲಿತ್ತು. ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ಮಾರ್ಗ ಮಧ್ಯೆಯೇ ಅವರು ಅಸುನೀಗಿದ್ದಾರೆ” ಎಂದು ಪೊಲೀಸರು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಫಲಪುಷ್ಪ ಪ್ರದರ್ಶನ| ಗಣರಾಜ್ಯೋತ್ಸವದಂದು ಮೆಟ್ರೋ ಪ್ರಯಾಣಿಕರಿಗೆ ಪೇಪರ್ ಟಿಕೆಟ್

“ಬೆಸ್ಕಾಂ ಸಹಾಯಕ ಎಂಜಿನಿಯರ್, ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, ಕಿರಿಯ ಎಂಜಿನಿಯರ್ ಹಾಗೂ ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಎಲ್ಲರಿಗೂ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು” ಎಂದು ಹೇಳಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app