ಬೆಂಗಳೂರು | ಪಾವತಿ ಪಾರ್ಕಿಂಗ್‌ ವ್ಯವಸ್ಥೆ ಜಾರಿ; ವಾಹನ ಸವಾರರಿಂದ ಬಿಬಿಎಂಪಿಗೆ ಛೀಮಾರಿ

  • ಬೆಂಗಳೂರಿನ 8 ವಲಯಗಳ 723 ರಸ್ತೆಗಳಲ್ಲಿ ಪಾವತಿ ಪಾರ್ಕಿಂಗ್‌
  • ಪೇ ಪಾರ್ಕಿಂಗ್‌ಗೆ ಸರ್ಕಾರದಿಂದ 2021ರ ಫೆಬ್ರವರಿಯಲ್ಲೇ ಅನುಮತಿ 

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಪಾವತಿ ಪಾರ್ಕಿಂಗ್‌ ವ್ಯವಸ್ಥೆಯನ್ನು ಜಾರಿ ಮಾಡಲು ಹೊರಟಿದೆ. ಇದಕ್ಕೆ ವಾಹನ ಸವಾರರು ಭಾರೀ ವಿರೋಧವನ್ನು ವ್ಯಕ್ತಪಡಿಸುತ್ತಿದ್ದಾರೆ.

ನಗರ ಭೂ ಸಾರಿಗೆ ನಿರ್ದೇಶನಾಲಯ (ಡಲ್ಟ್‌) ರೂಪಿಸಿದ್ದ ಹೊಸ ಪಾರ್ಕಿಂಗ್ ನೀತಿ ಅನ್ವಯ ಪಾವತಿ ಮಾಡಿ ನಿಲುಗಡೆ ಮಾಡುವ ವ್ಯವಸ್ಥೆ ಜಾರಿಗೆ ತರಲು ಟೆಂಡರ್ ಕರೆದಿದೆ. ವಲಯವಾರು ರಸ್ತೆಗಳನ್ನು ವಿಂಗಡಿಸಿ ಪಾವತಿ ಪಾರ್ಕಿಂಗ್‌ ಯೋಜನೆಯನ್ನು ಸಿದ್ಧಪಡಿಸಿದ್ದು, ಬೆಂಗಳೂರು ನಗರ ಪೊಲೀಸರು, ಬಿಬಿಎಂಪಿ ಈ ಸರ್ವೆಯಲ್ಲಿ ಭಾಗಿಯಾಗಿವೆ. ಹೊಸ ನೀತಿಯಂತೆ ಕಾರು, ಬೈಕುಗಳಿಗೆ ಬೇರೆ-ಬೇರೆ ಶುಲ್ಕ ವಿಧಿಸಲಾಗುತ್ತದೆ. ಸೈಕಲ್‌ಗಳಿಗೆ ಮಾತ್ರ ಉಚಿತ ಪಾರ್ಕಿಂಗ್‌ ವ್ಯವಸ್ಥೆ ಇರಲಿದೆ.

ಬೆಂಗಳೂರಿನ ಎಂಟು ವಲಯಗಳ 723 ರಸ್ತೆಗಳಲ್ಲಿ ಈ ಪಾವತಿ ಪಾರ್ಕಿಂಗ್‌ ವ್ಯವಸ್ಥೆಯನ್ನು ಜಾರಿ ಮಾಡಲು ಬಿಬಿಎಂಪಿ ಮುಂದಾಗಿದೆ. ಈ ಸಂಬಂಧ ಸೆ.18 ರಂದು ಟೆಂಡರ್‌ ಪ್ರಕ್ರಿಯೆ ಆರಂಭಿಸಿದ್ದು, ಅಕ್ಟೋಬರ್‌ 10 ರಂದು ಆಯ್ಕೆ ಪ್ರಕ್ರಿಯೆ ನಡೆಯಲಿದೆ. ನಂತರ ನಿಯಮಾನುಸಾರ ವಿಧಿಸಲಾದ ಪಾರ್ಕಿಂಗ್‌ ಶುಲ್ಕವನ್ನು ಜಾರಿ ಮಾಡಲಾಗುತ್ತದೆ. ಈ ಯೋಜನೆಗೆ ಸರ್ಕಾರ 2021ರ ಫೆಬ್ರುವರಿ 2ರಂದೇ ಅನುಮತಿ ನೀಡಿದೆ.

ಪೇ ಪಾರ್ಕಿಂಗ್‌ ಶುಲ್ಕ ವಿವರ ಹೀಗಿದೆ

Image
ಪಾವತಿ ಪಾರ್ಕಿಂಗ್‌ ವ್ಯವಸ್ಥೆಯ ಶುಲ್ಕ ವಿವರ
ಪಾವತಿ ಪಾರ್ಕಿಂಗ್‌ ವ್ಯವಸ್ಥೆಯ ಶುಲ್ಕ ವಿವರ

ಬೆಂಗಳೂರಿನ ಎಂಟೂ ವಲಯಗಳ ರಸ್ತೆಗಳನ್ನು ಎ, ಬಿ, ಸಿ ಎಂದು ಮೂರು ವರ್ಗಗಳಾಗಿ ವಿಭಜಿಸಿ, ಪಾವತಿ ಪಾರ್ಕಿಂಗ್‌’ ವ್ಯವಸ್ಥೆಯನ್ನು ಜಾರಿಗೆ ತರಲಿದ್ದು, ಇದರಿಂದ ವಾರ್ಷಿಕ ₹124 ಕೋಟಿ ಆದಾಯ ಗಳಿಸುವ ನಿರೀಕ್ಷಿಸಲಾಗಿದೆ ಎಂದು ಬಿಬಿಎಂಪಿ ಟ್ರಾಫಿಕ್‌ ಎಂಜಿನಿಯರಿಂಗ್‌ ಕೋಶದ (ಟಿಇಸಿ) ಎಂಜಿನಿಯರ್‌ಗಳು ಹೇಳಿದರು.

ಈ ಬಗ್ಗೆ ಬೆಂಗಳೂರಿನ ಪ್ರಜ್ಞಾವಂತರ ನಾಗರಿಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ವಾಹನ ಸವಾರರಾದ ರಾಜಶೇಖರ್‌ ನಾಯ್ಡು ಅವರು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, "ಜನರು ನೆಮ್ಮದಿಯಿಂದ ಇರುವುದಕ್ಕೆ ಈ ಬಿಬಿಎಂಪಿ ಬಿಡುವುದಿಲ್ಲ. ಜನರಿಗೆ ಹೇಗೆಲ್ಲ ತೊಂದರೆ ಕೊಡಬಹುದು ಎಂಬ ಲೆಕ್ಕಾಚಾರದಲ್ಲೇ ಮುಳುಗಿದ್ದು, ಪೇ ಪಾರ್ಕಿಂಗ್‌ ಹೆಸರಿನಲ್ಲಿ ಸುಲಿಗೆಗೆ ಜನರನ್ನು ಸುಲಿಗೆ ಮಾಡಲು ಮುಂದಾಗಿದೆ" ಎಂದು ಬಿಬಿಎಂಗೆ ಛೀಮಾರಿ ಹಾಕಿದರು. 

"ಸಾರ್ವಜನಿಕರು ಬಿಬಿಎಂಪಿಯ ಈ ನಿರ್ಧಾರವನ್ನು ವಿರೋಧಿಸಿ ಮುಖ್ಯಮಂತ್ರಿಗಳಿಗೆ, ಸಚಿವರುಗಳಿಗೆ ಪತ್ರ ಬರೆಯಬೇಕು. ನ್ಯಾಯಾಲಯ, ನಾಗರಿಕರ ವೇದಿಕೆಗಳಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ಸಲ್ಲಿಸಿ ಪಾವತಿ ಪಾರ್ಕಿಂಗ್‌ ವ್ಯವಸ್ಥೆ ಜಾರಿ ಮಾಡದಂತೆ ತಡೆಯಬೇಕಿದೆ. ಇದು ಬೆಂಗಳೂರಿಗರೆಲ್ಲ ಜವಾಬ್ದಾರಿಯಾಗಿದೆ" ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ಈದಿನ.ಕಾಮ್ ಜೊತೆ ಮಾತನಾಡಿದ ನಿವೃತ್ತ ಬ್ಯಾಂಕ್‌ ಉದ್ಯೋಗಿ ಶ್ರೀನಿವಾಸ್‌, "ಕಳೆದ 20 ವರ್ಷಗಳಿಂದ ಬಿಬಿಎಂಪಿ ಪೇ ಪಾರ್ಕಿಂಗ್‌ ವ್ಯವಸ್ಥೆ ಜಾರಿ ತರುವಲ್ಲಿ ಮುಗ್ಗರಿಸಿರುವ ರೀತಿಯನ್ನು, ಪಾರ್ಕಿಂಗ್‌ ಹೆಸರಿನಲ್ಲಿ ಹಣ ಸಂಗ್ರಹಿಸಿ ದೋಚಿರುವವರನ್ನು ನೋಡಿದ್ದೇವೆ. ಇರುವ ಪಾರ್ಕಿಂಗ್‌ ವ್ಯವಸ್ಥೆಯನ್ನು ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡದೆ, ಸಾರ್ವಜನಿಕರನ್ನು ಶೋಷಣೆ ಮಾಡಿ ಹಣ ಗಳಿಸುವ ದಂಧೆಯಾಗಿಸಿಕೊಳ್ಳಲಾಗಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಈ ಪೇ ಪಾರ್ಕಿಂಗ್‌ ಅಥವಾ ಪಾವತಿ ಪಾರ್ಕಿಂಗ್‌ ವ್ಯವಸ್ಥೆ ಕುರಿತು ಬೆಂಗೂರಿನ ನಾಗರಿಕರು, ಬೈಕ್‌, ಕಾರು ಚಾಲಕರು ತೀವ್ರ ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ. ಈ ವಿರೋಧಗಳ ನಡುವೆ ಬಿಬಿಎಂಪಿ ಈ ವ್ಯವಸ್ಥೆಯನ್ನು ಜಾರಿ ಮಾಡುತ್ತದೆಯೇ ಅಥವಾ ಸಾರ್ವಜನಿಕನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ನಿಟ್ಟಿನಲ್ಲಿ ತನ್ನ ತೀರ್ಮಾನದ ಕುರಿತು ಮನವರಿಕೆ ಮಾಡುತ್ತದೆಯೇ ಎಂಬುದರ ಬಗ್ಗೆ ಪ್ರತಿಕ್ರಿಯೆ ಪಡೆಯಲು ಈ ದಿನ.ಕಾಮ್‌, ಆಯುಕ್ತ ತುಷಾರ್‌ ಗಿರಿನಾಥ್‌ ಅವರನ್ನು ಸಂಪರ್ಕಿಸಿತು. ಆದರೆ ಅವರು ಪ್ರತಿಕ್ರಿಯೆ ನೀಡಲು ನಿರಾಕರಿಸಿದರು.

ʼಪೇ ಪಾರ್ಕಿಂಗ್‌ʼ ಜಾರಿ ವಿಧಾನ ಹೀಗಿರಲಿದೆ.

ಬಿಬಿಎಂಪಿ ಗುರುತಿಸಿರುವ ಬೆಂಗಳೂರಿನ 723 ರಸ್ತೆಗಳಲ್ಲಿ ಬೈಕ್‌, ಕಾರುಗಳಿಗೆ ನಿಲುಗಡೆ ಪ್ರದೇಶವನ್ನು ಗುರುತಿಸಲಾಗಿದೆ. ಗುತ್ತಿಗೆದಾರರು ಮ್ಯಾಗ್ನೆಟಿಕ್‌–ಆಪ್ಟಿಕಲ್‌–ಐಆರ್‌ ಸೆನ್ಸಾರ್‌ ಹಾಗೂ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸುತ್ತಾರೆ. ವಾಹನ ನಿಲುಗಡೆ ಮಾಡಿದವರು ತಮ್ಮ ಮೊಬೈಲ್‌ ಆ್ಯಪ್‌ ಮೂಲಕವೂ ಪಾರ್ಕಿಂಗ್‌ ಮಾಡಿದ ಸಮಯವನ್ನು ದಾಖಲಿಸಬೇಕು. ಅಂಗವಿಕಲರ ವಾಹನಗಳಿಗಾಗಿ ಪಾರ್ಕಿಂಗ್‌ ಕಾಯ್ದಿರಿಸಲಾಗುತ್ತದೆ.

ಕೋಡೆಡ್‌ ಟಿಕೆಟ್‌, ಮ್ಯಾಗ್ನೆಟಿಕ್‌ ಸ್ಟ್ರಿಪ್‌ ಕಾರ್ಡ್‌, ಸ್ಮಾರ್ಟ್‌ ಕಾರ್ಡ್‌ಗಳ ಮೂಲಕ ಬಾರ್‌ಕೋಡ್‌ನೊಂದಿಗೆ ವಾಹನ ಗುರುತಿಸುವ ವ್ಯವಸ್ಥೆ ಮಾಡಲಾಗುತ್ತದೆ. ಅಲ್ಲದೆ, ಪಾರ್ಕಿಂಗ್‌ ಮೀಟರ್‌ ಅಳವಡಿಸಿ, ಸ್ಮಾರ್ಟ್‌ ಕಾರ್ಡ್‌, ಕ್ರೆಡಿಟ್‌ ಕಾರ್ಡ್‌, ಡೆಬಿಟ್‌ ಕಾರ್ಡ್‌, ಯುಪಿಐ ಮೂಲಕ ಶುಲ್ಕ ಪಾವತಿಸಲು ಅವಕಾಶ ಇರಲಿದೆ.

ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ಪಾವತಿ ಪಾರ್ಕಿಂಗ್ ಜಾರಿಗೆ ಟೆಂಡರ್:‌ ಮನೆ ಮುಂದೆ ವಾಹನ ನಿಲ್ಲಿಸಿದರೂ ದಂಡ!

ಪೇ ಪಾರ್ಕಿಂಗ್‌ ಹೊಸ ಯೋಜನೆಯಲ್ಲ

ಈಗಾಗಲೇ ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆಯಲ್ಲಿ ಅಳವಡಿಸಲಾಗಿರುವ ‘ಪಾವತಿ ಪಾರ್ಕಿಂಗ್‌ ವ್ಯವಸ್ಥೆ'ಯೇ ಸ್ಮಾರ್ಟ್‌ ಪಾರ್ಕಿಂಗ್‌ ವ್ಯವಸ್ತೆಯಾಗಿದ್ದು, ಇದೇ ಮಾದರಿಯಲ್ಲಿ ಬೆಂಗಳೂರಿನಲ್ಲಿ ಗುರುತಿಸಲಾಗಿರುವ ರಸ್ತೆಗಳಲ್ಲಿ ಶುಲ್ಕ ಪಾವತಿ ಜಾರಿಯಾಗಲಿದೆ.

ಆದರೆ, ಕೆಲವೇ ಕೆಲವು ರಸ್ತೆಗಳಲ್ಲಿದ್ದ ಈ ವ್ಯವಸ್ಥೆಯನ್ನು ಎಲ್ಲ ಕಡೆಗೂ ವಿಸ್ತರಿಸಲು ಹೊರಟಿರುವುದು ಜನರ ಆಕ್ರೋಶಕ್ಕೆ ಕಾರಣವಾಗಿದೆ.    

ನಿಮಗೆ ಏನು ಅನ್ನಿಸ್ತು?
0 ವೋಟ್