ಬೆಂಗಳೂರು | ಪರ್ಯಾಯ ವ್ಯವಸ್ಥೆ ನೀಡದಿದ್ದರೆ ಹೋರಾಟ: ಬೀದಿಬದಿ ವ್ಯಾಪಾರಿಗಳ ಎಚ್ಚರಿಕೆ

  • ಬೆಂಗಳೂರಿನಲ್ಲಿ 1.50 ಲಕ್ಷ ಬೀದಿಬದಿ ವ್ಯಾಪಾರಿಗಳಿದ್ದಾರೆ
  • ವ್ಯಾಪಾರಕ್ಕೆ ಪರ್ಯಾಯ ವ್ಯವಸ್ಥೆ ನೀಡಿಬೇಕೆಂದು ಆಗ್ರಹ

ಬೆಂಗಳೂರಿನಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ ನಿರ್ದಿಷ್ಟ ವ್ಯಾಪಾರಿ ವಲಯ ಗುರುತಿಸಿ, ವ್ಯಾಪಾರ ಮಾಡಲು ಅವಕಾಶ ಕಲ್ಪಿಸದೇ, ವ್ಯಾಪಾರಿಗಳನ್ನು ತೆರವುಗೊಳಿಸಲು ಮುಂದಾದರೆ, ತೀವ್ರ ಹೋರಾಟ ನಡೆಸಲಾಗುವುದು ಎಂದು ಬೀದಿಬದಿ ವ್ಯಾಪಾರಿಗಳು ಎಚ್ಚರಿಕೆ ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುಮಾರು 1.50 ಲಕ್ಷ ಬೀದಿಬದಿ ವ್ಯಾಪಾರಿಗಳಿದ್ದಾರೆ. ಆದರೆ, ಬೀದಿ ಬದಿ ವ್ಯಾಪಾರಿಗಳನ್ನು ಸಮರ್ಪಕವಾಗಿ ಗುರುತಿಸುವ ಪ್ರತಿಕ್ರಿಯೆ ನಡೆದಿಲ್ಲ. ಅಧಿಕಾರಿಗಳು ಕೇವಲ 26 ಸಾವಿರ ವ್ಯಾಪಾರಿಗಳಿಗೆ ಮಾತ್ರ ಗುರುತಿನ ಚೀಟಿ ನೀಡಿದ್ದು, ಉಳಿದ ವ್ಯಾಪಾರಿಗಳನ್ನು ಪರಿಗಣನೆಗೆ ತೆಗೆದುಕೊಂಡಿಲ್ಲ ಎಂದು ವ್ಯಾಪಾರಿಗಳು ದೂರಿದ್ದಾರೆ.

"ತಕ್ಷಣಕ್ಕೆ ಬೀದಿಬದಿ ವ್ಯಾಪಾರಿಗಳನ್ನು ತೆರವು ಮಾಡುವುದರಿಂದ ಹಲವು ಕುಟುಂಬಗಳು ಬೀದಿಗೆ ಬೀಳುತ್ತವೆ. ವ್ಯಾಪಾರಕ್ಕಾಗಿ ಪರ್ಯಾಯ ವ್ಯವಸ್ಥೆ ಕಲ್ಪಿಸಬೇಕು ಎಂದು ಬೀದಿ ಬದಿ ವ್ಯಾಪಾರಿಗಳ ಸಂಘಟನೆಗಳು ಆಗ್ರಹಿಸಿವೆ.

ಈ ಕುರಿತು ಈ ದಿನ.ಕಾಮ್‌ ಜೊತೆಗೆ ಮಾತನಾಡಿದ ಕರ್ನಾಟಕ ಬೀದಿ ಬದಿ ವ್ಯಾಪಾರ ಸಂಘಟನೆ ಒಕ್ಕೂಟದ ಅಧ್ಯಕ್ಷ ಸುರೇಶ, ”ಬೀದಿ ಬದಿ ವ್ಯಾಪಾರಿಗಳನ್ನು ಯಾವುದೇ ಅಧಿಕಾರಿಗಳು ತೆರವು ಮಾಡಲು ಸಾಧ್ಯವಿಲ್ಲ. ಹೈಕೋರ್ಟ್‌ ಕೂಡಾ ಈ ಕುರಿತಂತೆ ಆದೇಶ ಹೊರಡಿಸಿದೆ. ಬೀದಿಬದಿ ವ್ಯಾಪಾರಿಗಳ ಸಮಿತಿ ಇದೆ. ಈ ಸಮಿತಿಯಲ್ಲಿ ತೀರ್ಮಾನ ಆಗದೆ, ಬೀದಿ ವ್ಯಾಪಾರಿಗಳನ್ನು ತೆರವು ಮಾಡಲು ಬರುವುದಿಲ್ಲ. ಅಧಿಕಾರಿಗಳು ಸಮಿತಿಯೊಂದಿಗೆ ಚರ್ಚಿಸದೆ ನಿರ್ಧಾರ ತೆಗೆದುಕೊಂಡಿರುವುದು ಸರಿಯಲ್ಲ. ಇದು ಖಂಡನೀಯ” ಎಂದರು.

AV Eye Hospital ad

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಕಸಾಪದಲ್ಲಿ ಗುರುವಾರ ಭುವನೇಶ್ವರಿ ಪುತ್ಥಳಿ ಅನಾವರಣ

ಮುಖ್ಯ ಆಯುಕ್ತರ ಹೇಳಿಕೆ

ಬೆಂಗಳೂರಿನ ಆರ್ಟಿರಿಯಲ್ ಮತ್ತು ಸಬ್ ಆರ್ಟಿರಿಯಲ್ ರಸ್ತೆಯಲ್ಲಿ ವಾಹನ ಸಂಚಾರ ಹಾಗೂ ಪಾದಚಾರಿಗಳ ಓಡಾಟಕ್ಕೆ ಬೀದಿ ವ್ಯಾಪಾರಿಗಳಿಂದ ತೊಂದರೆಯಾಗುತ್ತಿದೆ. ಹಾಗಾಗಿ, ಬೀದಿಬದಿ ವ್ಯಾಪಾರ ಮಾಡುವವರನ್ನು ತೆರವು ಮಾಡಲಾಗುವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಈ ಹಿಂದೆ ಹೇಳಿದ್ದರು. ಈಗ ಈ ನಿರ್ಧಾರಕ್ಕೆ ಬೀದಿಬದಿ ವ್ಯಾಪಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app