ಬೆಂಗಳೂರು | ಮಹಾಮಳೆಗೆ ನೆಲಕ್ಕೊರಗಿದ ನೂರು ವರ್ಷದ ಮರ

  • ಬೆಂಗಳೂರು ಹಾಗೂ ಮೈಸೂರು ನಡುವೆ 10 ರೈಲು ಸಂಚಾರ ರದ್ದು
  • ಬಸವನಗುಡಿಯಲ್ಲಿ ನೆಲಕ್ಕೊರಗಿದ ನೂರು ವರ್ಷದ ಮರ

ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಕಳೆದ ನಾಲ್ಕು ದಿನಗಳಿಂದ ಧಾರಾಕಾರ ಮಳೆ ಸುರಿಯುತ್ತಿದ್ದು, ಬುಧವಾರ ರಾತ್ರಿ ನಗರದ ನಾನಾ ಪ್ರದೇಶಗಳಲ್ಲಿ ಜೋರು ಮಳೆ ಸುರಿದಿದೆ. ಗುರುವಾರ ಬೆಳಿಗ್ಗೆ 9 ಗಂಟೆಯಿಂದಲೇ ಮಳೆ ಶುರುವಾಗಿದೆ.

ನಗರದ ನಾನಾ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿ ಮನೆಯಲ್ಲಿನ ಆಹಾರ ಸಾಮಗ್ರಿಗಳು, ಪೀಠೋಪಕರಣಗಳು ನೀರಿನಲ್ಲಿ ತೋಯ್ದು ಮನೆ ಮಾಲೀಕರಿಗೆ ನಷ್ಟವುಂಟಾಗಿದೆ.

ನಗರದ ಎಲ್ಲೆಲ್ಲಿ ಮಳೆ?

ರಾಜೀವ್‌ಗಾಂಧಿ ನಗರ, ಸಾಯಿ ಲೇಔಟ್, ಕಾವೇರಿ ಬಡಾವಣೆ, ಕುಮಾರಸ್ವಾಮಿ ಲೇಔಟ್ ಸೇರಿ ರಾಜಕಾಲುವೆ ಅಂಚಿನ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿದೆ.

ವಿಜಯನಗರ, ಮಲ್ಲೇಶ್ವರ, ಶ್ರೀರಾಮ್‌ಪುರ, ಪ್ರಕಾಶನಗರ, ಮೆಜೆಸ್ಟಿಕ್, ಶಿವಾಜಿನಗರ, ರಾಜಾಜಿನಗರ, ನಂದಿನಿ ಲೇಔಟ್, ಗೋವಿಂದರಾಜನಗರ, ಮಾಗಡಿ ರೋಡ್, ಯಶವಂತಪುರ ಸೇರಿದಂತೆ ನಗರದ ನಾನಾ ಪ್ರದೇಶಗಳಲ್ಲಿ ಭಾರಿ ಮಳೆಯಾಗಿದೆ. 

ನೆಲಕ್ಕೊರಗಿದ ನೂರು ವರ್ಷದ ಮರ

ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಹೈಸ್ಕೂಲ್ ಕ್ರೀಡಾಂಗಣದಲ್ಲಿ ಅಂದಾಜು ನೂರು ವರ್ಷದ ಮರವೊಂದು ಮಳೆಯಿಂದ ನೆಲಕ್ಕೊರಗಿದೆ.

ಶ್ರೀಸಾಯಿ ಲೇಔಟ್‌ನ ಮನೆಗಳಿಗೆ ನೀರು

ಸತತವಾಗಿ ಸುರಿಯುತ್ತಿರುವ ಮಳೆಗೆ ನಗರದ ಜನತೆ ಹೈರಾಣಾಗಿದ್ದು, ಅದರಲ್ಲೂ ಸಾಯಿ ಲೇಔಟ್‌ನ ಮಂದಿ ಮಳೆಯಿಂದ ನಿಜಕ್ಕೂ ಪರದಾಡುತ್ತಿದ್ದಾರೆ.

ಈ ಸುದ್ದಿ ಓದಿದ್ದೀರಾ? ಒಂದು ನಿಮಿಷದ ಓದು | ಕೈಮಗ್ಗ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳ

ಹೆಬ್ಬಾಳ, ಬಾಣಸವಾಡಿ, ಹೆಣ್ಣೂರು, ನಾಗವಾರ ಭಾಗಗಳಿಂದ ರಾಜಕಾಲುವೆ ಮೂಲಕ ಹರಿದು ಬರುವ ಮಳೆ ನೀರು ಗೆದ್ದಲಹಳ್ಳಿ ಸಮೀಪದ ರೈಲ್ವೆ ವೆಂಟ್ ಮೂಲಕ ಹರಿದು ಹೋಗಬೇಕು. ಆದರೆ, ರೈಲ್ವೆ ವೆಂಟ್ ಚಿಕ್ಕದಾಗಿರುವ ಕಾರಣ ನೀರು ಹಿಂದಕ್ಕೆ ಸರಿದು ತಗ್ಗು ಪ್ರದೇಶದಲ್ಲಿರುವ ಶ್ರೀ ಸಾಯಿ ಲೇಔಟ್‌ನ 250ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ.

ಕ್ಲಿನಿಕ್‌ನ ತುಂಬ ಚರಂಡಿ ನೀರು

ವಿಜಯನಗರದ ಅತ್ತಿಗುಪ್ಪೆ ಮೆಟ್ರೊ ನಿಲ್ದಾಣದ ಬಳಿಯಿರುವ ಕ್ಲಿನಿಕ್‌ವೊಂದರಲ್ಲಿ ಅಧಿಕ ಪ್ರಮಾಣದಲ್ಲಿ ಮಳೆಯಾದಾಗ ಕ್ಲಿನಿಕ್‌ನ ತುಂಬೆಲ್ಲಾ ಚರಂಡಿ ನೀರು ತುಂಬಿಕೊಂಡಿತ್ತು. ನೀರು ಹೊರಹಾಕಿದ ನಂತರವೂ ಕ್ಲಿನಿಕ್‌ ತುಂಬ ರಾಡಿ ತುಂಬಿತ್ತು. ಕ್ಲಿನಿಕ್‌ನ ವಸ್ತುಗಳೆಲ್ಲವೂ ಹಾಳಾಗಿವೆ. ಧಾರಾಕಾರ ಮಳೆ ಆದ ಸಂದರ್ಭದಲ್ಲಿ ಇಲ್ಲಿನ ನಿವಾಸಿಗಳು ಹಾಗೂ ಪ್ರಯಾಣಿಕರು ಪರದಾಡುವಂತಾಗಿದೆ.

ಮಳೆಯಿಂದ ರೈಲು ಸಂಚಾರ ರದ್ದು

ರಾಜ್ಯದಲ್ಲಿ ಅಧಿಕ ಮಳೆ ಸುರಿಯುತ್ತಿರುವುದರಿಂದ ಕೆರೆ, ಕಾಲುವೆಗಳು ಉಕ್ಕಿ ಹರಿಯುತ್ತಿವೆ. ಬೆಂಗಳೂರು ಹಾಗೂ ಮೈಸೂರು ನಡುವೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಅದೇ ರೀತಿ ರೈಲು ಸಂಚಾರದಲ್ಲೂ ವ್ಯತ್ಯಯ ಉಂಟಾಗಿದ್ದು, ಮಂಗಳವಾರ ಎರಡೂ ನಗರಗಳ ನಡುವೆ 10 ರೈಲುಗಳ ಸಂಚಾರ ರದ್ದುಗೊಳಿಸಲಾಗಿದೆ.

ಮಂಡ್ಯ ತಾಲ್ಲೂಕಿನ ಹನಕೆರೆ ಹಾಗೂ ಮದ್ದೂರು ಬಳಿ ರೈಲು ಹಳಿ ಮೇಲೆ ರಭಸವಾಗಿ ನೀರು ಹರಿಯತ್ತಿರುವ ಕಾರಣ ಈ ಮಾರ್ಗದಲ್ಲಿ ಸಂಚರಿಸುತ್ತಿದ್ದ ಮೆಮೂ ಪ್ಯಾಸೆಂಜರ್ ರೈಲುಗಳನ್ನು ಬಂದ್ ಮಾಡಲಾಗಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್