ಬೆಂಗಳೂರು | ಅಪಘಾತಗಳ ಹೆಚ್ಚಳ; ಎಲೆಕ್ಟ್ರಾನಿಕ್ ಸಿಟಿ ಫ್ಲೈ ಓವರ್‌ ಮೇಲೆ ದ್ವಿಚಕ್ರ ವಾಹನ ಸಂಚಾರ ನಿರ್ಬಂಧಕ್ಕೆ ಚಿಂತನೆ

  • ದ್ವಿಚಕ್ರ ವಾಹನ ಸಂಚಾರ ನಿಷೇಧಕ್ಕೆ ಚರ್ಚೆ ನಡೆಸಲಾಗುತ್ತಿದೆ
  • 2022 ಇಲ್ಲಿಯವರೆಗೂ ನಡೆದ 120 ಅಪಘಾತದಲ್ಲಿ 38 ಮಂದಿ ಸಾವು 

ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲೆ ನಡೆಯುವ ಅಪಘಾತಗಳನ್ನು ತಪ್ಪಿಸಲು ದ್ವಿಚಕ್ರ ವಾಹನಗಳು ಫ್ಲೈ ಓವರ್ ಮೇಲೆ ಸಂಚರಿಸದಿರಲು ನಿರ್ಬಂಧ ಹೊರಡಿಸುವಂತೆ ಬೆಂಗಳೂರು ಎಲಿವೇಟೆಡ್ ಟೋಲ್ ಪ್ರೈವೇಟ್ ಲಿಮಿಟೆಡ್ (ಬಿಇಟಿಪಿಎಲ್) ಕಂಪನಿಗೆ ಸಂಚಾರ ಪೊಲೀಸರು ಮನವಿ ಪತ್ರ ಬರೆದಿದ್ದಾರೆ.

ನಗರದಿಂದ ಹೊಸೂರಿಗೆ ಸಂಪರ್ಕ ಕಲ್ಪಿಸುವ ಹೆದ್ದಾರಿಯಲ್ಲಿರುವ ಫ್ಲೈ ಓವರ್ ಮೇಲೆ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ ಅಧಿಕ ಸಂಖ್ಯೆಯಲ್ಲಿ ದ್ವಿಚಕ್ರ ವಾಹನ ಸವಾರರೇ ಬಲಿಯಾಗುತ್ತಿದ್ದಾರೆ. ಕಳೆದ ಕೆಲ ವಾರಗಳ ಹಿಂದಷ್ಟೇ ದ್ವಿಚಕ್ರ ವಾಹನ ಸವಾರರೊಬ್ಬರು ಮೃತಪಟ್ಟಿದ್ದರು.

ಹೀಗಾಗಿ ಇಂತಹ ದುರ್ಘಟನೆಗಳು ನಡೆಯದಂತೆ ಮುತುವರ್ಜಿ ವಹಿಸಲು ಸಂಚಾರ ಪೊಲೀಸರು ಈ ಕುರಿತು ಚಿಂತಿಸಿ, ದ್ವಿಚಕ್ರ ವಾಹನ ಸವಾರರು ಈ ಫ್ಲೈಓವರ್‌ ಮೇಲೆ ಸಂಚರಿಸದಂತೆ ನಿಷೇಧಾಜ್ಞೆ ಹೊರಡಿಸಲು ಮನವಿ ಸಲ್ಲಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | 'ನಮ್ಮ ಕ್ಲಿನಿಕ್'ಗಳಲ್ಲಿ 30 ವರ್ಷ ಮೇಲ್ಪಟ್ಟವರಿಗೆ ಮಧುಮೇಹ ತಪಾಸಣೆ : ಸಚಿವ ಡಾ ಕೆ ಸುಧಾಕರ್‌

ಸಂಚಾರ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಬಿಇಟಿಪಿಎಲ್ ಕಂಪನಿಗೆ ಈಗಾಗಲೇ ಪತ್ರ ಬರೆದಿದ್ದಾರೆ. ದ್ವಿಚಕ್ರ ವಾಹನ ಸಂಚಾರ ನಿಷೇಧಕ್ಕೆ ಇರುವ ಅವಕಾಶ ಹಾಗೂ ಪರಿಣಾಮಗಳ ಬಗ್ಗೆ ಚರ್ಚೆ ನಡೆಯುತ್ತಿದೆ. ಕಂಪನಿ ಅಧಿಕಾರಿಗಳ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಸಂಚಾರ ಪೊಲೀಸರು ಮಾಧ್ಯಮಗಳಿಗೆ ಸ್ಪಷ್ಟಪಡಿಸಿದ್ದಾರೆ. 

ಈ ದಿನ.ಕಾಮ್ನ ಸಂಪರ್ಕಕ್ಕೆ ದೊರೆತ ಬಿಇಟಿಪಿಎಲ್ ಕಚೇರಿ ಸಿಬ್ಬಂದಿ, "ಪೊಲೀಸರು ಮನವಿ ಪತ್ರ ಸಲ್ಲಿಸಿದ್ದಾರೆ. ಆದರೆ, ಈ ಕುರಿತು ಚರ್ಚೆ ನಡೆಸಲಾಗುತ್ತಿದೆ. ಇನ್ನೂ ಯಾವುದೇ ಕ್ರಮ ಕೈಗೊಂಡಿಲ್ಲ. ನಾವು ಈ ಫ್ಲೈ ಓವರ್ ಮೇಲೆ ಅಪಘಾತ ನಡೆಯದಂತೆ ತಡೆಯುತ್ತಿದ್ದೇವೆ. ಆದರೆ ಎಷ್ಟೇ ಕಾಳಜಿ ವಹಿಸಿದರೂ ಸಹ ಅಪಘಾತದ ಸಂಖ್ಯೆ ಇಳಿಕೆಯಾಗುತ್ತಿಲ್ಲ" ಎಂದು ಹೇಳಿದರು.

ಫ್ಲೈ ಓವರ್ ಮೇಲೆ ಮೃತಪಟ್ಟವರ ಸಂಖ್ಯೆ

ಬಿಇಟಿಪಿಎಲ್ ಅಂಕಿ ಅಂಶದ ಪ್ರಕಾರ ಫ್ಲೈಓವರ್ ಮೇಲೆ 2018-19 ಸಾಲಿನಲ್ಲಿ 256 ಅಪಘಾತ ಸಂಭವಿಸಿದ್ದು, 47 ಮಂದಿ ಮೃತಪಟ್ಟಿದ್ದಾರೆ. ಇದೇ ಸಾಲಿನಲ್ಲಿ ಗಂಭೀರ ಗಾಯಗೊಂಡವರು 63 ಮಂದಿ ಇದ್ದಾರೆ ಎಂದು ಬಿಇಟಿಪಿಎಲ್ ಮಾಹಿತಿ ನೀಡಿದೆ.

2021-21 ಸಾಲಿನಲ್ಲಿ 260 ಅಪಘಾತಗಳು ನಡೆದಿದೆ. ಅದರಲ್ಲಿ ಮೃತಪಟ್ಟವರು 48 ಮಂದಿಯಾದರೆ, ಗಂಭೀರ ಗಾಯಗೊಂಡವರು 79 ಮಂದಿ. 2022 ಇಲ್ಲಿವರೆಗೂ 120 ಅಪಘಾತ ಸಂಭವಿಸಿದ್ದು, 38 ಮೃತಪಟ್ಟಿದ್ದಾರೆ. 72 ಮಂದಿ ಗಂಭೀರ ಗಾಯಗೊಂಡಿದ್ದಾರೆ. 

ಹೈದರಾಬಾದ್ ಮೂಲದ ಕೋರೆ ನಾಗಾರ್ಜುನ (33) ಎಂಬುವವರು ಅ.2ರಂದು ಫ್ಲೈಒವರ್‌ ಮೇಲೆ ಬರುವಾಗ ಬೈಕ್ ನಿಯಂತ್ರಣ ತಪ್ಪಿ ಎಲೆಕ್ಟ್ರಾನಿಕ್ ಸಿಟಿ ಫ್ಲೈಓವರ್ ಮೇಲಿಂದ ಕೆಳಗೆ ಬಿದ್ದು ಮೃತಪಟ್ಟಿದ್ದರು.

2021 ಸೆ.14 ರಲ್ಲಿ ಪ್ರೀತಂಕುಮಾರ್‌ (30) ಹಾಗೂ ಕೃತಿಕಾ ರಾಮನ್‌ (28) ಎಂಬುವರು ಮೃತಪಟ್ಟಿದ್ದರು. ಅಪಘಾತಕ್ಕೆ ಕಾರಣವಾದ ಕಾರು ಚಾಲಕ ನಿತೀಶ್‌ಗೂ ತೀವ್ರ ಗಾಯವಾಗಿತ್ತು.                 

ನಿಮಗೆ ಏನು ಅನ್ನಿಸ್ತು?
0 ವೋಟ್
eedina app