ಬೆಂಗಳೂರು | ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ; ಜನರ ಪರದಾಟ

  • ಕೆಂಪೇಗೌಡ ಬಡಾವಣೆ, ಸಾಯಿ ಲೇಔಟ್‌ನಲ್ಲಿ 50ಕ್ಕೂ ಹೆಚ್ಚು ಮನೆ ಜಲಾವೃತ
  • ಉಕ್ಕಿಹರಿದ ಚರಂಡಿಗಳು; ಪಾದಚಾರಿಗಳು, ವಾಹನ ಸವಾರರಿಗೆ ತೊಂದರೆ

ಬೆಂಗಳೂರು ನಗರದಲ್ಲಿ ಸೋಮವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಅನೇಕ ರಸ್ತೆಗಳಲ್ಲಿ ನೀರು ತುಂಬಿಕೊಂಡು ವಾಹನ ಸವಾರರು ಪರದಾಡುವಂತಾಯಿತು.

ರಾತ್ರಿ 7 ಗಂಟೆಗೆ ಆರಂಭವಾದ ಮಳೆ ರಾತ್ರಿ 12ರವರೆಗೂ ನಿರಂತರವಾಗಿ ಸುರಿಯಿತು. ನಾನಾ ಕಚೇರಿಗಳಲ್ಲಿ ರಾತ್ರಿ ಪಾಳಿಯ ಕೆಲಸ ಮುಗಿಸಿ ಮನೆಗಳಿಗೆ ಹಿಂತಿರುಗುವವರು ಪರದಾಡುವಂತಾಯಿತು. ಬಳ್ಳಾರಿ ರಸ್ತೆಯಲ್ಲಿ ನೀರು ನಿಂತಿದ್ದರಿಂದ ವಾಹನ ಸವಾರರು ರಸ್ತೆ ಸರಿಯಾಗಿ ಗೋಚರಿಸದೇ ತೊಂದೆರೆ ಅನುಭವಿಸಬೇಕಾಯಿತು.

ಬಹುತೇಕ ರಸ್ತೆಗಳಲ್ಲಿ ಚರಂಡಿಗಳು ತುಂಬಿ ಹರಿದವು. ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣ ಸಮೀಪದ ಕಾಲುವೆಗಳಲ್ಲಿ ದೊಡ್ಡ ಪ್ರಮಾಣದಲ್ಲಿ ನೀರು ಹರಿಯಿತು. ಜೆ ಸಿ ನಗರದ ದೂರದರ್ಶನ ಕೇಂದ್ರದ ಬಳಿ ಆಟೊ ಪಲ್ಟಿಯಾಗಿ ಇಬ್ಬರು ಗಾಯಗೊಂಡಿದ್ದಾರೆ. 

ಕುಮಾರಸ್ವಾಮಿ ಲೇಔಟ್, ಫೈಯಜಾಬಾದ್ ಹಾಗೂ ಯಲಚೇನಹಳ್ಳಿ ಭಾಗದ ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗಿ ಜನ ರಾತ್ರಿಯಿಡೀ ನಿದ್ರೆಯಿಲ್ಲದೆ ಮನೆಯಿಂದ ನೀರು ಹೊರಹಾಕಲು ಹೈರಾಣಾದರು. ಹಲವು ಬಡಾವಣೆಗಳಲ್ಲಿ ವಿದ್ಯುತ್ ಕಡಿತಗೊಂಡು ಕತ್ತಲಲ್ಲಿ ಕಳೆಯುವಂತಾಯಿತು.

ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ನಿರ್ಮಿಸಿರುವ ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮಳೆ ನೀರು ಸರಾಗವಾಗಿ ಹರಿಯಲು ಸಮರ್ಪಕ ವ್ಯವಸ್ಥೆ ಇಲ್ಲದೇ ಬಡಾವಣೆ ಬಹುತೇಕ ಪ್ರದೇಶ ಮತ್ತು ರಸ್ತೆಗಳು ಜಲಾವೃತಗೊಂಡಿವೆ. 

ಹೊರಮಾವು ಬಳಿಯ ಸಾಯಿಲೇಔಟ್‌ನಲ್ಲಿ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದೆ. ಹಾಗಾಗಿ ಮನೆಯಲ್ಲಿದ್ದ ಟಿವಿ, ಫ್ರಿಡ್ಜ್, ಬಟ್ಟೆ ಎಲ್ಲವೂ ನೀರು ಪಾಲಾಗಿದ್ದು, ನಿವಾಸಿಗಳು ರಾತ್ರಿಯಿಡೀ ನಿದ್ರೆಯಿಲ್ಲದೆ ಜಾಗರಣೆ ಮಾಡುವಂತಾಯಿತು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು| ಕಬ್ಬನ್ ಪಾರ್ಕ್‌ನಲ್ಲಿ ಸಂಜೆ 6.30ರ ನಂತರ ಸಾರ್ವಜನಿಕರಿಗೆ ಪ್ರವೇಶ ನಿಷೇಧ

ಭಾರಿ ಮಳೆಗೆ ಬಸವನಗುಡಿ ಹಾಗೂ ಮೇಕ್ರಿ ವೃತ್ತದಲ್ಲಿ ಬೃಹತ್ ಮಗರಗಳು ಧರೆಗುರುಳಿದ್ದು, ವಾಹನ ಸವಾರರು ಪರದಾಡುವಂತಾಯಿತು. ಅದೃಷ್ಟವಶಾತ್ ಯಾವುದೇ ಹಾನಿ ಸಂಭವಿಸಿಲ್ಲ. ಶ್ರೀರಾಂಪುರದಲ್ಲಿ ಡ್ರೈನೇಜ್ ನೀರು ಕೆಲವು ಮನೆಗಳಿಗೆ ನುಗ್ಗಿದ್ದರಿಂದ ನೀರು ಹೊರಗೆ ಹಾಕಲು ಹರಸಾಹಸ ಪಡಬೇಕಾಯಿತು. ಶಿವಾನಂದ ವೃತ್ತ, ಮಲ್ಲೇಶ್ವರ, ಮೆಜೆಸ್ಟಿಕ್ ಮುತ್ತಮುತ್ತಲಿನ ರಸ್ತೆಗಳಲ್ಲಿ ನೀರು ನಿಂತು ಪಾದಚಾರಿಗಳು ಕಷ್ಟಪಡಬೇಕಾಯಿತು.

ನಿಮಗೆ ಏನು ಅನ್ನಿಸ್ತು?
0 ವೋಟ್