ಬೆಂಗಳೂರು| ಶಿವಾನಂದ ವೃತ್ತದ ಮೇಲ್ಸೇತುವೆ ಭಾಗಶಃ ಸಂಚಾರಕ್ಕೆ ಮುಕ್ತ

Shianad circle flyover
  • ಹಲವು ಕಾರಣಗಳಿಂದ ಮೇಲ್ಸೇತುವೆ ನಿರ್ಮಾಣದಲ್ಲಿ ವಿಳಂಬ
  • ಮೇಲ್ಸೇತುವೆಯ ಒಂದು ಭಾಗದಲ್ಲಿ ಸಂಚಾರಕ್ಕೆ ಅನುವು

ಶಿವಾನಂದ ವೃತ್ತದ ಮೇಲ್ಸೇತುವೆ ಕಾಮಗಾರಿ ಶೀಘ್ರವೇ ಪೂರ್ಣಗೊಳ್ಳಲಿದ್ದು, ಆ.15ರಿಂದ ಭಾಗಶಃ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವಿಭಾಗದ ಮುಖ್ಯ ಎಂಜಿನಿಯರ್ ಲೋಕೇಶ್ ಮಾಹಿತಿ ನೀಡಿದ್ದಾರೆ.

ಸಂಚಾರ ದಟ್ಟಣೆ ತಪ್ಪಿಸಲು ಶಿವಾನಂದ ಮೇಲ್ಸೇತುವೆಯ ಒಂದು ಭಾಗದಿಂದ, ಅಂದರೆ ಶೇಷಾದ್ರಿಪುರಂನಿಂದ ರೇಸ್‌ಕೋರ್ಸ್‌ಗೆ ತಲುಪುವ ಮಾರ್ಗದಲ್ಲಿ ಮಾತ್ರ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, ಇನ್ನೊಂದು ವಾರದಲ್ಲಿ ಪೂರ್ಣ ಪ್ರಮಾಣದ ಸಂಚಾರಕ್ಕೆ ಮುಕ್ತ ಅವಕಾಶವಿರುತ್ತದೆ ಎಂದು ತಿಳಿಸಿದ್ದಾರೆ.

ಸಂಚಾರ ದಟ್ಟಣೆ ತಪ್ಪಿಸಲು 2011ರಲ್ಲಿ  ಬಿಬಿಎಂಪಿಯು ಶಿವಾನಂದ ವೃತ್ತದ ಬಳಿ ಉಕ್ಕಿನ ಸೇತುವೆ ನಿರ್ಮಾಣಕ್ಕೆ ಯೋಜನೆ ರೂಪಿಸಿತ್ತು. 18 ತಿಂಗಳಲ್ಲಿ ಮುಗಿಯಬೇಕಿದ್ದ ಸೇತುವೆಯ ಕಾಮಗಾರಿಯು ನಿರಂತರ ಮಳೆಯಿಂದ ವಿಳಂಬವಾಯಿತು. ಕೆಲವು ಡ್ರೈನ್‌ಗಳ ಕೆಲಸ ಬಾಕಿ ಇದ್ದು, ಅದರ ಕಾಮಗಾರಿಯನ್ನು ಇನ್ನೊಂದು ವಾರದಲ್ಲಿ ಮುಗಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಬೆಂಗಳೂರು| ಶಿವಾನಂದ ವೃತ್ತದ ಮೇಲ್ಸೇತುವೆ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ: ಬಿಬಿಎಂಪಿಗೆ ಹೈಕೋರ್ಟ್‌ ಆದೇಶ

2018ರಲ್ಲಿ ಶಿವಾನಂದ ವೃತ್ತದ ಮೇಲ್ಸೇತುವೆ ಕಾಮಗಾರಿ ಕಾರ್ಯ ಶೇ. 90ರಷ್ಟು ಪೂರ್ಣಗೊಂಡಿತ್ತು. ಆದರೆ, ಮೇಲ್ಸೇತುವೆ ಸ್ವಾಧೀನಪಡಿಸಿಕೊಳ್ಳಲು ಭೂಮಿಯ ಮಾಲೀಕರು, ಬಿಬಿಎಂಪಿ ನಡುವೆ ಇರುವ ಒಪ್ಪಂದ ಬಗೆಹರಿದಿರಲಿಲ್ಲ. ಕೆಲವು ಭೂಮಾಲೀಕರ ಸ್ಥಳಗಳನ್ನು ಕಡಿತಗೊಳಿಸಿ, ಮೇಲ್ಸೇತುವೆಯ ಉದ್ದವನ್ನು ಕಡಿಮೆ ಮಾಡುವ ಯೋಜನೆಯೊಂದಿಗೆ ಕಾಮಗಾರಿ ಪೂರ್ಣಗೊಳಿಸಲು ಬಿಬಿಎಂಪಿ ಎಂಜಿನಿಯರ್‍‌ಗಳು ಮುಂದಾಗಿದ್ದರು. ಈ ವಿಚಾರವು, ಹೈಕೋರ್ಟ್ ಮೆಟ್ಟಿಲೇರಿದ್ದರಿಂದ ಕಾಮಗಾರಿ ಸ್ಥಗಿತಗೊಂಡಿತ್ತು. 

ಹೈಕೋರ್ಟ್‌ನಲ್ಲಿ ನಡೆದ ಹಲವು ವಾದಗಳ ನಂತರ, ಬಿಬಿಎಂಪಿ ಪ್ರಸ್ತಾಪಿಸಿದ್ದ ಶೇಷಾದ್ರಿಪುರ ರಸ್ತೆ ಕಡೆಯ ಇಳಿಜಾರಿನ ಪ್ರಮಾಣವನ್ನು ಶೇ. 6.66ಕ್ಕೆ ಹೆಚ್ಚಿಸಲು ಮತ್ತು ಬಾಕಿ ಉಳಿದಿರುವ ಶೇ. 10ರಷ್ಟು ಕಾಮಗಾರಿಯನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಹೈಕೋರ್ಟ್ ಆದೇಶಿಸಿತ್ತು. ಉಕ್ಕಿನ ಮೇಲ್ಸೇತುವೆ ನಿರ್ಮಾಣ ಕಾಮಗಾರಿಯು 2017ರ ಅಕ್ಟೋಬರ್‌ನಲ್ಲಿ ಪುನಃ ಆರಂಭವಾಗಿತ್ತು.

ನಿಮಗೆ ಏನು ಅನ್ನಿಸ್ತು?
0 ವೋಟ್