
- ಸಮಗ್ರ ಹಾಗೂ ಸಾವಯವ ಕೃಷಿಗೆ ಜೈ ಎಂದ ಕೃಷಿ ಸಾಧಕರು
- ʼಭೂಮಿ ನಂಬಿ ಕೆಟ್ಟವರಿಲ್ಲ; ರೈತ ನೆಮ್ಮದಿ ಬದುಕು ಕಾಣಬಹುದುʼ
ಬೆಂಗಳೂರಿನ ಕೃಷಿ ವಿಶ್ವವಿದ್ಯಾನಿಲಯದ 2022ರ ಕೃಷಿ ಮೇಳದಲ್ಲಿ ಸಾಧಕ ರೈತರಿಗೆ ರಾಜ್ಯಮಟ್ಟದ ಅತ್ಯುತ್ತಮ ರೈತ, ಅತ್ಯುತ್ತಮ ರೈತ ಮಹಿಳೆ, ಜಿಲ್ಲಾಮಟ್ಟದ ಮಾದರಿ ರೈತ ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಲಾಯಿತು.
ಭೂಮಿಯನ್ನು ರಾಸಾಯನಿಕ ಮುಕ್ತಗೊಳಿಸಿ, ಸಾವಯವ ಗೊಬ್ಬರ ಬಳಸಿ ಹಸನು ಮಾಡಿ ತೆಂಗು, ಬಾಳೆ, ಜೋಳ, ರಾಗಿ, ಅವರೆ, ಹುರುಳಿ, ಸಿರಿಧಾನ್ಯಗಳು, ವಿವಿಧ ಬಗೆಯ ಸೊಪ್ಪು, ತರಕಾರಿಗಳು, ಹಲಸು, ಮಾವು, ಸಪೋಟದಂತಹ ನಾನಾ ಬಗೆಯ ಹಣ್ಣುಗಳು, ಹೈನುಗಾರಿಕೆ, ಕುಕ್ಕುಟೋದ್ಯಮ ಮಾಡಿದ್ದಾರೆ.
ಹೀಗೆ ಕೃಷಿಯಲ್ಲಿ ಪರಿಣಾಮಕಾರಿಯಾಗಿ ತೊಡಗಿಸಿಕೊಂಡ ಮಾದರಿ ರೈತರು, ಸುಧಾರಿತ ಮಾದರಿಯಲ್ಲಿ ಬೆಳೆ ಬೆಳೆದು ಉತ್ತಮ ಆದಾಯ ಗಳಿಸಿರುವುದು ಮಾತ್ರವಲ್ಲ, ರಾಜ್ಯಮಟ್ಟದಲ್ಲಿ ಮನ್ನಣೆ ಗಳಿಸಿ 2022ರ ಕೃಷಿ ಮೇಳದಲ್ಲಿ ರಾಜ್ಯಪಾಲರಿಂದ ಸನ್ಮಾನಿತಗೊಂಡರು. ಈ ಬಗ್ಗೆ ಈ ದಿನ.ಕಾಮ್ನೊಂದಿಗೆ ಅವರು ಮಾತನಾಡಿದ್ದಾರೆ.
ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ರಾಜ್ಯ ಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿ ಪುರಸ್ಕೃತರಾದ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟದ ಹೆಚ್ ಜಿ ಗೋಪಾಲಗೌಡ ಮಾತನಾಡಿ, "ಪ್ರಸ್ತುತದಲ್ಲಿ ಇರುವ ಸೌಲಭ್ಯಗಳನ್ನು ಬಳಸಿಕೊಂಡು ಸಾವಯವ ಮಾದರಿಯಲ್ಲಿ ಸಮಗ್ರ ಕೃಷಿ ಮಾಡಿದರೆ ವ್ಯವಸಾಯ ಕೂಡ ಲಾಭದಾಯಕವಾಗುತ್ತದೆ. ನಾನು ರಾಜಕೀಯ ಅಂತ ಓಡಾಡುವಾಗ ನೂರು ರೂಪಾಯಿಗೂ ಪರದಾಡುತ್ತಿದ್ದೆ. ಅದನ್ನು ಬಿಟ್ಟು ಕೃಷಿ ಕಡೆಗೆ ಗಮನಕೊಟ್ಟು ಸರಿಯಾಗಿ ವ್ಯವಸಾಯ ಮಾಡಿದ್ದರಿಂದ ಎಂಜಿನಿಯರ್ ಸಂಬಳಕ್ಕಿಂತ ಹೆಚ್ಚಿನ ಆದಾಯ ಹಾಗೂ ನೆಮ್ಮದಿ ಕಂಡುಕೊಂಡಿದ್ದೇನೆ. ರೇಷ್ಮೆ ಬೆಳೆ ನನಗೆ ಹೆಚ್ಚಿನ ಲಾಭ ತಂದುಕೊಟ್ಟ ಬೆಳೆ" ಎಂದರು.
ಕ್ಯಾನ್ ಬ್ಯಾಂಕ್ ರಾಜ್ಯ ಮಟ್ಟದ ಅತ್ಯುತ್ತಮ ರೈತ ಮಹಿಳೆ ಪ್ರಶಸ್ತಿಗೆ ಭಾಜನರಾದ ಹಾಸನ ಜಿಲ್ಲೆ ಹೊಳೆನರಸೀಪುರ ತಾಲೂಕಿನ ರೈತ ಮಹಿಳೆ ಕವಿತಾ ಮಾತನಾಡಿ, "ಒಂಭತ್ತು ಎಕರೆ ಕೃಷಿ ಭೂಮಿ ಇದ್ದು, ಅದರಲ್ಲಿ ನಾಲ್ಕು ಎಕರೆ ಮಳೆಯಾಶ್ರಿತ. ರಾಗಿ, ಭತ್ತ, ದ್ವಿದಳ ಧಾನ್ಯಗಳನ್ನು ಬೆಳೆಯುತ್ತೇನೆ. ಐದು ಎಕರೆ ನೀರಾವರಿ ಭೂಮಿಯಲ್ಲಿ ಸೀಮೆ ಬದನೆ, ಬಜ್ಜಿ ಮೆಣಸಿನಕಾಯಿ, ಹೀರೇಕಾಯಿ, ನುಗ್ಗೆಕಾಯಿಯಂತಹ ಬೆಳೆಗಳು, ನೇಂದ್ರ ಬಾಳೆ, ಪಚ್ಚಬಾಳೆ(ಚುಕ್ಕಿ ಬಾಳೆ), ಬೂದು ಬಾಳೆ, ರಸಬಾಳೆ ಹಾಗೂ ಏಲಕ್ಕಿ ಬಾಳೆಗಳನ್ನು ಬೆಳೆಯುತ್ತೇನೆ. ವಾರ್ಷಿಕ ₹10 ಲಕ್ಷದ ವರೆಗೂ ಆದಾಯವಿದೆ. 200 ತೆಂಗು ಇದ್ದು, ಇದೆಲ್ಲವನ್ನು ಸಾವಯವ ಮಾದರಿಯಲ್ಲೇ ಬೆಳೆಯುತ್ತಿದ್ದೇನೆ" ಎಂದು ವಿವರಿಸಿದರು.

"ಹಸು ಸಾಕಾಣಿಕೆ ಜೊತೆ ನಾಟಿ ಕೋಳಿ ಸಾಕಿ ಮೊಟ್ಟೆ, ಮಾಂಸ ಮಾರಾಟ ಮಾಡುತ್ತೇನೆ. ಇದರಿಂದ ವಾರ್ಷಿಕ ಸುಮಾರು ₹20-₹30 ಸಾವಿರಕ್ಕೂ ಹೆಚ್ಚು ಲಾಭ ಬರುತ್ತದೆ. ಮೊದಮೊದಲು ಮನೆಗಾಗಿ ಉಪ್ಪಿನಕಾಯಿ ಹಾಕುತ್ತಿದ್ದವಳು, ನಂತರ ನನ್ನದೆ ʼಬ್ರ್ಯಾಂಡ್ʼನಲ್ಲಿ ಮಾವು, ಎರಳೆಕಾಯಿ, ನಿಂಬೆ, ಬೆಟ್ಟದ ನೆಲ್ಲಿಕಾಯಿ ಉಪ್ಪಿನಕಾಯಿ ಹಾಕಿ ಮಾರಾಟ ಮಾಡುತ್ತೇನೆ. ಇದುವರೆಗೂ ಈ ಪ್ರಶಸ್ತಿಯೂ ಸೇರಿ 19 ಪ್ರಶಸ್ತಿಗಳಿ ದೊರೆತಿದ್ದು, ಸಂತೋಷವಾಗಿದೆ. ಇನ್ನಷ್ಟು ಹೆಚ್ಚಿನ ಮಾದರಿ ಕೃಷಿ ವಿಧಾನಗಳನ್ನು ಅಳವಡಿಸಿಕೊಂಡು ಹೆಚ್ಚು ಆಹಾರ ಪದಾರ್ಥಗಳನ್ನು ಬೆಳೆಯುವ ಇಚ್ಚೆಯಿದೆ" ಎಂದು ಅವರು ತಮ್ಮ ಕೃಷಿ ಅನುಭವ ಬಿಚ್ಚಿಟ್ಟರು.
"13 ಎಕರೆ ಭೂಮಿ ಇದ್ದು, ಸಮಗ್ರ ಕೃಷಿ ಮಾಡುತ್ತಿದ್ದೇನೆ. ಪಂಪ್ಸೆಟ್ನ ಅರ್ಧ ಇಂಚಿನ ನೀರನ್ನು ಕೃಷಿ ಹೊಂಡದಲ್ಲಿ ಸಂಗ್ರಹಿಸಿ ಮೀನು ಸಾಕಾಣಿಕೆ ಮಾಡಿದ್ದೇನೆ. ಕುಕ್ಕುಟೋದ್ಯಮ ಮಾಡುತ್ತಿದ್ದು, ಕೋಳಿ ಹಿಕ್ಕೆ ನೇರವಾಗಿ ಮೀನಿರುವ ಹೊಂಡಕ್ಕೆ ಬೀಳುತ್ತದೆ. ಅದು ಫಂಗಸ್ ರೀತಿ ಬೆಳೆದು ಮೀನುಗಳಿಗೆ ಆಹಾರವಾಗುತ್ತದೆ. ರಾಗಿ, ಭತ್ತ, ಜೋಳದಂತಹ ಬೆಳೆಗಳು ಹಾಗೂ ತೆಂಗು, ಸಪೋಟ, ತೇಗ ಹೀಗೆ ಹಲವು ಬಗೆಯ ಮರಗಳನ್ನು ಬೆಳೆಸಿದ್ದೇನೆ. ಹೈನುಗಾರಿಕೆ, ಎರೆಹುಳು ಸಾಕಾಣಿಕೆಯನ್ನು ಮಾಡಿದ್ದು, ಒಟ್ಟಾರೆ ಕೃಷಿಯಲ್ಲಿ ವಾರ್ಷಿಕ ₹10 ಲಕ್ಷ ದುಡಿದರೆ ಖರ್ಚು ಕಳೆದು ₹5 ಲಕ್ಷ ನಮಗೂ ಉಳಿಯುತ್ತದೆ" ಎನ್ನುತ್ತಾರೆ ಡಾ. ಎಂ ಹೆಚ್ ಮರೀಗೌಡ ರಾಜ್ಯ ಮಟ್ಟದ ಅತ್ಯುತ್ತಮ ತೋಟಗಾರಿಕಾ ರೈತ ಪ್ರಶಸ್ತಿ ಪುರಸ್ಕೃತರಾದ ದೊಡ್ಡಬಳ್ಳಾಪುರದ ರೈತ ಸಿ. ನವಿಕ್ರಮ್.
ಈ ಸುದ್ದಿ ಓದಿದ್ದೀರಾ? ಕೃಷಿ ಎಂದರೆ ಬರೀ ಇಸ್ರೇಲ್ ಮಾದರಿಯಲ್ಲ, ಕೋಲಾರ ಮಾದರಿಯೂ ಇದೆ : ಸಚಿವ ಬಿ ಸಿ ಪಾಟೀಲ್
ಹೀಗೆ, ಕ್ಯಾನ್ ಬ್ಯಾಂಕ್ ರಾಜ್ಯಮಟ್ಟದ ಅತ್ಯುತ್ತಮ ರೈತ ಪ್ರಶಸ್ತಿಯನ್ನು ಮಂಡ್ಯ ಜಿಲೆಯ ಮದ್ದೂರು ತಾಲೂಕಿನ ಸಿ ಪಿ ಕೃಷ್ಣ, ಡಾ. ಆರ್ ದ್ವಾರಕೀನಾಥ್ ಅತ್ಯುತ್ತಮ ರೈತ ಪ್ರಶಸ್ತಿಯನ್ನು ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲೂಕಿನ ಎಂ ಟಿ ಮುನೇಗೌಡ ಹಾಗೂ ಡಾ. ಆರ್ ದ್ವಾರಕೀನಾಥ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತ ಪ್ರಶಸ್ತಿಯನ್ನು ಹಾಸನ ಜಿಲ್ಲೆ ಕೃಷಿ ವಿಜ್ಞಾನ ಕೇಂದ್ರದ ಹಿರಿಯ ವಿಜ್ಞಾನಿ ಹಾಗೂ ಮುಖ್ಯಸ್ಥರಾದ ಡಾ ರಾಜೇಗೌಡ ಅವರಿಗೆ ನೀಡಿ ಸನ್ಮಾನಿಸಲಾಯಿತು.