
- ಬೆಳ್ಳಿ ತೇರು ನೋಡಲು ನೂರಾರು ಭಕ್ತರ ಆಗಮನ
- ಗಲಾಟೆ ಮಾಡಿದರೆ ಕಠಿಣ ಕ್ರಮದ ಎಚ್ಚರಿಕೆ ನೀಡಿದ್ದ ಶಾಸಕ
ಹಿಂದೂಗಳನ್ನು ಹೊರತುಪಡಿಸಿ ಉಳಿದ ಧರ್ಮದವರಿಗೆ ವ್ಯಾಪಾರಕ್ಕೆ ನಿಷೇಧಿಸಲಾಗಿದೆ ಎಂದು ಬ್ಯಾನರ್ ಹಾಕಿ ವಿವಾದ ಸೃಷ್ಟಿಸಿದ್ದ ಬೆಂಗಳೂರಿನ ವಿ. ವಿ. ಪುರಂನ ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯದ ಬ್ರಹ್ಮರಥೋತ್ಸವ ಶಾಂತಿಯುತವಾಗಿ ನಡೆಯಿತು.
ಪ್ರತಿ ವರ್ಷ ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿಯಂದು ಶ್ರೀಸುಬ್ರಮಣ್ಯ ಸ್ವಾಮಿ ಬೆಳ್ಳಿ ತೇರಿನ ಉತ್ಸವ ನಡೆಯುತ್ತದೆ. ವಿ. ವಿ. ಪುರಂ ವಾರ್ಡ್ನ ಸಜ್ಜನ್ ರಾವ್ ವೃತ್ತದಲ್ಲಿರುವ ಶ್ರೀ ಸುಬ್ರಮಣ್ಯ ಸ್ವಾಮಿ ದೇವಾಲಯದ ಬೆಳ್ಳಿ ತೇರು ನೋಡಲು ನೂರಾರು ಭಕ್ತರು ಭಾಗವಹಿಸಿದ್ದರು.
ರಥೋತ್ಸವದಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ಅವಕಾಶ ನೀಡಬಾರದು ಎಂದು ಹಿಂದೂಪರ ಸಂಘಟನೆಗಳು ಆಗ್ರಹಿಸಿದ್ದ ಹಿನ್ನೆಲೆಯಲ್ಲಿ, ಪೊಲೀಸರು ಅವರನ್ನು ರಥೋತ್ಸವದ ಹಿಂದಿನ ರಾತ್ರಿಯೇ ವಶಕ್ಕೆ ಪಡೆದಿದ್ದರು. ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು |ಮತದಾರರ ಪಟ್ಟಿಯ ಸಂಪೂರ್ಣ ಪರಿಶೀಲನೆಗೆ ವಿಶೇಷ ಅಧಿಕಾರಿಗಳ ನಿಯೋಜನೆ
"ಜಾತ್ರೆಯ ಸಮಯದಲ್ಲಿ ವ್ಯಾಪಾರ ಮಾಡಿ ಒಂದು ದಿನ ದುಡಿದು ಅವರ ಕುಟುಂಬವನ್ನು ಸಾಕುತ್ತಾರೆ. ದರ್ಗಾ ಬಳಿ ಹಿಂದೂಗಳು ಕೂಡಾ ವ್ಯಾಪಾರ ಮಾಡುತ್ತಾರೆ. ಧರ್ಮದ ಆಧಾರದ ಮೇಲೆ ಮಂದಿಯ ಹೊಟ್ಟೆಯ ಮೇಲೆ ಹೊಡೆಯುವುದು ಸರಿಯಲ್ಲ. ಹಿಂದೂಗಳು ಯಾವತ್ತು ಯಾರಿಗೂ ಒಂದರೆ ಕೊಡುವುದಿಲ್ಲ. ಇದು ಕೆಲವು ಹುಡುಗರು ಗೊಂದಲ ಸೃಷ್ಟಿ ಮಾಡಿದ್ದಾರೆ. ಸುಬ್ರಮಹ್ಮಣ್ಯ ಸ್ವಾಮಿ ರಥೋತ್ಸವ ಸಂಭ್ರಮದಿಂದ ನಡೆಯಿತು" ಎಂದು ಸ್ವತಃ ಬಿಜೆಪಿ ಶಾಸಕ ಉದಯ್ ಗರುಡಾಚಾರ್ ತಿಳಿಸಿದ್ದಾರೆ.