ಬೆಂಗಳೂರು | 16 ಗಂಟೆ ಕೆಲಸ, ಚಿಲ್ಲರೆ ಕಾಸು: 'ಸ್ವಿಗ್ಗಿ ಇನ್ಸ್‌ಟಮಾರ್ಟ್‌ ಡೆಲಿವರಿ ಬಾಯ್‌'ಗಳಿಂದ ಪ್ರತಿಭಟನೆ

ಸ್ವಿಗ್ಗಿ ಇನ್ಸ್‌ಟಮಾರ್ಟ್‌
  • ಟಾರ್ಗೆಟ್‌ ಹೆಸರಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್‌ಗಳ ಶೋಷಣೆ
  • ʼಟಾರ್ಗೆಟ್‌ʼ ಮುಗಿಯದೆ ಭತ್ಯೆ (ಇನ್ಸೆಂಟಿವ್)‌ ನೀಡುತ್ತಿಲ್ಲ

ʼಟಾರ್ಗೆಟ್‌ʼ ಹೆಸರಿನಲ್ಲಿ ನೌಕರರನ್ನು ಶೋಷಣೆ ಮಾಡುತ್ತಿರುವ 'ಸ್ವಿಗ್ಗಿ ಇನ್ಸ್‌ಟಮಾರ್ಟ್‌' (ಆರೋರ ವೆಂಚರ್ಸ್‌) ವಿರುದ್ಧ ಡೆಲಿವರಿ ಹುಡುಗರು ಶುಕ್ರವಾರ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.

ಬೆಂಗಳೂರಿನ ಮಾರತ್‌ಹಳ್ಳಿಯ ʼಸಿ ಬ್ಲಾಕ್‌ʼನ ಎಇಸಿಎಸ್‌ ಲೇಔಟ್‌ ಮತ್ತು ಕುಂದಲಹಳ್ಳಿ ಗೇಟ್‌ ಬಳಿ ಇರುವ ಸ್ವಿಗ್ಗಿ ಇನ್ಸ್‌ಟಮಾರ್ಟ್‌ (ಆರೋರ ವೆಂಚರ್ಸ್‌)ನ ಕಚೇರಿಯ ಎದುರು ನೌಕರರು, ತಮಗಾಗುತ್ತಿರುವ ಅನ್ಯಾಯದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.

"ನಿಯಮದನ್ವಯ ನಮ್ಮ ಕೆಲಸದ ಅವಧಿ 8 ಗಂಟೆ. ಆದರೆ, ದಿನನಿತ್ಯ ಬೆಳಿಗ್ಗೆ 7 ಗಂಟೆಯಿಂದ ರಾತ್ರಿ 12ರ ತನಕ ನಿರಂತರವಾಗಿ 15-16 ಗಂಟೆಗಳ ಕಾಲ ಕೆಲಸ ಮಾಡಿದರೂ ʼಟಾರ್ಗೆಟ್‌ʼ ಮುಕ್ತಾಯ ಮಾಡಲು ಆರ್ಡರ್ ನೀಡದೆ ಶೋಷಣೆ ಮಾಡುತ್ತಿದ್ದಾರೆ. ಒಂದು ದಿನಕ್ಕೆ ₹650 ʼಟಾರ್ಗೆಟ್‌ʼ ಮುಗಿಸಿದರೆ ₹425 ಭತ್ಯೆ ಕೊಡುವುದಾಗಿ ಹೇಳಿದ್ದಾರೆ. ಆದರೆ, ʼಟಾರ್ಗೆಟ್‌ʼ ಮುಗಿಸಲು ಬಿಡುವುದೇ ಇಲ್ಲ. 15-16 ಗಂಟೆಗಳ ಕಾಲ ಕಾದರೂ ʼಟಾರ್ಗೆಟ್‌ʼ ಮುಗಿಯದೆ ಭತ್ಯೆ (ಇನ್ಸೆಂಟಿವ್)‌ ನೀಡುವುದಿಲ್ಲ" ಎಂದು "ಸ್ವಿಗ್ಗಿ ಇನ್ಸ್‌ಟಮಾರ್ಟ್‌" ಡೆಲಿವರಿ ಬಾಯ್‌ಗಳು ನೋವಿನಿಂದ ನುಡಿದರು.

Image
Swiggy Delivery Boys

ಈ ಬಗ್ಗೆ 'ಡೆಲಿವರಿ ಬಾಯ್‌' ಹಾಸನ ಮೂಲದ ಪ್ರಸನ್ನ ಅವರು ಈ ದಿನ.ಕಾಮ್‌ನೊಂದಿಗೆ ತಮ್ಮ ಅಳಲನ್ನು ತೋಡಿಕೊಂಡಿದ್ದು, "ಹಾಸನದ ಶಾಂತಿಗ್ರಾಮ ನನ್ನ ಹುಟ್ಟೂರು. ಅಲ್ಲಿ ಜಮೀನಿದ್ದರೂ 15 ವರ್ಷಗಳಿಂದ ಬೆಂಗಳೂರಿನಲ್ಲೇ ದುಡಿದು ಬದುಕು ಕಟ್ಟಿಕೊಂಡಿರುವುದರಿಂದ ಇಲ್ಲಿಯೇ ಉಳಿದು ಸಿಕ್ಕ ಕೆಲಸ ಮಾಡುತ್ತಿದ್ದೇನೆ. ಹಿಂದೆ ಗಾರ್ಮೆಂಟ್ಸ್‌ನಲ್ಲಿ ಕೆಲಸ ಮಾಡಿದ್ದು, ಕಳೆದ ಎರಡು ವರ್ಷಗಳಿಂದ ಮಾರತ್‌ಹಳ್ಳಿಯ ಸ್ವಿಗ್ಗಿ ಇನ್ಸ್‌ಟಮಾರ್ಟ್‌ನಲ್ಲಿ ಕೆಲಸ ಮಾಡುತ್ತಿದ್ದೇನೆ. ದಿನಕ್ಕೆ ₹300 ಆರ್ಡರ್ ಕೂಡ ಸಿಗುತ್ತಿಲ್ಲ. ಕಳೆದ ನಾಲ್ಕು ದಿನಗಳಿಂದ ಆರ್ಡರ್ ಕೊಟ್ಟಿಲ್ಲ. ಅದಕ್ಕಾಗಿ ಬೆಳಿಗ್ಗೆ 7 ರಿಂದ ರಾತ್ರಿ 12 ರವರೆಗೆ ಊಟ-ತಿಂಡಿ ಇಲ್ಲದೆ ಕಾಯಬೇಕು. ಆರ್ಡರ್‌ ಕೊಡದೆ ಟಾರ್ಗೆಟ್‌ ಮುಗಿಸುವುದು ಹೇಗೆ?" ಎಂದು ಅವರು ತಮ್ಮ ಅಸಹಾಯಕತೆಯನ್ನು ತೋಡಿಕೊಂಡರು. 

ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ| ರಸ್ತೆ, ಪಾದಚಾರಿ ಮಾರ್ಗದಲ್ಲಿರುವ ಕಟ್ಟಡ ಸಾಮಗ್ರಿ ತೆರವುಗೊಳಿಸದಿದ್ದರೆ ಕಠಿಣ ಕ್ರಮ: ಆಯುಕ್ತರ ಎಚ್ಚರಿಕೆ

ʼಆರ್ಡರ್‌ ಪಿಕ್‌ಅಪ್‌ʼ ಆದ್ಮೇಲೆ ನಮಗೆ ಕಸ್ಟಮರ್‌ ಫೋನ್‌ ನಂಬರ್‌ ಸಿಗುವುದು. ಅಲ್ಲಿಯ ತನಕ ಅವರ ಮೆಸೇಜ್‌ಗಾಗಿ ಕಾಯಬೇಕು. 8 ಗಂಟೆಯ ಒಳಗೆ ಟಾರ್ಗೆಟ್‌ ಮುಗಿಯುವ ಸಂಭವವಿದ್ದರೆ, ಅಂತಹ ನೌಕರನಿಗೆ ಎಷ್ಟೇ ಸಮಯ ಆದರೂ ಒಂದು ಆರ್ಡರ್‌ ಕೊಡುವುದಿಲ್ಲ. ಹೀಗೆ ಮಾಡಿದಾಗ ಟಾರ್ಗೆಟ್‌ ಮುಗಿಸಲು ಕೇವಲ ₹20 ವ್ಯತ್ಯಾಸ ಇದ್ದರೂ ನಮಗೆ ಭತ್ಯೆ ಸಿಗುವುದಿಲ್ಲ. ಇಡೀ ದಿನ ಕಾದರೂ ₹425 ಭತ್ಯೆ ಪಡೆಯಲು ಆಗುತ್ತಿಲ್ಲ. ಇದು ನಾವು ನಿಗದಿತ ಭತ್ಯೆಯನ್ನು ಪಡೆಯದಂತೆ ಕಂಪನಿ ಮಾಡುತ್ತಿರುವ ಕುತಂತ್ರ' ಎಂದು ಸ್ವಿಗ್ಗಿ ಇನ್ಸ್‌ಟಮಾರ್ಟ್‌ (ಆರೋರ ವೆಂಚರ್ಸ್‌)ನಲ್ಲಿ ಕೆಲಸ ಮಾಡುತ್ತಿರುವ ಕಲಬುರಗಿಯ ಯಲ್ಲಪ್ಪ, ಬೆಂಗಳೂರಿನ ವಿಘ್ನೇಶ್ ಸೇರಿದಂತೆ 150-200 'ಡೆಲಿವರಿ ಬಾಯ್‌'ಗಳ ಆರೋಪ.

ಈ ಬಗ್ಗೆ ಪ್ರತಿಕ್ರಿಯಿಸಲು 'ಸ್ವಿಗ್ಗಿ ಇನ್ಸ್‌ಟಮಾರ್ಟ್‌'ನ ಅಧಿಕೃತ ಪ್ರತಿನಿಧಿಗಳು ಯಾರೂ ಸಂಪರ್ಕಕ್ಕೆ ಸಿಕ್ಕಿಲ್ಲ. 

ನಿಮಗೆ ಏನು ಅನ್ನಿಸ್ತು?
10 ವೋಟ್