ಬೆಂಗಳೂರು| ಸ್ವಾತಂತ್ರ್ಯದ ಅಮೃತ ಮಹೋತ್ಸವ: ಪ್ರಮುಖ ರಸ್ತೆಗಳಲ್ಲಿ ಸಂಚಾರ ದಟ್ಟಣೆ

  • ವಿಧಾನಸೌಧದಲ್ಲಿ 'ಹರ್‌ ಘರ್‌ ತಿರಂಗಾ' ಕಾರ್ಯಕ್ರಮ
  • ಟ್ರಾಫಿಕ್ ಮಧ್ಯೆ ಆಂಬುಲೆನ್ಸ್‌ ಸಂಚಾರಕ್ಕೂ ಪರದಾಟ

ಸ್ವಾತಂತ್ರ್ಯದ ಅಮೃತ ಮಹೋತ್ಸವ ಕಾರ್ಯಕ್ರಮದ ಪ್ರಯುಕ್ತ ನಗರದ ವಿವಿಧೆಡೆ ಜಾಥಾ, ಮೆರವಣಿಗೆ ನಡೆಯಲಿರುವ ಕಾರಣ ಆಗಸ್ಟ್ 13 ಮತ್ತು 14ರಂದು ಬೆಂಗಳೂರಿನ ಬಹುತೇಕ ರಸ್ತೆಗಳಲ್ಲಿ ಸಂಚಾರ ದಟ್ಟಣೆ ಉಂಟಾಗಿದೆ.

ನಗರದ ಪ್ರಮುಖ ರಸ್ತೆಗಳಲ್ಲಿ ಕಿಲೋ ಮೀಟರ್‍‌ಗಟ್ಟಲೆ ಸಂಚಾರ ದಟ್ಟಣೆ ಉಂಟಾಗಿದ್ದು, ವಾಹನ ಚಾಲಕರು ಹೈರಾಣಾಗಿದ್ದಾರೆ. ವಾರಾಂತ್ಯದಲ್ಲಿ ಸರಣಿ ರಜೆಗಳಿರುವ ಕಾರಣಕ್ಕೆ ದೂರದ ಊರುಗಳಿಗೆ ತೆರಳುವವರು ಮತ್ತು ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಅಂಗವಾಗಿ ರಾಜಧಾನಿಯ ಹಲವೆಡೆ, ಸಂಘಟನೆಗಳು, ರಾಜಕೀಯ ಪಕ್ಷಗಳು ಹಾಗೂ ಶಾಲಾ–ಕಾಲೇಜು ವಿದ್ಯಾರ್ಥಿಗಳು ಮೆರವಣಿಗೆಯಲ್ಲಿ ಭಾಗಿಯಾಗಿದ್ದರಿಂದ ನಗರದಾದ್ಯಂತ ಸಂಚಾರ ದಟ್ಟಣೆ ಉಂಟಾಗಿದೆ.

ಆ.13ರ ಮುಂಜಾನೆ ವಿಧಾನಸೌಧದ ಆವರಣದಲ್ಲಿ 'ಪ್ರತಿ ಮನೆಗಳಲ್ಲಿ ರಾಷ್ಟ್ರಧ್ವಜ' ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಹೀಗಾಗಿ ಬೆಂಗಳೂರಿನ ಹಲವು ಶಾಲೆಗಳಿಂದ ಸಾವಿರಾರು ವಿದ್ಯಾರ್ಥಿಗಳು ಕಾರ್ಯಕ್ರಮಕ್ಕೆ ಆಗಮಿಸಿದ್ದರು.

ಎಲ್ಲೆಲ್ಲಿ ಸಂಚಾರ ದಟ್ಟಣೆ?

ಸದಾಶಿವನಗರ, ಗಾಂಧಿನಗರ, ಅರಮನೆ ರಸ್ತೆ, ಶೇಷಾದ್ರಿಪುರಂ ರಸ್ತೆ, ಹೆಣ್ಣೂರು ರಸ್ತೆ, ಲಿಂಗರಾಜಪುರ, ಸೇಂಟ್ ಜಾನ್ಸ್ ಆಸ್ಪತ್ರೆ, ಬಾಣಸವಾಡಿ, ಕೋರಮಂಗಲ, ಮೈಸೂರು ರಸ್ತೆಯ ಸ್ಯಾಟಲೈಟ್ ಬಸ್ ನಿಲ್ದಾಣದ ಸಮೀಪ, ಯಶವಂತಪುರ ಮೇಲ್ಸೇತುವೆ, ಮೆಜೆಸ್ಟಿಕ್, ಗೊರಗುಂಟೆ ಪಾಳ್ಯ, ರಾಜಕುಮಾರ್ ರಸ್ತೆ, ಕೆಂಪೇಗೌಡ ರಸ್ತೆ, ಕಾರ್ಪೋರೇಶನ್ ವೃತ್ತ, ಜೆ ಸಿ ರಸ್ತೆ, ಶೇಷಾದ್ರಿಪುರಂ, ಅರಮನೆ ರಸ್ತೆ, ನಿಮ್ಹಾನ್ಸ್ ರಸ್ತೆ, ಶಾಂತಿನಗರ, ವಿಲ್ಸನ್‌ ಗಾರ್ಡನ್‌, ರಿಂಗ್‌ ರೋಡ್, ಕಬ್ಬನ್ ಪಾರ್ಕ್‌, ಹಾಗೂ ಮತ್ತಿತ್ತರ ಪ್ರದೇಶಗಳಲ್ಲಿ ಶನಿವಾರ ಮತ್ತು ಭಾನುವಾರ ವಾಹನ ದಟ್ಟಣೆ ಹೆಚ್ಚಾಗಿತ್ತು.

ಗೊರಗುಂಟೆಪಾಳ್ಯ–ಹೆಬ್ಬಾಳ ಸಂಪರ್ಕಿಸುವ ಹೊರವರ್ತುಲ ರಸ್ತೆಯಲ್ಲಿರುವ ರೈಲ್ವೆ ಮೇಲ್ಸೇತುವೆ ದುರಸ್ತಿ ಕಾಮಗಾರಿ ನಡೆಯುತ್ತಿರುವ ಕಾರಣಕ್ಕೆ ವಾಹನ ಮಾರ್ಗ ಬದಲಾವಣೆ ಮಾಡಿದ ಕಾರಣ ಯಶವಂತಪುರ ಮೇಲ್ಸೇತುವೆಯಿಂದ ಹೆಬ್ಬಾಳದ ಮೇಲ್ಸೇತುವೆಯ ವರೆಗೂ ವಾಹನ ದಟ್ಟಣೆ  ಹೆಚ್ಚಾಗಿತ್ತು.

ಈ ಸುದ್ದಿ ಓದಿದ್ದೀರಾ?: ಅಮೃತ ಮಹೋತ್ಸವ| ಬಿಬಿಎಂಪಿ ಅಧಿಕಾರಿಗಳಿಗೆ ಧ್ವಜ ಮಾರಾಟ ಮಾಡುವ ಗುರಿ

ದೂರದ ಊರುಗಳಿಗೆ ಮತ್ತು ತುರ್ತು ಕಾರ್ಯಕ್ರಮಗಳಿಗೆ ತೆರಳುವವರಿಗೆ ವಾಹನದಟ್ಟಣೆಯಿಂದಾಗಿ ಗಂಟೆಗಟ್ಟಲೆ ಕಾಯುವಂತಹ ಪರಿಸ್ಥಿತಿಯು ಬಂದೊದಗಿತ್ತು. ಪ್ರಮುಖ ವೃತ್ತಗಳಲ್ಲಿ ಸಾಲುಗಟ್ಟಿ ವಾಹನಗಳು ನಿಂತಿದ್ದವು. ಟ್ರಾಫಿಕ್ ಮಧ್ಯೆ ಆಂಬುಲೆನ್ಸ್‌ಗಳು ಸಿಲುಕಿ ಮುಂದೆ ಸಾಗಲು ಸಾಧ್ಯವಾಗದೆ ರೋಗಿಗಳ ಸಂಬಂಧಿಕರು ಪರದಾಡುವಂತಾಗಿತ್ತು.

ಹೀಗಾಗಿ ಈ ಪ್ರದೇಶದಲ್ಲಿ ಸಂಚರಿಸುತ್ತಿದ್ದ ವಾಹನ ಚಾಲಕರಿಗೆ ತಮ್ಮ ವಾಹನಗಳನ್ನು ಚಲಾಯಿಸಲಾಗದೇ ನಿಂತಲ್ಲೇ ಅರ್ಧಗಂಟೆಗಿಂತಲೂ ಹೆಚ್ಚು ಹೊತ್ತು ಕಾಯುವ ಪರಿಸ್ಥಿತಿ ನಿರ್ಮಾಣವಾಗಿತ್ತು.

ಸಂಚಾರದಟ್ಟಣೆಯಲ್ಲಿ ಸಿಲುಕಿದ ಚಾಲಕರೊಬ್ಬರು ಹೀಗೆ ಟ್ವೀಟ್ ಮಾಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್