ಟ್ರಾಫಿಕ್ ಜಾಮ್ ಪ್ರೇಮ: ಸ್ನೇಹಿತರು ಪ್ರೇಮಿಗಳಾಗಿ, ಪ್ರೇಮಿಗಳು ಮದುವೆಯಾದರೂ ಮುಗಿಯಲಿಲ್ಲ ಫ್ಲೈಓವರ್ ಕಾಮಗಾರಿ!

  • ಬೆಂಗಳೂರಿನ ಮೇಲುರಸ್ತೆ ಕಾಮಗಾರಿ ಬಗ್ಗೆ ಒಂದು ವಿಡಂಬನೆಯ ಪೋಸ್ಟ್
  • ಈಜಿಪುರ ಮೇಲುರಸ್ತೆಯ ಬಳಿ ಹುಟ್ಟಿಕೊಂಡ ಪ್ರೇಮ, ಮದುವೆಯಲ್ಲಿ ಸುಖಾಂತ್ಯ

ಬೆಂಗಳೂರು ನಗರದ ಭಯಂಕರ ಟ್ರಾಫಿಕ್ ಜಾಮ್, ಎಂದೆಂದೂ ಮುಗಿಯದ ಕಾಮಗಾರಿಗಳು ನಾನಾ ರೀತಿಯ ಕಥೆಗಳಿಗೆ, ವ್ಯಂಗ್ಯ ವಿಡಂಬನೆಗಳಿಗೆ ಸ್ಫೂರ್ತಿಯಾಗುತ್ತಿವೆ. ಟ್ರಾಫಿಕ್ ಜಾಮ್‌ನಲ್ಲಿ ಸಿಲುಕಿದ ಯುವಕನೊಬ್ಬ, ಫ್ಲೈಓವರ್‌ನಿಂದ ತನಗೆ ಸಂಗಾತಿ ಸಿಕ್ಕ ವಿಷಯವನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಅದೀಗ ವೈರಲ್ ಆಗಿದೆ.

‘ಮಾಸ್ಕ್ಡ್ ಮೇನಿಯಾಕ್2’ ಎಂಬ ಬಳಕೆದಾರ ತನ್ನ ಪ್ರೇಮ ಕಥೆಯನ್ನು ಟ್ವೀಟ್ ಮಾಡಿದ್ದಾನೆ. ಅದನ್ನು ಹಲವರು ಹಂಚಿಕೊಂಡಿದ್ದಾರೆ.        

"ಆಗ ನಾನು ಮತ್ತು ಅವಳು ಕೇವಲ ಸ್ನೇಹಿತರಾಗಿದ್ದೆವು. ಒಂದು ದಿನ ನಾನು ಅವಳನ್ನು ಮನೆಗೆ ಬಿಡುತ್ತಿದ್ದಾಗ, ಈಜಿಪುರ ಮೇಲ್ಸೇತುವೆಯ ನಿರ್ಮಾಣ ಕಾರ್ಯದಿಂದಾಗಿ ಸೋನಿ ವರ್ಲ್ಡ್ ಜಂಕ್ಷನ್‌ನಲ್ಲಿ ಟ್ರಾಫಿಕ್ ಜಾಮ್‌ ಉಂಟಾಗಿತ್ತು. ಟ್ರಾಫಿಕ್ ಜಾಮ್‌ನಿಂದಾಗಿ ಇಬ್ಬರೂ ಬೇಸತ್ತಿದ್ದೆವು. ನಮ್ಮಿಬ್ಬರಿಗೂ ಹಸಿವು ಕೂಡ ಆಗಿತ್ತು. ಹತ್ತಿರದಲ್ಲೇ ಇಬ್ಬರೂ ಊಟ ಮಾಡಿದೆವು. ಅಲ್ಲಿಂದಲೇ ನಮ್ಮಿಬ್ಬರ ನಡುವೆ ಪ್ರೀತಿ ಅಂಕುರಿಸಿತು. ನಾನು ಅವಳೊಂದಿಗೆ 3 ವರ್ಷ ಕಾಲ ಡೇಟಿಂಗ್ ಮಾಡಿದೆ. ಈಗ ನಾನು ಅವಳನ್ನು ಮದುವೆಯಾಗಿ 2 ವರ್ಷಗಳೇ ಕಳೆದಿವೆ. ಆದರೆ, 2.5 ಕಿಮೀ ಉದ್ದದ ಈಜಿಪುರ ಫ್ಲೈಓವರ್ ಕಾಮಗಾರಿ ಮಾತ್ರ ಇನ್ನೂ ಮುಗಿದಿಲ್ಲ" ಎಂದು ಆತ ಬರೆದುಕೊಂಡಿದ್ದಾನೆ.

ಈ ಟ್ವೀಟ್‌ ಇದೀಗ ಸಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ದಿನದಿಂದ ದಿನಕ್ಕೆ ಬೆಂಗಳೂರಿನಲ್ಲಿ ಕುಸಿಯುತ್ತಿರುವ ಮೂಲಸೌಕರ್ಯಗಳ ಕುರಿತಾಗಿ ನಾಗರಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ನಗರದ ಸಮಸ್ಯೆಗಳ ಪರಿಹಾರಕ್ಕಾಗಿ ಏನೂ ಮಾಡುತ್ತಿಲ್ಲ ಎನ್ನುವುದು ನೆಟ್ಟಿಗರ ಆಕ್ರೋಶವಾಗಿದೆ. 

ಈ ಸುದ್ದಿ ಓದಿದ್ದೀರಾ?: ಬಿಬಿಎಂಪಿ | ಸುಮನಹಳ್ಳಿ ಫ್ಲೈಓವರ್ ಗುಂಡಿ: ಇಂದಿನಿಂದ ದುರಸ್ತಿ ಕಾರ್ಯಾರಂಭ

ಈ ಬಗ್ಗೆ ಈ ದಿನ.ಕಾಮ್ ಜೊತೆ ಮಾತಾಡಿದ ವಿಜಯನಗರ ಪೈಪ್‌ಲೈನ್ ನಿವಾಸಿ ಹೇಮಾ, "ಸಂಚಾರ ದಟ್ಟಣೆ ತಪ್ಪಿಸಲು ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವರ್ಷಾನುಗಟ್ಟಲೇ ಕಾಮಗಾರಿ ಮಾಡಿ ಫ್ಲೈ ಓವರ್‌ಗಳನ್ನು ನಿರ್ಮಿಸುತ್ತಿದೆ. ಆದರೆ, ಬಹುತೇಕ ಫ್ಲೈಓವರ್‌ಗಳು ಕೆಲವೇ ತಿಂಗಳಲ್ಲಿ ಗುಂಡಿ ಬಿದ್ದು ಹಾಳಾಗುತ್ತಿವೆ. ಶಿವಾನಂದ ವೃತ್ತದ ಫ್ಲೈಓವರ್, ಸುಮನಹಳ್ಳಿ ಫ್ಲೈಓವರ್ ಹೀಗೆ ಎಷ್ಟೊಂದು ಉದಾಹರಣೆಗಳು.. ಬೆಂಗಳೂರು ಮೈಸೂರು ದಶಪಥ ಹೆದ್ದಾರಿಯದ್ದೂ ಇದೇ ಕಥೆ. ಬೆಂಗಳೂರಿನಲ್ಲಿ ಸುರಿದ ಮಳೆಗೆ ರಸ್ತೆಗಳ ಕಳಪೆ ಕಾಮಗಾರಿ ಬೆಳಕಿಗೆ ಬಂದಿದೆ" ಎಂದು ಬಿಬಿಎಂಪಿ ಕಾರ್ಯವೈಖರಿ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.   

ನಿಮಗೆ ಏನು ಅನ್ನಿಸ್ತು?
1 ವೋಟ್