ಬೆಂಗಳೂರು | 'ಬುದ್ಧಿವಂತ ಸಾರಿಗೆ ವ್ಯವಸ್ಥೆ' ಯೋಜನೆಯ ಕೆಲಸಗಳು ಮತ್ತೆ ವಿಳಂಬ

  • ಗುತ್ತಿಗೆದಾರರ ವಿಳಂಬದಿಂದ ಸಾವಿರಾರು ಪ್ರಯಾಣಿಕರನ್ನು ಕಳೆದುಕೊಳ್ಳುತ್ತಿರುವ ಬಿಎಂಟಿಸಿ
  • ಮಣಿಪಾಲ್ ಟೆಕ್ನಾಲಜೀಸ್‌ಗೆ ₹ 37.5 ಕೋಟಿಗೆ ಗುತ್ತಿಗೆ ನೀಡಿದ್ದ ಬಿಎಂಟಿಸಿ

ಪ್ರಯಾಣಿಕರು ತಮ್ಮ ಪ್ರಯಾಣವನ್ನು ನಿಗದಿಪಡಿಸಿಕೊಳ್ಳಲು ನೆರವು ನೀಡುವ ಉದ್ದೇಶದಿಂದ ಜಾರಿಗೆ ತರಲು ಯೋಜಿಸಿದ್ದ 'ಬುದ್ಧಿವಂತ ಸಾರಿಗೆ ವ್ಯವಸ್ಥೆ (ಇಂಟೆಲಿಜೆನ್ಸ್ ಟ್ರಾನ್ಸ್ಪೋರ್ಟ್ ಸಿಸ್ಟಮ್ – ಐಟಿಎಸ್)' ಯೋಜನೆಯ ಕೆಲಸಗಳು ಮತ್ತೆ-ಮತ್ತೆ ವಿಳಂಬವಾಗುತ್ತಿರುವುದರಿಂದ ಸಿಟ್ಟಾಗಿರುವ ಸಾರಿಗೆ ಇಲಾಖೆಯ ಅಧಿಕಾರಿಗಳು, ಗುತ್ತಿಗೆದಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗುತ್ತಿಗೆ ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಿರುವ ಸಾರಿಗೆ ಇಲಾಖೆಯ ಅಧಿಕಾರಿಗಳು, ಬಸ್ ನಿಲ್ದಾಣಗಳಿಗೆ ಬಸ್‌ಗಳ ಆಗಮನ ಮತ್ತು ನಿರ್ಗಮನದ ಬಗ್ಗೆ ಪ್ರಯಾಣಿಕರಿಗೆ ಸರಿಯಾದ ಮಾಹಿತಿ ಇಲ್ಲ. ಮಾಹಿತಿ ಕೊರತೆಯಿಂದಾಗಿ ಜನರು ಸ್ವಂತ ವಾಹನಗಳು, ಆಟೋ ರಿಕ್ಷಾಗಳು ಅಥವಾ ಟ್ಯಾಕ್ಸಿಗಳನ್ನು ಬಳಸುತ್ತಿದ್ದಾರೆ. ಇದರಿಂದ ಬಿಎಂಟಿಸಿ ಪ್ರತಿದಿನ ಸಾವಿರಾರು ಪ್ರಯಾಣಿಕರನ್ನು ಕಳೆದುಕೊಳ್ಳುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಬಿಎಂಟಿಸಿಯು 2020ರಲ್ಲಿ ನಿರ್ಭಯ ಯೋಜನೆಯಿಂದ ಧನಸಹಾಯ ಪಡೆದು ಐಟಿಎಸ್ ಯೋಜನೆಯ ಅಡಿಯಲ್ಲಿ ಜಾಗತಿಕ ಟ್ರ್ಯಾಕಿಂಗ್ ಸಾಧನಗಳು(GPS), ಎಚ್ಚರಿಕೆ (SOS) ಬಟನ್‌ಗಳು ಮತ್ತು ಕ್ಯಾಮೆರಾಗಳನ್ನು ಅಳವಡಿಸಲು ಮಣಿಪಾಲ್ ಟೆಕ್ನಾಲಜೀಸ್‌ಗೆ ₹ 37.5 ಕೋಟಿಗೆ ಗುತ್ತಿಗೆ ನೀಡಿತ್ತು. ಕೆಲಸವನ್ನು ಆಗಸ್ಟ್ 2021ರೊಳಗೆ ಮುಗಿಸುವಂತೆ ಗಡುವನ್ನೂ ನೀಡಿತ್ತು. ಆದರೆ, ಇದೂವರೆಗೂ ಯೋಜನೆಯ ಕೆಲಸಗಳು ಪೂರ್ಣಗೊಂಡಿಲ್ಲ.

ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ಮೀಸಲಾತಿಗೆ ತಡೆ ನೀಡಿದರೆ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ; ಚುನಾವಣಾ ಆಯೋಗದ ಪ್ರತಿಪಾದನೆ

“ಗುತ್ತಿಗೆದಾರರು ಕೆಲಸದ ವಿಳಂಬಕ್ಕೆ ಸೆಮಿ ಕಂಡಕ್ಟರ್ ಚಿಪ್‌ಗಳ ಕೊರತೆ ಕಾರಣವೆಂದು ಉಲ್ಲೇಖಿಸುತ್ತಿದ್ದಾರೆ. ಮೂರು ಬಾರಿ ಗಡುವು ವಿಸ್ತರಿಸಿದರೂ ಪ್ರಯೋಜನವಾಗಿಲ್ಲ. ಅಂತಿಮ ಅವಕಾಶವಾಗಿ, 2022ರ ನವೆಂಬರ್ ಒಳಗೆ ಕೆಲಸವನ್ನು ಪೂರ್ಣಗೊಳಿಸಿ, ಯೋಜನೆಯನ್ನು ಬಿಎಂಟಿಸಿ ಹಸ್ತಾಂತರಿಸದಿದ್ದರೆ, ಒಪ್ಪಂದವನ್ನು ರದ್ದುಗೊಳಿಸುವುದಾಗಿ ಕಂಪನಿಗೆ ಎಚ್ಚರಿಕೆ ನೀಡಲಾಗಿದೆ,'' ಎಂದು ಬಿಎಂಟಿಸಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಕಂಪನಿಯು 1,000 ಬಸ್‌ಗಳಲ್ಲಿ ಜಿಪಿಎಸ್, ಕ್ಯಾಮೆರಾ ಮತ್ತು ಎಸ್ಒಎಸ್ ಅನ್ನು ಅಳವಡಿಸಿದೆ. ಇನ್ನೂ ಸುಮಾರು 4,000 ಬಸ್‌ಗಳು ಬಾಕಿ ಉಳಿದಿವೆ. ಆದರೂ, ಕಂಪನಿ ಎದುರಿಸುತ್ತಿರುವ ಸಮಸ್ಯೆಗಳನ್ನು ಬಿಎಂಟಿಸಿ ಅರ್ಥ ಮಾಡಿಕೊಂಡಿದೆ. ಯೋಜನೆಗೆ ಅಗತ್ಯವಿರುವ ಅನುದಾನದ ದೊಡ್ಡ ಮೊತ್ತವು ಕೇಂದ್ರ ಸರ್ಕಾರದಿಂದ ಬರುತ್ತದೆ. ಸರ್ಕಾರಿ ಸಂಸ್ಥೆಯಾಗಿ, ನಾವು ನಿಯಮಗಳನ್ನು ಅನುಸರಿಸಬೇಕು”ಎಂದವರು ಹೇಳಿದ್ದಾರೆ.

'ಬಸ್‌ಗಳನ್ನು ಟ್ರ್ಯಾಕ್ ಮಾಡಲು ಹೊಚ್ಚ ಹೊಸ ಬಿಎಂಟಿಸಿ ಅಪ್ಲಿಕೇಶನ್ ಅನ್ನು ಈಗಾಗಲೇ ರಚಿಸಲಾಗಿದೆ. ನಾವು ಕೆಲವು ಪರೀಕ್ಷೆಗಳನ್ನು ನಡೆಸಿದ್ದೇವೆ ಮತ್ತು ಅಪ್ಲಿಕೇಶನ್ ಉತ್ತಮ ರೀತಿಯಲ್ಲಿ ಕೆಲಸ ಮಾಡುತ್ತದೆಂದು ಖಾತ್ರಿಯಾಗಿದೆ. ಆದಾಗ್ಯೂ, ಪ್ರಯಾಣಿಕರು ಬಳಸುವಾಗ ಅಪ್ಲಿಕೇಶನ್ ಸರಿಯಾಗಿ ಕಾರ್ಯ ನಿರ್ವಹಿಸುತ್ತದೆಯೇ ಎಂಬುದನ್ನು ಪರೀಕ್ಷಿಸಲು ನಮಗೆ ಎಲ್ಲ 5,000 ಬಸ್‌ಗಳು ಟ್ರ್ಯಾಕಿಂಗ್ ಸಾಧನಗಳನ್ನು ಹೊಂದಿರಬೇಕು' ಎಂದು ಅಧಿಕಾರಿಯೋರ್ವರು ತಿಳಿಸಿದ್ದಾರೆ.

ಮಾಹಿತಿ: ಡೆಕ್ಕನ್ ಹೆರಾಲ್ಡ್
ನಿಮಗೆ ಏನು ಅನ್ನಿಸ್ತು?
0 ವೋಟ್