
- ಕ್ಯಾಂಟರ್ ಜಪ್ತಿ ಮಾಡಿ ತನಿಖೆ ಮುಂದುವರೆಸಿದ ಪೊಲೀಸರು
- ಅತಿವೇಗ ಹಾಗೂ ನಿರ್ಲಕ್ಷ್ಯ ಚಾಲನೆ ಆರೋಪದಡಿ ಪ್ರಕರಣ ದಾಖಲು
ಬೆಂಗಳೂರಿನ ಕಲ್ಯಾಣ ನಗರದಲ್ಲಿ 'ನಮ್ಮ ಮೆಟ್ರೋ' ಕಾರ್ಮಿಕ ರಸ್ತೆ ದಾಟುವಾಗ ಕ್ಯಾಂಟರ್ ಡಿಕ್ಕಿ ಹೊಡೆದು ಮೃತಪಟ್ಟಿದ್ದಾನೆ. ಅಪಘಾತದ ನಂತರ ಚಾಲಕ ಪರಾರಿಯಾಗಿದ್ದು, ಕ್ಯಾಂಟರ್ ಮಾಲೀಕನನ್ನು ಬಾಣಸವಾಡಿ ಪೊಲೀಸರು ಬಂಧಿಸಿದ್ದಾರೆ.
ನ.11 ರಂದು ರಾತ್ರಿ ಬಾಪಿ ಕುಮಾರ್ (23) ಕೆಲಸ ಮುಗಿಸಿ ಮನೆಗೆ ಹೋಗಲು ರಸ್ತೆ ದಾಟುತ್ತಿರುವಾಗ ಕ್ಯಾಂಟರ್ ಒಂದು ಡಿಕ್ಕಿ ಹೊಡೆದು ಯುವಕ ಮೃತಪಟ್ಟಿದ್ದ. ಇದೀಗ ಈ ಘಟನೆಗೆ ಕಾರಣರಾದ ಕ್ಯಾಂಟರ್ ವಾಹನ ಚಾಲಕ ದೇವಪ್ರಸನ್ನ (23) ಹಾಗೂ ಮಾಲೀಕ ಮಂಜುನಾಥ್ (37) ಅವರನ್ನು ಪೊಲೀಸರು ಬಂಧಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಇನ್ನೂ ಐದು ದಿನ ಮಳೆ ಸಾಧ್ಯತೆ; ಹವಾಮಾನ ಇಲಾಖೆಯಿಂದ ಮುನ್ಸೂಚನೆ
ಚನ್ನಪಟ್ಟಣದ ಮೂಲದವರಾದ ಚಾಲಕ ದೇವಪ್ರಸನ್ನ ವಿರುದ್ಧ ಅತಿವೇಗ ಹಾಗೂ ನಿರ್ಲಕ್ಷ್ಯದ ಚಾಲನೆ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿತ್ತು. ಮಾಕಳಿ ಬಳಿಯ ಪ್ರಭಾನಗರದ ಮಂಜುನಾಥ್ ಎಂಬುವವರನ್ನು ಬಂಧಿಸಲಾಗಿದೆ. ಕ್ಯಾಂಟರ್ ಜಪ್ತಿ ಮಾಡಿ, ತನಿಖೆ ಮುಂದುವರಿಸಲಾಗಿದೆ ಎಂದು ಬಾಣಸವಾಡಿ ಪೊಲೀಸರು ತಿಳಿಸಿದರು.
'ನಮ್ಮ ಮೆಟ್ರೋ' ಕಾಮಗಾರಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಬಾಪಿ ಕುಮಾರ್, ನ. 11ರಂದು ರಾತ್ರಿ ರಸ್ತೆ ದಾಟುತ್ತಿದ್ದರು. ಇದೇ ಸಂದರ್ಭದಲ್ಲೇ ಕ್ಯಾಂಟರ್ ಡಿಕ್ಕಿ ಹೊಡೆದ ಕಾರಣ, ತೀವ್ರ ಗಾಯಗೊಂಡ ಅವರನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು.
ಘಟನೆ ನಂತರ ಕ್ಯಾಂಟರ್ ಸಮೇತ ಚಾಲಕ ಸ್ಥಳದಿಂದ ಪರಾರಿಯಾಗಿದ್ದ ಎಂದು ಟ್ವಿಟರ್ನಲ್ಲಿ ನೆಟ್ಟಿಗರೊಬ್ಬರು ಟ್ವೀಟ್ ಮಾಡಿ ವಿಡಿಯೋ ಹಂಚಿಕೊಂಡಿದ್ದರು. ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೈರಲ್ ಆದ ನಂತರ ಎಚ್ಚೆತ್ತ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ.