ಬಿಬಿಎಂಪಿ | ಚಿಕ್ಕಬಾಣಾವರದಲ್ಲಿ 290 ಮರಗಳು ಮಿಸ್ಸಿಂಗ್; ಎಲ್ಲಿ ಹೋದವೋ, ಕಣ್ಣಿಗೆ ಕಾಣದಾದವೋ!

  • ಉಪನಗರ ರೈಲಿಗಾಗಿ 1,054 ಮರ ತೆರವುಗೊಳಿಸಲು ಅರ್ಜಿ ಸಲ್ಲಿಕೆ
  • ಕಾಣೆಯಾದ ಮರಗಳ ಬಗ್ಗೆ ಪ್ರಕರಣ ದಾಖಲಿಸಲು ಒತ್ತಾಯ

ಬೆಂಗಳೂರು ನಗರದ ಲೊಟ್ಟೆಗೊಂಡನಹಳ್ಳಿ ಮತ್ತು ಚಿಕ್ಕಬಾಣಾವರ ನಡುವಿನ ಪ್ರದೇಶದಲ್ಲಿ 290 ಮರಗಳು ನಾಪತ್ತೆಯಾಗಿವೆ ಎಂದು ಸೆಪ್ಟೆಂಬರ್ 19 ರಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಅರಣ್ಯ ಉಪಸಂರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ.

ರೈಲ್ವೆ ಮೂಲಸೌಕರ್ಯ ಅಭಿವೃದ್ಧಿ ನಿಗಮ ಉಪನಗರ ರೈಲುಮಾರ್ಗದ ನಿರ್ಮಾಣ ಮಾಡಲಿಕ್ಕಾಗಿ ಲೊಟ್ಟೆಗೊಂಡನಹಳ್ಳಿ ಮತ್ತು ಚಿಕ್ಕಬಾಣವಾರ ನಡುವಿನ 1,054 ಮರಗಳನ್ನು ತೆರವುಗೊಳಿಸಲು ಬಿಬಿಎಂಪಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿತ್ತು. ಇದಾದ ನಂತರ ಮರಗಳ ಸಮೀಕ್ಷೆ ನಡೆಸಿದಾಗ 290 ಮರಗಳು ನಾಪತ್ತೆಯಾಗಿರುವುದು ತಿಳಿದುಬಂದಿದೆ. 

ಇನ್ನುಳಿದ 764 ಮರಗಳನ್ನು ಕತ್ತರಿಸಲು ನೋಟಿಸ್ ನೀಡಲಾಗಿದೆ. ಈ ಕುರಿತು ಆಕ್ಷೇಪಣೆ ಸಲ್ಲಿಸಲು 10 ದಿನಗಳ ಗಡುವು ವಿಧಿಸಲಾಗಿದೆ. ಆದರೆ, ಈ ಕಾಮಗಾರಿಗಳಿಗೆ ಮತ್ತು ಅಭಿವೃದ್ಧಿ ಯೋಜನೆಗಳಿಗೆ ಎಷ್ಟು ಮರಗಳನ್ನು ಕಡಿಯಬೇಕು ಎಂಬುದರ ಕುರಿತು ಅಧಿಕಾರಿಗಳು ನಿರ್ದಿಷ್ಟ ಮಾಹಿತಿಯನ್ನು ನೀಡಬೇಕು ಎನ್ನುವ ಒತ್ತಾಯ ಕೇಳಿಬಂದಿದೆ.

ಈ ಸುದ್ದಿ ಓದಿದ್ದೀರಾ?: ಟ್ರಾಫಿಕ್ ಜಾಮ್ ಪ್ರೇಮ: ಸ್ನೇಹಿತರು ಪ್ರೇಮಿಗಳಾಗಿ, ಪ್ರೇಮಿಗಳು ಮದುವೆಯಾದರೂ ಮುಗಿಯಲಿಲ್ಲ ಫ್ಲೈಓವರ್ ಕಾಮಗಾರಿ!

ಬಿಬಿಎಂಪಿ ತಾನು ಸಾರ್ವಜನಿಕರ ಸಭೆ ಕರೆದು ಎಲ್ಲದರ ಮಾಹಿತಿ ನೀಡಿ ದೂರುಗಳನ್ನು ಆಹ್ವಾನಿಸುವುದಾಗಿ ಹೇಳುತ್ತದೆ. ಆದರೆ, ಅಂಥ ಸಭೆಯಲ್ಲಿ ಸಾರ್ವಜನಿಕರ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನಗಳನ್ನು ಮಾಡುತ್ತಿಲ್ಲ. ವಾರದ ದಿನಗಳಲ್ಲಿ ಸಭೆ ನಡೆಸಲಾಗುತ್ತದೆ. ಸಭೆ ನಡೆಯುವ ಸ್ಥಳಗಳಿಗೆ ಸಾರ್ವಜನಿಕರು ಹಾಜರಾಗದಂತೆ ತಡೆಯುತ್ತಿದ್ದಾರೆ ಎನ್ನುವ ಮಾತುಗಳೂ ಕೂಡ ಕೇಳಿಬರುತ್ತಿವೆ.   

ಉಪನಗರ ರೈಲು ಮಾರ್ಗ ನಿರ್ಮಾಣ ಕಾರ್ಯ ಆರಂಭವಾಗುವ ಮುಂಚೆಯೇ ಕಾಣೆಯಾದ ಮರಗಳ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಪ್ರಕರಣ ದಾಖಲಿಸಬೇಕು ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ. ನಗರದಲ್ಲಿ ಎಲ್ಲಿ ಮರಗಳನ್ನು ಕಡಿದರೂ ಯಾರು ಕಡಿದರೂ ಅದರ ಜವಾಬ್ದಾರಿಯನ್ನು ಹತ್ತಿರದ ಮನೆಗಳು ಅಥವಾ ಕಚೇರಿಗಳು ಹೊರಬೇಕು ಎನ್ನುವ ನಿಯಮವಿದೆ. ಹಾಗಾಗಿ ಕಾಣೆಯಾಗಿರುವ ಮರಗಳು ಏನಾಗಿವೆ ಎನ್ನುವುದನ್ನು ಶೀಘ್ರವೇ ಪತ್ತೆ ಹಚ್ಚಬೇಕಾಗಿದೆ.  

ನಿಮಗೆ ಏನು ಅನ್ನಿಸ್ತು?
0 ವೋಟ್