
- ದಕ್ಷಿಣ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರನ್ನು ಕೈಬಿಡಲಾಗಿದೆ
- ಸಹಾಯವಾಣಿ ಸಂಖ್ಯೆ 1950 ಗೆ ಕರೆ ಮಾಡಿ ಅರ್ಜಿ ಸಲ್ಲಿಸಿ
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ವಿಧಾನಸಭಾ ಕ್ಷೇತ್ರಗಳ ಮತದಾರರ ಕರಡು ಪಟ್ಟಿಯನ್ನು ನ.9ರಂದು ಪ್ರಕಟಿಸಿದ್ದು, ಪಟ್ಟಿಯಲ್ಲಿ ಒಟ್ಟು 6.69 ಲಕ್ಷ ಮತದಾರರನ್ನು ಕೈಬಿಡಲಾಗಿದ್ದು, 3.07 ಲಕ್ಷ ಹೊಸ ಮತದಾರರನ್ನು ಸೇರಿಸಲಾಗಿದೆ.
ಬೆಂಗಳೂರು ದಕ್ಷಿಣ ಕ್ಷೇತ್ರದಲ್ಲಿ ಅತಿ ಹೆಚ್ಚು ಮತದಾರರನ್ನು ಕೈಬಿಡಲಾಗಿದೆ. ನಂತರದ ಸ್ಥಾನದಲ್ಲಿ ಕೆ ಆರ್ ಪುರಂ, ಯಶವಂತಪುರ ಮತ್ತು ದಾಸರಹಳ್ಳಿಯಲ್ಲಿ ಹಲವು ಮತದಾರರ ಹೆಸರು ಡಿಲೀಟ್ ಆಗಿವೆ.
ಬೆಂಗಳೂರಿನಲ್ಲಿ ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ 'ಚಿಲುಮೆ' ಸಂಸ್ಥೆಯು ಅಕ್ರಮ ಎಸಗಿರುವುದು ಬೆಳಕಿಗೆ ಬಂದ ಬಳಿಕ, ಹೊಸ ಮತದಾರರ ಪಟ್ಟಿಯ ಮೇಲೆ ಅನುಮಾನಗಳು ವ್ಯಕ್ತವಾಗಿವೆ.
ಈ ಹಿನ್ನೆಲೆಯಲ್ಲಿ, ಬಿಬಿಎಂಪಿ ಪ್ರಕಟಿಸಿರುವ ಕರಡು ಮತದಾರರ ಪಟ್ಟಿಯಲ್ಲಿ ತಮ್ಮ ಹೆಸರನ್ನು ಪರಿಶೀಲಿಸಿ, ತಮ್ಮ ಮತ್ತು ತಮ್ಮ ಕುಟುಂಬದವರ ಹೆಸರುಗಳು ಬಿಟ್ಟುಹೋಗಿದ್ದರೆ, ಮತ್ತೆ ಸೇರ್ಪಡೆಗೆ ಅರ್ಜಿ ಸಲ್ಲಿಸುವಂತೆ ಬಿಬಿಎಂಪಿ ನಾಗರಿಕರಿಗೆ ಹೇಳಿದೆ.
ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮತ್ತು ಕೈಬಿಡುವ ಸಂಬಂಧ ಯಾವುದೇ ಆಕ್ಷೇಪಣೆ, ಸೇರ್ಪಡೆ ಮತ್ತು ಮಾರ್ಪಾಡು ಬಯಸುವವರು ಅರ್ಜಿ ಸಲ್ಲಿಸಲು ಡಿಸೆಂಬರ್ 9ರವರೆಗೆ ಬಿಬಿಎಂಪಿ ಅವಕಾಶ ನೀಡಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಮೂರನೇ ಹಂತದ ಮೆಟ್ರೋ: ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸಿದ ರಾಜ್ಯ ಸರ್ಕಾರ
ಸಾರ್ವಜನಿಕರು ಮತದಾರರ ಸಹಾಯವಾಣಿ ಅಪ್ಲಿಕೇಶನ್ (VHA)ನಲ್ಲಿ ಅಥವಾ www.nvsp.in, www.voterportal.eci.gov.in ಗೆ ಲಾಗಿನ್ ಆಗಿ ತಮ್ಮ ಹೆಸರುಗಳನ್ನು ಪರಿಶೀಲಿಸಲು ಮತ್ತು ಸೇರ್ಪಡೆಗೊಳಿಸಲು ಅರ್ಜಿಸಲ್ಲಿಸಬಹುದು. ಅಥವಾ 1950 ಸಹಾಯವಾಣಿಗೆ ಕರೆ ಮಾಡಿಯೂ ಅರ್ಜಿ ಸಲ್ಲಿಕೆ ಮಾಡಬಹುದು.