ಆಕ್ಷೇಪಣೆ ಪರಿಗಣಿಸದೇ ಬಿಬಿಎಂಪಿ ಮೀಸಲಾತಿ ಪ್ರಕಟ: ಸರ್ಕಾರದ ನಡೆಗೆ ವಿರೋಧ

  • ಬಿಜೆಪಿಗೆ ಅನುಕೂಲ ಮಾಡಿಕೊಳ್ಳುವ ರೀತಿ ವಾರ್ಡ್ ವಿಂಗಡಣೆ ಆರೋಪ
  • ವಾರ್ಡ್ ವಿಂಗಡಣೆ ಪ್ರಕರಣ ನ್ಯಾಯಾಲಯದಲ್ಲಿದ್ದರೂ ಪರಿಗಣಿಸದ ಸರ್ಕಾರ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ 243 ವಾರ್ಡ್‌ಗಳಿಗೆ ಮೀಸಲಾತಿ ಕರಡು ಪಟ್ಟಿಗೆ ಸಂಬಂಧಿಸಿದಂತೆ ಸಾರ್ವಜನಿಕರಿಂದ ಸಲ್ಲಿಕೆಯಾಗಿದ್ದ ಆಕ್ಷೇಪಣೆಗಳನ್ನು ಪರಿಶೀಲಿಸಿದ ಸರ್ಕಾರವು ಅಂತಿಮ ಪಟ್ಟಿಯನ್ನು ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ.

ಆಗಸ್ಟ್ 3ರಂದು ಸರ್ಕಾರವು ಬಿಡುಗಡೆ ಮಾಡಿದ್ದ ಮೀಸಲಾತಿ ಕರಡು ಪಟ್ಟಿಗೆ ಬಂದ ಆಕ್ಷೇಪಣೆಗಳನ್ನು ಪರಿಶೀಲಿಸಿದರೂ ಪಟ್ಟಿಯಲ್ಲಿ ಯಾವುದೇ ಬದಲಾವಣೆ ಮಾಡದೇ ಯಥಾವತ್ ಆಗಿ ಪ್ರಕಟಿಸಲಾಗಿದೆ. ಸರ್ಕಾರದ ಈ ಏಕಪಕ್ಷೀಯ ನಡೆ ಬಗ್ಗೆ ವಿರೋಧ ಪಕ್ಷಗಳ ಮುಖಂಡರು ಆಕ್ಷೇಪ ವ್ಯಕ್ತಪಡಿಸಿದ್ದು, ಸರ್ಕಾರದ ವರ್ತನೆಯನ್ನು ಖಂಡಿಸಿದ್ದಾರೆ.

ಆ. 3ರಂದು ಮೀಸಲಾತಿ ಕರಡು ಪಟ್ಟಿ ಬಿಡುಗಡೆ ಮಾಡಿ, ಆಕ್ಷೇಪಣೆ ಸಲ್ಲಿಕೆಗೆ ಏಳು ದಿನಗಳ ಕಾಲಾವಕಾಶ ನೀಡಲಾಗಿತ್ತು. ಒಟ್ಟು ಎರಡು ಸಾವಿರಕ್ಕೂ ಅಧಿಕ ಆಕ್ಷೇಪಣೆಗಳು ಸಲ್ಲಿಕೆಯಾಗಿತ್ತು. ಮೀಸಲಾತಿ ಕರಡು ಪಟ್ಟಿಯಲ್ಲಿ ಸಾಮಾಜಿಕ ನ್ಯಾಯಕ್ಕೆ ಒತ್ತು ನೀಡಿಲ್ಲ ಎಂದು ಕಾಂಗ್ರೆಸ್ ನಾಯಕರು ಪ್ರತಿಭಟನೆ ಮಾಡಿದ್ದರು. ಹಾಗೆಯೇ ನಗರಾಭಿವೃದ್ಧಿ ಇಲಾಖೆಗೆ ಮೀಸಲಾತಿಯಲ್ಲಾಗಿರುವ ಲೋಪಗಳನ್ನು ಮುಂದಿಟ್ಟುಕೊಂಡು ಆಕ್ಷೇಪಣೆಯನ್ನೂ ಸಲ್ಲಿಸಲಾಗಿತ್ತು. ಸಲ್ಲಿಕೆಯಾದ ಯಾವುದೂ ಆಕ್ಷೇಪಣೆಯನ್ನೂ ಪರಿಗಣಿಸದ ಹಿನ್ನೆಲೆಯಲ್ಲಿ ಈ ಕುರಿತು ಅಸಮಾಧಾನಗೊಂಡವರು ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆಗಳು ಇವೆ.

ಪುಲಿಕೇಶಿ ನಗರ ವಿಧಾನಸಭಾ ಕ್ಷೇತ್ರದಲ್ಲಿ ಒಂದು ವಾರ್ಡನ್ನೂ ಸಾಮಾನ್ಯ ವರ್ಗಕ್ಕೆ ನೀಡದೇ ಎಲ್ಲ ವಾರ್ಡ್‌ಗಳನ್ನೂ ಹಿಂದುಳಿದ ವರ್ಗಗಳಿಗೆ ಮೀಸಲಾಗಿಟ್ಟಿರುವುದು ಸಂವಿಧಾನದ 234 ಟಿ ವಿಧಿಯ 1ರಿಂದ 3ನೇ ಉಪವಿಧಿವರೆಗೆ ಉಲ್ಲಂಘನೆಯಾಗಿದೆ. ಪದ್ಮನಾಭ ನಗರ 5, ಬೆಂಗಳೂರು ದಕ್ಷಿಣ 5, ಚಿಕ್ಕಪೇಟೆ 4, ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಲ್ಲಿ 5 ವಾರ್ಡ್‌ಗಳಲ್ಲಿ ಸಾಮಾನ್ಯ ವರ್ಗಕ್ಕೆ ಮೀಸಲಾತಿ ನೀಡಲಾಗಿದೆ. ಸರ್ಕಾರ ಪ್ರಕಟಿಸಿರುವ ಈ ಮೀಸಲಾತಿಯನ್ನು ಮರು ಪರಿಷ್ಕರಿಸಿಸುವಂತೆ ಆಕ್ಷೇಪಣೆ ಸಲ್ಲಿಸಲಾಗಿತ್ತಾದರೂ ಅದನ್ನು ಪರಿಗಣಿಸಿಲ್ಲ.

ವಾರ್ಡ್‌ಗಳ ಮರುವಿಂಗಡಣೆ ಮತ್ತು ಮೀಸಲಾತಿ ನಿಗದಿ ಕಾರಣಕ್ಕೆ ಪದೇ ಪದೆ ಮುಂದೂಡಲ್ಪಡುತ್ತಿರುವ ಬಿಬಿಎಂಪಿ ಚುನಾವಣಾ ಪ್ರಕ್ರಿಯೆಯನ್ನು ಎಂಟು ವಾರಗಳಲ್ಲಿ ಆರಂಭಿಸಬೇಕು ಎಂದು ರಾಜ್ಯ ಚುನಾವಣಾ ಆಯೋಗಕ್ಕೆ ಸುಪ್ರೀಂ ಕೋರ್ಟ್  ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ತರಾತುರಿಯಲ್ಲಿ ಚುನಾವಣೆ ನಡೆಸಲು ಮುಂದಾಗಿದೆ. ವಾರ್ಡ್ ವಿಂಗಡಣೆ ಮತ್ತು ಮೀಸಲಾತಿ ನಿಗದಿಯಲ್ಲಿ ಸಾಕಷ್ಟು ತಾರತಮ್ಯ ಮಾಡುತ್ತಿದೆ; ಅಲ್ಲದೇ ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಪರಿಗಣಿಸದೇ ಸರ್ಕಾರ ಏಕಪಕ್ಷಿಯವಾಗಿ ನಡೆದುಕೊಳ್ಳುತ್ತಿದೆ ಎಂಬುದು ವಿರೋಧ ಪಕ್ಷಗಳ ಆರೋಪವಾಗಿದೆ.

ಗೊಂದಲ ಸೃಷ್ಟಿಸಿ ಚುನಾವಣೆ ಮುಂದೂಡಲು ಹುನ್ನಾರ  

ಬಿಬಿಎಂಪಿಯ ಕಾಂಗ್ರೆಸ್‌ನ ಮಾಜಿ ಮೇಯರ್ ರಾಮಚಂದ್ರಪ್ಪ ಈ ದಿನ.ಕಾಮ್ ಜತೆಗೆ ಮಾತನಾಡಿ, “ಭಾರತ ಸಂವಿಧಾನದ 74ನೇ ತಿದ್ದುಪಡಿ ಕಾಯ್ದೆಯ ಪ್ರಕಾರ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳ ಸ್ಥಾನವನ್ನು ಒಂದೇ ಒಂದು ದಿನ ಖಾಲಿ ಬಿಡುವಂತಿಲ್ಲ. ಆದರೆ, ಕೋರ್ಟ್ ಮೆಟ್ಟಿಲೇರುವುದು, ಅರ್ಜಿಗಳನ್ನು ಹಾಕಿಸುವ ಮೂಲಕ ಬಿಜೆಪಿ ಸರ್ಕಾರ ಸ್ಥಳೀಯ ಸಂಸ್ಥೆಗಳ ಚುನಾವಣೆಯನ್ನೆ ನಡೆಸುತ್ತಿಲ್ಲ. ಹಿಂದೆ 2007ರಿಂದ 2010ರವರೆಗಿನ ಅವಧಿಯಲ್ಲಿಯೂ ಇದೇ ರೀತಿ ಮಾಡಲಾಗಿತ್ತು. ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆ ವಿಚಾರಣೆ ಹೈಕೋರ್ಟ್‌ನಲ್ಲಿದೆ. ತೀರ್ಪು ಹೊರಬೀಳುವ ಮುನ್ನವೇ ಮತ್ತು ಸಲ್ಲಿಕೆಯಾದ ಆಕ್ಷೇಪಣೆಗಳನ್ನು ಪರಿಗಣಿಸದೆಯೇ ಮೀಸಲಾತಿ ಕರಡನ್ನು ಸರ್ಕಾರ ಅಂತಿಮಗೊಳಿಸಿದೆ. ಇದು ಏಕಪಕ್ಷೀಯ ನಡೆ” ಎಂದು ಟೀಕಿಸಿದರು. 

“ಶಾಸಕರು ಯಾವಾಗಲೂ ತಾವೇ ರಾಜರಾಗಿ ಇರಬೇಕು ಎಂದು ಬಯಸುತ್ತಾರೆ. ಬೆಂಗಳೂರು ನಗರದಲ್ಲಿ ಸಾಕಷ್ಟು ಕಾಮಗಾರಿಗಳಿಗೆ ಬಂಡವಾಳ ಹಾಕಿಬಿಟ್ಟಿದ್ದಾರೆ. ಈ ರೀತಿಯ ಸನ್ನಿವೇಶದಲ್ಲಿ ತಮಗೆ ಬರುವ ಕಮಿಷನ್‌ನಲ್ಲಿ ಪಾಲು ಕೇಳಲು ಕಾರ್ಪೋರೇಟರ್‌ಗಳು ಇಲ್ಲವೇ ಮೇಯರ್ ಬರುವುದನ್ನು ಶಾಸಕರು ಇಷ್ಟಪಡುವುದಿಲ್ಲ. ಹಾಗಾಗಿ ಚುನಾವಣೆಯನ್ನು ಮುಂದೂಡಲು ಅವರೂ ಸಹಕರಿಸುತ್ತಾರೆ. ಒಂದು ವೇಳೆ ವಿಧಾನಸಭೆ ಚುನಾವಣೆ ಒಂದು ದಿನ ಮುಂದೂಡಿದರೆ ಇವರಿಂದ ಸಹಿಸಿಕೊಳ್ಳಲು ಸಾಧ್ಯವೆ? ಒಟ್ಟಿನಲ್ಲಿ ಶಾಸಕರೇ ಆಳ್ವಿಕೆ ಮಾಡಬೇಕು ಎಂಬುದು ಅವರ ಮನಸ್ಥಿತಿ. ಹಾಗಾಗಿ ಮೀಸಲಾತಿ ಮತ್ತು ವಾರ್ಡ್ ವಿಂಗಡಣೆಯಲ್ಲಿ ಗೊಂದಲ ಉಂಟುಮಾಡಿ ಚುನಾವಣೆಯನ್ನು ಮತ್ತೆ ಮುಂದೂಡುವ ಹುನ್ನಾರ ಅವರದ್ದು” ಎಂದು ಆರೋಪಿಸಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಹೈಕೋರ್ಟ್‌ನಲ್ಲಿ ಬಿಬಿಎಂಪಿ ವಾರ್ಡ್‌ ವಿಂಗಡಣೆ ಕುರಿತ ಅರ್ಜಿ ಇಂದು ವಿಚಾರಣೆ

ಅಡ್ಡದಾರಿಯಲ್ಲಿ ಗೆಲ್ಲಲು ವಾರ್ಡ್‌ಗಳ ವಿಂಗಡಣೆ, ಮೀಸಲಾತಿ ನಿಗದಿ  

ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್, ಈ ದಿನ.ಕಾಮ್ ಜತೆಗೆ ಮಾತನಾಡಿ, “ಬಿಬಿಎಂಪಿ ಮೀಸಲಾತಿ ಮತ್ತು ವಾರ್ಡ್ ವಿಂಗಡಣೆಯನ್ನು ವೈಯಕ್ತಿಕ ಹಿತಾಸಕ್ತಿಯಿಂದ ಮಾಡಲಾಗಿದೆಯೇ ಹೊರತು ಸಾರ್ವಜನಿಕ ಹಿತಾಸಕ್ತಿಯಿಂದ ಇಲ್ಲ ಎಂದು ಸಾಂವಿಧಾನಿಕ ಸಂಸ್ಥೆಯಾದ ರಾಜ್ಯ ಚುನಾವಣೆ ಆಯೋಗವೇ ನ್ಯಾಯಾಲಯದ ಮುಂದೆ ಹೇಳಿದೆ. ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ತಮ್ಮ ಅಭ್ಯರ್ಥಿಗಳು ಗೆಲ್ಲಲು ಅನುಕೂಲ ಮಾಡಿಕೊಡುವ ರೀತಿ ತಾರತಮ್ಯ ಮಾಡಿದೆ. ವಾರ್ಡ್ ವಿಂಗಡಣೆ ಮಾಡುವಾಗ ಜಾತಿ, ಧರ್ಮಗಳ ವಿಚಾರದಲ್ಲಿ ತಾರತಮ್ಯ ಮಾಡಿದ್ದಾರೆ” ಎಂದು ದೂರಿದರು.

“ಸುಪ್ರೀಂ ಕೋರ್ಟ್ ಆದೇಶ ನೀಡಿ ಎರಡು ತಿಂಗಳಾಯಿತು. ಸರ್ಕಾರ ಇನ್ನೂ ಕುತಂತ್ರಗಳನ್ನು ಮಾಡಿಕೊಂಡು ಚುನಾವಣೆ ಮುಂದೂಡಲು ಪ್ರಯತ್ನಿಸುತ್ತಿದೆ. ಇನೇನು ಕೊನೆ ಹಂತಕ್ಕೆ ಬಂದಿದ್ದು, ಚುನಾವಣೆ ನಡೆಸುವುದು ಅನಿವಾರ್ಯವಾಗಿದೆ. ಇದರ ಜತೆಗೆ ಸರ್ಕಾರಕ್ಕೆ ವಿರುದ್ಧವಾದ ಅಲೆಯಿದೆ. ಏನು ಮಾಡಿದರೂ ನಮಗೆ ಬಹುಮತ ಬರುವುದಿಲ್ಲ ಎಂಬುದು ಅವರಿಗೆ ಗೊತ್ತಾಗಿದೆ. ಹಾಗಾಗಿ ಅಡ್ಡದಾರಿಗೆ ಇಳಿದು ವಾರ್ಡ್‌ಗಳ ವಿಂಗಡಣೆ ಮಾಡಿದ್ದಾರೆ” ಎಂದು ಆರೋಪಿಸಿದರು.

“ಮೀಸಲಾತಿ ವಿಚಾರದಲ್ಲಿಯೂ ಕಾಂಗ್ರೆಸ್, ಆಮ್ ಆದ್ಮಿ ಪಕ್ಷ, ಜೆಡಿಎಸ್ ಎಲ್ಲೆಲ್ಲಿ ಪ್ರಭಾವ ಇದೆ ಎಂಬುದನ್ನು ಗಮನದಲ್ಲಿ ಇರಿಸಿಕೊಂಡು ಮೀಸಲಾತಿಯನ್ನು ನಿಗದಿ ಮಾಡಿದ್ದಾರೆ. ಯಾವುದೇ ಕಾನೂನನ್ನು ಸರಿಯಾಗಿ ಪಾಲನೆ ಮಾಡದೇ ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡುವ ಜತೆಗೆ, ಸಂವಿಧಾನ ಹಾಗೂ ಅಧಿಕಾರ ದುರುಪಯೋಗಪಡಿಸಿಕೊಂಡು ಮೀಸಲಾತಿ ನಿಗದಿ ಮಾಡಿದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಚುನಾಯಿತ ಪ್ರತಿನಿಧಿಗಳು ಇಲ್ಲದ ಕಾರಣ ಅವ್ಯವಸ್ಥೆ ಉಂಟಾಗಿದೆ. ಚುನಾಯಿತ ಪ್ರತಿನಿಧಿಗಳು ಬಂದರೆ ತಮಗೆ ಬರುವ ಶೇ. 40ರಷ್ಟು ಫಲಿತಾಂಶದಲ್ಲಿ ಪಾಲು ಕೇಳುತ್ತಾರೆ ಎಂಬುದು ಮೂರೂ ಪಕ್ಷಗಳ ಶಾಸಕರ ಆತಂಕ. ಚುನಾವಣೆಯನ್ನು ಮುಂದೂಡುವುದೇ ಒಂದು ದಂಧೆಯಾಗಿದೆ” ಕಿಡಿಕಾರಿದರು.

ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ಮೀಸಲಾತಿಗೆ ತಡೆ ನೀಡಿದರೆ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ; ಚುನಾವಣಾ ಆಯೋಗದ ಪ್ರತಿಪಾದನೆ

ಪ್ರಜಾಪ್ರಭುತ್ವದಲ್ಲಿ ಎಲ್ಲರಿಗೂ ಅವಕಾಶ ಸಿಗಬೇಕು 

ಜೆಡಿಎಸ್ ಮಾಧ್ಯಮ ವಕ್ತಾರ ಗಂಗಾಧರ ಮೂರ್ತಿ ಈ ದಿನ.ಕಾಮ್ ಜತೆಗೆ ಮಾತನಾಡಿ, “ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆಯಲ್ಲಿ ತಮಗೆ ಅನುಕೂಲವಾಗುವ ರೀತಿಯಲ್ಲಿ ಒಂದಿಷ್ಟು ಮಾಡಿದರು. ಆಕ್ಷೇಪಣೆಗಳು ಬಂದರೂ ಅದನ್ನು ಪರಿಗಣಿಸಿಲ್ಲ. ತಾವು ಮಾಡಿದ್ದೇ ಸರಿ ಎಂಬ ಭಾವನೆ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಿಯಾದ ಕ್ರಮ ಅಲ್ಲ. ಒಂದೆ ವಿಧಾನಸಭಾ ಕ್ಷೇತ್ರದಲ್ಲಿ ಏಳಕ್ಕೆ ಏಳನ್ನೂ ಮಹಿಳಾ ಮೀಸಲಾತಿ ನೀಡಿದ್ದಾರೆ. ಸಾಮಾನ್ಯ ವರ್ಗಕ್ಕೆ ನೀಡಬೇಕಿದ್ದ ಜಾಗದಲ್ಲಿ ಬಿಸಿಎಂ ‘ಎ ಹಾಕಿದ್ದಾರೆ” ಎಂದು ಹೇಳಿದರು. 

“ಅಧಿಕಾರ ಅವರ ಕೈಲಿದೆ, ನಾವು ಮಾಡಿದ್ದೇ ಸರಿ ಎಂಬುದು ಅವರ ಭಾವನೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಅವಕಾಶ ಸಿಗಬೇಕು. ಈ ಪರಿಸ್ಥಿತಿಯಲ್ಲಿ ಎಲ್ಲರಿಗೂ ನಿಲ್ಲಲಿಕ್ಕೆ ಅವಕಾಶ ಇಲ್ಲ ಎಂದರೆ ಹೇಗೆ?, ಉದಾಹರಣೆಗೆ ಚಾಮರಾಜಪೇಟೆ ಕ್ಷೇತ್ರದಲ್ಲಿ ಇರುವ ಏಳು ಸ್ಥಾನಗಳಲ್ಲಿಯೂ ಮಹಿಳಾ ಮೀಸಲಾತಿ ನೀಡಿದ್ದಾರೆ. ಕೆಲವು ಕ್ಷೇತ್ರಗಳಲ್ಲಿ ಅ ಸಮುದಾಯದ 100 ಮಂದಿ ಇಲ್ಲದ ಕಡೆ ಬಿಸಿಎಂ ಎ ಮೀಸಲಾತಿ ನೀಡಿದ್ದಾರೆ. ಕಾಂಗ್ರೆಸ್ ಮತ್ತು ಜೆಡಿಎಸ್ ನಾಯಕರ ಪ್ರಾಬಲ್ಯ ಇರುವ ಕಡೆ ಗೆಲ್ಲಲು ಆಗದ ರೀತಿ ಮಾಡಿದ್ದಾರೆ” ಎಂದು ದೂರಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್