ಬಿಬಿಎಂಪಿ | ರಾಷ್ಟ್ರಧ್ವಜ ಖರೀದಿಸುವ ಮುನ್ನ ಗಮನವಿರಲಿ: ಭಾಸ್ಕರ್ ರಾವ್ ಎಚ್ಚರಿಕೆ

National flag
  • 15 ಲಕ್ಷ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡುವ ಗುರಿ ಮುಟ್ಟುವ ಆತುರ 
  • ದೋಷಪೂರಿತ ರಾಷ್ಟ್ರಧ್ವಜಗಳು ಮಾರಾಟವಾಗುತ್ತಿರುವ ಬಗ್ಗೆ ಎಚ್ಚರಿಕೆ 

ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿರುವ ʼಹರ್ ಘರ್ ತಿರಂಗಾʼ ಅಭಿಯಾನಕ್ಕೆ ನೀಡಿರುವ ಕೆಲವು ಧ್ವಜಗಳು ಚೌಕಾಕಾರದಲ್ಲಿದೆ, ಧ್ವಜ ಖರೀದಿಸುವ ಮುನ್ನ ಜಾಗ್ರತೆ ವಹಿಸಿ ಎಂದು ಬೆಂಗಳೂರು ನಗರದ ಮಾಜಿ ಪೊಲೀಸ್‌ ಕಮಿಷನರ್ ಹಾಗೂ ಆಮ್ ಆದ್ಮಿ ಮುಖಂಡ ಭಾಸ್ಕರ್ ರಾವ್‌ ಟ್ವೀಟ್‌ ಮಾಡಿದ್ದಾರೆ.

75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಲುವಾಗಿ ‘ಮನೆ ಮನೆಯಲ್ಲೂ ರಾಷ್ಟ್ರಧ್ವಜ’ ಅಭಿಯಾನ ಹಮ್ಮಿಕೊಳ್ಳಲಾಗಿದ್ದು, ಈ ಅಭಿಯಾನಕ್ಕೂ ಮುನ್ನವೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಧ್ವಜ ಮಾರಾಟ ಮಾಡುತ್ತಿದೆ.  

ಈಗಾಗಲೇ ನಗರದೆಲ್ಲೆಡೆ 15 ಲಕ್ಷ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡಲು ಸರ್ಕಾರ ಬಿಬಿಎಂಪಿ ಅಧಿಕಾರಿಗಳಿಗೆ ಸೂಚಿಸಿದೆ. ಈ ಹಿಂದೆ 10 ಲಕ್ಷ ಧ್ವಜ ಮಾರಾಟ ಮಾಡಲು ತಿಳಿಸಲಾಗಿತ್ತು. ಬಿಬಿಎಂಪಿಯು 22ರೂ. ಗೆ ಒಂದು ಧ್ವಜ ಮಾರಾಟ ಮಾಡುತ್ತಿದೆ.

ಈ ಸುದ್ದಿ ಓದಿದ್ದೀರಾ?:ದೇಶಭಕ್ತಿ ಮತ್ತು ರಾಷ್ಟ್ರಧ್ವಜವನ್ನು ಮಾರಾಟದ ಸರಕನ್ನಾಗಿ ಮಾಡಿಕೊಂಡಿರುವ ಬಿಜೆಪಿ: ಕಾಂಗ್ರೆಸ್ ಮುಖಂಡರ ಟೀಕೆ

ಭಾರತೀಯ ಜನತಾ ಪಕ್ಷದ ಕಾರ್ಯಕರ್ತರಿಗೆ ಪ್ರಧಾನ ಕಚೇರಿಯಿಂದ 10 ಲಕ್ಷ ಧ್ವಜಗಳನ್ನು ಮಾರಾಟ ಮಾಡುವ ಗುರಿ ನೀಡಲಾಗಿದೆ. ಬಿಬಿಎಂಪಿ ಮತ್ತು ಅಂಚೆ ಕಚೇರಿಗಳಿಗೂ ಧ್ವಜ ಮಾರಾಟ ಮಾಡುವ ಗುರಿ ನೀಡಲಾಗಿದೆ.

ಬಿಬಿಎಂಪಿಯು ಧ್ವಜಗಳನ್ನು ಮಾರಾಟ ಮಾಡಲು ಬಡಾವಣೆ ನಿವಾಸಿಗಳ ಸಂಘ, ಅಪಾರ್ಟ್‌ಮೆಂಟ್ ನಿವಾಸಿಗಳ ಸಂಘಗಳು ಸೇರಿದಂತೆ ಹಲವು ಸಂಘಗಳ ನೆರವು ಪಡೆದಿದೆ.

ಪಾಲಿಸ್ಟರ್ ಧ್ವಜದಲ್ಲಿ ಲೋಪದೋಷಗಳು ಕಂಡುಬರುತ್ತಲೇ ಇವೆ. ಅಶೋಕ ಚಕ್ರದ ಅಳತೆ ಸರಿ ಇಲ್ಲ. ಚಕ್ರ ಎರಡು ಬಾರಿ ಮುದ್ರಿತವಾಗಿದೆ, ಧ್ವಜದ ಮೇಲಿನ ಬಣ್ಣಗಳು ಸೂಕ್ತವಾಗಿಲ್ಲ.. ಹೀಗೆ ಸಾರ್ವಜನಿಕರು ನಾನಾ ರೀತಿಯಲ್ಲಿ ಆರೋಪ ಮಾಡುತ್ತಿದ್ದಾರೆ. 

ಬೆಂಗಳೂರು ನಗರದ ಮಾಜಿ ಪೊಲೀಸ್ ಕಮಿಷನರ್ ಬಾಸ್ಕರ್ ರಾವ್‌ ಈ ಕುರಿತು ಟ್ವೀಟ್ ಮಾಡಿದ್ದಾರೆ. "ಶ್ರೀನಗರದ ಬಸ್ ನಿಲ್ದಾಣದ ಬಳಿ ಈ ಧ್ವಜವನ್ನು 25 ರೂ.ಗೆ ಖರೀದಿಸಿ, ಅದನ್ನು ಅಮ್ಮನಿಗೆ ಕೊಟ್ಟೆ. ಆಕೆ ಅದರತ್ತ ಒಮ್ಮೆ ನೋಡಿ, ಇದು ಬಹುತೇಕ ಚೌಕವಾಗಿದೆ, ಹುಷಾರಾಗಿರು ಎಂದು ನನಗೆ ಹೇಳಿದಳು. ಆಕೆಯ ಗಮನಿಸುವ ಸಾಮರ್ಥ್ಯ ನೋಡಿ ನಾನು ಆಘಾತಗೊಂಡೆ" ಎಂದು ಭಾಸ್ಕರ್ ರಾವ್ ಟ್ವೀಟ್‌ ಮಾಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್