ಬಿಬಿಎಂಪಿ ಬುಲ್ಡೋಜರ್ | ಬಡವರ ಮನೆ ಕ್ಷಣಮಾತ್ರದಲ್ಲಿ ಧ್ವಂಸ; ಶ್ರೀಮಂತರ ಬಂಗಲೆಗೆ ಭಂಗವಿಲ್ಲ!

  • ಬಂಗಲೆಗಳನ್ನು ತೆರವುಗೊಳಿಸಲು ಹಿಂದೇಟು ಹಾಕುತ್ತಿರುವ ಬಿಬಿಎಂಪಿ
  • ಗುರುವಾರ ಒತ್ತುವರಿ ತೆರವು ಕಾರ್ಯ ನಡೆಯುತ್ತಿದೆ

ರಾಜಧಾನಿ ಬೆಂಗಳೂರಿನಲ್ಲಿ ಸುರಿದ ಭಾರೀ ಮಳೆಗೆ ನೆರೆ ಉಂಟಾಗಿದ್ದರ ಹಿನ್ನೆಲೆಯಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ರಾಜಕಾಲುವೆ ಮತ್ತು ಕೆರೆಗಳ ಒತ್ತುವರಿ ತೆರವಿಗೆ ಮುಂದಾಗಿದೆ. ಸತತ ಮೂರು ದಿನಗಳಿಂದ ಒತ್ತುವರಿ ಕಾರ್ಯದಲ್ಲಿ ತೊಡಗಿದ್ದ ಬಿಬಿಎಂಪಿ ಅಧಿಕಾರಿಗಳು, ನಾಲ್ಕನೆ ದಿನಕ್ಕೇ ಸುಸ್ತಾಗಿಹೋಗಿದ್ದಾರೆ.

ಒತ್ತುವರಿ ತೆರವು ಕಾರ್ಯಾಚರಣೆಯಲ್ಲಿ ಬಡವರು ಮತ್ತು ಮಧ್ಯಮ ವರ್ಗದವರ ಮನೆ, ಗುಡಿಸಲುಗಳ ಮೇಲೆ ಬಿಬಿಎಂಪಿ ಜೆಸಿಬಿಗಳು ಅಬ್ಬರಿಸಿಕೊಂಡು ಮುನ್ನುಗ್ಗುತ್ತವೆ. ಆದರೆ, ಶ್ರೀಮಂತರು ಮತ್ತು ರಾಜಕೀಯ ಪ್ರಭಾವಿಗಳ ಬಂಗಲೆಗಳನ್ನು ಕಂಡರೆ ತಕ್ಷಣ ನಿಂತುಬಿಡುತ್ತವೆ ಎನ್ನುವ ಆರೋಪ ಕೇಳಿಬಂದಿದೆ. ಪ್ರಭಾವಿಗಳ ಮನೆ, ಕಚೇರಿ, ಬಂಗಲೆಗಳನ್ನು ತೆರವುಗೊಳಿಸಲು ಹಿಂದೇಟು ಹಾಕುತ್ತಿರುವ ಅಧಿಕಾರಿಗಳು, ಸರ್ವೇ ಮಾಡುತ್ತಿದ್ದೇವೆ ಎಂಬ ಸಬೂಬು ಹೇಳುತ್ತಿದ್ದಾರೆ ಎನ್ನಲಾಗಿದೆ.

ಪ್ರಭಾವಿಗಳು ಅತಿಕ್ರಮಿಸಿ ಕಟ್ಟಿರುವ ಕಟ್ಟಡಗಳು ಇರುವ ಸ್ಥಳಗಳಲ್ಲಿ ತೆರವು ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ ಎಂದು ಜನ ಬಿಬಿಎಂಪಿ ವಿರುದ್ಧ ಗಂಭೀರ ಆರೋಪ ಮಾಡುತ್ತಿದ್ದಾರೆ.

ಗುರುವಾರ ತೆರವು ಕಾರ್ಯಾಚರಣೆ

ಗುರುವಾರ ಬೆಂಗಳೂರಿನ ಬಹುತೇಕ ಕಡೆ ತೆರವು ಕಾರ್ಯಾಚರಣೆ ಕುಂಠಿತಗೊಂಡಿದೆ. ಕಳೆದ ನಾಲ್ಕು ದಿನದಿಂದ ಕಾಂಪೌಂಡ್ ತೆರವು ಮಾಡುವುದಕ್ಕೆ ಸೀಮಿತವಾಗಿದ್ದ ಕಾರ್ಯಾಚರಣೆ, ಈಗ ಮಹದೇವಪುರ ವಲಯದ ಹಲವು ಭಾಗಗಳಲ್ಲಿ ಸರ್ವೇ ಮಾಡುವುದಕ್ಕಷ್ಟೇ ಸೀಮಿತವಾಗಿದೆ. ಟಿ ದಾಸರಹಳ್ಳಿ, ನೆಲಗೆದರನಹಳ್ಳಿ, ರುಕ್ಮಿಣಿ ನಗರದಲ್ಲಿ ಒಂದು ಖಾಲಿ ನಿವೇಶನ ಸೇರಿದಂತೆ 10 ಮನೆಗಳು ರಾಜಕಾಲುವೆ ಒತ್ತುವರಿ ಮಾಡಿ ನಿರ್ಮಾಣವಾಗಿದ್ದವು ಎನ್ನಲಾಗುತ್ತಿದೆ.  ಬಿಬಿಎಂಪಿ ಜಂಟಿ ಆಯುಕ್ತ ಜಗದೀಶ್ ಗುರುವಾರ ಒತ್ತುವರಿ ತೆರವು ಕಾರ್ಯದ ನೇತೃತ್ವ ವಹಿಸಿದ್ದರು.  

ಬೆಂಗಳೂರಿನ ಲ್ಯಾಂಡ್‌ಮಾರ್ಕ್‌ ಅಪಾರ್ಟ್‌ಮೆಂಟ್‌ ಒತ್ತುವರಿ

ಯಲಹಂಕದಲ್ಲಿರುವ ಲ್ಯಾಂಡ್‌ ಮಾರ್ಕ್‌ ಅಪಾರ್ಟ್‌ಮೆಂಟ್‌ ಒತ್ತುವರಿ ತೆರವು ಕಾರ್ಯಾಚರಣೆ ಬುಧವಾರ ಅರ್ಧಕ್ಕೆ ನಿಂತ ಹಿನ್ನೆಲೆಯಲ್ಲಿ ಜೆಸಿಬಿಗಳಿಂದ ಗುರುವಾರ ಒತ್ತುವರಿ ತೆರವು ಕಾರ್ಯಾಚರಣೆ ನಡೆಯಿತು.

ತೂಬುಗಾಲುವೆ ಒತ್ತುವರಿ

ಬೆಂಗಳೂರಿನ ಯಲಹಂಕದಲ್ಲಿರುವ ತೂಬುಗಾಲುವೆ ಸಿಂಗಾಪೂರ ಕೆರೆಯಿಂದ ಅಬ್ಬಿಗೆರೆ ಕೆರೆಗೆ ಸಂಪರ್ಕಿಸುತ್ತದೆ. 2.4 ಅಡಿ ಅಗಲ, 75 ಮೀಟರ್ ಉದ್ದದ ತೂಬುಗಾಲುವೆಯನ್ನು ಒತ್ತುವರಿ ಮಾಡಿ ಕಟ್ಟಡ ನಿರ್ಮಿಸಲಾಗಿದೆ. ತೆರವು ವೇಳೆ ಕಟ್ಟಡ ಮಾಲೀಕರು ತೀವ್ರ ವಿರೋಧ ವ್ಯಕ್ತಪಡಿಸಿದರು.

ಮತ್ತೊಮ್ಮೆ ಸರ್ಕಾರದಿಂದ ಹೊಸದಾಗಿ ಸರ್ವೇ

ಬೆಂಗಳೂರಿನ 696 ಸ್ಥಳಗಳಲ್ಲಿ ಪ್ರಭಾವಿಗಳು ರಾಜಕಾಲುವೆಗಳನ್ನು ಅತಿಕ್ರಮಿಸಿ ಕಟ್ಟಣಗಳನ್ನು ನಿರ್ಮಾಣ ಮಾಡಿದ್ದಾರೆ. ರಾಜಕಾಲುವೆ ಒತ್ತುವರಿ ಬಗ್ಗೆ 2016ರಲ್ಲಿ ಪಟ್ಟಿ ಸಿದ್ಧಪಡಿಸಿದ್ದ ಬಿಬಿಎಂಪಿ 2,515 ಒತ್ತುವರಿ ಪ್ರದೇಶಗಳನ್ನು ಗುರುತು ಮಾಡಿತ್ತು. ಈ ಪೈಕಿ ಈಗ 428 ಸ್ಥಳಗಳಲ್ಲಿ ಅತಿಕ್ರಮಣ ತೆರವುಗೊಳಿಸಲಾಗಿದೆ. ಆದರೆ, 696 ಸ್ಥಳಗಳಲ್ಲಿ ಪ್ರಭಾವಿಗಳ ಮನೆಗಳು, ಕಟ್ಟಡಗಳು, ಆಸ್ಪತ್ರೆಗಳು ಮತ್ತು ವಾಣಿಜ್ಯ ಮಳಿಗೆಗಳಿವೆ. ಈ ಕಾರಣದಿಂದಾಗಿ ತೆರವು ಕಾರ್ಯಾಚರಣೆಯನ್ನೇ ಸ್ಥಗಿತಗೊಳಿಸಲಾಗಿದೆ. ಇದೀಗ ಮತ್ತೊಮ್ಮೆ ಹೊಸದಾಗಿ ಸರ್ವೇ ನಡೆಸಲು ಸರ್ಕಾರ ಮುಂದಾಗಿದೆ.

ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಬುಧವಾರ ಹಲವೆಡೆ ಭಾರೀ ಮಳೆ: ಕೊನೇನ ಅಗ್ರಹಾರದಲ್ಲಿ 25.5 ಮಿ.ಮೀ ಮಳೆ

ಎಲ್ಲೆಲ್ಲಿ ತೆರವು ಕಾರ್ಯಾಚರಣೆ?

ಬೆಂಗಳೂರಿನ ಪೂರ್ವ ವಲಯದಲ್ಲಿ 110, ಪಶ್ಚಿಮ ವಲಯದಲ್ಲಿ 59, ದಕ್ಷಿಣ ವಲಯದಲ್ಲಿ 20, ಕೆ-100 ವ್ಯಾಲಿಯಲ್ಲಿ 3 ಒತ್ತುವರಿಗಳನ್ನು ಗುರುತಿಸಲಾಗಿದ್ದು, ತೆರವು ಕಾರ್ಯಾಚರಣೆ ಬಾಕಿಯಿದೆ.

ಯಲಹಂಕ ವಲಯದಲ್ಲಿ 96, ಮಹದೇವಪುರ ವಲಯದಲ್ಲಿ 136, ಮಹದೇವಪುರದಲ್ಲಿ 45, ಬೊಮ್ಮನಹಳ್ಳಿ 26, ಬೊಮ್ಮನಹಳ್ಳಿ ನ್ಯೂ 66, ಆರ್‌.ಆರ್‌ ನಗರ 9, ದಾಸರಹಳ್ಳಿಯಲ್ಲಿ 126 ಕಟ್ಟಡಗಳ ತೆರವು ಬಾಕಿಯಿದೆ. ಬಹುತೇಕ ಸ್ಥಳಗಳಲ್ಲಿ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ನಾಯಕರಿಗೆ ಸೇರಿದ ಆಸ್ತಿಯಿದೆ ಎಂದು ತಿಳಿದುಬಂದಿದೆ.

ನಲಪಾಡ್ ಅಕಾಡೆಮಿ ಸಮೀಪವೂ ಕಾರ್ಯಾಚರಣೆ ಸ್ಥಗಿತ

ಬೆಂಗಳೂರಿನ ಚಲಘಟ್ಟದಲ್ಲಿರುವ ನಲಪಾಡ್ ಅಕಾಡೆಮಿ ಸಮೀಪ ನಡೆಯುತ್ತಿದ್ದ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಬಿಬಿಎಂಪಿ ಸ್ಥಗಿತಗೊಳಿಸಿದೆ. ಕಾರ್ಯಾಚರಣೆಗೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದಾಗಿ ನಲಪಾಡ್ ಅಕಾಡೆಮಿಯ ಸಿಬ್ಬಂದಿ ಹೇಳಿದ್ದು, ಬಿಬಿಎಂಪಿ ಅಧಿಕಾರಿಗಳು ತೆರವು ಕಾರ್ಯಾಚರಣೆ ಸ್ಥಗಿತಗೊಳಿಸಿದ್ದಾರೆ.

ಬಾಗ್‌ಮನೆ ಟೆಕ್‌ಪಾರ್ಕ್

ಬೆಂಗಳೂರಿನ ಐಟಿ ಕಾರಿಡಾರ್‌ಗೆ ಹೊಂದಿಕೊಂಡಂತಿರುವ ಬಾಗ್‌ಮನೆ ವರ್ಲ್ಡ್ ಟೆಕ್ನಾಲಜಿ ಸೆಂಟರ್ ನೆರೆಯಿಂದ ಹಾನಿಗೊಳಗಾಗಿದೆ. ಮಳೆನೀರು ಹರಿಯುವ ಕಾಲುವೆಗಳನ್ನು 2.4 ಮೀಟರ್‌ಗಳಷ್ಟು (7.8 ಅಡಿ) ಜಾಗವನ್ನು ಬಾಗ್‌ಮನೆ ಟೆಕ್‌ಪಾರ್ಕ್‌ ಅತಿಕ್ರಮಣ ಮಾಡಿಕೊಂಡಿದೆ ಎಂದು ಬಿಬಿಎಂಪಿ ಗುರುತಿಸಿದೆ.

ಬೆಂಗಳೂರಿನ ಸುಮಾರು 700 ಪ್ರದೇಶದಲ್ಲಿ ರಾಜಕಾಲುವೆಗಳು ಮುಚ್ಚಿಹೋಗಿವೆ. ಈ ಜಾಗಗಳನ್ನು ವಿಪ್ರೋ, ಪ್ರೆಸ್ಟೀಜ್, ಇಕೋ ಸ್ಪೇಸ್, ಕೊಲಂಬಿಯಾ ಏಷ್ಯಾ ಆಸ್ಪತ್ರೆ, ದಿವ್ಯಶ್ರೀ ವಿಲ್ಲಾಸ್ ಮತ್ತು ಬಾಗ್‌ಮನೆ ಟೆಕ್‌ಪಾರ್ಕ್‌ ಸೇರಿದಂತೆ ವಿವಿಧ ಹೈ ಪ್ರೊಫೈಲ್ ಬಿಲ್ಡರ್‌ಗಳು, ಡೆವಲಪರ್‌ಗಳು ಮತ್ತು ಟೆಕ್ ಪಾರ್ಕ್‌ಗಳು ಅತಿಕ್ರಮಿಸಿಕೊಂಡಿವೆ ಎಂದು ಎನ್‌ಡಿಟಿವಿ ವರದಿ ಮಾಡಿದೆ. 

ಕೇವಿಯಟ್ ಸಲ್ಲಿಸಲು ನಿರ್ಧಾರ

ಬಿಬಿಎಂಪಿ ವ್ಯಾಪ್ತಿಯಲ್ಲಿನ ರಾಜಕಾಲುವೆ ಒತ್ತುವರಿ ತೆರವು ವಿಚಾರವಾಗಿ ಸರ್ಕಾರ ಗುರುವಾರ (ಸೆ. 15) ಕೇವಿಯಟ್ ಅರ್ಜಿ ಸಲ್ಲಿಸಲು ನಿರ್ಧರಿಸಿದೆ. ಬಿಬಿಎಂಪಿ ಆಯುಕ್ತರ ಮೇಲೆ ಒತ್ತುವರಿ ತೆರವು ಮಾಡದಂತೆ ಶಾಸಕ ಹ್ಯಾರಿಸ್ ಸೇರಿ ಹಲವರು ಒತ್ತಡ ಹೇರುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಕೇವಿಯಟ್ ಸಲ್ಲಿಕೆಗೆ ಮುಂದಾಗಿದೆ ಎನ್ನಲಾಗಿದೆ.

ರೈನ್‌ ಬೋ ಡ್ರೈವ್ ವಿಲ್ಲಾ ನಿವಾಸಿಗಳಿಗೆ ನೋಟಿಸ್

ಮಳೆ ನೀರು ತುಂಬಿಕೊಂಡು ರೈನ್ ಬೋ ಡ್ರೈವ್ ಲೇಔಟ್ ತತ್ತರಿಸಿ ಹೋಗಿತ್ತು. ಬಡಾವಣೆಯಲ್ಲಿ ರಾಜಕಾಲುವೆ ಒತ್ತುವರಿ ಮಾಡಿಕೊಳ್ಳಲಾಗಿದ್ದು, ಆ ಜಾಗಗಳನ್ನು ತೆರವುಗೊಳಿಸುವಂತೆ ರೈನ್‌ ಬೋ ಡ್ರೈವ್ ಲೇಔಟ್ ವಿಲ್ಲಾಗಳಿಗೆ ಬೆಂಗಳೂರು ಪೂರ್ವ ತಹಶೀಲ್ದಾರ್ ನೋಟಿಸ್ ಜಾರಿ ಮಾಡಿದ್ದಾರೆ.

"ಒತ್ತುವರಿ ಜಾಗವನ್ನು ತೆರವು ಮಾಡದಿದ್ದರೆ ನಾವೇ ಮಾಡುತ್ತೇವೆ. ತೆರವು ಕಾರ್ಯಾಚರಣೆ ವೆಚ್ಚ ನೀವೇ ಭರಿಸಬೇಕಾಗುತ್ತದೆ" ಎಂದಿರುವ ತಹಶೀಲ್ದಾರ್‌ 15ಕ್ಕೂ ಹೆಚ್ಚು ವಿಲ್ಲಾಗಳಿಗೆ ನೋಟಿಸ್ ನೀಡಿದ್ದಾರೆ.

ಈ ಕುರಿತು ಈ ದಿನ.ಕಾಮ್‌ ಬಿಬಿಎಂಪಿಯ ಹಲವು ಅಧಿಕಾರಿಗಳನ್ನು ಸಂಪರ್ಕಿಸಲು ಪ್ರಯತ್ನಿಸಿತು. ಯಾರೂ ಕರೆ ಸ್ವೀಕರಿಸಲಿಲ್ಲ.

ಮಳೆ ನೀರಿನ ಸಹಜ ಹರಿವಿಗೆ ತಡೆಯೊಡ್ಡಿ ಪ್ರವಾಹಕ್ಕೆ ಕಾರಣವಾದ ಅತಿಕ್ರಮಣ ತೆರವಿಗೆ ಮುಂದಾಗಿರುವ ಅಧಿಕಾರಿಗಳು, ಕಳೆದ ಮೂರು ದಿನಗಳಿಂದ ಬೆಂಗಳೂರಿನ ವಿವಿಧೆಡೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದ್ದಾರೆ. ಮಹದೇವಪುರ ವಲಯದ ಹಲವೆಡೆ ಉಂಟಾದ ಭಾರೀ ಪ್ರವಾಹಕ್ಕೆ ಟೆಕ್ ಕಂಪನಿಗಳ ಅತಿಕ್ರಮಣವೇ ಮುಖ್ಯ ಕಾರಣ ಎಂದು ದೂರಲಾಗಿದೆ.

ನಿಮಗೆ ಏನು ಅನ್ನಿಸ್ತು?
1 ವೋಟ್