ಬಿಬಿಎಂಪಿ ಚುನಾವಣೆ | ಸೆ. 22ರೊಳಗೆ ಮತದಾರರ ಅಂತಿಮ ಪಟ್ಟಿ ಪ್ರಕಟಿಸಲು ಚುನಾವಣಾ ಆಯೋಗದ ನಿರ್ದೇಶನ

  • 300 ರಿಂದ 1,400 ಮತದಾರರಿಗೆ ಒಂದು ಮತಗಟ್ಟೆ ಸ್ಥಾಪನೆ
  • ಎಂಟು ವಲಯಗಳ ಆಯುಕ್ತರನ್ನು ವೀಕ್ಷಕರಾಗಿ ನೇಮಕ

ವಾರ್ಡ್‌ವಾರು ಮೀಸಲಾತಿ ಪಟ್ಟಿ ಪ್ರಕಟಿಸಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಯನ್ನು ಶೀಘ್ರದಲ್ಲೇ ನಡೆಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನದ ಹಿನ್ನೆಲೆಯಲ್ಲಿ, ರಾಜ್ಯ ಚುನಾವಣಾ ಆಯೋಗವು ವಾರ್ಡ್‌ವಾರು ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಂತೆ ಪಾಲಿಕೆಗೆ ಸೂಚಿಸಿದೆ.

ಬಿಬಿಎಂಪಿ ವಾರ್ಡ್‌ಗಳನ್ನು 197 ರಿಂದ 243 ವಾರ್ಡ್‌ಗಳಿಗೆ ಮರುವಿಂಗಡಿಸಿದ್ದು, ಅದರ ಆಧಾರದಲ್ಲಿ ಎಲ್ಲ ವಾರ್ಡ್ ವ್ಯಾಪ್ತಿಯಲ್ಲಿನ ಮತದಾರರ ಪಟ್ಟಿ ಸಿದ್ಧಪಡಿಸಲು ರಾಜ್ಯ ಸರ್ಕಾರ ಅಧಿಕಾರಿಗಳನ್ನು ನೇಮಿಸಿದೆ. ಜತೆಗೆ ಮತಗಟ್ಟೆಗಳ ರಚನೆಗೆ ಸೂಚನೆ ನೀಡಿದೆ. ಸೆಪ್ಟೆಂಬರ್ 22ಕ್ಕೆ ಮತದಾರರ ಅಂತಿಮ ಪಟ್ಟಿ ಪ್ರಕಟಿಸುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ.

ಬಿಬಿಎಂಪಿಯು ಕರಡು ಪಟ್ಟಿಗೆ ಆಕ್ಷೇಪಣೆಗಳಿದ್ದರೆ ಸ್ವೀಕರಿಸಲು ಸಹಾಯವಾಣಿಗಳನ್ನು ಸ್ಥಾಪಿಸಬೇಕು. ಬಿಬಿಎಂಪಿಯ ಚುನಾವಣೆಯ ಸಲುವಾಗಿ ರಾಜ್ಯ ಚುನಾವಣಾ ಆಯೋಗವು ಸೂಚಿಸಿರುವ ಅಧಿಕಾರಿಗಳ ಜತೆಗೆ ರಾಜ್ಯ ಸರ್ಕಾರ ನೇಮಿಸಿರುವ ಅಧಿಕಾರಿಗಳು ಸೇರಿ ಆಯಾ ವಿಧಾನಸಭಾ ಕ್ಷೇತ್ರದ ವಾರ್ಡ್‌ಗಳಲ್ಲಿ ಚುನಾವಣೆ ಸಿದ್ಧತೆಗೆ ಕಾರ್ಯ ನಿರ್ವಹಿಸಲಿದ್ದಾರೆ.

ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ | ಕನಿಷ್ಠ 10 ಲಕ್ಷ ರಾಷ್ಟ್ರಧ್ವಜ ಹಾರಿಸುವ ಗುರಿ: ತುಷಾರ್ ಗಿರಿನಾಥ್

ವಿಧಾನಸಭಾ ಚುನಾವಣೆಯ ಮತದಾರರ ಪಟ್ಟಿಯನ್ನು ಉಲ್ಲೇಖಿಸಿ ಪ್ರತಿ ವಾರ್ಡ್‌ಗೆ ಮತದಾರರ ಪಟ್ಟಿಯನ್ನು ಸಿದ್ಧಪಡಿಸಬೇಕಿದೆ. ಚುನಾವಣಾ ಆಯೋಗದ ಆದೇಶದ ಮೇರೆಗೆ 300 ರಿಂದ 1400 ಮತದಾರರಿಗೆ ಒಂದು ಮತಗಟ್ಟೆ ಇರಲಿದೆ. ಒಟ್ಟು 8 ವಲಯಗಳ ಮೇಲುಸ್ತುವಾರಿಗಳು ಅಧಿಕಾರ ವಹಿಸಲಿದ್ದಾರೆ ಎಂದು ಆಯೋಗದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ಪ್ರಕ್ರಿಯೆಗೆ ಬಿಬಿಎಂಪಿ ಎಲ್ಲ ವಲಯ ಆಯುಕ್ತರನ್ನು ವೀಕ್ಷಕರನ್ನಾಗಿ ನೇಮಿಸಲಾಗಿದೆ. ಬಿಬಿಎಂಪಿ ಮುಖ್ಯ ಆಯುಕ್ತರು ಕನಿಷ್ಠ ಶೇ. 1ರಷ್ಟು ಮತದಾರರ ಪಟ್ಟಿಯನ್ನು ಪರಿಶೀಲಿಸಬೇಕು. ವಲಯ ಆಯುಕ್ತರು ಕನಿಷ್ಠ ಶೇ. 5 ರಷ್ಟು ಮತದಾರರ ಪಟ್ಟಿಯನ್ನು ಪರಿಶೀಲಿಸಬೇಕಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್