ಪೌರಕಾರ್ಮಿಕರೊಂದಿಗೆ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಕುಶಲೋಪರಿ

  • ಪೌರಕಾರ್ಮಿಕರ ಕಡ್ಡಾಯ ಆರೋಗ್ಯ ತಪಾಸಣೆ ನಡೆಸುವಂತೆ ಸೂಚನೆ
  • ಮುನಿರೆಡ್ಡಿ ಪಾಳ್ಯ ಹೆರಿಗೆ ಆಸ್ಪತ್ರೆಯಲ್ಲಿ ಸೇವೆ ಆರಂಭಿಸಲು ಆದೇಶ 
  • ಬಿಬಿಎಂಪಿ ಉತ್ತರ ವಲಯದ ವಿವಿಧ ಕಾಮಗಾರಿಗಳ ಪರಿಶೀಲನೆ

ಆರ್.ಟಿ ನಗರ ಬಿಡಿಎ ಕಾಂಪ್ಲೆಕ್ಸ್ ಬಳಿ ಇರುವ ಮಸ್ಟರಿಂಗ್ ಕೇಂದ್ರಕ್ಕೆ ಭೇಟಿ ನೀಡಿದ ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್, ಕಾರ್ಮಿಕರ ಕುಶಲೋಪರಿ ನಡೆಸಿ ಒಟ್ಟಿಗೆ ಚಹಾ ಸೇವಿಸಿದರು.

ಮಂಗಳವಾರ ಬೆಳಗ್ಗೆ ಪೌರಕಾರ್ಮಿಕರನ್ನು ಭೇಟಿ ಮಾಡಿದ ಆಯುಕ್ತರು, ಆರೋಗ್ಯ ವಿಚಾರಿಸಿ ಮನೋಸ್ಥೈರ್ಯ ತುಂಬವ ಮಾತುಗಳನ್ನಾಡಿದರು. ಜೊತೆಗೆ, ಕಟ್ಟುನಿಟ್ಟಾಗಿ ಹಾಜರಾತಿ ಪರಿಶೀಲನೆ ನಡೆಸಿ, ಗೈರು ಹಾಜರಾದ ಪೌರಕಾರ್ಮಿಕರಿಗೆ ಕಡ್ಡಾಯ ಆರೋಗ್ಯ ತಪಾಸಣೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಜೆ.ಸಿ ನಗರ ವಾರ್ಡ್ ವ್ಯಾಪ್ತಿ ಆಟೋ ಟಿಪ್ಪರ್ ಮಸ್ಟರಿಂಗ್ ಸ್ಥಳಕ್ಕೆ ಭೇಟಿ ನೀಡಿದಾಗ 13 ಆಟೋಗಳಲ್ಲಿ 12 ವಾಹನಗಳು ಮಾತ್ರ ಹಾಜರಿದ್ದವು. ಜೊತೆಗೆ ಜಿಪಿಎಸ್ ವ್ಯವಸ್ಥೆ ಸರಿಯಾಗಿ ಕಾರ್ಯನಿರ್ವಹಿಸದೇ ಇರುವುದನ್ನು ಗಮನಿಸಿ, ಪ್ರತಿ ನಿತ್ಯ ಸದರಿ ವಾಹನಗಳ ಕಾರ್ಯಾಚರಣೆ ಬಗ್ಗೆ ನಿಗಾವಹಿಸಬೇಕು. ಜಿಪಿಎಸ್ ವ್ಯವಸ್ಥೆ ನಿರ್ವಹಣೆಯನ್ನು ಸರಿಪಡಿಸಿ ನಿಯಂತ್ರಣ ಕೊಠಡಿ ಮೂಲಕ ತ್ಯಾಜ್ಯ ಸಂಗ್ರಹಿಸುವ ಆಟೋ ಟಿಪ್ಪರ್‌ಗಳ ಮೇಲ್ವಿಚಾರಣೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

ದೇವೇಗೌಡ ಮುಖ್ಯ ರಸ್ತೆಯಲ್ಲಿ ಬ್ಲಾಕ್ ಸ್ಪಾಟ್ (ಕಸ ಸುರಿಯುವ ಸ್ಥಳ) ಪರಿಶೀಲನೆ ನಡೆಸಿ, ದಿನನಿತ್ಯ ಕಸ ತೆಗೆಯುವುದರ ಬಗ್ಗೆ ಸ್ಥಳೀಯ ನಿವಾಸಿಗಳನ್ನು ವಿಚಾರಿಸಿದರು. ಜೊತೆಗೆ ಅಕ್ಕ-ಪಕ್ಕದ ನಿವಾಸಿಗಳು ಅಥವಾ ಕಚೇರಿಗಳಲ್ಲಿ ಅಳವಡಿಸಿರುವ ಸಿಸಿ ಟಿವಿಯ ದೃಶ್ಯಾವಳಿಗಳನ್ನು ಪಡೆದು ರಸ್ತೆಯಲ್ಲಿ ಕಸ ಹಾಕುವವರ ಮೇಲೆ ನಿಗಾವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಕೂಡಲೆ ಆಸ್ಪತ್ರೆ ಪ್ರಾರಂಭಿಸಲು ಆದೇಶ

ಮುನಿರೆಡ್ಡಿ ಪಾಳ್ಯದ ಹೆರಿಗೆ ಆಸ್ಪತ್ರೆಯನ್ನು ನೂತನವಾಗಿ ನವೀಕರಿಸಲಾಗಿದ್ದು, ಕಟ್ಟಡ ಕಾಮಗಾರಿ ಸಹ ಪೂರ್ಣಗೊಂಡಿರುತ್ತದೆ. ಆದರೆ, ಆಸ್ಪತ್ರೆಗೆ ಅಗತ್ಯವಿರುವ ಉಪಕರಣಗಳನ್ನು ಅಳವಡಿಸಬೇಕಿದೆ. ಈ ಪೈಕಿ ಅವುಗಳನ್ನು ಪರೀಕ್ಷಿಸಿ ಸೇವೆಗೆ ಸಿದ್ಧಪಡಿಸಿಕೊಳ್ಳುವಂತೆ ವೈದ್ಯರಿಗೆ ಸೂಚಿಸಿದರು. ಜತೆಗೆ ಕೂಡಲೇ ಹೊರ ರೋಗಿಗಳ ಸೇವೆ ಆರಂಭಿಸುವಂತೆ ವೈದ್ಯರಿಗೆ ಆದೇಶಿಸಿದರು.

ಗಂಗಾನಗರದಲ್ಲಿ ಹೆರಿಗೆ ಆಸ್ಪತ್ರೆಯ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿದ್ದು, ಇನ್ನು 45 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಸೂಚಿಸಿ, ಆರ್.ಟಿ.ನಗರ ಸಾಯಿಮಂದಿರದ ಬಳಿ ದ್ವಿತೀಯ ರಾಜಕಾಲುವೆಯನ್ನು ಪರಿಶೀಲಿಸಿ, ತಕ್ಷಣ ಹೂಳು ತೆಗೆದು ಮಳೆನೀರು ಸರಾಗವಾಗಿ ಹರಿದುಹೋಗುವ ವ್ಯವಸ್ಥೆ ಮಾಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. 

ಈ ಸುದ್ದಿ ಓದಿದ್ದೀರಾ?: ರಸ್ತೆಗುಂಡಿ ಕೂಡಲೇ ಮುಚ್ಚಿಸಿ: ಬಿಬಿಎಂಪಿ ಅಧಿಕಾರಿಗಳಿಗೆ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ

ಹೆಣ್ಣೂರು ರಸ್ತೆ ಅಭಿವೃದ್ಧಿ ಪರಿಶೀಲನೆ

ಸುಮಾರು 1.6 ಕಿ.ಮೀ ಉದ್ದದ ಹೆಣ್ಣೂರು ಮುಖ್ಯ ರಸ್ತೆಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಂಡಿದ್ದು, ಈಗಾಗಲೇ ರಸ್ತೆ ದುರಸ್ತಿ ಕಾರ್ಯ ಪೂರ್ಣಗೊಳ್ಳುವ ಹಂತಕ್ಕೆ ಬಂದಿದ್ದು, ಪಾದಚಾರಿ ಮಾರ್ಗ ದುರಸ್ತಿ ಕಾಮಗಾರಿ ಪ್ರಗತಿಯಲ್ಲಿದೆ. ಈ ಪೈಕಿ ಜುಲೈ ತಿಂಗಳೊಳಗೆ ಸಂಪೂರ್ಣ ಕಾಮಗಾರಿ ಪೂರ್ಣಗೊಳಿಸಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ನಿರ್ದೇಶಿಸಿದರು.

ಹೆಣ್ಣೂರು ಮುಖ್ಯ ರಸ್ತೆ ಬಳಿಯ ಹೆಬ್ಬಾಳ ಕಣಿವೆಯಲ್ಲಿ ಹೂಳೆತ್ತುವ ಕಾರ್ಯವನ್ನು ಪರಿಶೀಲನೆ ನಡೆಸಿ, ಕಾಲ-ಕಾಲಕ್ಕೆ ಹೂಳೆತ್ತುವ ಪ್ರಕ್ರಿಯೆ ಸಕ್ರಿಯವಾಗಿ ನಡೆಯಬೇಕು. ಕಣಿವೆ ಬಳಿ ರೈಲ್ವೆ ಸೇತುವೆ ಕಿರಿದಾಗಿದ್ದು, ಅದನ್ನು ಅಗಲ ಮಾಡಲು ರೈಲ್ವೆ ಇಲಾಖೆ ಜೊತೆ ಮಾತುಕತೆ ನಡೆಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಇದೇ ವೇಳೆ ಪಾಲಿಕೆಯ ಒಣ ತ್ಯಾಜ್ಯ ಸಂಗ್ರಹಣಾ ಘಟಕ ಪರಿಶೀಲನೆ ನಡೆಸಿದರು.

ಎಚ್.ಬಿ.ಆರ್ ಲೇಔಟ್ ಮೊದಲನೇ ಹಂತ, 8ನೇ ಮುಖ್ಯ ರಸ್ತೆಯಲ್ಲಿ ರಾಜಕಾಲುವೆಯ ದುರಸ್ತಿ ಕಾಮಗಾರಿ ನಡೆಯುತ್ತಿದ್ದು, ಮಳೆಗಾಲದಲ್ಲಿ ನೀರು ಹೊರಬಾರದಂತೆ ತಡೆಗೋಡೆ ಎತ್ತರಿಸಿ ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸುವಂತೆ ಸಲಹೆ ನೀಡಿದರು.

ಪರಿಶೀಲನೆ ವೇಳೆ ವಲಯ ಆಯುಕ್ತರಾದ ಪಿ.ಎನ್.ರವೀಂದ್ರ, ವಲಯ ಜಂಟಿ ಆಯುಕ್ತರಾದ ಶಿಲ್ಪಾ, ಮುಖ್ಯ ಇಂಜಿನಿಯರ್ ಗಳಾದ ಮೋಹನ್ ಕೃಷ್ಣಾ, ಸುಗುಣಾ, ಪ್ರಹ್ಲಾದ್, ಘನತ್ಯಾಜ್ಯ ವಿಭಾಗದ ಮುಖ್ಯ ಇಂಜಿನಿಯರ್, ಬಸವರಾಜ್ ಕಬಾಡೆ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ನಿಮಗೆ ಏನು ಅನ್ನಿಸ್ತು?
1 ವೋಟ್
Image
av 930X180