ಬಿಬಿಎಂಪಿ | ವಾರ್ಡ್‌ವಾರು ಮೀಸಲಾತಿಗೆ ತೀವ್ರ ಆಕ್ಷೇಪ; ನಗರಾಭಿವೃದ್ಧಿ ಇಲಾಖೆ ಕಚೇರಿಗೆ ಕಾಂಗ್ರೆಸ್ ಮುತ್ತಿಗೆ

Congress Protest
  • ವಾರ್ಡ್‌ಗಳ ಮೀಸಲಾತಿ ಪಟ್ಟಿಯು ಅವೈಜ್ಞಾನಿಕವಾಗಿದೆ
  • ಮೂರು ವರ್ಷ ಅನ್ಯಾಯದ ಆಡಳಿತಕ್ಕೆ ಸಾಕ್ಷಿ ರಸ್ತೆಗುಂಡಿಗಳು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ವಾರ್ಡ್‌ವಾರು ಮರು ವಿಂಗಡನೆ ಮತ್ತು ಮೀಸಲಾತಿಯ ಕುರಿತು ಪ್ರತಿಪಕ್ಷಗಳಿಂದ ಭಾರಿ ಆಕ್ಷೇಪ ವ್ಯಕ್ತವಾಗುತ್ತಿದ್ದು, ವಿಕಾಸಸೌಧದಲ್ಲಿರುವ ನಗರಾಭಿವೃದ್ಧಿ ಇಲಾಖೆ ಕಚೇರಿಗೆ ಶುಕ್ರವಾರ ಮುತ್ತಿಗೆ ಹಾಕಿ ಕಾಂಗ್ರೆಸ್ ಪ್ರತಿಭಟನೆ ನಡೆಸಿತು. 

ಬಿಬಿಎಂಪಿಯ 243 ವಾರ್ಡ್‌ಗಳಿಗೆ ಮೀಸಲಾತಿ ನಿಗದಿಪಡಿಸಿ, ರಾಜ್ಯ ಸರ್ಕಾರ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಕಾಂಗ್ರೆಸ್, ಜೆಡಿಎಸ್, ಅಷ್ಟೇ ಅಲ್ಲದೇ ಸ್ವತಃ ಬಿಜೆಪಿ ನಾಯಕರು ಕೂಡ ವಾರ್ಡ್‌ವಾರು ಮೀಸಲಾತಿ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ.

Image
Congress Pressmeet

ಬಿಬಿಎಂಪಿ ವಾರ್ಡ್ ಮರು ವಿಂಗಡಣೆ ಮತ್ತು ಮೀಸಲಾತಿ ಪ್ರಕಟ ಮಾಡುವ ಮೂಲಕ ಸರ್ಕಾರ ಕಾನೂನು ಮೀರಿ ನಡೆದುಕೊಂಡಿದೆ. ವಾರ್ಡ್‌ಗಳ ಮೀಸಲಾತಿ ಪಟ್ಟಿಯು ಅವೈಜ್ಞಾನಿಕವಾಗಿದೆ ಎಂದು ಆರೋಪಿಸಿದ ಕಾಂಗ್ರೆಸ್ ಮುಖಂಡರು, ನಗರಾಭಿವೃದ್ಧಿ ಇಲಾಖೆಯನ್ನು ಬಿಜೆಪಿ ಮತ್ತು ಆರ್‌ಎಸ್ಎಸ್ ಇಲಾಖೆ ಎಂದು ನಾಮಕರಣ ಮಾಡಿ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಳಿಕ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಶಾಸಕ ಕೃಷ್ಣ ಬೈರೇಗೌಡ, “ಬೆಂಗಳೂರಿನಲ್ಲಿ ಎಲ್ಲೇ ಕಣ್ಣು ಹಾಯಿಸಿದರು ರಸ್ತೆಗಳ ಗುಂಡಿ ಕಾಣುತ್ತವೆ. ಬೆಂಗಳೂರು ಈಗ ಕರ್ನಾಟಕದ ರಾಜಧಾನಿಯಲ್ಲ, ರಸ್ತೆ ಗುಂಡಿಗಳ ರಾಜಧಾನಿ" ಎಂದು ದೂರಿದರು.

ಈ ಸುದ್ದಿ ಓದಿದ್ದೀರಾ?: ಧಾರಾಕಾರ ಮಳೆ| ನಲುಗಿದ ರಾಜಧಾನಿಯ ನಾಗರಿಕರು

"ಮೂರು ವರ್ಷಗಳ ಕಾಲ ಅನ್ಯಾಯದಿಂದ ಆಡಳಿತ ಮಾಡಿದ್ದಾರೆ ಎಂಬುವುದಕ್ಕೆ ಸಾಕ್ಷಿಯು, ಇಂದು ರಸ್ತೆಗಳಲ್ಲಿ ಕಾಣುತ್ತಿದೆ. ರಸ್ತೆ ಸುಧಾರಣೆ ಮಾತ್ರವಲ್ಲ, ಬಿಜೆಪಿ ಸರ್ಕಾರವು ಯಾವುದೇ ಕ್ಷೇತ್ರದ ಅಭಿವೃದ್ಧಿಯಲ್ಲಿ ಪೂರ್ಣಕ್ರಮ ಕೈಗೊಂಡಿಲ್ಲ. ನೇರವಾಗಿ ಹೋರಾಟ ಮಾಡಿ ಚುನಾವಣೆಯಲ್ಲಿ ಜಯಗಳಿಸದೆ, ಅಡ್ಡಮಾರ್ಗ ಅನುಸರಿಸುತ್ತಿದ್ದಾರೆ. ಬಿಬಿಎಂಪಿ ಚುನಾವಣೆಯ ಮೀಸಲಾತಿ ಪಟ್ಟಿಯನ್ನು ವಾಪಸ್ ಪಡೆಯಬೇಕು. ಮೀಸಲಾತಿ ಹೆಸರಿನಲ್ಲಿ ರಾಜಕೀಯ ಮಾಡುವುದು ಬಿಡಿ” ಎಂದು ಆರೋಪಿಸಿದರು.

ಶಾಸಕ ರಾಮಲಿಂಗಾ ರೆಡ್ಡಿ ಮಾತನಾಡಿ, ನಗರಾಭಿವೃದ್ಧಿ ಇಲಾಖೆ ರಬ್ಬರ್ ಸ್ಟಾಂಪ್ ಆಗಿದೆ. ಅದು ಬಿಜೆಪಿ - ಆರ್‌ಎಸ್ಎಸ್ ಕಚೇರಿಯಂತೆ ನಡೆದುಕೊಳ್ಳುತ್ತಿದೆ. ನಿಯಮದಂತೆ ಎಸ್‌ಸಿ/ಎಸ್‌ಟಿ ಮೀಸಲಾತಿಯನ್ನು ಜನಸಂಖ್ಯೆಗೆ ಅನುಗುಣವಾಗಿ ಮಾಡಲಾಗಿಲ್ಲ. ಬಿಜೆಪಿ ಮಹಿಳಾ ಮೀಸಲಾತಿಗೆ ವಿರುದ್ಧವಿದ್ದು, ಬಿಬಿಎಂಪಿ ವಾರ್ಡ್ ಮೀಸಲಾತಿ‌ ಪಟ್ಟಿಯಲ್ಲಿ ಅದನ್ನು ವ್ಯಕ್ತಪಡಿಸಿದ್ದಾರೆ ಎಂದು ಹೇಳಿದರು.

ಶಾಸಕರಾದ ದಿನೇಶ್ ಗುಂಡೂರಾವ್, ಕೃಷ್ಣ ಬೈರೇಗೌಡ, ಜಮೀರ್ ಅಹ್ಮದ್ ಖಾನ್, ರಿಝ್ವಾನ್ ಅರ್ಷದ್, ರಾಮಲಿಂಗಾ ರೆಡ್ಡಿ, ಸಂಸದ ಡಿಕೆ ಸುರೇಶ್ ಹಾಗೂ ಬಿ ಕೆ ಹರಿಪ್ರಸದ್ ಮತ್ತಿತರು ಪ್ರತಿಭಟನೆಯಲ್ಲಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್