ಬಿಬಿಎಂಪಿ | ಸಂಚಾರ ದಟ್ಟಣೆ ನಿರ್ವಹಣೆಗೆ ಸಂಬಂಧಿಸಿದಂತೆ ನಾನಾ ಇಲಾಖೆಗಳ ಜೊತೆ ಸಮನ್ವಯ ಸಭೆ

  • ಸಂಚಾರಿ ಪೊಲೀಸ್ ಇಲಾಖೆ 4,545 ರಸ್ತೆ ಗುಂಡಿ ಗುರುತಿಸಿದೆ
  • ರಸ್ತೆ ಗುಂಡಿ ಮುಚ್ಚಲು ತ್ವರಿತ ಕ್ರಮ ಕೈಗೊಳ್ಳಿ: ರಾಕೇಶ್ ಸಿಂಗ್

ಬೆಂಗಳೂರಿನ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಸಂಚಾರಿ ಪೊಲೀಸ್ ವಿಭಾಗದಿಂದ ಗುರುತಿಸಿದ್ದ ರಸ್ತೆಗುಂಡಿಗಳ ಪೈಕಿ ಬಾಕಿ 1,051 ರಸ್ತೆ ಗುಂಡಿಗಳನ್ನು ಜಂಟಿ ಕಾರ್ಯಾಚರಣೆ ನಡೆಸಿ ತ್ವರಿತವಾಗಿ ಮುಚ್ಚಲು ಬಿಬಿಎಂಪಿ ಆಡಳಿತಗಾರ ರಾಕೇಶ್ ಸಿಂಗ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿ ಸಂಚಾರ ದಟ್ಟಣೆ ನಿರ್ವಹಣೆಗೆ ಸಂಬಂಧಿಸಿದಂತೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಜನೀಶ್ ಗೋಯೆಲ್ ರವರ ಅಧ್ಯಕ್ಷತೆಯಲ್ಲಿ ಗುರುವಾರ ನಾನಾ ಇಲಾಖೆಗಳ ಜೊತೆ ಸಮನ್ವಯ ಸಭೆ ನಡೆಯಿತು.

ಸಭೆಯಲ್ಲಿ ಮಾತನಾಡಿದ ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್ ಸಿಂಗ್, "ಬೆಂಗಳೂರಿನ ಪ್ರಮುಖ ರಸ್ತೆಗಳಾದ ಆರ್ಟಿರಿಯಲ್ ಹಾಗೂ ಸಬ್ ಆರ್ಟಿರಿಯಲ್ ರಸ್ತೆಗಳಲ್ಲಿ ಸಂಚಾರಿ ಪೊಲೀಸ್ ಇಲಾಖೆಯಿಂದ 4,545 ರಸ್ತೆ ಗುಂಡಿಗಳನ್ನು ಗುರುತಿಸಲಾಗಿದೆ. ಈ ಪೈಕಿ 1,051 ರಸ್ತೆ ಗುಂಡಿಗಳನ್ನು ಮುಚ್ಚುವುದು ಬಾಕಿಯಿದೆ. ಪಾಲಿಕೆ ಹಾಗೂ ಪೊಲೀಸ್ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿ ಪಾಲಿಕೆ ವತಿಯಿಂದ ಕೂಡಲೇ ರಸ್ತೆ ಗುಂಡಿಗಳನ್ನು ಮುಚ್ಚಬೇಕು" ಎಂದರು.

"ಮುಂದಿನ ಸಭೆಗೆ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ ಅಧಿಕಾರಿಗಳನ್ನು ಆಹ್ವಾನಿಸಲು ಹೇಳಿದರು. ನಗರದಲ್ಲಿ ಹೆಚ್ಚು ಸಂಚಾರ ದಟ್ಟಣೆಯಾಗುವ ಪ್ರಮುಖ 8 ಜಂಕ್ಷನ್ (1. ಸಿಲ್ಕ್ ಬೋರ್ಡ್ ಜಂಕ್ಷನ್, 2. ಜಯದೇವ ಜಂಕ್ಷನ್, 3. ಎಂ.ಎಂ.ಟೆಂಪಲ್ ಜಂಕ್ಷನ್ (ಟಿನ್ ಪ್ಯಾಕ್ಟರಿ), 4. ಹೆಬ್ಬಾಳ ಜಂಕ್ಷನ್, 5. ಗೊರಗುಂಟೆಪಾಳ್ಯ ಜಂಕ್ಷನ್, 6. ಸಾರಕ್ಕಿ ಜಂಕ್ಷನ್, 7. ಕೆ.ಎಸ್.ಲೇಔಟ್ ಜಂಕ್ಷನ್, 8. ಬನಶಂಕರಿ ಜಂಕ್ಷನ್) ಗಳಲ್ಲಿ ತೆಗದುಕೊಳ್ಳಬೇಕಿರುವ ಬಾಕಿ ಕ್ರಮಗಳನ್ನು ತ್ವರಿತವಾಗಿ ಪೂರ್ಣಗೊಳಿಸಬೇಕು" ಎಂದು ತಿಳಿಸಿದರು.

ಈ ವೇಳೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಮಾತನಾಡಿ, "ಬಿಬಿಎಂಪಿ ವ್ಯಾಪ್ತಿಯಲ್ಲಿ ಜಲಮಂಡಳಿ ಇಲಾಖೆಯಿಂದ ಕಾಮಗಾರಿ ನಡೆಸುವ ಸ್ಥಳದಲ್ಲಿ ಪೈಪ್‌ಗಳನ್ನು ರಸ್ತೆ ಬದಿ ಹಾಗೂ ಪಾದಚಾರಿ ಮಾರ್ಗಗಳಲ್ಲಿಯೇ ಹಾಕಿರುತ್ತಾರೆ. ಇದರಿಂದ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆ ಆಗುತ್ತಿದೆ. ರಸ್ತೆ ಮತ್ತು ಪಾದಚಾರಿ ಮಾರ್ಗಗಳಲ್ಲಿ ಪೈಪ್‌ಗಳನ್ನು ಹಾಕದಂತೆ ಕ್ರಮ ವಹಿಸಬೇಕು" ಎಂದರು.

"ಎಲ್ಲೆಲ್ಲಿ ಪೆಟ್ಟಿ ಶಾಪ್‌ಗಳು ಹಾಗೂ ಕಟ್ಟಡ ಭಗ್ನಾವಶೇಷಗಳಿವೆಯೋ, ಅವುಗಳನ್ನು ಕೂಡಲೆ ತೆರವುಗೊಳಿಸಬೇಕು" ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಮರದ ಕೊಂಬೆಗಳನ್ನು ಕಟಾವು ಮಾಡಿ

ರಸ್ತೆ ಬದಿ, ಜಂಕ್ಷನ್‌ಗಳಲ್ಲಿ ಮರಗಳ ಕೊಂಬೆಗಳು ರಸ್ತೆ ಭಾಗಕ್ಕೆ ಬಂದಿದ್ದು, ಅದರಿಂದ ವಾಹನ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಬೀದಿ ದೀಪಗಳಿಗೂ ಮರದ ಕೊಂಬೆಗಳು ಅಡ್ಡಿಯಾಗುತ್ತಿರುವುದರಿಂದ ಮರದ ಕೊಂಬೆಗಳನ್ನು ಕಟಾವು ಮಾಡಬೇಕು ಎಂದು ತುಷಾರ್ ಗಿರಿನಾಥ್ ಹೇಳಿದರು.

ಈ ಸುದ್ದಿ ಓದಿದ್ದೀರಾ? ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯಿಂದ ತಪ್ಪಿಸಲು ಇನ್ಮುಂದೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿ!

50 ಜಂಕ್ಷನ್‌ಗಳಲ್ಲಿ ಮಾರ್ಕಿಂಗ್

ಬೆಂಗಳೂರು ಸಂಚಾರ ಪೊಲೀಸ್ ಇಲಾಖೆಯು ನಗರದ ಪ್ರಮುಖ 50 ಜಂಕ್ಷನ್‌ಗಳಲ್ಲಿ ಪಾದಚಾರಿ ಕ್ರಾಸಿಂಗ್ ಮಾಡುವ ಹಾಗೂ ವಾಹನಗಳ ನಿಲುಗಡೆ ಲೈನ್ ಮಾರ್ಕಿಂಗ್ ಮಾಡಲು ನೀಡಿದ್ದ ಪಟ್ಟಿಯ ಅನುಸಾರ ಈಗಾಗಲೇ 35 ಜಂಕ್ಷನ್‌ಗಳಲ್ಲಿ ಮಾರ್ಕಿಂಗ್ ಪೂರ್ಣಗೊಳಿಸಿದ್ದು, 7 ಜಂಕ್ಷನ್‌ಗಳಲ್ಲಿ ಕೆಲಸ ಪ್ರಗತಿಯಲ್ಲಿದೆ. ಉಳಿದ 8 ಜಂಕ್ಷನ್‌ಗಳಲ್ಲಿ ಕೆಲಸ ಪ್ರಾರಂಭಿಸಬೇಕಿದೆ. ತ್ವರಿತವಾಗಿ ಮಾರ್ಕಿಂಗ್ ಕೆಲಸ ಪೂರ್ಣಗೊಳಿಸಬೇಕು ಎಂದು ಅವರು ತಿಳಿಸಿದರು.

ಈ ವೇಳೆ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್, ಸಂಚಾರಿ ಜಂಟಿ ಆಯುಕ್ತರಾದ ರವಿಕಾಂತೇ ಗೌಡ, ವಿಶೇಷ ಆಯುಕ್ತರು (ಯೋಜನೆ) ರವೀಂದ್ರ, ಬಿಡಿಎ, ಬಿಎಂಟಿಸಿ, ಸ್ಮಾರ್ಟ್ ಸಿಟಿ, ಪಾಲಿಕೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್