ಬಿಬಿಎಂಪಿ ಚುನಾವಣೆ| ವಾರ್ಡ್‌ವಾರು ಮೀಸಲಾತಿ ವಿರುದ್ಧ ಸಿಡಿದೆದ್ದ ವಿಪಕ್ಷಗಳು!

  • 243 ವಾರ್ಡ್‌ಗಳಿಗೆ ಮೀಸಲಾತಿ ಪ್ರಕಟ: ರಾಜ್ಯ ಸರ್ಕಾರ
  • 243 ಸ್ಥಾನಗಳಲ್ಲಿ ಹಿಂದುಳಿದ ವರ್ಗಕ್ಕೆ 81 ಸ್ಥಾನಗಳು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಚುನಾವಣೆಗೆ ಸಂಬಂಧಿಸಿದಂತೆ, ವಾರ್ಡ್‌ವಾರು ಮೀಸಲಾತಿ ಪ್ರಕಟಿಸಿ ಗುರುವಾರ ತಡರಾತ್ರಿ ಅಧಿಸೂಚನೆ ಹೊರಡಿಸಿದೆ.

ಬಿಬಿಎಂಪಿಯ 243 ವಾರ್ಡ್‌ಗಳಿಗೆ ಮೀಸಲಾತಿ ನಿಗದಿಪಡಿಸಿ, ರಾಜ್ಯ ಸರಕಾರ ಅಧಿಸೂಚನೆ ಹೊರಡಿಸಿದ ಬೆನ್ನಲ್ಲೇ ಕಾಂಗ್ರೆಸ್, ಜೆಡಿಎಸ್, ಅಷ್ಟೇ ಅಲ್ಲದೇ ಸ್ವಂತ ಪಕ್ಷವಾದ ಬಿಜೆಪಿ ನಾಯಕರು ಕೂಡ ವಾರ್ಡ್‌ವಾರು ಮೀಸಲಾತಿ ವಿರುದ್ಧ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ಕೆಲ ಆಕಾಂಕ್ಷಿಗಳು ಮೀಸಲಾತಿ ನಿಗದಿ ಪ್ರಶ್ನಿಸಿ ನ್ಯಾಯಾಲಯದ ಕದ ತಟ್ಟಲು ಸಿದ್ಧತೆ ನಡೆಸಿದ್ದಾರೆ!

ವಾರ್ಡ್‌ವಾರು ಮೀಸಲಾತಿ

ಬಿಬಿಎಂಪಿ ವ್ಯಾಪ್ತಿಯ 243 ಸ್ಥಾನಗಳಲ್ಲಿ 81 ಸ್ಥಾನಗಳನ್ನು ಹಿಂದುಳಿದ ವರ್ಗದ (ಒಬಿಸಿ) ಅಭ್ಯರ್ಥಿಗಳಿಗೆ, 28 ಪರಿಶಿಷ್ಟ ಜಾತಿ (ಎಸ್‌ಸಿ), 4 ಪರಿಶಿಷ್ಟ ಪಂಗಡ (ಎಸ್‌ಟಿ) ಹಾಗೂ 130 ಸ್ಥಾನಗಳನ್ನು ಸಾಮಾನ್ಯ ವರ್ಗದ ಅಭ್ಯರ್ಥಿಗಳಿಗೆ ಮೀಸಲಿಡಲಾಗಿದೆ.

ಒಟ್ಟಾರೆಯಾಗಿ 243 ಮೀಸಲು ಸ್ಥಾನಗಳಲ್ಲಿ ಅರ್ಧದಷ್ಟು ಸ್ಥಾನಗಳನ್ನು ಮಹಿಳೆಯರಿಗೆ ಮೀಸಲಿಡಲಾಗಿದೆ.

ಕಾಂಗ್ರೆಸ್ ನಾಯಕರ ಬಹುಪಾಲು ವಾರ್ಡ್‌ಗಳಿಗೆ ಮಹಿಳಾ ಮೀಸಲಾತಿ

ಪ್ರಮುಖ ಕಾಂಗ್ರೆಸ್ ನಾಯಕರ ವಾರ್ಡ್‌ಗಳಿಗೆ ಮಹಿಳಾ ಮೀಸಲಾತಿ ನೀಡಲಾಗಿದೆ.

ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕರಾಗಿದ್ದ ಎಂ. ಶಿವರಾಜ್ ಅವರ ಶಂಕರಮಠ ವಾರ್ಡ್‌ಗೆ ಈ ಹಿಂದೆ ಸಾಮಾನ್ಯ ವರ್ಗದ ಮೀಸಲಾತಿ ಇತ್ತು. ಈಗ ಪರಿಶಿಷ್ಟ ಜಾತಿ ಮೀಸಲಾತಿ ನೀಡಲಾಗಿದೆ.

ಅಬ್ದುಲ್ ವಾಜೀದ್ ಅವರ ಹೆಬ್ಬಾಳದ ಮನೋರಾಯನಪಾಳ್ಯ ವಾರ್ಡ್‌ನ  ಹಿಂದುಳಿದ ವರ್ಗ (ಎ) ಮಹಿಳೆಗೆ ಮೀಸಲಿರಿಸಲಾಗಿದೆ.

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಜಯಮಹಲ್ ವಾರ್ಡ್‌ನಿಂದ ಸ್ಪರ್ಧಿಸುತ್ತಿದ್ದ ಗುಣಶೇಖರ್ ಅವರ ವಾರ್ಡ್ ಸಾಮಾನ್ಯ ಮಹಿಳೆಗೆ ಮೀಸಲಾಗಿದೆ.

ರಾಜಾಜಿನಗರ ವಿಧಾನಸಭಾ ಕ್ಷೇತ್ರದ ಪ್ರಕಾಶ್ ನಗರ ವಾರ್ಡ್‌ನಿಂದ ಸ್ಪರ್ಧಿಸುತ್ತಿದ್ದ ಮಾಜಿ ಮೇಯರ್ ಪದ್ಮಾವತಿ ವಾರ್ಡ್‌ ಮೀಸಲಾತಿಯನ್ನು ಹಿಂದುಳಿದ ವರ್ಗಕ್ಕೆ (ಎ) ಬದಲಿಸಲಾಗಿದೆ.

ಹೀಗೆ, ಕಾಂಗ್ರೆಸ್ ಅಭ್ಯರ್ಥಿಗಳು ಗೆಲ್ಲಬಹುದಾದ ಕ್ಷೇತ್ರಗಳಲ್ಲಿ ಬಹುಪಾಲು ಮೀಸಲಾತಿಯನ್ನು ಬದಲಾಯಿಸಲಾಗಿದೆ. ಹಾಗೂ ಅವೈಜ್ಞಾನಿಕವಾಗಿ ವಾರ್ಡ್‌ವಾರು ಮೀಸಲಾತಿ ಮಾಡಿದ್ದಾರೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಈ ದಿನ.ಕಾಮ್ ಜತೆಗೆ ಮಾತನಾಡಿದ ಕಾಂಗ್ರೆಸ್ ನಾಯಕಿ, ಮಾಜಿ ಮಹಾಪೌರರಾದ ಜಿ. ಪದ್ಮಾವತಿ, ”ಮೊದಲನೆಯದಾಗಿ, ಬಿಜೆಪಿ ಸರ್ಕಾರಕ್ಕೆ ಚುನಾವಣೆ ನಡೆಸುವುದು ಇಷ್ಟವಿಲ್ಲ. ಈ ಹಿಂದೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿನಿಂದಲೂ ಕೂಡಾ ಚುನಾವಣೆ ನಡೆಸಿರಲಿಲ್ಲ. ಕಾಂಗ್ರೆಸ್ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಚುನಾವಣೆ ನಡೆಸುವಂತೆ ಮನವಿ ಮಾಡಿತ್ತು” ಎಂದು ತಿಳಿಸಿದರು.

“ರಾಜಕೀಯ ದುರುದ್ದೇಶ, ಕುತಂತ್ರ ರಾಜಕಾರಣದಿಂದ ಕಾಂಗ್ರೆಸ್ ಯುವ ನಾಯಕರನ್ನು ಹೇಗೆ ಮಟ್ಟ ಹಾಕಲು ಸತತವಾಗಿ ನಾಲ್ಕು ಐದು ಬಾರಿ ಗೆದ್ದವರ ರಾಜಕೀಯ ಜೀವನ ಕೊನೆ ಹಾಡಲು ಈ ರೀತಿಯ ಉಪಾಯ ಮಾಡಿ ಮೀಸಲಾತಿ ಪ್ರಕಟ ಮಾಡಿದ್ದಾರೆ" ಎಂದರು.

"ಎಸ್ ಸಿ ಮತ್ತು ಎಸ್ ಟಿ ಮೀಸಲಾತಿಯಲ್ಲಿ ಅನ್ಯಾಯ ಮಾಡಿದ್ದಾರೆ. ಸರಿಯಾದ ಸಾಮಾಜಿಕ ನ್ಯಾಯ ಒದಗಿಸದೇ ದ್ರೋಹವೆಸಗಿದ್ದಾರೆ. ತಮಗಾಗದವರು ಯಾವ ವಾರ್ಡ್‌ನಲ್ಲಿ ಈ ಹಿಂದಿನಿಂದಲೂ ಗೆಲ್ಲುತ್ತಾ ಬರುತ್ತಿದ್ದಾರೋ, ಅಂಥ ವಾರ್ಡ್‌ಗಳ ವಿರುದ್ಧ ತಂತ್ರಗಾರಿಕೆ ರೂಪಿಸಿ ಈ ರೀತಿಯ ಮೀಸಲಾತಿಯನ್ನು ನೀಡಿದ್ದಾರೆ. ಸಾಮಾಜಿಕ ಕಾಳಜಿಯನ್ನು ಇಟ್ಟುಕೊಂಡಂತಹ ಎಲ್ಲರಿಗೂ ಇದು ದೊಡ್ಡ ಹೊಡೆತ. ಇದು ಸಂಪೂರ್ಣವಾಗಿ ಅವೈಜ್ಞಾನಿಕವಾಗಿದೆ” ಎಂದು ಅಭಿಪ್ರಾಯಪಟ್ಟರು.

ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ ಚುನಾವಣೆ | ವಾರ್ಡ್‌ವಾರು ಮೀಸಲಾತಿ ಪ್ರಕಟ

ಪಾಲಿಕೆಯ ಆಡಳಿತ ಪಕ್ಷದ ಮಾಜಿ ನಾಯಕರಾದ ಕಾಂಗ್ರೆಸ್‌ನ ಎಂ. ಶಿವರಾಜು ಈ ದಿನ.ಕಾಮ್‌ನೊಂದಿಗೆ ಮಾತನಾಡಿ, ”ಮೀಸಲಾತಿಯನ್ನು ಅವೈಜ್ಞಾನಿಕವಾಗಿ ಮಾಡಿದ್ದಾರೆ. 2011ರ ಜನಗಣತಿ ಆಧಾರದ ಮೇಲೆ ವಾರ್ಡ್‌ವಾರು ಮೀಸಲಾತಿ ನೀಡಿದ್ದಾರೆ. ಬಿಜೆಪಿ ಪಕ್ಷದವರಿಗೆ ಅನುಕೂಲವಾಗುವ ಕಡೆಗಳಲ್ಲಿ ಮಹಿಳಾ ಮೀಸಲಾತಿ ಹಾಕಿದ್ದಾರೆ. ಕಾಂಗ್ರೆಸ್ ಪಕ್ಷದ ನಾಯಕರ ಜತೆಗೆ ಮಾತನಾಡಿ ಆಕ್ಷೇಪಣೆ ಅರ್ಜಿ ಸಲ್ಲಿಸುವ ಕುರಿತು ಚರ್ಚಿಸಲಾಗುವುದು" ಎಂದು ಹೇಳಿದರು.

ಆಕ್ಷೇಪಣೆ ಸಲ್ಲಿಸಲು ಏಳು ದಿನ ಕಾಲಾವಕಾಶ

ನಗರದ ಹಲವು ವಾರ್ಡ್‌ಗಳಲ್ಲಿ ಮೀಸಲಾತಿ ಬದಲಾವಣೆಯಾಗಿದ್ದು, ಇದಕ್ಕೆ ಹಲವರು ಆಕ್ಷೇಪ ವ್ಯಕ್ತಪಡಿಸುತ್ತಿದ್ದಾರೆ.

ಸಾರ್ವಜನಿಕರು ಆಕ್ಷೇಪಣೆ ಸಲ್ಲಿಸಲು ಅಧಿಸೂಚನೆಯನ್ನು ಪ್ರಕಟಿಸಿದ ದಿನದಿಂದ ಏಳು ದಿನಗಳ ಕಾಲಾವಕಾಶ ನೀಡಲಾಗಿದ್ದು, ತಮ್ಮ ಆಕ್ಷೇಪಣೆಗಳನ್ನು ಕಾರಣಸಹಿತ ಲಿಖಿತವಾಗಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಬಹುದು. ಅವಧಿ ಮುಗಿದ ನಂತರ ಸಲ್ಲಿಸಿದ ಆಕ್ಷೇಪಣೆಗಳನ್ನು ಪರಿಣಿಸುವುದಿಲ್ಲ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

ನಗರಾಭಿವೃದ್ಧಿ ಇಲಾಖೆ, ಕೊಠಡಿ ಸಂಖ್ಯೆ: 436, 4ನೇ ಮಹಡಿ, ವಿಕಾಸ ಸೌಧ, ಬೆಂಗಳೂರು-560 001, ಈ ವಿಳಾಸಕ್ಕೆ ಆಕ್ಷೇಪಣೆಗಳನ್ನು ಸಲ್ಲಿಸಬಹುದಾಗಿದೆ.

ನಿಮಗೆ ಏನು ಅನ್ನಿಸ್ತು?
2 ವೋಟ್