ಬಿಬಿಎಂಪಿ ಕಸದ ಲಾರಿಗೆ ತಿಂಗಳಲ್ಲಿ ಮೂರು ಬಲಿ; ಅಧಿಕಾರಿಗಳು ಹೇಳುವುದೇನು?

ಕಸದ ಲಾರಿಗಳು ಜನರ ಜೀವ ಬಲಿ ತೆಗೆದುಕೊಳ್ಳಲು ಅಸಲಿ ಕಾರಣಗಳೇನು? ಲಾರಿ ಚಾಲಕರ ಹೊಣೆಗೇಡಿತನವೇ? ಅಥವಾ ಲಾರಿಗಳು ದೋಷಪೂರಿತವೇ? ಎಂಬ ಕುತೂಹಲದೊಂದಿಗೆ ಈ ದಿನ.ಕಾಮ್ ‌ಬಿಬಿಎಂಪಿ ಅಧಿಕಾರಿಗಳು ಮತ್ತು ಲಾರಿ ಚಾಲಕರನ್ನು ಮಾತನಾಡಿಸಿ ವಾಸ್ತವಾಂಶಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡಿದೆ.

ಕಳೆದ ಒಂದು ತಿಂಗಳ ಅವಧಿಯಲ್ಲಿ ಬಿಬಿಎಂಪಿ ಕಸ ಸಾಗಣೆ ಲಾರಿಗಳಿಗೆ ಬೆಂಗಳೂರಿನ ಮೂವರು ಬಲಿಯಾಗಿದ್ದಾರೆ. ಹಾಗಾಗಿ, ಸದ್ಯ ಬಿಬಿಎಂಪಿ ಕಸದ ಲಾರಿಗಳನ್ನು ಕಂಡರೆ ಜನರು ಎದೆ ಬಡಿದುಕೊಳ್ಳುವಂತಾಗಿದೆ.

ತಿಂಗಳ ಹಿಂದೆ ಮಾರ್ಚ್‌ 21ರಂದು ಹೆಬ್ಬಾಳ ಬಸ್‌ ನಿಲ್ದಾಣದ ಎದುರು ನಡೆದ ಕಸದ ಲಾರಿ ಅಪಘಾತದಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಅಕ್ಷಯಾ ಎಂಬಾಕೆ ಮೃತಪಟ್ಟು, ಆಕೆಯ ಸಹಪಾಠಿಗಳಾದ ಸೌಮ್ಯ, ಸಂಧ್ಯಾ, ಹಾಗೂ ವಿಕಾಸ್ ಎಂಬವರು ಗಾಯಗೊಂಡಿದ್ದರು. ಈ ಘಟನೆಗೆ  ಸಂಬಂಧಿಸಿದಂತೆ ಪೂರ್ವ ಸಂಚಾರ ವಿಭಾಗದ ಅಧಿಕಾರಿಯನ್ನು ಈ ದಿನ.ಕಾಮ್ ಸಂಪರ್ಕಿಸಿದಾಗ, 'ಲಾರಿ ಚಾಲಕನನ್ನು ಬಂಧಿಸಲಾಗಿದೆ. ಅಪಘಾತದ ವೇಳೆ ಆತ ಮದ್ಯಪಾನ ಮಾಡಿರುವುದು ಕಂಡುಬಂದಿಲ್ಲ. ಆತನ ವಿರುದ್ಧ ಅಜಾಗರೂಕತೆಯಿಂದ ಕೂಡಿದ ಚಾಲನೆ ಪ್ರಕರಣ ದಾಖಲಿಸಿದ್ದೇವೆ' ಎಂದು ತಿಳಿಸಿದ್ದಾರೆ.

ಅದಾದ ಬಳಿಕ ಮಾ. 31ರಂದು ಬಾಗಲೂರು ಬಳಿ ಬಿಬಿಎಂಪಿ ಕಸದ ಲಾರಿ ಡಿಕ್ಕಿ ಹೊಡೆದು ದ್ವಿಚಕ್ರ ವಾಹನ ಸವಾರ, 76 ವರ್ಷದ ರಾಮಯ್ಯ ಮೃತಪಟ್ಟಿದ್ದರು. ಲಾರಿ ಚಾಲಕ ಅಂಜನಪ್ಪ ಅವರನ್ನು ಚಿಕ್ಕಜಾಲ ಸಂಚಾರ ಪೊಲೀಸರು ಬಂಧಿಸಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ಚಿಕ್ಕಜಾಲ ಸಂಚಾರ ಪೊಲೀಸ್ ಠಾಣಾಧಿಕಾರಿಯನ್ನು ಈ ದಿನ.ಕಾಮ್ ಸಂಪರ್ಕಿಸಿದಾಗ, " ಕಸ ಸಾಗಣೆ ಲಾರಿ ಚಾಲಕ ಅಂಜನಪ್ಪ ಅವರನ್ನು ಬಂಧಿಸಿ, ಪ್ರಕರಣ ದಾಖಲಿಸಿದ್ದೇವೆ. ಘಟನೆಯ ಸಂದರ್ಭ ಚಾಲಕ ಮದ್ಯಪಾನ ಮಾಡಿರುವುದು ವರದಿಯಾಗಿಲ್ಲ' ಎಂದಿದ್ದಾರೆ. 

ಈ ದುರಂತ ನಡೆದ ಎರಡು ವಾರದಲ್ಲೇ, ಏ.18ರಂದು ನಾಯಂಡಹಳ್ಳಿ ಬಳಿ ಬಿಬಿಎಂಪಿ ಕಸದ ಲಾರಿ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು, ಬ್ಯಾಂಕ್ ಉದ್ಯೋಗಿ 40 ವರ್ಷದ ಮಹಿಳೆ ಪದ್ಮಿನಿ ಎಂಬುವರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದರು. ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದ. ನಂತರ ಪೊಲೀಸರು ಆತನನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. 

Image

ಹೀಗೆ ಮಾರ್ಚ್ 21ರಿಂದ ಏಪ್ರಿಲ್ 18ರ ನಡುವೆ ಕೇವಲ ಒಂದು ತಿಂಗಳ ಅವಧಿಯಲ್ಲಿ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಮೂವರು ಅಮಾಯಕರು ಬಿಬಿಎಂಪಿ ಕಸದ ಲಾರಿಯ ಚಕ್ರದಡಿ ಜೀವ ಕಳೆದುಕೊಂಡಿದ್ದಾರೆ.

ಅಷ್ಟಕ್ಕೂ ಹೀಗೆ ಕಸದ ಲಾರಿಗಳು ಜನರ ಜೀವ ಬಲಿ ತೆಗೆದುಕೊಳ್ಳಲು ಅಸಲಿ ಕಾರಣಗಳೇನು? ಲಾರಿ ಚಾಲಕರ ಹೊಣೆಗೇಡಿತನವೇ? ಅಥವಾ ಲಾರಿಗಳು ದೋಷಪೂರಿತವೇ? ಎಂಬ ಕುತೂಹಲದೊಂದಿಗೆ ಈ ದಿನ.ಕಾಮ್ ‌ಬಿಬಿಎಂಪಿ ಅಧಿಕಾರಿಗಳು ಮತ್ತು ಲಾರಿ ಚಾಲಕರನ್ನು ಮಾತನಾಡಿಸಿ ವಾಸ್ತವಾಂಶಗಳನ್ನು ಜನರ ಮುಂದಿಡುವ ಪ್ರಯತ್ನ ಮಾಡಿದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಕಸ ಸಾಗಣೆ ಲಾರಿ ಚಾಲಕರ ನಿರ್ಲಕ್ಷ್ಯದ ಚಾಲನೆಯಿಂದ ಪದೇಪದೆ ಅಪಘಾತ ಸಂಭವಿಸುತ್ತಿವೆ ಎಂಬುದು ಸಾರ್ವಜನಿಕರ ವಾದ. ಈ ಬಗ್ಗೆ ಹಲವರು ಈಗಾಗಲೇ ಬಿಬಿಎಂಪಿ ಅಧಿಕಾರಿಗಳು ಮತ್ತು ಪೊಲೀಸರಿಗೂ ದೂರು ನೀಡಿದ್ದಾರೆ.

ಇದನ್ನು ಓದಿದ್ದೀರಾ ? ಬೆಂಗಳೂರಲ್ಲಿ ಹೆಚ್ಚುತ್ತಿದೆ ಡೆಂಗ್ಯೂ ಭೀತಿ| ಬಿಬಿಎಂಪಿ ಸಿದ್ಧತೆ ಏನಿದೆ?

ಜನರ ಆಕ್ರೋಶ ಅರ್ಥವಾಗುತ್ತದೆ: ವಿಶೇಷ ಆಯುಕ್ತ ಹರೀಶ್‌ ಕುಮಾರ್

ಸಾರ್ವಜನಿಕರ ಆಕ್ರೋಶದ ಕುರಿತು ಬಿಬಿಎಂಪಿ ವಿಶೇಷ ಆಯುಕ್ತ ಹರೀಶ್ ಕುಮಾರ್ ಅವರನ್ನು ಪ್ರಶ್ನಿಸಿದಾಗ, "ನಾವು ಈ ಮೂರೂ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಸಾರ್ವಜನಿಕರ ಆಕ್ರೋಶವೂ ನಮಗೆ ಅರ್ಥವಾಗುತ್ತದೆ. ಈ ಹಿನ್ನೆಲೆಯಲ್ಲಿಯೇ ಈಗ ವಾರದಲ್ಲಿ ಎರಡು-ಮೂರು ದಿವಸಗಳಿಗೊಮ್ಮೆ ಚಾಲಕರ ಪರವಾನಗಿ ಪರಿಶೀಲಿಸುತ್ತಿದ್ದೇವೆ. ಸದ್ಯ ಯಲಹಂಕದಲ್ಲಿ ಎಲ್ಲ ಚಾಲಕರ ಡ್ರೈವಿಂಗ್ ಲೈಸೆನ್ಸ್ ಫಿಟ್‌ನೆಸ್‌ ಪರೀಕ್ಷೆಯನ್ನು ಜಂಟಿ ಆಯುಕ್ತರೊಂದಿಗೆ ಸೇರಿ ನಡೆಸುತ್ತಿದ್ದೇವೆ. ಪ್ರತಿ ದಿನ 50 ಮಂದಿಯಂತೆ ಇದರಲ್ಲಿ ಭಾಗವಹಿಸುತ್ತಿದ್ದಾರೆ" ಎಂದರು.

ಅಲ್ಲದೇ, "ಪೊಲೀಸರು ಲಾರಿ ಚಾಲಕರ ಕುರಿತು ತಪಾಸಣೆ ನಡೆಸಲು ನಮಗೆ ಪತ್ರ ಬರೆದಿದ್ದರು. ನಾವು ಎಲ್ಲ ವಾಹನಗಳ ದಾಖಲೆ ಪತ್ರ ಪರಿಶೀಲಿಸಿದ್ದು, ಮುಂದಿನ ದಿನಗಳಲ್ಲಿ ಲೈಸೆನ್ಸ್ ಮತ್ತು ಸರಿಯಾದ ದಾಖಲೆ ಪತ್ರ ಹೊಂದಿರುವವರಿಗೆ ಮಾತ್ರ ವಾಹನ ರಸ್ತೆಗೆ ಇಳಿಸಲು ಬಿಡುತ್ತೇವೆ. ಚಾಲಕರ ದೈಹಿಕ ಪರೀಕ್ಷೆ ಕೂಡ ಮಾಡುತ್ತಿದ್ದೇವೆ. ಟ್ರಾಫಿಕ್ ಪೊಲೀಸರು ಎಲ್ಲ ಬಿಬಿಎಂಪಿ ಕಸ ಸಾಗಣೆ ವಾಹನಗಳನ್ನು ಪರಿಶೀಲಿಸುತ್ತಿದ್ದು, ದಂಡ ಹಾಕುತ್ತಿದ್ದಾರೆ" ಎಂದು ಬಿಬಿಎಂಪಿ ತೆಗೆದುಕೊಂಡಿರುವ ಕ್ರಮಗಳನ್ನು ವಿವರಿಸಿದರು.

ಇದನ್ನು ಓದಿದ್ದೀರಾ ? ಸಂಪಿಗೆ ರಸ್ತೆ ವೈಟ್ ಟಾಪಿಂಗ್| ತಿಂಗಳು ಕಳೆದರೂ ಮುಗಿಯದ ಗೋಳು, ವ್ಯಾಪಾರಿ-ಗ್ರಾಹಕರಿಗೆ ಸಂಕಷ್ಟ

ಹಳೆಯ ಗಾಡಿಗಳಿಗೆ ಇನ್ನು ಬಿಬಿಎಂಪಿ ಗುತ್ತಿಗೆ ನೀಡಲ್ಲ

ಬಿಬಿಎಂಪಿ ಕಸ ಸಾಗಣೆಯ ಗುತ್ತಿಗೆ ವಿಚಾರವಾಗಿ ಮಾತನಾಡಿದ ಅವರು, "ಕಸ ಸಾಗಣೆ ಮಾಡುವ ಲಾರಿ ಚಾಲಕರಿಗೂ ಬಿಬಿಎಂಪಿಗೂ ನೇರ ಸಂಪರ್ಕ ಇರುವುದಿಲ್ಲ. ಬಿಬಿಎಂಪಿ ಐದು ವರ್ಷಗಳಿಗೊಮ್ಮೆ ಕಸ ಸಾಗಣೆಯ ಗುತ್ತಿಗೆ ನೀಡುತ್ತದೆ. ಹಾಗೆ ಗುತ್ತಿಗೆ ಪಡೆದ ಲಾರಿ, ಟೆಂಪೋಗಳಲ್ಲಿ ವೇಗ ನಿಯಂತ್ರಕ ಇರುವುದಿಲ್ಲ. ಆದರೆ, ಮುಂದಿನ ದಿನಗಳಲ್ಲಿ ನಾವು ಸುಸ್ಥಿತಿಯಲ್ಲಿರುವ ಹೊಸ ವಾಹನಗಳನ್ನು ಹೊಂದಿರುವರರಿಗೆ ಮಾತ್ರ ಗುತ್ತಿಗೆ ನೀಡಲಿದ್ದೇವೆ. ಜೊತೆಗೆ ಆ ವಾಹನಗಳಲ್ಲಿ ವೇಗ ನಿಯಂತ್ರಕ ಕಡ್ಡಾಯವಾಗಿ ಅಡಕವಾಗಿರುವಂತೆ ನಿಯಮ ರೂಪಿಸಲಿದ್ದೇವೆ" ಎಂದರು.

Image

ತಪಾಸಣೆ ವೇಳೆ ಸಿಕ್ಕಿಬಿದ್ದ 400ಕ್ಕೂ ಹೆಚ್ಚು ಗಾಡಿ

ಸರಣಿ ಅಪಘಾತ ಹಿನ್ನೆಲೆಯಲ್ಲಿ ಸಂಚಾರ ಪೊಲೀಸರು ಬುಧವಾರ ನಗರ ವ್ಯಾಪ್ತಿಯಲ್ಲಿ ಕಸ ಸಾಗಣೆ ವಾಹನಗಳನ್ನು ವಿಶೇಷ ಕಾರ್ಯಾಚರಣೆ ನಡೆಸಿ, ತಪಾಸಣೆ ನಡೆಸಿದರು. ವಾಹನದ ದಾಖಲೆಗಳನ್ನು ಪರಿಶೀಲಿಸಿದ್ದಾರೆ. ಅಲ್ಲದೇ, ಮದ್ಯ ಸೇವಿಸಿ ವಾಹನ ಚಾಲನೆ ಮಾಡುವವರನ್ನು ಅನುಮಾನದ ಮೇರೆಗೆ ಆಲ್ಕೋ ಮೀಟರ್ ಬಳಸಿ ತಪಾಸಣೆ ಮಾಡಿದರು. ಈ ಸಂದರ್ಭದಲ್ಲಿ ಒಬ್ಬ ಚಾಲಕ ಕುಡಿದು ವಾಹನ ಚಲಾಯಿಸುತ್ತಿದ್ದುದು ಕಂಡುಬಂದಿದೆ. ಆತನ ವಿರುದ್ಧ ಪ್ರಕರಣ ದಾಖಲಾಗಿದೆ. ಅಂದು ಒಂದೇ ದಿನ ಟಿಪ್ಪರ್, ಲಾರಿ, ಕಂಟೇನರ್ ಸೇರಿದಂತೆ 823 ವಾಹನಗಳನ್ನು ತಪಾಸಣೆ ನಡೆಸಲಾಗಿದೆ.

ಇನ್ನು, ಸಿಗ್ನಲ್ ಜಂಪ್, ಸಮವಸ್ತ್ರ ಪಾಲನೆ ಇಲ್ಲದಿರುವುದು, ದೋಷಪೂರಿತ ನೋಂದಣಿ ಸಂಖ್ಯೆ ಅಳವಡಿಕೆ, ಚಾಲನೆ ವೇಳೆ ಮೊಬೈಲ್ ಬಳಕೆ, ಸಂಚಾರ ಪಥ ಶಿಸ್ತು ಉಲ್ಲಂಘನೆ, ಅಜಾಗರೂಕತೆಯ ಚಾಲನೆ ಸೇರಿದಂತೆ ವಿವಿಧ ನಿಯಮ ಪಾಲನೆ ಉಲ್ಲಂಘಿಸಿದ 463 ವಾಹನ ಚಾಲಕರಿಗೆ ದಂಡ ವಿಧಿಸಲಾಗಿದೆ. ಒಟ್ಟು ₹ 1.25 ಲಕ್ಷ ದಂಡ ಸಂಗ್ರಹಿಸಿದ್ದು, ನಿಯಮ ಉಲ್ಲಂಘನೆ ಮಾಡಿದಂತಹ ಚಾಲಕರಿಗೆ ಎಚ್ಚರಿಕೆ ನೀಡಿದ್ದಾರೆ.

Image

ಮೊಬೈಲ್ ಬಳಸುತ್ತಾ ವಾಹನ ಚಾಲನೆ

ಕಸ ಸಾಗಣೆ ಲಾರಿ ಚಲಾಯಿಸುತ್ತಿದ್ದ ಚಾಲಕರನ್ನು ಪರಿಶೀಲಿಸಿದಾಗ ಮೊಬೈಲ್‌ನಲ್ಲಿ ಮಾತನಾಡುತ್ತಾ ನಿರ್ಲಕ್ಷ್ಯದಿಂದ ಚಾಲನೆ ಮಾಡುವುದು ಪೊಲೀಸರ ಗಮನಕ್ಕೆ ಬಂದಿದೆ. ತಪಾಸಣೆ ವೇಳೆ ಒಂದೇ ದಿನದಲ್ಲಿ ಸುಮಾರು 20ಕ್ಕೂ ಹೆಚ್ಚು ಚಾಲಕರು ಮೊಬೈಲ್‌ನಲ್ಲಿ ಮಾತನಾಡುತ್ತಾ ಚಾಲನೆ ಮಾಡಿರುವುದು ಪತ್ತೆಯಾಗಿದೆ. ಅವರಿಂದ ದಂಡ ವಸೂಲು ಮಾಡಿ, ಎಚ್ಚರಿಕೆ ನೀಡಿದ್ದಾರೆ. ಅಲ್ಲದೇ, ಇಂತಹ ಪ್ರಕರಣ ಮರುಕಳಿಸಿದರೆ ಚಾಲನಾ ಪರವಾನಗಿ ರದ್ದು ಮಾಡುತ್ತೇವೆ ಎಂದು ಹೇಳಿದ್ದಾರೆ.

ಇದನ್ನು ಓದಿದ್ದೀರಾ ? ತಿರುಪತಿ : ಮಗನ ಶವವನ್ನು ಅಪ್ಪಿ ಹಿಡಿದು 90 ಕಿ ಮೀ ಬೈಕ್‌ನಲ್ಲೇ ಸಾಗಿದ ತಂದೆ!

ನಾವು ಮದ್ಯಪಾನ ಮಾಡಿ ಚಲಾಯಿಸುವುದಿಲ್ಲ

ಕಸದ ಲಾರಿಗಳಿಗೆ ಜನ ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಮುಖವಾಗಿ ಕೇಳಿ ಬರುತ್ತಿರುವ ದೂರು, ಕಸದ ವಾಹನಗಳ ಚಾಲಕರು ಮದ್ಯಪಾನ ಮಾಡಿರುತ್ತಾರೆ. ಹಾಗಾಗಿಯೇ ಹೆಚ್ಚಿನ ಸಂದರ್ಭಗಳಲ್ಲಿ ಅವಘಡಗಳು ಸಂಭವಿಸುತ್ತಿವೆ ಎಂಬುದು.

ಈ ಬಗ್ಗೆ ಕಸ ಸಾಗಣೆ ಲಾರಿ ಚಾಲಕ ರಾಜಣ್ಣ ಅವರನ್ನು ಈ ದಿನ. ಕಾಮ್ ಮಾತನಾಡಿಸಿದಾಗ, "ನಾನು ಕಳೆದ 8 ವರ್ಷಗಳಿಂದ ಬಿಬಿಎಂಪಿ ಕಸ ಸಾಗಣೆ ಮಾಡುವ ಟೆಂಪೋ ಚಲಾಯಿಸುತ್ತಿದ್ದೇನೆ. ಕಸದ ವಾಸನೆ ತಪ್ಪಿಸಿಕೊಳ್ಳಲು ಮಾಸ್ಕ್ ಧರಿಸಿರುತ್ತೇವೆ. ನಾವು ಎಲ್ಲ ತ್ಯಾಜ್ಯ ವಸ್ತುಗಳನ್ನು ವಿಂಗಡಣೆ ಮಾಡುತ್ತೇವೆ. ಹಾಗಾಗಿ ಕಸ ತುಂಬಾ ಕೆಟ್ಟ ವಾಸನೆ ಬರುವುದಿಲ್ಲ. ಪ್ರತಿ ದಿನ ಬೆಳಿಗ್ಗೆ 6ರಿಂದ ಮಧ್ಯಾಹ್ನ 2.30 ವರೆಗೆ ಕೆಲಸ ಮಾಡುತ್ತೇವೆ. ನಾವು ಸಂಗ್ರಹಿಸಿದ ತ್ಯಾಜ್ಯವನ್ನು ಆಯಾ ದಿನವೇ ತ್ಯಾಜ್ಯ ಶೇಖರಣಾ ಸ್ಥಳಕ್ಕೆ ತಲುಪಿಸುತ್ತೇವೆ. ಒಂದು ವೇಳೆ ಆ ದಿನ ಅದನ್ನು ಖಾಲಿ ಮಾಡದಿದ್ದರೆ ವಾಸನೆ ಬರುತ್ತದೆ. ಹಾಗಾಗಿ ಕಸದ ವಾಸನೆ ತಡೆಯದೆ ಕುಡಿದು ವಾಹನ ಚಲಾಯಿಸುತ್ತಾರೆ ಎಂಬುದು ಸುಳ್ಳು. ಯಾರೋ ಒಂದಿಬ್ಬರು ಹಾಗೆ ಮಾಡಬಹುದು. ಆದರೆ, ಅದಕ್ಕಾಗಿ ಎಲ್ಲರನ್ನೂ ದೂಷಿಸುವುದು ಸರಿಯಲ್ಲ" ಎಂದರು.

ಕಸದ ವಾಹನಗಳಿಂದ ಉಂಟಾಗುತ್ತಿರುವ ಅವಘಡಕ್ಕೆ ಬ್ರೇಕ್‌ ಹಾಕಲು ಬಿಬಿಎಂಪಿ ಮತ್ತು ಪೊಲೀಸರು ಒಂದು ಕಡೆ ಭರ್ಜರಿ ಕಾರ್ಯಾಚರಣೆ ಆರಂಭಿಸಿದ್ದಾರೆ. ಮತ್ತೊಂದು ಕಡೆ ವಾಹನ ಚಾಲಕರು ಕೂಡ ತಾವು ಅಜಾಗರೂಕತೆಯಿಂದ ಚಾಲನೆ ಮಾಡುವುದಿಲ್ಲ ಎನ್ನುತ್ತಿದ್ದಾರೆ. ಹಾಗಾದರೆ, ಬೆಂಗಳೂರಿಗರು ಕಸದ ಲಾರಿಗಳನ್ನು ಕಂಡು ಬೆಚ್ಚಿ ಬೀಳುವ ದಿನಗಳು ಇನ್ನಾದರೂ ದೂರವಾಗಬಹುದೇ?

ನಿಮಗೆ ಏನು ಅನ್ನಿಸ್ತು?
1 ವೋಟ್