ಬಿಬಿಎಂಪಿ ಸಂಜೆ ಟ್ಯೂಷನ್‌| ಕೊಳಗೇರಿ ಮಕ್ಕಳ ಕಲಿಕೆಗೆ ಆಸರೆ ವಿದ್ಯಾರ್ಥಿ ಬೆಳಕು ಅಧ್ಯಯನ ಕೇಂದ್ರ

  • ಯುವಕ- ಯುವತಿಯರಿಗೆ ಮಾಸಿಕ ₹1,500 ಗೌರವಧನ
  • ವಿದ್ಯಾರ್ಥಿ ಬೆಳಕು ಅಧ್ಯಯನ ಕೇಂದ್ರದಡಿ ಸಂಜೆ ಟ್ಯೂಷನ್

ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದ ವರ್ಗಗಳ ಹಾಗೂ ಕೊಳಗೇರಿ ಮಕ್ಕಳ ಶಿಕ್ಷಣ ಅಭಿವೃದ್ಧಿಪಡಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ.

ಬಿಬಿಎಂಪಿ ಕೆಲವು ಎನ್‌ಜಿಓಗಳ ಸಹಯೋಗದೊಂದಿಗೆ 'ವಿದ್ಯಾರ್ಥಿ ಬೆಳಕು ಅಧ್ಯಯನ ಕೇಂದ್ರ' ಕಾರ್ಯಕ್ರಮದಡಿ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳಿಗೆ ಸಂಜೆ ವೇಳೆ ಟ್ಯೂಷನ್ ಆರಂಭಿಸಲು ತಿರ್ಮಾನಿಸಿದೆ. ಪ್ರಾಯೋಗಿಕವಾಗಿ ಆಗಸ್ಟ್ 15ರಿಂದ ಬೆಂಗಳೂರಿನ 10 ಪ್ರದೇಶಗಳಲ್ಲಿ ಆರಂಭವಾಗಲಿದೆ.

ಏನಿದು ಸಂಜೆ ಅಧ್ಯಯನ ಕೇಂದ್ರ?

ಬೆಂಗಳೂರಿನ ಬಡ ವಿದ್ಯಾರ್ಥಿಗಳಿಗೆ ಸಂಜೆ 5.30ರಿಂದ 7ರವರೆಗೆ ಬಿಬಿಎಂಪಿಯ ಕಲ್ಯಾಣ ವಿಭಾಗದಿಂದ ಟ್ಯೂಷನ್ ಆರಂಭಿಸಲಾಗುತ್ತಿದೆ.

3ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಹೆಚ್ಚಿನ ಕಲಿಕೆ, ತರಬೇತಿ, ಹೋಂ ವರ್ಕ್‌(ಮನೆಕೆಲಸ) ಸೇರಿದಂತೆ ನಾನಾ ಕೌಶಲ್ಯ ವೃದ್ಧಿಸುವ ದೃಷ್ಟಿಯಿಂದ ಬಿಬಿಎಂಪಿ ಈ ಅಧ್ಯಯನ ಕೇಂದ್ರ ಪ್ರಾರಂಭಿಸುತ್ತಿದೆ.

‌ಮಕ್ಕಳಿಗೆ ಕಲಿಸುವವರು ಯಾರು?

ಪದವಿ, ಸ್ನಾತಕೋತ್ತರ ಪದವಿ ಪೂರೈಸಿದ ಸ್ವಯಂ ಸೇವಕ ಯುವಕ ಯುವತಿಯರ ಮೂಲಕ ಮಕ್ಕಳಿಗೆ ಬೋಧನೆ, ತರಬೇತಿ ನೀಡಲಾಗುತ್ತದೆ. ಬಿಬಿಎಂಪಿಯಿಂದ ಈ ಯುವಕ ಯುವತಿಯರಿಗೆ ಮಾಸಿಕ ₹1,500 ಗೌರವಧನ ನೀಡಲಾಗುತ್ತದೆ.

ಈ ಸುದ್ದಿ ಓದಿದ್ದೀರಾ? ಬಿಬಿಎಂಪಿ ಮೀಸಲಾತಿ | ಬಿಜೆಪಿ ಕೈಗೊಂಬೆಯಾದ ಚುನಾವಣಾ ಆಯೋಗ, ನಗರಾಭಿವೃದ್ಧಿ ಇಲಾಖೆ: ಕಾಂಗ್ರೆಸ್ ಆರೋಪ

ಈ ಕುರಿತು ಈ ದಿನ.ಕಾಮ್ ಜತೆಗೆ ಮಾತನಾಡಿದ ಬಿಬಿಎಂಪಿ ವಿಶೇಷ ಆಯುಕ್ತ (ಶಿಕ್ಷಣ)ಡಾ. ರಾಮ್ ಪ್ರಸಾದ್ ಮನೋಹರ್, ”ಪ್ರಾರಂಭದಲ್ಲಿ ಸಂಜೆ ಟ್ಯೂಷನ್‌ಗೆ ಬಿಬಿಎಂಪಿ ಶಾಲಾ ಕೊಠಡಿಗಳ ಬಳಕೆ ಮಾಡಲಾಗುವುದು. ಸ್ಥಳೀಯ ಸಂಘ ಸಂಸ್ಥೆಗಳಿಗೆ ಈ ಅಧ್ಯಯನ ಕೇಂದ್ರಗಳ ಉಸ್ತುವಾರಿ ನೀಡಲಾಗುವುದು. ಈ ಸಂಘ ಸಂಸ್ಥೆಗಳು ಮಕ್ಕಳ ಕಲಿಕೆಗೆ ಅಗತ್ಯವಿರುವ ಕಲಿಕಾ ಸಾಮಾಗ್ರಿಗಳ ಪೂರೈಕೆ ಮಾಡುತ್ತವೆ” ಎಂದು ಹೇಳಿದರು.

“ಪ್ರತಿ ಕೇಂದ್ರದಲ್ಲಿ 25 ರಿಂದ 30 ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗುವುದು. ಬಿಬಿಎಂಪಿ ಶಾಲೆ ಮಾತ್ರವಲ್ಲದೇ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಈ ಅಧ್ಯಯನ ಕೇಂದ್ರಗಳಿಗೆ ಪ್ರವೇಶ ಪಡೆಯಬಹುದಾಗಿದೆ. ಮುಂದಿನ ದಿನಗಳಲ್ಲಿ ಈ ಯೋಜನೆ ಯಶಸ್ವಿಯಾದರೇ, ನಗರದಲ್ಲಿ 200ರಿಂದ 300 ಅಧ್ಯಯನ ಕೇಂದ್ರ ಆರಂಭಿಸಲಾಗುವುದು" ಎಂದು ತಿಳಿಸಿದರು.

ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಕಲಿಕೆ ಮೇಲೆ ಆಸಕ್ತಿ ಇರುತ್ತದೆ. ಆದರೆ, ಪೂರಕ ವ್ಯವಸ್ಥೆ ಇರುವುದಿಲ್ಲ. ಮಕ್ಕಳಿಗೆ ಕಲಿಸುವಷ್ಟು ಶಿಕ್ಷಣ ಪೋಷಕರಿಗೆ ಇರುವುದಿಲ್ಲ. ಈ ತರಹದ ಮಕ್ಕಳಿಗೆ ಅನುಕೂಲವಾಗಬೇಕೆಂಬ ಉದ್ದೇಶದಿಂದ ಬಿಬಿಎಂಪಿ ವಿದ್ಯಾರ್ಥಿ ಬೆಳಕು ಅಧ್ಯಯನ ಕೇಂದ್ರಗಳನ್ನು ಆರಂಭಿಸುತ್ತಿದೆ" ಎಂದು ಹೇಳಿದರು.

ಎಲ್ಲೆಲ್ಲಿ ಆರಂಭವಾಗಲಿವೆ ಸಂಜೆ ಟ್ಯೂಷನ್

ಕ್ಲೀವ್ ಲ್ಯಾಂಡ್ ಟೌನ್ ಬಿಬಿಎಂಪಿ ಶಾಲಾ-ಕಾಲೇಜು, ಭೈರವೇಶ್ವರ ನಗರ ಬಿಬಿಎಂಪಿ ಶಾಲಾ-ಕಾಲೇಜು, ಶ್ರೀರಾಮಪುರ ಬಿಬಿಎಂಪಿ ಶಾಲಾ-ಕಾಲೇಜು, ಕಸ್ತೂರಿ ಬಾ ನಗರ ಬಿಬಿಎಂಪಿ ಶಾಲಾ-ಕಾಲೇಜು, ಆಸ್ಟೀನ್‌ ಟೌನ್ ಬಾಲಕರ ಶಾಲೆ, ಗಂಗಾನಗರ ಪಾಲಿಕೆ ಪ್ರೌಢ ಶಾಲೆ, ಪಾದರಾಯನಪುರ ಪಾಲಿಕೆ ಶಾಲೆ-ಕಾಲೇಜು, ಮತ್ತೀಕೆರೆ ಬಿಬಿಎಂಪಿ ಶಾಲಾ-ಕಾಲೇಜು, ವಿಜಯನಗರ ಬಿಬಿಎಂಪಿ ಶಾಲಾ-ಕಾಲೇಜು, ಪಿಳ್ಳಣ್ಣ ಗಾರ್ಡನ್ ಬಿಬಿಎಂಪಿ ಶಾಲಾ-ಕಾಲೇಜುಗಳಲ್ಲಿ ಪ್ರಾಯೋಗಿಕವಾಗಿ ಬಿಬಿಎಂಪಿ ಸಂಜೆ ಟ್ಯೂಷನ್‌ ಆರಂಭಿಸುತ್ತಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್