ಬಿಬಿಎಂಪಿ | ರಾಜಾಜಿನಗರ ಕೆಳಸೇತುವೆಯಲ್ಲಿ ಮೇಲೆದ್ದ ಕಂಬಿ; ಜೀವ ಭಯದಲ್ಲಿ ವಾಹನ ಸವಾರರು

  • 'ವಾಹನ ಸವಾರರನ್ನು ಅಪಘಾತದಿಂದ ರಕ್ಷಿಸಲು ದೇವರಿಗೆ ಮಾತ್ರ ಸಾಧ್ಯ'
  • ಸುರಂಗ ಮಾರ್ಗಗಳಲ್ಲಿ ಮೂತ್ರ ವಿಸರ್ಜನೆ ಮಾಡುವವರ ಸಂಖ್ಯೆ ಹೆಚ್ಚು

ಬೆಂಗಳೂರಿನ ರಾಜಾಜಿನಗರದ ಬಳಿ ಇರುವ ಕೆಳಸೇತುವೆ ಬಳಿ ರಸ್ತೆಗೆ ಹಾಕಿರುವ ಕಬ್ಬಿಣದ ಕಂಬಿಗಳು ಮೇಲೆದ್ದಿದ್ದು, ವಾಹನ ಸವಾರರ ಜೀವಕ್ಕೆ ಅಪಾಯ ತರುವ ಸಾಧ್ಯತೆ ಇದ್ದು, ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೂಡಲೇ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.

ನವರಂಗ್ ಬಳಿ ಇರುವ ಕಾರ್ಡ್‌ ರೋಡ್‌ ಅಂಡರ್ ಪಾಸ್ ಬಳಿ ಕಸ ತಡೆಯಲು ಹಾಕಿರುವ ಕಬ್ಬಿಣದ ಕಂಬಿಗಳು ಮೇಲೆದ್ದಿವೆ. ಈ ಕುರಿತು ಮಾಹಿತಿ ಇಲ್ಲದ ವಾಹನ ಸವಾರರು ವಾಹನ ಜೋರಾಗಿ ಚಲಾಯಿಸುತ್ತ ಬಂದರೆ ಸಾವು ಕಟ್ಟಿಟ್ಟ ಬುತ್ತಿ ಎಂದು ಯುವತಿಯೊಬ್ಬರು ಮಾಡಿರುವ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಶೇಷಾದ್ರಿಪುರದ ಕಡೆಗೆ ರೈಲ್ವೆ ಸೇತುವೆಯ ಕೆಳಗಿನ ರಸ್ತೆಯನ್ನು ಅವೈಜ್ಞಾನಿಕವಾಗಿ ಹೊಸದಾಗಿ ಡಾಂಬರೀಕರಣ ಮಾಡಲಾಗಿದೆ. ಈ ಜಾಗದಲ್ಲಿ ದ್ವಿಚಕ್ರ ವಾಹನ ಸವಾರರ ಜೀವವನ್ನು ದೇವರೇ ಕಾಪಾಡಬೇಕು ಎಂದು ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.

ಪ್ರತಿನಿತ್ಯವು ಇದೇ ಮಾರ್ಗದ ಮೂಲಕ ವಿಜಯನಗರ ತಲುಪುವ ನಿವಾಸಿ ಅಂಜನಿ ಈ ದಿನ.ಕಾಮ್‌ನೊಂದಿಗೆ ಮಾತನಾಡಿ, "ನಾನು ನನ್ನ ಕಚೇರಿಯಂದ ಇದೇ ಮಾರ್ಗದಲ್ಲಿ  ದ್ವಿಚಕ್ರ ವಾಹನದಲ್ಲಿ ಸಂಚರಿಸುವುದು. ಇಲ್ಲಿ ಕಸ ತಡೆಯುವ ಈ ಕಬ್ಬಿಣದ ಕಂಬಿ ಮಾತ್ರ ಹದಗೆಟ್ಟಿಲ್ಲ. ನೆಲ ಸುರಂಗ ಮಾರ್ಗದ ಉದ್ದಕ್ಕೂ ರಸ್ತೆ ಹದಗೆಟ್ಟಿದೆ. ಕೆಲವರು ಇಲ್ಲೆ ಮೂತ್ರ ವಿಸರ್ಜನೆ ಮಾಡುತ್ತಾರೆ. ಉಗುಳುತ್ತಾರೆ. ಮಳೆ ಬಂದರೆ ನಿಲ್ಲಲಾಗದಷ್ಟು ದುರ್ನಾತ ಬೀರುತ್ತದೆ" ಎಂದು ದೂರಿದರು.

"ರಾಜಾಜಿನಗರದ ಓಕಳಿಪುರಂ ಸುಜಾತ ಚಿತ್ರಮಂದಿರದ ಬಳಿ ರಸ್ತೆಗುಂಡಿಯಿಂದಾಗಿ, ಉಮಾ ಎಂಬ ಮಹಿಳೆ ಮೃತ ಪಟ್ಟ ನಂತರ ಎರಡು ವಾರಗಳಂತೆ ನಗರದ ರಸ್ತೆ ಪರಿಶೀಲನೆ ಮಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ ಗಿರಿನಾಥ್ ಅವರು, ಹತ್ತಿರದಲ್ಲೇ ಇರುವ ಸುರಂಗ ಮಾರ್ಗದ ಅವ್ಯವಸ್ಥೆಯನ್ನು ಪರಿಶೀಲಿಸಿಲ್ಲ. ಬಂಡವಾಳ ಹೂಡಿಕೆದಾರರ ಸಮಾವೇಶದ ನಂತರ ನಗರ ಪರಿಶೀಲನೆ ಎಂಬ ಯೋಜನೆಯನ್ನೇ ಅವರು ಕೈ ಬಿಟ್ಟಂತಿದೆ. ಬಿಬಿಎಂಪಿ ಪ್ರತಿ ಬಾರಿಯು ಹೀಗೆ, ಯಾವುದೇ ಕಾಮಗಾರಿ, ಯೋಜನೆಗಳನ್ನು ಪೂರ್ಣಗೊಳಿಸುವುದಿಲ್ಲ. ಇದರಿಂದಾಗಿ, ಸಾರ್ವಜನಿಕರು ಸಂಕಷ್ಟಕ್ಕೆ ಒಳಗಾಗುತ್ತಿದ್ದಾರೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಈ ದಿನ.ಕಾಮ್‌ ನೊಂದಿಗೆ ಮಾತನಾಡಿದ ಬಿಬಿಎಂಪಿ ಮಾಧ್ಯಮ ಸಂಪರ್ಕಾಧಿಕಾರಿ ಸುರೇಶ್, "ಬಿಬಿಎಂಪಿ ಮುಖ್ಯ ಎಂಜಿನಿಯರ್‌ಗಳಿಗೆ ಇದರ ಬಗ್ಗೆ ದೂರು ನೀಡಿ, ನಂತರ ಸರಿಪಡಿಸುವ ಕಾಮಗಾರಿ ಕೈಗೆತ್ತಿಕೊಳ್ಳುವಂತೆ ಮಾಡಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿರುವ ಸುರಂಗ ಮಾರ್ಗದ ರಸ್ತೆ ಅವ್ಯವಸ್ಥೆ ಪಟ್ಟಿ ಮಾಡಿ ಕ್ರಮ ಕೈಗೊಳ್ಳಲಾಗುವುದು" ಎಂದು ಭರವಸೆ ನೀಡಿದರು.

ನಿಮಗೆ ಏನು ಅನ್ನಿಸ್ತು?
0 ವೋಟ್
eedina app