ಬಿಬಿಎಂಪಿ | ಅರ್ಧಕ್ಕೆ ನಿಂತ ಶೌಚಾಲಯ ಕಾಮಗಾರಿ: ಅಧಿಕಾರಿಗಳ ನಿರ್ಲಕ್ಷ್ಯ

  • ಹೆಸರಿಗೆ ಮಾತ್ರವೇ ಇದೆ ಸಹಾಯವಾಣಿ ಸಂಖ್ಯೆ
  • ಶೌಚಾಲಯ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವುದಾಗಿ ಭರವಸೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಗೆ ಬರುವ ಜಾಲಹಳ್ಳಿ ಕ್ರಾಸ್ ಬಸ್ ನಿಲ್ದಾಣದ ಬಳಿ ಸಾರ್ವಜನಿಕ ಶೌಚಾಲಯ ಕಾಮಗಾರಿ ಅರ್ಧಕ್ಕೆ ನಿಂತಿದೆ. ಕಾಮಗಾರಿ ಪೂರ್ಣಗೊಳಿಸುವಂತೆ ಏಳು ವರ್ಷಗಳಿಂದ ಮನವಿ ಮಾಡುತ್ತಿದ್ದರೂ, ಅಧಿಕಾರಿಗಳು ನಿರ್ಲಕ್ಷಿಸುತ್ತಿದ್ದಾರೆ ಎಂದು ಸಮಾಜಿಕ ಕಾರ್ಯಕರ್ತ ಅನಿಲ್ ಕುಮಾರ್ ಆರೋಪಿಸಿದ್ದಾರೆ. 

ಪೀಣ್ಯ ಕೈಗಾರಿಕಾ ಪ್ರದೇಶಕ್ಕೆ ಲಕ್ಷಾಂತರ ಜನರು ಪ್ರಯಾಣಿಸುತ್ತಾರೆ. ಅಂತಹ ಪ್ರದೇಶದಲ್ಲಿ ಸಾರ್ವಜನಿಕ ಶೌಚಾಲಯ ಹದಗೆಟ್ಟಿದ್ದು, ಪ್ರಯಾಣಿಕರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅನಿಲ್ ಕುಮಾರ್ ಆತಂಕ ವ್ಯಕ್ತಪಡಿಸಿದ್ದಾರೆ.

"ಈಗಾಗಲೇ ಶೌಚಾಲಯ ನಿರ್ಮಾಣವಾಗಿದೆ. ಆದರೆ, ಅದರ ಕಾಮಗಾರಿ ಪೂರ್ಣಗೊಂಡಿಲ್ಲ. ಕಿಟಕಿ ಬಾಗಿಲುಗಳಿರಬೇಕಾದ ಜಾಗ ಖಾಲಿಯೇ ಇದೆ. ಈ ಕುರಿತು ಬಿಬಿಎಂಪಿ ಸಹಾಯ ವಾಣಿಗೆ ಕರೆ ಮಾಡಿ, ಒಂಬತ್ತು ಮೇಲ್‌ಗಳನ್ನು ಕಳುಹಿಸಲಾಗಿದೆ. ಬಿಬಿಎಂಪಿ ಆಯುಕ್ತರು ಮತ್ತು ಮುಖ್ಯಮಂತ್ರಿಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ" ಎಂದು ಅನಿಲ್ ಕುಮಾರ್ ಆರೋಪಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ?: ಬಿಬಿಎಂಪಿ| ಬೀದಿ ಗಣೇಶಮೂರ್ತಿ ಪ್ರತಿಷ್ಠಾಪನೆಗೆ 'ನಿರಪೇಕ್ಷಣಾ ಪತ್ರ' ಕಡ್ಡಾಯ

"ಅರೆಬರೆ ನಿರ್ಮಾಣವಾದ ಶೌಚಾಲಯವನ್ನು ಕಸ ಎಸೆಯಲು ಮತ್ತು ಕೆಲವರು ಮಲಮೂತ್ರ ವಿಸರ್ಜನೆಗೆ ಬಳಸುತ್ತಿದ್ದಾರೆ. ಇದನ್ನು ಸಂಪೂರ್ಣವಾಗಿ ಮುಚ್ಚಿ ಇಲ್ಲವೇ ಬಾಗಿಲುಗಳನ್ನು ಒದಗಿಸಿ ಸುಸಜ್ಜಿತ ಶೌಚಾಲಯವನ್ನಾಗಿ ಮಾರ್ಪಡಿಸುವಂತೆ ಬಿಬಿಎಂಪಿಗೆ ಮನವಿ ಮಾಡಿದ್ದೇವೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. 
ದೂರು ಸಲ್ಲಿಸಿದಾಗ ಪೌರ ಕಾರ್ಮಿಕರ ಮೂಲಕ ಅವುಗಳನ್ನು ಶುಚಿಗೊಳಿಸಿ, ಅಷ್ಟಕ್ಕೇ ಕೈಬಿಡುತ್ತಾರೆ" ಎಂದು ಅವರು ಆರೋಪಿಸಿದ್ದಾರೆ.

ಶೌಚಾಲಯ ಕಾಮಗಾರಿ ಸಂಬಂಧ ಈ ದಿನ.ಕಾಮ್‌ನೊಂದಿಗೆ ಮಾತನಾಡಿದ ಬಿಬಿಎಂಪಿ ಜಂಟಿ ಆಯುಕ್ತ ಪರಶುರಾಮ, "ದೂರು ಕೇಳಿ ಬಂದ ಸ್ಥಳಕ್ಕೆ ನಮ್ಮ ಸಿಬ್ಬಂದಿಗಳನ್ನು ಕಳಿಸಿದ್ದೇವೆ. ಪರಶೀಲನೆ ನಡೆಸುತ್ತಿದ್ದೇವೆ. ಶೌಚಾಲಯ ನಿರ್ಮಾಣಕ್ಕೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು" ಎಂದು ಭರವಸೆ ನೀಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್