ಬಿಬಿಎಂಪಿ | ಮೂಲಸೌಕರ್ಯ ಒದಗಿಸಿದ ನಂತರ ಬಿಬಿಎಂಪಿಗೆ ಬಿಡಿಎ ಬಡಾವಣೆ ಹಸ್ತಾಂತರ

vishvanath
  • ಬಿಡಿಎಗೆ ಸೇರಿದ 9 ಸಾವಿರ ನಿವೇಶನಗಳು ಪತ್ತೆ 
  • ಕಾರಣಾಂತರಗಳಿಂದ ಮೂಲಸೌಕರ್ಯದ ಕೊರತೆ 

ಬೆಂಗಳೂರಿನ ಬನಶಂಕರಿ 6ನೇ ಹಂತ, ಅಂಜನಾಪುರ ಹಾಗೂ ವಿಶ್ವೇಶ್ವರಯ್ಯ ಬಡಾವಣೆಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ಒದಗಿಸಿ, ಬಡಾವಣೆಯನ್ನು ಶೀಘ್ರದಲ್ಲೇ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಗೆ ಹಸ್ತಾಂತರಿಸಲಾಗುವುದು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧ್ಯಕ್ಷ ಎಸ್. ಆರ್ ವಿಶ್ವನಾಥ್ ತಿಳಿಸಿದ್ದಾರೆ.

ಎಸ್. ಆರ್ ವಿಶ್ವನಾಥ್, ಬೆಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಎಂ.ಕೃಷ್ಣಪ್ಪ, ಬಿಡಿಎ ಆಯುಕ್ತ ಎಂ.ಬಿ ರಾಜೇಶ್ ಗೌಡ ಸೇರಿದಂತೆ ಅಧಿಕಾರಿಗಳ ತಂಡವು ಬಿಡಿಎ ವ್ಯಾಪ್ತಿಯಲ್ಲಿರುವ ಬಡಾವಣೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಇದರ ಭಾಗವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಅಭಿವೃದ್ಧಿಪಡಿಸಿರುವ ಬನಶಂಕರಿ 6ನೇ ಹಂತ, ಜೆ.ಪಿ ನಗರ 8 ಮತ್ತು 9ನೇ ಹಂತ ಹಾಗೂ ಅಂಜನಾಪುರದ ಕೆಲವು ಬಡಾವಣೆಗಳಿಗೆ ಸೋಮವಾರ ಭೇಟಿ ನೀಡಿದ್ದಾರೆ. 

ಸ್ಥಳೀಯರು ಮತ್ತು ಜನಪ್ರತಿನಿಧಿಗಳ ಅಹವಾಲುಗಳನ್ನು ಸ್ವೀಕರಿಸಿ, ಸುದ್ದಿಗಾರರೊಂದಿಗೆ ಮಾತನಾಡಿದ ಎಸ್. ಆರ್ ವಿಶ್ವನಾಥ್, "ಅಂಜನಾಪುರ, ಬನಶಂಕರಿ ಮತ್ತು ವಿಶ್ವೇಶ್ವರಯ್ಯ ಬಡಾವಣೆಗಳಿಗೆ ಮೂಲಸೌಕರ್ಯ ಒದಗಿಸುವಲ್ಲಿ, ನಾನಾ ಕಾರಣಗಳಿಂದ ವಿಳಂಬ ಉಂಟಾಗಿದೆ. ಈ ಬಡಾವಣೆಗಳಿಗೆ ಕುಡಿವ ನೀರು, ಒಳಚರಂಡಿ, ವಿದ್ಯುತ್, ರಸ್ತೆ ಸಂಪರ್ಕ ಸೇರಿದಂತೆ ಇನ್ನಿತರೆ ಮೂಲಸೌಕರ್ಯಗಳನ್ನು ಕಲ್ಪಿಸಲು ಬಿಡಿಎ ಪ್ರಾಧಿಕಾರ ಮಂಡಳಿ ನಿರ್ಧರಿಸಿದೆ" ಎಂದು ಹೇಳಿದರು.

 

“ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಹಳೆಯ ಬಡಾವಣೆಗಳಿಗೆ ಅಗತ್ಯವಿರುವ ಮೂಲಸೌಕರ್ಯಗಳನ್ನು ತ್ವರಿತಗತಿಯಲ್ಲಿ ಒದಗಿಸಲು ಸೂಚಿಸಿದ್ದಾರೆ. ಆ ಬಡಾವಣೆಗಳನ್ನು ಬಿಬಿಎಂಪಿಗೆ ಹಸ್ತಾಂತರ ಮಾಡುವಂತೆ ಸೂಚನೆ ನೀಡಿದ್ದಾರೆ. ಅದರಂತೆ ಬಿಡಿಎ ಮಂಡಳಿಯು ಕಾರ್ಯನಿರತವಾಗಿದೆ" ಎಂದರು.

"ಒಂದು ವರ್ಷದಲ್ಲಿ ವಿವಿಧ ಬಡಾವಣೆಗಳನ್ನು, ಅತಿಕ್ರಮಿಸಿದವರ ವಿರುದ್ಧ ಕಾನೂನಿನ ಮೂಲಕ ಹೋರಾಡಿ ಬಿಡಿಎ ಜಾಗವನ್ನು ಮರುವಶ ಪಡಿಸಿಕೊಂಡಿದೆ. ಇದರಿಂದ ಸಂಸ್ಥೆಗೆ ಸಾಕಷ್ಟು ಆದಾಯ ಬರುವುದರ ಜೊತೆಗೆ ಆರ್ಥಿಕ ಸಂಪನ್ಮೂಲ ಕ್ರೋಢೀಕರಣಕ್ಕೆ ಕಾರಣವಾಗಿದೆ. ಇದುವರೆಗೆ 9 ಸಾವಿರ ಬಿಡಿಎಗೆ ಸೇರಿದ ನಿವೇಶನಗಳನ್ನು ಪತ್ತೆ ಮಾಡಿದ್ದು, ಹಂತ ಹಂತವಾಗಿ ಹರಾಜು ಪ್ರಕ್ರಿಯೆ ನಡೆಸಲಾಗುತ್ತಿದೆ. ಇದರಿಂದ ಸುಮಾರು 3 ಸಾವಿರ ಕೋಟಿ ರೂಪಾಯಿ ಆದಾಯ ಬಂದಿದೆ" ಎಂದು ಬಿಡಿಎ ಅಧ್ಯಕ್ಷರು ತಿಳಿಸಿದರು.

ಈ ಸುದ್ದಿ ಓದಿದ್ದೀರಾ?:ಬೆಂಗಳೂರು ಸಾರಿಗೆ| ಆಗಸ್ಟ್‌ 15ರಿಂದ 75 ನೂತನ ವಿದ್ಯುತ್‌ಚಾಲಿತ ಬಸ್‌ ಸೇವೆ ಆರಂಭ

“ಬನಶಂಕರಿ ಮುಂದುವರಿದ ಬಡಾವಣೆಗೆ ಕುಡಿಯುವ ನೀರು ಪೂರೈಸುವ ಸಂಬಂಧ ಬೆಂಗಳೂರು ಜಲಮಂಡಳಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದೆ. ಅದಕ್ಕೆ ಅಗತ್ಯವಿರುವ 54 ಕೋಟಿ ರೂಪಾಯಿಗಳ ಪೈಕಿ 27.50 ಕೋಟಿ ರೂಪಾಯಿಗಳನ್ನು ಬಿಡಿಎ ಜಲಮಂಡಳಿಗೆ ಸಂದಾಯ ಮಾಡಿದ್ದು, ಶೀಘ್ರದಲ್ಲೇ ಕುಡಿಯುವ ನೀರು ಪೂರೈಕೆಯಾಗಲಿದೆ. ಕುಡಿಯುವ ನೀರು ಮತ್ತು ಒಳಚರಂಡಿ ವ್ಯವಸ್ಥೆಗೆ ಹಣದ ಕೊರತೆ ಇಲ್ಲ. ಜಲಮಂಡಳಿಯಿಂದ ಕಾಮಗಾರಿ ಆದ ತಕ್ಷಣ ಅವರಿಗೆ ಬಿಡಿಎ ಹಣ ಪಾವತಿಸಲಿದೆ” ಎಂದು ತಿಳಿಸಿದರು.

“ಬೆಂಗಳೂರು ದಕ್ಷಿಣ ಮತ್ತು ಯಶವಂತಪುರ ವಿಧಾನಸಭೆ ಕ್ಷೇತ್ರಗಳ ವ್ಯಾಪ್ತಿಯಲ್ಲಿ ಬರುವ ಬಿಡಿಎ ಬಡಾವಣೆಗಳ ಮೂಲಸೌಕರ್ಯಕ್ಕಾಗಿ ಸುಮಾರು 400 ಕೋಟಿ ರೂಪಾಯಿಗಳನ್ನು ಮೀಸಲಿಡಲಾಗಿದ್ದು, ಈಗಾಗಲೇ 200 ಕೋಟಿ ರೂಪಾಯಿಗಳ ಕಾಮಗಾರಿಗೆ ಟೆಂಡರ್ ಕರೆಯಲಾಗಿದೆ ಎಂದರು. ಅದೇ ರೀತಿ ಅರ್ಕಾವತಿ ಬಡಾವಣೆಗೆ ಮೂಲಸೌಕರ್ಯ ಒದಗಿಸಲು 450 ಕೋಟಿ ರೂ. ಹಾಗೂ ಹೆಬ್ಬಾಳ ಮೇಲ್ಸೇತುವೆಯ ವಿಸ್ತರಣೆಗಾಗಿ 175 ಕೋಟಿ ರೂ.ಗಳನ್ನು ಈಗಾಗಲೇ ಬಿಡಿಎ ಮಂಡಳಿಯು ಮೀಸಲಿಟ್ಟಿದೆ" ಎಂದು ಎಸ್. ಆರ್ ವಿಶ್ವನಾಥ್ ಮಾಹಿತಿ ನೀಡಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್