ಬಿಬಿಎಂಪಿ| ಖಾತಾ ಸೇವೆ ಸುಧಾರಣೆಗೆ ‘ಇ-ಆಸ್ತಿ ತಂತ್ರಾಂಶ’ ಅನುಷ್ಠಾನ

  • ಬಿಬಿಎಂಪಿ ಕಂದಾಯ ಅಧಿಕಾರಿಗಳು, ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ
  • ಪೂರ್ವ ವಲಯದ ವಾರ್ಡ್‌ಗಳಲ್ಲಿಯೂ ಇ-ಆಸ್ತಿ ತಂತ್ರಾಂಶ ಜಾರಿ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಕಂದಾಯ ಇಲಾಖೆ ನೀಡುತ್ತಿರುವ ಸೇವೆಗಳನ್ನು ಸರಳೀಕರಣಗೊಳಿಸಿ ತ್ವರಿತಗತಿಯಲ್ಲಿ ವಿಲೇವಾರಿ ಮಾಡುವ ಉದ್ದೇಶದಿಂದ ‘ಇ-ಆಸ್ತಿ ತಂತ್ರಾಂಶ’ ಜಾರಿಗೊಳಿಸಲಾಗಿದೆ.

ನಗರದ ಪೂರ್ವ ವಲಯ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ 3 ವಾರ್ಡ್‌ಗಳಲ್ಲಿ ಜಾರಿಗೊಳಿಸಿದ್ದ ಇ-ಆಸ್ತಿ ತಂತ್ರಾಂಶವನ್ನು, ಇದೀಗ ಪೂರ್ವ ವಲಯದಲ್ಲಿ ಬರುವ ವಾರ್ಡ್‌ಗಳಲ್ಲಿ ಅನುಷ್ಠಾನಗೊಳಿಸಲಾಗಿದೆ. ಆಸ್ತಿ ಮಾಲೀಕರು ಹತ್ತಿರದ ಆಯಾ ವಾರ್ಡ್ ವ್ಯಾಪ್ತಿಯಲ್ಲಿ ಬರುವ ಸಹಾಯಕ ಕಂದಾಯ ಅಧಿಕಾರಿ ಕಚೇರಿಗೆ ಭೇಟಿ ನೀಡಿ ಅಗತ್ಯ ದಾಖಲೆಗಳನ್ನು ನೀಡಿ ಇ-ಆಸ್ತಿ ತಂತ್ರಾಂಶದ ಮೂಲಕ ಇ-ಆಸ್ತಿ ದಾಖಲೆಯನ್ನು ಪಡೆಯಬಹುದು ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ಶೀಘ್ರದಲ್ಲಿಯೇ ಸಾರ್ವಜನಿಕರು ಖುದ್ದಾಗಿ ಆನ್ ಲೈನ್ ಮೂಲಕ ಸಿಟಿಜನ್ ಮಾಡ್ಯುಲ್ ಅಥವಾ ಗುರುತಿಸಲಾದ ಹತ್ತಿರದ ಬೆಂಗಳೂರು-01 ಕೇಂದ್ರಗಳಲ್ಲಿ ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗುವುದು. ಹಾಗೇ ಇ-ಆಸ್ತಿ ತಂತ್ರಾಂಶ ವ್ಯವಸ್ಥೆಯನ್ನು ದಕ್ಷಿಣ ಮತ್ತು ಪಶ್ಚಿಮ ವಲಯಗಳಲ್ಲಿಯೂ ಅನುಷ್ಠಾನಗೊಳಿಸಲಾಗುವುದು ಎಂದು ಮಾಹಿತಿ ನೀಡಿದೆ.

ಸಿಬ್ಬಂದಿಗೆ ತರಬೇತಿ ಕಾರ್ಯಾಗಾರ
ಪಾಲಿಕೆಯ ಅಧಿಕಾರಿಗಳು, ನೌಕರರು ನಿರ್ವಹಿಸುತ್ತಿರುವ ಕೆಲಸ ಸರಳೀಕರಣ, ಸುಧಾರಣೆ ಒಳಗೊಂಡಂತೆ, ಎಲ್ಲಾ ವಲಯಗಳಲ್ಲಿಯೂ ಏಕರೂಪ ಪದ್ಧತಿ ಜಾರಿಗೆ ತರುವ ಉದ್ದೇಶದಿಂದ ಪಾಲಿಕೆಯ ಕಂದಾಯ ಇಲಾಖೆಯ ಕಂದಾಯ ಅಧಿಕಾರಿಗಳು, ಸಹಾಯಕ ಕಂದಾಯ ಅಧಿಕಾರಿಗಳು, ಮೌಲ್ಯ ಮಾಪಕರು, ಕಂದಾಯ ಪರಿವೀಕ್ಷಕರು, ಕಂದಾಯ ವಸೂಲಿಗಾರರಿಗೆ ಶುಕ್ರವಾರ ಪಾಲಿಕೆಯ ಪುಟ್ಟಣ್ಣ ಚೆಟ್ಟಿ ಪುರಭವನದಲ್ಲಿ ಏರ್ಪಡಿಸಿದ್ದ ಕಾರ್ಯಗಾರಕ್ಕೆ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಚಾಲನೆ ನೀಡಿದರು.

ಬಿಬಿಎಂಪಿ ಯ ಕಂದಾಯ ಇಲಾಖೆಯು ನಾಗರಿಕರಿಗೆ ಮತ್ತು ತೆರಿಗೆದಾರರಿಗೆ ಖಾತೆ ನೋಂದಣಿ, ವಿಭಜನೆ, ಒಂದುಗೂಡಿಸುವಿಕೆ, ವರ್ಗಾವಣೆ ಸೇರಿದಂತೆ ಇತ್ಯಾದಿ ಸೇವೆಗಳನ್ನು ನೀಡುತ್ತಿದೆ.

ಆಸ್ತಿ ತೆರಿಗೆ ವಸೂಲಾತಿಗೆ ಮೊದಲ ಆದ್ಯತೆ, ಹೊಸ ಹೊಸ ಆಸ್ತಿಗಳ ಪತ್ತೆ ಹಚ್ಚಿ ಆಸ್ತಿ ತೆರಿಗೆ ವ್ಯಾಪ್ತಿಗೆ ತರುವುದು, ತೆರಿಗೆ ಪ್ರಕ್ರಿಯೆ ಮತ್ತು ಕಾರ್ಯವಿಧಾನಗಳು, ವಿನಾಯಿತಿ, ತಂತ್ರಗಾರಿಕೆ, ಇ-ಆಸ್ತಿ ಸೇರಿದಂತೆ ಇತರೆ ವಿಷಯಗಳ ಬಗ್ಗೆ ಕಾರ್ಯಾಗಾರದಲ್ಲಿ ತರಬೇತಿ ನೀಡಲಾಯಿತು.

ಈ ಸುದ್ದಿ ಓದಿದ್ದೀರಾ? ಬೆಂಗಳೂರಿನಲ್ಲಿ ಮತ್ತೊಂದು ಆ್ಯಸಿಡ್ ದಾಳಿ ಘಟನೆ; ಆರೋಪಿ ಬಂಧನ

ಕಾರ್ಯಾಗಾರದಲ್ಲಿ ಬಿಬಿಎಂಪಿ ವಿಶೇಷ ಆಯುಕ್ತ ಡಾ. ದೀಪಕ್, ವಿಶೇಷ ಆಯುಕ್ತರಾದ ತುಳಸಿ ಮದ್ದಿನೇನಿ, ವಲಯ ಜಂಟಿ ಆಯುಕ್ತ ಡಾ. ತ್ರಿಲೋಕ್ ಚಂದ್ರ, ಕಂದಾಯ ವಿಭಾಗದ ಜಂಟಿ ಆಯಕ್ತರಾದ ಲಕ್ಷ್ಮೀದೇವಿ, ಉಪ ಆಯುಕ್ತ ಡಿ ಕೆ ಬಾಬು ಹಾಗೂ ಕಂದಾಯ ಇಲಾಖೆಯ ಎಲ್ಲಾ ಅಧಿಕಾರಿಗಳು ಭಾಗವಹಿಸಿದ್ದರು.

ನಿಮಗೆ ಏನು ಅನ್ನಿಸ್ತು?
0 ವೋಟ್