- 423 ಮಾಲೀಕರಿಗೆ ಕಟ್ಟಡಗಳ ತೆರವಿಗೆ ನೋಟಿಸ್
- ಪಾಲಿಕೆ ಖರ್ಚು ಮಾಡುವ ವೆಚ್ಚ ಮಾಲೀಕರೆ ಭರಿಸಬೇಕು
ಧಾರಕಾರ ಮಳೆಗೆ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಯ ಹಲವಾರು ಪ್ರದೇಶಗಳಲ್ಲಿ ಕಟ್ಟಡಗಳು ಶಿಥಿಲಗೊಂಡಿದ್ದು, ಅವುಗಳ ಕುರಿತು ಕೂಡಲೇ ಕ್ರಮ ಕೈಗೊಳ್ಳಲು ಮಾಲೀಕರಿಗೆ ನೋಟಿಸ್ ನೀಡಲಾಗಿದೆ.
ಒಂದು ವೇಳೆ ಮಾಲೀಕರು ಕಟ್ಟಡಗಳನ್ನು ತೆರವುಗೊಳಿಸಲು ವಿಳಂಬ ಮಾಡಿದರೆ ಪಾಲಿಕೆಯೇ ಮನೆಗಳನ್ನು ತೆರವುಗೊಳಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪಾಲಿಕೆಯ ವರದಿಯ ಪ್ರಕಾರ, ಒಟ್ಟಾರೆಯಾಗಿ, 629 ಕಟ್ಟಡಗಳು ದುಸ್ತಿಯಲ್ಲಿದ್ದು, ಬೆಂಗಳೂರಿನ ದಕ್ಷಿಣ ಭಾಗದಲ್ಲಿ 216 ಕಟ್ಟಡಗಳು ಶಿಥಿಲಗೊಂಡಿವೆ. ಬೆಂಗಳೂರಿನ ಪಶ್ಚಿಮ ಭಾಗದಲ್ಲಿ 160 ಕಟ್ಟಡಗಳಿದ್ದು, ಪೂರ್ವದಲ್ಲಿ (101) ದುಸ್ತಿಗೆ ತಲುಪಿರುವ ಕಟ್ಟಡಗಳಿವೆ. ಯಲಹಂಕ (84), ಮಹದೇವ (37), ಬೊಮ್ಮನಹಳ್ಳಿ (11) ದಾಸರ ಹಳ್ಳಿ (11) ಕಟ್ಟಡಗಳು ಶಿಥಿಲಾವಸ್ಥೆಗೆ ತಲುಪಿದೆ.
629 ಕಟ್ಟಡಗಳ ಪೈಕಿ 423 ಕಟ್ಟಡದ ಮಾಲೀಕರಿಗೆ ಕಟ್ಟಡಗಳನ್ನು ನೆಲಸಮಗೊಳಿಸುವಂತೆ ನೋಟಿಸ್ ನೀಡಲಾಗಿದೆ. ಆದರೆ, ಅವರು ನಿರ್ಲಕ್ಷ್ಯಿಸಿದ್ದು, ಹೀಗಾಗಿ, ಪಾಲಿಕೆಯೇ ಖುದ್ದಾಗಿ ಖಾಸಗಿ ಗುತ್ತಿಗೆದಾರರನ್ನು ನೇಮಿಸಿಕೊಂಡು ತೆರವುಗೊಳಿಸುವ ತೀರ್ಮಾನಕ್ಕೆ ಬಂದಿದೆ. ಇದಕ್ಕೆ ತಗುಲುವ ವೆಚ್ಚವನ್ನು ಮಾಲೀಕರಿಂದಲೇ ಪಡೆಯಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇತ್ತೀಚೆಗೆ ಚಿಕ್ಕಪೇಟೆಯಲ್ಲಿ ಒಂದು ಹಳೆಯ ಕಟ್ಟಡ ನೆಲಕ್ಕುರುಳಿತು. ಕಟ್ಟಡದ ಕೆಳ ಅಂತಸ್ತಿನಲ್ಲಿದ್ದ ಮಾರಾಟ ಮಳಿಗೆಯಲ್ಲಿದ್ದ ವಸ್ತುಗಳು ನಾಶವಾಗಿ ದೊಡ್ಡ ಪ್ರಮಾಣದಲ್ಲಿ ನಷ್ಟ ಉಂಟಾಗಿದೆ. ಆದರೆ, ಯಾವುದೇ ರೀತಿಯಲ್ಲಿ ಪ್ರಾಣ ಹಾನಿಯಾಗಿಲ್ಲ.
ಈ ಸುದ್ದಿ ಓದಿದ್ದೀರಾ?: ಬಿಬಿಎಂಪಿ | 34 ಕಡೆಗಳಲ್ಲಿ ರಾಜಕಾಲುವೆ ಒತ್ತುವರಿ ತೆರವು
ದುಸ್ತಿತಿಗೆ ತಲುಪಿರುವ ಕಟ್ಟಡಗಳ ಬಗ್ಗೆ ಪಾಲಿಕೆ ಈಗಾಗಲೇ ಸಮೀಕ್ಷೆ ನಡೆಸಿ ಪಟ್ಟಿ ಮಾಡಿದೆ. ಈ ವರದಿಯನ್ನು ಆಧರಿಸಿ ಶಿಥಿಲಗೊಂಡಿರುವ ಕಟ್ಟಡಗಳ ಬಳಿ ತೆರಳಿ ಪರಿಶೀಲನೆ ನಡೆಸಿ, ನಾಗರಿಕರು ವಾಸಿಸಲು ಸರಿಯೇ ಎಂಬ ನಿಖರ ಮಾಹಿತಿ ದೊರೆತ ನಂತರ ಅಲ್ಲಿನ ನಿವಾಸಿಗಳನ್ನು ಸ್ಥಳಾಂತರ ಮಾಡುವ ಕಾರ್ಯ ಕೈಗೊಳ್ಳಲಾಗುವುದು.
ಈ ಹಿಂದೆ ಕೂಡ ಬೆಂಗಳೂರಿನ ಲಕ್ಕಸಂದ್ರದಲ್ಲಿ ಮೂರು ಅಂತಸ್ತಿನ ಹಳೆಯ ಕಟ್ಟಡದ ಕುಸಿದಿತ್ತು. ಇದಾದ ನಂತರ ಡೈರಿ ಸರ್ಕಲ್ ಬಳಿ ಮತ್ತೊಂದು ಹಳೆಯ ಕಟ್ಟಡ ಉರುಳಿತ್ತು ಆದರೆ, ಅಲ್ಲಿನ ನಿವಾಸಿಗಳು ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು. ಇದರಿಂದಾಗಿ, ಮಾಲೀಕರು ಪಾಲಿಕೆಯಿಂದ ನೋಟಿಸ್ ನೀಡಿದ ತಕ್ಷಣ ಕಟ್ಟಡ ತೆರವುಗೊಳಿಸುವ ಕಾರ್ಯ ಕೈಗೊಳ್ಳಲು ಯೋಜಿಸಬೇಕಾಗಿದೆ.