ಬಿಬಿಎಂಪಿ | 243 ವಾರ್ಡ್‌ಗಳ ಕಸ ವಿಲೇವಾರಿ; ಒಂದೇ ಏಜೆನ್ಸಿಗೆ ನೀಡಲು ಟೆಂಡರ್‌ ಆಹ್ವಾನ

  • 243 ವಾರ್ಡ್‌ಗಳಿಗೆ, ಕಸ ವಿಲೇವಾರಿಗಾಗಿ 89 ಪ್ಯಾಕೇಜ್‌ ಟೆಂಡರ್
  • ಇಂದೋರ್ ಮಾದರಿಯಲ್ಲಿ ತ್ಯಾಜ್ಯ ವಿಲೇವಾರಿ ಮಾಡಲು ಯೋಜನೆ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವ್ಯಾಪ್ತಿಯ 243 ವಾರ್ಡ್‌ಗಳಲ್ಲಿ, ಹಸಿ, ಒಣ ಮತ್ತು ನೈರ್ಮಲ್ಯ ತ್ಯಾಜ್ಯದ ವಿಲೇವಾರಿಯನ್ನು ಒಂದೇ ಏಜೆನ್ಸಿಗೆ ನೀಡಲು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿಯು (ಬಿಎಸ್‌ಡಬ್ಲ್ಯೂಎಂಎಲ್) ಹೊಸದಾಗಿ ಟೆಂಡರ್ ಆಹ್ವಾನಿಸಿದೆ.

ಕಸ ವಿಲೇವಾರಿಗಾಗಿ 89 ಪ್ಯಾಕೇಜ್‌ಗಳಲ್ಲಿ ಟೆಂಡರ್ ಕರೆಯಲಾಗಿದೆ. ಮೂರ್ನಾಲ್ಕು ವಾರ್ಡ್‌ಗಳನ್ನು ಒಟ್ಟಾಗಿ ಸೇರಿಸಿ ಪ್ಯಾಕೇಜ್ ಸಿದ್ಧಪಡಿಸಲಾಗಿದೆ. ಅರ್ಹ ಗುತ್ತಿಗೆದಾರರು 5 ವರ್ಷಗಳ ಕಾಲ ತ್ಯಾಜ್ಯ ನಿರ್ವಹಣೆಯ ಜವಾಬ್ದಾರಿ ನಿಭಾಯಿಸಲಿದ್ದಾರೆ ಎಂದು ಬಿಎಸ್‌ಡಬ್ಲ್ಯೂಎಂಎಲ್ ಮಾಹಿತಿ ನೀಡಿದೆ. 

ಈ ಹಿಂದೆ ಪಾಲಿಕೆಯ 100 ವಾರ್ಡ್‌ಗಳಲ್ಲಿ ಕಸ ವಿಲೇವಾರಿಗೆ ಟೆಂಡರ್ ಕರೆದು ಗುತ್ತಿಗೆದಾರರನ್ನು ನೇಮಿಸಿತ್ತು. ಈಗ ಈ ಗುತ್ತಿಗೆ ಅವಧಿ ಮುಗಿದಿದೆ. ಹಾಗಾಗಿ, ಬಿಬಿಎಂಪಿಯ ಎಲ್ಲ 243 ವಾರ್ಡ್‌ಗಳಲ್ಲೂ ಕಸ ವಿಲೇವಾರಿಗೆ ಪ್ರತ್ಯೇಕ ಟೆಂಡರ್ ಕರೆಯಲಾಗಿದೆ.

ಸ್ವಚ್ಛ ಸರ್ವೇಕ್ಷಣ್ ಸಮೀಕ್ಷೆ 2022 ವರದಿಯ ಪ್ರಕಾರ ಇಲ್ಲಿಯವರೆಗೂ ಆರನೇ ಬಾರಿ 'ಸ್ವಚ್ಛ ನಗರ' ಎಂದು ಎನಿಸಿಕೊಂಡ ಇಂದೋರ್ ನಗರದ ಮಾದರಿಯಲ್ಲಿ ತ್ಯಾಜ್ಯಗಳನ್ನು ವಿಂಗಡಿಸಿ ವಿಲೇವಾರಿ ಮಾಡಲು ಪಾಲಿಕೆ ಆಯೋಜಿಸಿದೆ. 

ಪ್ರಸ್ತುತ ನಗರದಲ್ಲಿ ನಿತ್ಯ 5800 ಟನ್ ಕಸ ಉತ್ಪತ್ತಿಯಾಗುತ್ತಿದ್ದು, ತ್ಯಾಜ್ಯ ಸಂಗ್ರಹ, ವಿಲೇವಾರಿ, ಸಾಗಣೆ ಮತ್ತು ಸಂಸ್ಕರಣೆಗಾಗಿ ಪಾಲಿಕೆಯು ವರ್ಷಕ್ಕೆ 1000 ಕೋಟಿ ರೂ. ಗಿಂತಲೂ ಹೆಚ್ಚು ಹಣ ವ್ಯಯಿಸುತ್ತಿದೆ.

ಮೂರು ವರ್ಷಗಳ ಹಿಂದೆ ಮನೆ ಮನೆಯಿಂದ ಹಸಿ ಮತ್ತು ಒಣ ಕಸ ಸಂಗ್ರಹಿಸಿ ವಿಲೇವಾರಿ ಮಾಡುವ ಹೊಣೆಯನ್ನು ಬೇರೆ ಬೇರೆ ಗುತ್ತಿಗೆದಾರರಿಗೆ ವಹಿಸಲಾಗಿತ್ತು. ಹಸಿ ಮತ್ತು ಒಣ ಕಸ ವಿಲೇವಾರಿಯನ್ನು ಬೇರೆ ಬೇರೆ ಏಜೆನ್ಸಿಗಳಿಗೆ ವಹಿಸಿದರೆ, ಮಿಶ್ರ ಕಸ ಉತ್ಪತ್ತಿಯಾಗುವ ಸಮಸ್ಯೆ ನಿಯಂತ್ರಿಸಬಹುದು ಎಂದು ಹಸಿ ಕಸವನ್ನಷ್ಟೇ ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತಿತ್ತು. ಈ ವ್ಯವಸ್ಥೆ ಜಾರಿಗೆ ಬಂದ ನಂತರ ಮಿಶ್ರ ಕಸ ಒಂದುಗೂಡುವ ಪ್ರಮಾಣ ಮಾತ್ರ ಕಡಿಮೆಯಾಗಿಲ್ಲ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ತಿಳಿಸಿದೆ. 

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಸ್ವಚ್ಛ ಸರ್ವೇಕ್ಷಣ ಸಮೀಕ್ಷೆ-2022; 15 ಸ್ಥಾನ ಕುಸಿದ ಬೆಂಗಳೂರು

ಈಗಲೂ ಅನೇಕ ವಾರ್ಡ್‌ಗಳಲ್ಲಿ ಸಾರ್ವಜನಿಕರು ರಾತ್ರಿಯ ವೇಳೆ ಯಾರೂ ಕಾಣದ ಸಮಯದಲ್ಲಿ ಕಸದ ರಾಶಿ ಹಾಕುವ ಕೆಲಸ ಮುಂದುವರಿದಿದೆ. ಹೀಗಾಗಿಯೇ, ಎಲ್ಲ ಕಸದ ಸಂಗ್ರಹ, ವಿಲೇವಾರಿಯನ್ನು ಒಂದೇ ಏಜೆನ್ಸಿಗೆ ನೀಡಲಾಗುತ್ತಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ. 

ನೂತನ ಟೆಂಡರ್ ಯೋಜನೆಯಲ್ಲಿ ಹಸಿ, ಒಣ, ನೈರ್ಮಲ್ಯ ತ್ಯಾಜ್ಯ (ಕೋವಿಡ್‌ ತ್ಯಾಜ್ಯವೂ ಸೇರಿ), ಕಟ್ಟಡ ಅವಶೇಷ, ಬೀದಿ ಕಸ ಮತ್ತು ವಾಣಿಜ್ಯ ಕಸ ಸಂಗ್ರಹಿಸಿ ವಿಂಗಡಿಸುವ ಮೂಲಕ ವಿಲೇವಾರಿ ಮಾಡಲು ತೀರ್ಮಾನಿಸಲಾಗಿದೆ. 

ನಿಮಗೆ ಏನು ಅನ್ನಿಸ್ತು?
0 ವೋಟ್