
- ಕಸವನಹಳ್ಳಿ, ಹೂಡಿ ವ್ಯಾಪ್ತಿಯಲ್ಲಿ ಸರ್ವೆ ಮುಂದುವರೆದಿದೆ
- ಮಳೆ ನೀರುಗಾಲುವೆಗೆ ನಿರ್ಮಿಸಿದ್ದ ಕಾಂಪೌಂಡ್ ಗೋಡೆ ತೆರವು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದು, ಸೆಪ್ಟೆಂಬರ್ 21 ರಂದು ಮಹದೇವಪುರ ವಲಯದ ವ್ಯಾಪ್ತಿಯ ಕೆಲ ಪ್ರದೇಶಗಳಲ್ಲಿ ಒತ್ತುವರಿ ತೆರವುಗೊಳಿಸಲಾಯಿತು.
ನಗರದ ಮಹದೇವಪುರ ವಲಯ ವ್ಯಾಪ್ತಿಯ ಕಸವನಗಳ್ಳಿಯ ವಲ್ಲಿಯಮ್ಮ ಲೇಔಟ್, ಗ್ರೀನ್ ಹುಡ್ ರೆಸಿಡೆನ್ಸಿ, ಮಾರತ್ಹಳ್ಳಿ ಪೊಲೀಸ್ ಠಾಣೆಯ ಹಿಂಭಾಗ ಜಲಮಂಡಳಿಯ ಎಸ್ಟಿಪಿ ಬಳಿ ರಾಜಕಾಲುವೆ ಮೇಲೆ ನಿರ್ಮಿಸಿದ್ದ ಆರ್ ಸಿ ಸಿ ಸೇತುವೆಯ ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮಾಡಲಾಗಿದೆ.

ಕಸವನಹಳ್ಳಿ ವಲ್ಲಿಯಮ್ಮ ಲೇಔಟ್ನಲ್ಲಿ ಶೆಡ್ಗಳನ್ನು ತೆರವುಗೊಳಿಸಲಾಗಿದೆ. ಗ್ರೀನ್ ಹುಡ್ ರೆಸಿಡೆನ್ಸ್ ಆವರಣದಲ್ಲಿ ಸುಮಾರು 150 ಮೀಟರ್ ಉದ್ದದ ಮಳೆ ನೀರುಗಾಲುವೆಯ ಮೇಲೆ ಅಳವಡಿಸಿದ್ದ ಸ್ಲ್ಯಾಬ್ ನ ತೆರವು ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಸ್ಲ್ಯಾಬ್ಗೆ ಅಳವಡಿಸಿದ್ದ ಗ್ರಿಲ್ ತೆರವುಗೊಳಿಸುವುದು ಇನ್ನೂ ಬಾಕಿ ಇದೆ ಎಂದು ಪಾಲಿಕೆ ಮಾಹಿತಿ ನೀಡಿದೆ.
ಈ ಸುದ್ದಿ ಓದಿದ್ದೀರಾ?: ಒಂದು ನಿಮಿಷದ ಓದು | ಬಿಬಿಎಂಪಿ ಚುನಾವಣೆ: ಸೆ.29ರಂದು ಅಂತಿಮ ಮತದಾರರ ಪಟ್ಟಿ ಪ್ರಕಟ
ಮಳೆ ನೀರುಗಾಲುವೆ ಮೇಲೆ ನಿರ್ಮಿಸಿದ್ದ ಕಾಂಪೌಂಡ್ ಗೋಡೆಯನ್ನು ಕೂಡಾ ತೆರವುಗೊಳಿಸಲಾಗಿದೆ. ಮಾರತಹಳ್ಳಿ ಪೊಲೀಸ್ ಠಾಣೆಯ ಹಿಂಭಾಗ, ಜಲಮಂಡಳಿ ಎಸ್ಟಿಪಿ ಬಳಿ ರಾಜಕಾಲುವೆಯ ಮೇಲೆ ನಿರ್ಮಾಣ ಮಾಡಿರುವ ಸೇತುವೆ ತೆರವು ಕಾರ್ಯಾಚರಣೆಯು ಬಹುತೇಕ ಪೂರ್ಣಗೊಂಡಿದ್ದು, ಸೆಪ್ಟೆಂಬರ್ 22ರಂದು ಸಹ ತೆರವು ಕಾರ್ಯಾಚರಣೆ ಮುಂದುವರಿಯುತ್ತದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.
ಕಸವನಹಳ್ಳಿ, ಹೂಡಿ ವ್ಯಾಪ್ತಿಯಲ್ಲಿ ಸರ್ವೇ ಕಾರ್ಯ ಮುಂದುವರೆದಿದ್ದು, ಒತ್ತುವರಿ ಮಾಡಿರುವ ಜಾಗವನ್ನು ಮಾರ್ಕಿಂಗ್ ಮಾಡಿದ ಬಳಿಕ ತೆರವು ಕಾರ್ಯಾಚರಣೆ ನಡೆಸಲಾಗುತ್ತದೆ ಪಾಲಿಕೆ ತಿಳಿಸಿದೆ.