ಬಿಬಿಎಂಪಿ | ಪಾವತಿ ಪಾರ್ಕಿಂಗ್ ಜಾರಿಗೆ ಟೆಂಡರ್:‌ ಮನೆ ಮುಂದೆ ವಾಹನ ನಿಲ್ಲಿಸಿದರೂ ದಂಡ!

  • ಮನೆಮುಂದೆ ವಾಹನ ಪಾರ್ಕ್‌ ಮಾಡಿದರೆ ವಾರ್ಷಿಕ 3- 5 ಸಾವಿರ ಶುಲ್ಕ
  • ಕೆಟಿಟಿಪಿ ಕಾನೂನು ನಿಯಮ ಉಲ್ಲಂಘಿಸಿ 15 ದಿನ ಟೆಂಡರ್‌ ಕಾಲಾವಕಾಶ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಜಾರಿಗೆ ತಂದಿರುವ ಪಾವತಿ ಪಾರ್ಕಿಂಗ್‌ನ ಹೊಸ ನಿಯಮದ ಪ್ರಕಾರ ಮನೆ ಮಾಲೀಕರು ತಮ್ಮ ಮನೆ ಮುಂದೆ ವಾಹನ ಪಾರ್ಕಿಂಗ್ ಮಾಡಿದರೂ ಅದಕ್ಕೆ ಪಾರ್ಕಿಂಗ್‌ ಶುಲ್ಕ ಕಟ್ಟಬೇಕು!

ನಗರದಲ್ಲಿ ಪಾರ್ಕಿಂಗ್ ನೀತಿ 2.0 ಜಾರಿಗೆ ತರಲು ತೀರ್ಮಾನಿಸಿರುವುದರ ಜೊತೆಗೆ ತರಾತುರಿಯಲ್ಲಿ ಟೆಂಡರ್ ಕರೆಯಲಾಗಿದೆ. ನಗರದ ಎಂಟು ವಲಯಗಳಿಗೂ ಹೊಸ ಪಾರ್ಕಿಂಗ್ ನೀತಿ ಅನ್ವಯಿಸಲಿದೆ. ಪಾವತಿ ಪಾರ್ಕಿಂಗ್ ಪಾಲಿಸಿ ಜಾರಿ ಮಾಡುವ ಸಲುವಾಗಿ ಹಲವು ಬಾರಿ ಚರ್ಚೆ ನಡೆಸಿದ ನಂತರ ಈ ನೀತಿ ಜಾರಿಯಾಗುತ್ತಿದೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್  ಸ್ಪಷ್ಟಪಡಿಸಿದ್ದಾರೆ.

ಪಾವತಿ ಪಾರ್ಕಿಂಗ್ ನೀತಿ 

ಬೆಂಗಳೂರು ನಗರದಲ್ಲಿ ವಾಸಿಸುತ್ತಿರುವವರ ಮನೆಗಳ ಬಳಿ ಪಾರ್ಕಿಂಗ್ ಮಾಡಲು ವ್ಯವಸ್ಥೆ ಇಲ್ಲದಿದ್ದರೆ ಸಾರ್ವಜನಿಕರು 3ರಿಂದ 5 ಸಾವಿರ ಹಣ ಕೊಟ್ಟು ರಸ್ತೆ ಬದಿ ವಾಹನ ನಿಲ್ಲಿಸಲು ಪರವಾನಗಿ ಪಡೆಯಬೇಕಾಗುತ್ತದೆ. ಒಟ್ಟಾರೆ ಹೊಸ ಪಾರ್ಕಿಂಗ್ ನೀತಿ ಜಾರಿಯಾದರೆ ನಗರದಲ್ಲಿರುವ ಸಾರ್ವಜನಿಕರು ತಮ್ಮ ವಾಹನಗಳ ಪಾರ್ಕಿಂಗ್‌ಗೆ ಹಣ ವ್ಯಯಿಸುವಂತಾಗಲಿದೆ.

ಯಾವುದೇ ಮುನ್ಸೂಚನೆ ನೀಡದೆ ಸರ್ಕಾರ ಹೊಸ ಪಾರ್ಕಿಂಗ್ ನೀತಿ ಜಾರಿಗೆ ತರಲು ಮುಂದಾಗಿರುವುದು ನಗರದ ನಿವಾಸಿಗಳು ಪರದಾಡುವಂತಾಗಿದೆ. 

ಕೆಟಿಟಿಪಿ ಕಾನೂನು ಪ್ರಕಾರ 40 ದಿನಗಳ ಕಾಲಾವಕಾಶ 

ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಟಿಪಿ) ಕಾನೂನಿನ ಪ್ರಕಾರ ಟೆಂಡರ್‍‌ನಲ್ಲಿ ಭಾಗವಹಿಸಲು ಬಿಡ್ದಾರರಿಗೆ 40 ದಿನಗಳ ಕಾಲವಕಾಶ ನೀಡಬೇಕು. ಆದರೆ, ತರಾತುರಿಯಲ್ಲಿ ಹೊಸ ವ್ಯವಸ್ಥೆ ಜಾರಿಗೆ ಮುಂದಾಗಿರುವ ಬಿಬಿಎಂಪಿ, ಕೇವಲ 15 ದಿನಗಳ ಕಾಲಾವಕಾಶ ನೀಡಿ ಟೆಂಡರ್‍‌ ಕರೆದಿದೆ.

ಈ ಸುದ್ದಿ ಓದಿದ್ದೀರಾ?: ಬೆಂಗಳೂರು | ಮುಂದಿನ ವರ್ಷದೊಳಗೆ ಗುಂಡಿ ಮುಕ್ತ ರಸ್ತೆ ಎನ್ನುತ್ತಿದೆ ಬಿಬಿಎಂಪಿ; ಮಾತು ಉಳಿಸಿಕೊಳ್ಳುತ್ತಾ ಪಾಲಿಕೆ?

ಈ ಹಿಂದೆ 2012ರಲ್ಲಿ ಬಿಬಿಎಂಪಿ ಕೌನ್ಸಿಲ್‌ನಲ್ಲಿ ಹೊಸ ಪಾರ್ಕಿಂಗ್ ನೀತಿ ಜಾರಿಗೆ ಅನುಮೋದನೆ ಪಡೆಯಲಾಗಿತ್ತು. ಸಾಮಾನ್ಯ ಪಾರ್ಕಿಂಗ್ ಬೇಡಿಕೆಯನ್ನು ತಗ್ಗಿಸುವ ಉದ್ದೇಶದಿಂದ ಸ್ವಯಂ ಚಾಲಿತ ಮೀಟರ್ ಪಾರ್ಕಿಂಗ್ ವ್ಯವಸ್ಥೆ ತರುವುದರ ಜೊತೆಗೆ ಪಾರ್ಕಿಂಗ್‌ ಶುಲ್ಕ ವಿಸ್ತರಿಸಲು ತೀರ್ಮಾನಿಸಲಾಗಿತ್ತು.

2020ರಲ್ಲಿ ನಿಗದಿ ಪಡಿಸಲಾದ ಶುಲ್ಕವನ್ನೇ ನಾವು ಅಂತಿಮಗೊಳಿಸಿದ್ದೇವೆ. ಇದರ ಹೊರತಾಗಿ ಏರಿಯಾ ಹಾಗೂ ಜಾಗಗಳಿಗೆ ಅನುಗುಣವಾಗಿ ಶುಲ್ಕ ಇರಲಿದೆ. ಎ, ಬಿ, ಸಿ ಹೀಗೆ ಮೂರು ಹಂತವಾಗಿ ಶುಲ್ಕ ಪಾವತಿಗೆ ಅವಕಾಶ ಮಾಡಿಕೊಡಲಾಗುತ್ತೆ ಎಂದು ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.

ನಿಮಗೆ ಏನು ಅನ್ನಿಸ್ತು?
0 ವೋಟ್