
- ನ.2ರಂದು ಮುಖ್ಯಮಂತ್ರಿ ಆದೇಶದ ಮೇರೆಗೆ ಇಬ್ಬರು ಮುಖ್ಯ ಎಂಜಿನಿಯರ್ಗಳ ವರ್ಗಾವಣೆ
- ಬುಧವಾರ ಅಧಿಕಾರ ವಹಿಸಿಕೊಂಡ ಬಿಬಿಎಂಪಿಯ ಮೂವರು ಎಂಜಿನಿಯರ್ಗಳು
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ)ಯ ಇಬ್ಬರು ಮುಖ್ಯ ಎಂಜಿನಿಯರ್ಗಳು ಮುಖ್ಯಮಂತ್ರಿ ಹೊರಡಿಸಿದ ಆದೇಶವನ್ನು ಲೆಕ್ಕಿಸದೆ ಪ್ರಭಾವ ಬಳಸಿ ಬದಲಿ ಹುದ್ದೆ ಪಡೆದುಕೊಂಡಿದ್ದಾರೆ ಎಂದು ಬಿಬಿಎಂಪಿ ಎಂಜಿನಿಯರ್ಗಳು ದೂರಿದ್ದಾರೆ.
ಬಿಬಿಎಂಪಿ ಯೋಜನೆ ಮತ್ತು ರಾಜಕಾಲುವೆ ವಿಭಾಗದಲ್ಲಿ ಅಂದುಕೊಂಡಿರುವ ಕೆಲಸ ನಡೆಯುತ್ತಿಲ್ಲ. ನಗರದಲ್ಲಿ ರಾಜಕಾಲುವೆ ಒತ್ತುವರಿ ತೆರವು ಕಾರ್ಯಾಚರಣೆ ಸರಿಯಾದ ಕ್ರಮದಲ್ಲಿ ನಡೆಯುತ್ತಿಲ್ಲ ಎಂಬ ಕಾರಣದಿಂದ ನ.2ರಂದು ಇಬ್ಬರು ಮುಖ್ಯ ಎಂಜಿನಿಯರ್ಗಳನ್ನು ಮುಖ್ಯಮಂತ್ರಿ ಆದೇಶದ ಮೇರೆಗೆ ವರ್ಗಾವಣೆ ಮಾಡಲಾಗಿತ್ತು.
ದಾಸರಹಳ್ಳಿ ವಲಯ ಮುಖ್ಯ ಎಂಜಿನಿಯರ್ ಆಗಿ ಬಿಬಿಎಂಪಿ ಯೋಜನೆ ವಿಭಾಗ ಹಾಗೂ ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಆಗಿದ್ದ ಎಂ. ಲೋಕೇಶ್ ಅವರನ್ನು ವರ್ಗಾಯಿಸಲಾಗಿತ್ತು.
ಹೆಚ್ಚುವರಿ ಯೋಜನೆ ವಿಭಾಗದ ಮುಖ್ಯ ಎಂಜಿನಿಯರ್ ಹುದ್ದೆಗೆ ಮಹದೇವಪುರ ವಲಯದ ಅಧೀಕ್ಷಕ ಎಂಜಿನಿಯರ್ ಪ್ರವೀಣ್ ಲಿಂಗಯ್ಯ ಹಾಗೂ ಬಿಬಿಎಂಪಿ ರಾಜಕಾಲುವೆ ವಿಭಾಗದ ಮುಖ್ಯ ಎಂಜಿನಿಯರ್ ಆಗಿ ಬೆಂಗಳೂರು ಸ್ಮಾರ್ಟ್ ಸಿಟಿಯ ಮುಖ್ಯ ಎಂಜಿನಿಯರ್ ಆಗಿದ್ದ ವಿನಾಯಕ ಸುಗೂರ್ ಅವರನ್ನು ವರ್ಗಾವಣೆ ಮಾಡಲಾಗಿತ್ತು. ಆದರೆ ನ.7ರವರೆಗೂ ಈ ಆದೇಶ ಅನುಷ್ಠಾನಕ್ಕೆ ಬಂದಿರಲಿಲ್ಲ.
ಬಳಿಕ, ನವೆಂಬರ್ 7ರಂದು ನಗರಾಭಿವೃದ್ಧಿ ಇಲಾಖೆಯಿಂದ ಬಂದ ಆದೇಶವನ್ನು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಕಚೇರಿ ಆದೇಶ ಹೊರಡಿಸಿ ಬದಲಾಯಿಸಿದ್ದಾರೆ. ಎಂ ಲೋಕೇಶ್ ಅವರನ್ನು ಮಹದೇವಪುರ ವಲಯದ ಮುಖ್ಯ ಎಂಜಿನಿಯರ್ ಆಗಿ, ಹಾಗೂ ಅಲ್ಲಿನ ಮುಖ್ಯ ಎಂಜಿನಿಯರ್ ಬಸವರಾಜ ಕಬಾಡೆ ಅವರನ್ನು ಬೃಹತ್ ನೀರುಗಾಲುವೆ ವಿಭಾಗಕ್ಕೆ ವರ್ಗಾಯಿಸಿದ್ದಾರೆ. ವಿನಾಯಕ ಸುಗೂರ್ ಅವರನ್ನು ಯೋಜನಾ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿದೆ. ಇವರೆಲ್ಲರೂ ಬುಧವಾರ ಅಧಿಕಾರ ವಹಿಸಿಕೊಂಡಿದ್ದಾರೆ.
ಬಿಬಿಎಂಪಿ ಮುಖ್ಯ ಆಯುಕ್ತರು ಕೆಲವು ಆದೇಶ ಮಾಡಬಹುದು. ಆದರೆ, ಈಗ ಮಾಡಿರುವ ವರ್ಗಾವಣೆ ಇದು ವೃಂದ ಮತ್ತು ನೇಮಕಾತಿ ನಿಯಮಗಳ ವಿರುದ್ಧವಾಗಿದೆ. ಇದರಿಂದ ಮುಂದಿನ ದಿನಗಳಲ್ಲಿ ಸಾಕಷ್ಟು ಸಮಸ್ಯೆ ಬರುತ್ತದೆ ಎಂದು ನಗರಾಭಿವೃದ್ಧಿ ಇಲಾಖೆಯ ಅಧಿಕಾರಿಗಳು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | ಸರ್ಕಾರವು ಜನರಿಗಾಗಿ ರಸ್ತೆ ರಿಪೇರಿ ಮಾಡುವ ಬದಲು ಪ್ರಧಾನಿಗಾಗಿ ದುರಸ್ತಿ ಮಾಡುತ್ತಿದೆ; ಆಪ್ ಪ್ರತಿಭಟನೆ
ಈಗಾಗಲೇ ಮುಖ್ಯಮಂತ್ರಿ ಅವರು ನಿಡಿರುವ ಆದೇಶದಂತೆ ವರ್ಗಾವಣೆಯನ್ನು ಅನುಷ್ಠಾನಕ್ಕೆ ತರದೇ, ಕಚೇರಿ ಆದೇಶದಲ್ಲಿ ಇಬ್ಬರು ಇಬ್ಬರು ಮುಖ್ಯ ಎಂಜಿಯರ್ಗಳ ಹುದ್ದೆಯನ್ನು ಬದಲು ಮಾಡಲಾಗಿದೆ. ಇದಕ್ಕೆ ಕಾರಣ ಆ ಇಬ್ಬರು ಎಂಜಿನಿಯರ್ಗಳು ಹೇರಿರುವ ಒತ್ತಡ ಎನ್ನಲಾಗುತ್ತಿದೆ. ಅಧಿಕಾರದ ಆಸೆಯಿಂದ ಮುಖ್ಯಮಂತ್ರಿ ಆದೇಶ ಲೆಕ್ಕಿಸದೇ ಈ ರೀತಿ ಮಾಡಿದ್ದಾರೆ ಎಂದು ಬಿಬಿಎಂಪಿ ಎಂಜಿನಿಯರ್ಗಳು ಹೇಳಿದರು.
ಈ ಬಗ್ಗೆ ಈ ದಿನ.ಕಾಮ್ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅವರನ್ನು ಸಂಪರ್ಕಿಸಿದಾಗ, "ನನಗೆ ಯಾವುದೇ ವಿಚಾರದ ಬಗ್ಗೆ ಪ್ರತಿಕ್ರಿಯೆ ನೀಡಲು ಆಸಕ್ತಿಯಿಲ್ಲ" ಎಂದು ಹೇಳಿದರು.