ಬಿಬಿಎಂಪಿ | 50 ಸಾವಿರ ದೋಷಪೂರಿತ ಬಾವುಟ ವಾಪಸ್

polyester flag
  • 10 ಲಕ್ಷ ಬಾವುಟಗಳಲ್ಲಿ ಶೇ.5 ರಷ್ಟು ಬಾವುಟಗಳು ದೋಷಪೂರ್ಣ
  • ಬಾವುಟಗಳಲ್ಲಿ ಅಶೋಕ ಚಕ್ರ ಗುಂಡಾಗಿರದೆ ಅಂಡಾಕಾರವಾಗಿದೆ!

‘ಮನೆ ಮನೆಯಲ್ಲಿ ರಾಷ್ಟ್ರಧ್ವಜ’ ಅಭಿಯಾನದ ಸಲುವಾಗಿ ಮನೆ ಮನೆಗೂ ವಿತರಿಸಿದ್ದ ಬಾವುಟಗಳಲ್ಲಿ ದೋಷ ಕಂಡುಬಂದರೆ, ಅವನ್ನು ಹಿಂದಿರುಗಿಸಲು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ವಿಶೇಷ ಆಯುಕ್ತ ರಂಗಪ್ಪ ಸೂಚಿಸಿದ್ದರು. ಅದಾದ ಮೂರು ದಿನಕ್ಕೆ 50,000 ದೋಷಪೂರಿತ ಬಾವುಟಗಳನ್ನು ಬಿಬಿಎಂಪಿ ಕಚೇರಿಗೆ ಹಿಂತಿರುಗಿಸಲಾಗಿದೆ.

ಸ್ವಾತಂತ್ರ್ಯದ ಅಮೃತ ಮಹೋತ್ಸವದ ನಿಮಿತ್ತ ‘ಮನೆ ಮನೆಯಲ್ಲಿ ರಾಷ್ಟ್ರಧ್ವಜ’ ಅಭಿಯಾನವನ್ನು ಆಗಸ್ಟ್ 13ರಿಂದ 15ರವರೆಗೆ ಹಮ್ಮಿಕೊಳ್ಳಲಾಗಿದೆ. ಈ ದಿನಗಳಂದು ಎಲ್ಲ ಮನೆಗಳು, ಸರ್ಕಾರಿ ಕಚೇರಿಗಳು, ಸಂಘ ಸಂಸ್ಥೆಗಳ ಕಟ್ಟಡಗಳ ಮೇಲೆ ರಾಷ್ಟ್ರಧ್ವಜವನ್ನು ಆರೋಹಣ ಮಾಡಬೇಕು ಎಂದು ಕೇಂದ್ರ ಸರ್ಕಾರ ಮಾರ್ಗಸೂಚಿ ಹೊರಡಿಸಿತ್ತು. 

ಬಿಬಿಎಂಪಿ ಸಿಬ್ಬಂದಿ ನೀಡಿರುವ ಧ್ವಜದಲ್ಲಿ ಲೋಪದೋಷ ಕಂಡುಬಂದಲ್ಲಿ ಜನರು ಎಲ್ಲಿ ಖರೀದಿಸಿರುತ್ತಾರೋ ಅದೇ ಬಿಬಿಎಂಪಿ ವಾರ್ಡ್‌ಗಳಿಗೆ ತೆರಳುವ ಅಗತ್ಯವಿಲ್ಲ. ದೋಷಪೂರಿತ ಬಾವುಟಗಳನ್ನು ಹಿಂದಿರುಗಿಸಲು ಯಾವುದೇ ಬಿಬಿಎಂಪಿ ವಾರ್ಡ್ ಕಚೇರಿಗೆ ಭೇಟಿ ನೀಡಿ ವಿನಿಮಯ ಮಾಡಿಕೊಳ್ಳಬಹುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಶನಿವಾರ ಹೇಳಿದ್ದಾರೆ.

ಅಭಿಯಾನದ ಭಾಗವಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ 10 ಲಕ್ಷ ರಾಷ್ಟ್ರಧ್ವಜಗಳನ್ನು ಖರೀದಿಸಿರುವ ಬಿಬಿಎಂಪಿಯು, ಅವುಗಳನ್ನು ನಾಗರಿಕರಿಗೆ ವಿತರಿಸುವ ಕಾರ್ಯವನ್ನು ಕೈಗೊಂಡಿದೆ. ಆದರೆ, ಅವುಗಳಲ್ಲಿ ಶೇಕಡ 5 ರಷ್ಟು ಬಾವುಟಗಳು ಲೋಪದೋಷದಿಂದ ಕೂಡಿವೆ ಎಂದು ತುಷಾರ್ ಗಿರಿನಾಥ್‌ ತಿಳಿಸಿದ್ದಾರೆ.

ಈ ಸುದ್ದಿ ಓದಿದದ್ದೀರಾ?:ಬೆಂಗಳೂರು | ಭಾರೀ ಮಳೆಗೆ ಕುಸಿದುಬಿದ್ದ ಶಿಥಿಲಗೊಂಡಿದ್ದ ಮೂರಂತಸ್ತಿನ ಕಟ್ಟಡ; ಪ್ರಾಣಾಪಾಯವಿಲ್ಲ

"ಪಾಲಿಸ್ಟರ್‌ನಿಂದ ತಯಾರಾದ ರಾಷ್ಟ್ರಧ್ವಜದಲ್ಲಿ ಹಲವು ದೋಷಗಳಿವೆ. ಅಶೋಕ ಚಕ್ರದ ಅಳತೆಯಲ್ಲಿ ತಪ್ಪಾಗಿದೆ. ಚಕ್ರ ದುಂಡಾಗಿರದೆ ಅಂಡಾಕಾರವಾಗಿದೆ. ಒಂದೇ ಚಕ್ರವು ಎರಡು ಬಾರಿ ಮುದ್ರಿತವಾಗಿದೆ. ಧ್ವಜದ ಮೇಲಿನ ಬಣ್ಣಗಳು ಸೂಕ್ತವಾಗಿಲ್ಲ ಎಂಬುದು ಸಾರ್ವಜನಿಕರ ಆರೋಪವಾಗಿದೆ.

“ಮನೆ ಮನೆಯಲ್ಲಿ ರಾಷ್ಟ್ರಧ್ವಜ' ಅಭಿಯಾನವನ್ನು ಸಾರ್ವಜನಿಕರು ಸಂಭ್ರಮಿಸದೇ ಬಾವುಟದಲ್ಲಿರುವ ಲೋಪದೋಷಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುವ ಮೂಲಕ ಸರ್ಕಾರದ ಈ ನಡೆಯನ್ನು ಟೀಕಿಸುತ್ತಿದ್ದಾರೆ" ಎಂದು ಬಿಬಿಎಂಪಿ ಆಡಳಿತ ವಿಭಾಗದ ವಿಶೇಷ ಆಯುಕ್ತ ರಂಗಪ್ಪ ಬೇಸರ ವ್ಯಕ್ತಪಡಿಸಿದರು. 

ನಿಮಗೆ ಏನು ಅನ್ನಿಸ್ತು?
0 ವೋಟ್