ಧ್ವಜ ಸಂಹಿತೆಗೆ ಅನುಗುಣವಾಗಿ ರಾಷ್ಟ್ರಧ್ವಜ ತೆಗೆದಿಡುವಂತೆ ಬಿಬಿಎಂಪಿ ಮನವಿ

  • ‘ಹರ್ ಘರ್ ತಿರಂಗಾ’ ಅಭಿಯಾನಕ್ಕೆ ತೆರೆ
  • ‘ಅಶೋಕ ಚಕ್ರ’ ಮೇಲ್ಭಾಗದಲ್ಲಿ ಬರುವಂತೆ ಮಡಚಿಡಬೇಕು

ಬೆಂಗಳೂರಿನಲ್ಲಿ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜ ಹಾರಿಸಿದ್ದ ನಾಗರಿಕರು ಬಾವುಟವನ್ನು ಧ್ವಜ ಸಂಹಿತೆಗೆ ಅನುಗುಣವಾಗಿ ತೆಗೆದಿಡುವಂತೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮನವಿ ಮಾಡಿದೆ.

ಕೇಂದ್ರ ಸರ್ಕಾರವು ‘ಹರ್ ಘರ್ ತಿರಂಗಾ’ ಅಭಿಯಾನದ ಅಡಿಯಲ್ಲಿ ಆಗಸ್ಟ್ 13ರಿಂದ ಆಗಸ್ಟ್ 16ರವರೆಗೆ ದೇಶಾದ್ಯಂತ ನಾಗರಿಕರು ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸುವಂತೆ ಕರೆಕೊಟ್ಟಿತ್ತು. ಅಭಿಯಾನವು ಮಂಗಳವಾರ ಅಂತ್ಯಗೊಂಡಿದೆ. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಧ್ವಜವನ್ನು ತೆಗೆದಿಡುವ ಕುರಿತು ಪ್ರಕಟಣೆ ಹೊರಡಿಸಿದೆ.

“ಬಿಬಿಎಂಪಿ ವ್ಯಾಪ್ತಿಯಲ್ಲಿರುವ ನಾಗರಿಕರು 75ನೇ ಅಮೃತ ಮಹೋತ್ಸವದ ಅ೦ಗವಾಗಿ ಪ್ರತಿ ಮನೆಯಲ್ಲೂ ರಾಷ್ಟ್ರಧ್ವಜ ಹಾರಿಸುವ ಕಾರ್ಯವನ್ನು ಯಶಸ್ವಿಗೊಳಿಸಿದ್ದಾರೆ. ತಮ್ಮ-ತಮ್ಮ ಮನೆಗಳು, ವಾಣಿಜ್ಯ ಮಳಿಗೆಗಳು, ಕಚೇರಿಗಳು, ಸ೦ಘ-ಸಂಸ್ಥೆಗಳ ಮೇಲೆ ಹಾರಿಸಿದ್ದ ‘ರಾಷ್ಟ್ರ ದ್ವಜ’ವನ್ನು ಜೋಪಾನವಾಗಿ ತೆಗೆದು, ‘ಅಶೋಕ ಚಕ್ರ’ ಮೇಲ್ಭಾಗದಲ್ಲಿ ಬರುವಂತೆ ಮಡಚಿಡಬೇಕು. ಧ್ವಜಕ್ಕೆ ಧಕ್ಕೆ ಬಾರದ ಹಾಗೆ ಸುರಕ್ಷಿತ ಸ್ಥಳದಲ್ಲಿ ಇಡುವುದು ಪ್ರತಿ ನಾಗರಿಕರ ಆದ್ಯ ಕರ್ತವ್ಯವಾಗಿದೆ” ಎಂದು ಬಿಬಿಎಂಪಿ ತಿಳಿಸಿದೆ.

ಈ ಸುದ್ದಿ ಓದಿದ್ದೀರಾ?: ಬಿಬಿಎಂಪಿ | ಮೀಸಲಾತಿಗೆ ತಡೆ ನೀಡಿದರೆ ಸುಪ್ರೀಂ ಕೋರ್ಟ್ ಆದೇಶದ ಉಲ್ಲಂಘನೆ; ಚುನಾವಣಾ ಆಯೋಗದ ಪ್ರತಿಪಾದನೆ

“ನಗರ ಪಾಲಿಕೆ ಕಚೇರಿಗಳು, ರಸ್ತೆ ಬದಿ, ಪ್ರಮುಖ ವೃತ್ತಗಳಲ್ಲಿ ಅಳವಡಿಸಿರುವ ಧ್ವಜಗಳನ್ನು ತೆಗೆಯಲಾಗುತ್ತಿದೆ. ಅದರಂತೆ ನಾಗರಿಕರೆಲ್ಲರೂ ತಾವುಗಳು ಹಾರಿಸಿರುವ ರಾಷ್ಟ್ರಧ್ವಜಗಳನ್ನು ಸುರಕ್ಷಿತವಾಗಿ ತೆಗೆದಿಡಬೇಕು” ಎಂದು ಬಿಬಿಎಂಪಿ ಹೇಳಿದೆ.

ನಿಮಗೆ ಏನು ಅನ್ನಿಸ್ತು?
0 ವೋಟ್