
- ಬೀದಿಬದಿ ವ್ಯಾಪಾರಿಗಳ ಬಳಿ ತಪಾಸಣೆ ನಡೆಸಿ 25 ಕೆ.ಜಿ ಪ್ಲಾಸ್ಟಿಕ್ ವಶ
- ಪ್ಲಾಸ್ಟಿಕ್ ವಶಪಡಿಸಿಕೊಳ್ಳುವ ಜೊತೆಗೆ ದಂಡ ವಿಧಿಸುತ್ತಿರುವ ಬಿಬಿಎಂಪಿ
ಬೆಂಗಳೂರಿನ ಯಶವಂತಪುರ ಮಾರುಕಟ್ಟೆ ಹಾಗೂ ಜಾಲಹಳ್ಳಿ ಜೆ.ಪಿ ಪಾರ್ಕ್ ವಾರ್ಡ್ ವ್ಯಾಪ್ತಿಯಲ್ಲಿ 220 ಕೆಜಿ ನಿಷೇಧಿತ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಂಡು ₹5800 ದಂಡ ವಿಧಿಸಲಾಗಿದೆ.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಹಾಗೂ ಕೇಂದ್ರ ಮತ್ತು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ.
ಜಾಲಹಳ್ಳಿ ಪೋಲೀಸ್ ಠಾಣೆಯ ಹಿಂಬಾಗದ ಶ್ರೀ ಗಣೇಶ ಎಂಟರ್ ಪ್ರೈಸಸ್ ಎಂಬ ಹೆಸರಿನಲ್ಲಿ ಪ್ಲಾಸ್ಟಿಕ್ ಕೋಟೆಡ್ ಪೇಪರ್ ಪ್ಲೇಟ್ ತಯಾರಿಕಾ ಘಟಕಕ್ಕೆ ಭೇಟಿ ನೀಡಿ, ಸುಮಾರು 20 ಕೆ.ಜಿ ಪ್ಲಾಸ್ಟಿಕ್ ಉತ್ಪನ್ನಗಳನ್ನು ವಶಪಡಿಸಿಕೊಂಡು ₹2000 ದಂಡ ವಿಧಿಸಿದೆ. ವಶಪಡಿಸಿಕೊಂಡ ಎಲ್ಲ ಪ್ಲಾಸ್ಟಿಕ್ ಉತ್ಪನ್ನಗಳನ್ನು ದೊಡ್ಡಬಿದಿರಕಲ್ಲು ಸಂಸ್ಕರಣಾ ಘಟಕಕ್ಕೆ ಕಳಿಸಲಾಗಿದೆ ಎಂದು ಬಿಬಿಎಂಪಿ ತಿಳಿಸಿದೆ.
ಕೆ.ಆರ್.ಮಾರುಕಟ್ಟೆಯ ಸುತ್ತಮುತ್ತಲಿನ ಪ್ರದೇಶ, ಹೂವಿನ ಮಾರುಕಟ್ಟೆಯಲ್ಲಿ ಹಾಗೂ ಬೀದಿಬದಿ ವ್ಯಾಪಾರಿಗಳ ಬಳಿ ತಪಾಸಣೆ ನಡೆಸಿದ ವೇಳೆ ಸುಮಾರು 25 ಕೆ.ಜಿ ಪ್ಲಾಸ್ಟಿಕ್ ಕವರ್ಗಳನ್ನು ವಶಪಡಿಸಿಕೊಂಡು ಮತ್ತೊಮ್ಮೆ ಬಳಸದಂತೆ ಮಾರ್ಷಲ್ಗಳು ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿ, ತಲಾ ₹200 ರೂ. ದಂಡ ವಿಧಿಸಿದ್ದಾರೆ.
ಪ್ಲಾಸ್ಟಿಕ್ ಬಳಸದಂತೆ ಜಾಗೃತಿ
ಬಿಬಿಎಂಪಿ ವ್ಯಾಪ್ತಿಯಲ್ಲಿ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ನಗರದಾದ್ಯಂತ ಒಮ್ಮೆ ಬಳಸುವ ಪ್ಲಾಸ್ಟಿಕ್ ಬಳಕೆ ಮಾಡುತ್ತಿರುವ ಮಾರಾಟ ಮಳಿಗೆಗಳು, ಉತ್ಪಾದಿಸುತ್ತಿರುವ ಘಟಕಗಳ ಮೇಲೆ ಅನಿರೀಕ್ಷಿತ ತಪಾಸಣೆ ನಡೆಸಿ, ಪ್ಲಾಸ್ಟಿಕ್ ವಶಪಡಿಸಿಕೊಳ್ಳುವ ಜೊತೆಗೆ ದಂಡ ವಿಧಿಸಲಾಗುತ್ತಿದೆ.
ಈ ಸುದ್ದಿ ಓದಿದ್ದೀರಾ? ಬೆಂಗಳೂರು | 'ನಮ್ಮ ಮೆಟ್ರೋ'ದಲ್ಲಿ ಹೊಸ ವ್ಯವಸ್ಥೆ; ಒಂದೇ ಟಿಕೆಟ್ ಬಳಸಿ ಗರಿಷ್ಠ ಆರು ಮಂದಿ ಪ್ರಯಾಣಕ್ಕೆ ಅವಕಾಶ
ಮತ್ತೊಮ್ಮೆ, ಪ್ಲಾಸ್ಟಿಕ್ ಬಳಕೆ ಮಾಡದಂತೆ ವ್ಯಾಪಾರಸ್ಥರು/ಮಾರಾಟಗಾರರು ಹಾಗೂ ನಾಗರಿಕರಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುತ್ತಿದೆ ಎಂದು ಬಿಬಿಎಂಪಿ ಹೇಳಿದೆ.