ಬಿಬಿಎಂಪಿ | ವರಮಹಾಲಕ್ಷ್ಮಿ ಹಬ್ಬದ ವ್ಯಾಪಾರದ ಭರಾಟೆ: ಸೂಕ್ತ ರೀತಿಯಲ್ಲಿ ಕಸ ವಿಲೇವಾರಿಗೆ ಮುಖ್ಯ ಆಯುಕ್ತರ ಸೂಚನೆ

kr market
  • ಬೆಲೆ ಏರಿಕೆಯ ನಡುವೆಯೂ ವ್ಯಾಪಾರಕ್ಕೆ ಮುಗಿಬಿದ್ದ ಜನ
  • ಜನ ದಟ್ಟಣೆಯಿಂದಾಗಿ ವಾಹನ ಸವಾರರ ಪರದಾಟ

ಭಾರಿ ಮಳೆ ಒಂದೆಡೆಯಾದರೆ, ಆಷಾಢ ಮಾಸದ ವರಮಹಾಲಕ್ಷ್ಮಿ ಹಬ್ಬಕ್ಕೆ ರಾಜಧಾನಿಯ ನಿವಾಸಿಗಳ ತಯಾರಿ ಜೋರಾಗೇ ನಡೆಯುತ್ತಿದ್ದು, ಪೂಜಾ ಸಾಮಗ್ರಿ, ಕೆ ಆರ್ ಮಾರುಕಟ್ಟೆಯಲ್ಲಿ ಹಣ್ಣು ಹಂಪಲು ಖರೀದಿಸಲು ಬೆಳಗ್ಗೆಯೇ ದೊಡ್ಡ ಸಂಖ್ಯೆಯಲ್ಲಿ ಜನ ಸೇರಿದ್ದರು. ಈ ವೇಳೆ ಸ್ಥಳಕ್ಕೆ ಭೇಟಿ ನೀಡಿದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ವ್ಯಾಪಾರಿಗಳಿಗೆ ಶೀಘ್ರವೇ ಕಸ ವಿಲೇವಾರಿ ಮಾಡುವಂತೆ ಸೂಚಿಸಿದ್ದಾರೆ.

ವರಮಹಾಲಕ್ಷ್ಮಿ ಹಬ್ಬದಂದು ಮನೆಗಳಲ್ಲಿ ಲಕ್ಷ್ಮಿ ಮೂರ್ತಿಗಳನ್ನು ಕೂರಿಸಿ, ಪೂಜಿಸುವುದು ವಾಡಿಕೆ. ಹೀಗಾಗಿ ಅಲಂಕಾರಕ್ಕಾಗಿ ಹೂ ಮತ್ತು ಹಣ್ಣು ಬೇಕಾಗುವುದರಿಂದ ಅವುಗಳ ಬೆಲೆ ಗಗನಕ್ಕೆ ಏರಿದೆ. ಆದರೂ ಸಹ ಅವುಗಳ ಖರೀದಿಗೆ ಗ್ರಾಹಕರು ಮುಗಿಬಿದ್ದಿದ್ದಾರೆ. ಜನ ದಟ್ಟಣೆಯಿಂದ ಕೆ ಆರ್ ಮಾರುಕಟ್ಟೆ, ಮಲ್ಲೇಶ್ವರಂನ ರಸ್ತೆಗಳಲ್ಲಿ ವಾಹನ ಸವಾರರು ಪರದಾಡಬೇಕಾಯಿತು. 

ಈ ಸುದ್ದಿ ಓದಿದ್ದೀರಾ?: ಬಿಬಿಎಂಪಿ ಚುನಾವಣೆ | ವಾರ್ಡ್‌ವಾರು ಮೀಸಲಾತಿ ಪ್ರಕಟ

ಮಾರುಕಟ್ಟೆಯಲ್ಲಿ ಅಧಿಕವಾಗಿ ಉತ್ಪತ್ತಿಯಾಗುವ ತ್ಯಾಜ್ಯ ನಿರ್ವಹಣೆ ಕುರಿತು ವ್ಯಾಪಾರಸ್ಥರಿಗೆ ಜಾಗೃತಿ ಮೂಡಿಸಲು ಮಾರುಕಟ್ಟೆಗೆ ತುಷಾರ್ ಗಿರಿನಾಥ್ ಭೇಟಿ ನೀಡಿದ್ದರು. ಸಾರ್ವಜನಿಕರು ಮತ್ತು ವ್ಯಾಪಾರಸ್ಥರಿಗೆ ಯಾವುದೇ ತೊಂದರೆ ಎದುರಾಗದಂತೆ ವ್ಯಾಪಾರಕ್ಕೆ ಅನುವು ಮಾಡಿಕೊಡಲು ಅವರು ಅಧಿಕಾರಿಗಳಿಗೆ ಸೂಚಿಸಿದರು. ಕಸವನ್ನು ಎಲ್ಲೆಂದರಲ್ಲಿ ಸುರಿದು ರಸ್ತೆಗಳ ಪರಿಸ್ಥಿತಿ ಹದಗೆಡದಂತೆ ನೋಡಿಕೊಳ್ಳುವುದರ ಜೊತೆಗೆ ಕಸವನ್ನು ಒಂದೆಡೆ ಶೇಖರಿಸಲು ಮುಂಜಾಗ್ರತಾ ಕ್ರಮ ವಹಿಸಲು ಅಯುಕ್ತರು ಸೂಚಿಸಿದರು. 

ಶೇಖರಿಸಿದ ತ್ಯಾಜ್ಯವನ್ನು ಪಾಲಿಕೆಯ ಘನತ್ಯಾಜ್ಯ ಸಂಸ್ಕರಣಾ ಘಟಕಗಳಿಗೆ ಕೊಂಡೊಯ್ಯಲಾಗುತ್ತದೆ. ಆದ್ದರಿಂದ ಮಾರಾಟಗಾರು ಹಸಿ ಮತ್ತು ಒಣ ತ್ಯಾಜ್ಯವನ್ನು ಬೇರ್ಪಡಿಸಿ ನಿರ್ದಿಷ್ಟ ಜಾಗಗಳಲ್ಲಿ ಇರಿಸಬೇಕೆಂದು ಬಿಬಿಎಂಪಿ ಮುಖ್ಯ ಆಯುಕ್ತರು ನಿರ್ದೇಶಿಸಿದರು. 

ನಿಮಗೆ ಏನು ಅನ್ನಿಸ್ತು?
0 ವೋಟ್