ಬೆಂಗಳೂರು| ಪ್ರತಿ ವಾರ್ಡ್‌ನಲ್ಲಿ ಆರೋಗ್ಯ ಕೇಂದ್ರ ಸ್ಥಾಪನೆಗೆ ಸಜ್ಜಾದ ಬಿಬಿಎಂಪಿ

  • ಹಳೆಯ 198 ವಾರ್ಡ್‌ಗಳ ಪೈಕಿ 58 ವಾರ್ಡ್‌ಗಳಲ್ಲಿಲ್ಲ ಪಿಎಚ್‌ಸಿ
  • ಅಮೃತ ನಗರೋತ್ಥಾನ ಯೋಜನೆಯಡಿ ₹123 ಕೋಟಿ ಬಿಡುಗಡೆ

ಬೆಂಗಳೂರಿನ ಜನತೆಗೆ ಉತ್ತಮ ಆರೋಗ್ಯ ಸೇವೆ ನೀಡುವ ಸಲುವಾಗಿ ಎಲ್ಲ ವಾರ್ಡ್‌ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ (ಪಿಎಚ್‌ಸಿ) ಸ್ಥಾಪನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಮುಂದಾಗಿದೆ.

ಪಿಎಚ್‌ಸಿ ಸ್ಥಾಪನೆ ಸಂಬಂಧ ಬಿಬಿಎಂಪಿ ಈಗಾಗಲೇ ಸಮೀಕ್ಷೆ ನಡೆಸಿದ್ದು, ಹಳೆಯ 198 ವಾರ್ಡ್‌ಗಳ ಪೈಕಿ 58 ವಾರ್ಡ್‌ಗಳಲ್ಲಿ ಇನ್ನೂ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣವಾಗಿಲ್ಲ. ಈ ಎಲ್ಲ ವಾರ್ಡ್‌ಗಳನ್ನು ಪಿಎಚ್‌ಸಿಗಳನ್ನು ನಿರ್ಮಾಣ ಮಾಡಲು ರಾಜ್ಯ ಸರ್ಕಾರ ನಿರ್ದೇಶಿಸಿದೆ.

ಉಳಿದ 58 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣಕ್ಕೆ ಜಾಗ ಗುರುತಿಸಲಾಗಿದ್ದು, ಸರ್ಕಾರವು ಅಮೃತ ನಗರೋತ್ಥಾನ ಯೋಜನೆ ಅಡಿ ₹123 ಕೋಟಿ ಅನುದಾನ ಬಿಡುಗಡೆ ಮಾಡಿದೆ. ಶೀಘ್ರದಲ್ಲೇ ಕಾಮಗಾರಿ ಆರಂಭಿಸಲು ಬಿಬಿಎಂಪಿ ಸಜ್ಜಾಗಿದೆ.

"ಹೊಸ 58 ಪ್ರಾಥಮಿಕ ಆರೋಗ್ಯ ಕೇಂದ್ರಗಳ ನಿರ್ಮಾಣದ ಜೊತೆಗೆ ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಹೆರಿಗೆ ಮತ್ತು ರೆಫೆರಲ್ ಆಸ್ಪತ್ರೆಗಳ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗಿದೆ" ಎಂದು ಬಿಬಿಎಂಪಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ರಾಜ್ಯಾದ್ಯಂತ ಆಗಸ್ಟ್‌ 23ರಿಂದ ಒಂದು ವಾರಗಳ ಕಾಲ ನಿರಂತರ ಮಳೆ: ಹವಾಮಾನ ಇಲಾಖೆ ಮುನ್ಸೂಚನೆ

"ಪ್ರಸ್ತುತವಾಗಿ ಬಿಬಿಎಂಪಿ ಹಳೆಯ 198 ವಾರ್ಡ್‌ಗಳ ಪೈಕಿ 58 ವಾರ್ಡ್‌ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣವಾಗಬೇಕಿದೆ. ಜೊತೆಗೆ, ವಾರ್ಡ್ ಮರುವಿಂಗಡಣೆಯಾದ ಬಳಿಕ ರಚನೆಯಾಗಿರುವ 45 ಹೊಸ ವಾರ್ಡ್‌ಗಳಲ್ಲಿಯೂ ಪ್ರಾಥಮಿಕ ಆರೋಗ್ಯ ಕೇಂದ್ರವಿಲ್ಲ. ಹಾಗಾಗಿ ಹೊಸ ವಾರ್ಡ್‌ಗಳ ಕಾರ್ಯ ಸಂಪೂರ್ಣವಾಗಿ ಆರಂಭವಾದ ನಂತರ ಜಾಗ ಗುರುತಿಸಿ, ಪ್ರಾಥಮಿಕ ಆರೋಗ್ಯ ಕೇಂದ್ರ ನಿರ್ಮಾಣ ಮಾಡಲಾಗುವುದು" ಎಂದು ಹೇಳಿದರು.

"ಹೊಸ 45 ವಾರ್ಡ್‌ಗಳಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪನೆಗೆ ಇನ್ನೂ ಹೆಚ್ಚಿನ ಅನುದಾನ ನೀಡುವಂತೆ ಸರ್ಕಾರಕ್ಕೆ ಕೋರಲಾಗುತ್ತದೆ. ಪಿಎಚ್‌ಸಿ ಸ್ಥಾಪನೆಯಾಗದ ಭಾಗದಲ್ಲಿರುವ ಜನರು, ಹತ್ತಿರದ ಪಿಎಚ್‌ಸಿಗಳಲ್ಲಿ ಸೇವೆ ಪಡೆದುಕೊಳ್ಳಬಹುದಾಗಿದೆ. ಅಥವಾ ನಗರದ 243 ವಾರ್ಡ್‌ಗಳಲ್ಲಿ 'ನಮ್ಮ ಕ್ಲಿನಿಕ್' ಆರಂಭವಾಗಿದೆ. ಅಲ್ಲಿಯೂ ಸಾರ್ವಜನಿಕರು ಸೇವೆ ಪಡೆಯಬಹುದಾಗಿದೆ" ಎಂದರು.

ನಿಮಗೆ ಏನು ಅನ್ನಿಸ್ತು?
0 ವೋಟ್